Republic Day 2025: ನಾಳೆ 76ನೇ ಗಣರಾಜ್ಯೋತ್ಸವ; ಈ ದಿನದ ಇತಿಹಾಸ ಏನು? ಆಚರಣೆ ಹೇಗೆ? ಇಲ್ಲಿದೆ ಮಾಹಿತಿ
ನಾಳೆ ಭಾರತವು ಈ ವರ್ಷ ತನ್ನ 76ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. ಈ ಬಾರಿ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ದೇಶಾದ್ಯಂತ ಸಕಲ ಸಿದ್ಧತೆಗಳು ನಡೆಯುತ್ತಿವೆ. ಪ್ರತಿ ವರ್ಷ ಜನವರಿ 26ರಂದು ಗಣರಾಜ್ಯೋತ್ಸವನ್ನು ದೇಶದ ಪ್ರತಿಯೊಂದು ಹಳ್ಳಿಯಲ್ಲೂ ಆಚರಣೆ ಮಾಡಲಾಗುತ್ತದೆ. ಈ ದಿನದ ಮಹತ್ವವೇನು? ಇಲ್ಲಿದೆ ಮಾಹಿತಿ.


ಬೆಂಗಳೂರು: ನಾಳೆ (ಭಾನುವಾರ) ಭಾರತವು 76ನೇ ಗಣರಾಜ್ಯೋತ್ಸವ (Republic Day)ವವನ್ನು ಆಚರಿಸುತ್ತಿದೆ. ಗಣರಾಜ್ಯೋತ್ಸವ ಪರೇಡ್‌ಗೆ ದಿಲ್ಲಿ (Dehli) ಸಿದ್ಧವಾಗಿದೆ. ಈ ಬಾರಿಯ ಗಣರಾಜ್ಯೋತ್ಸವಕ್ಕೆ ವಿಶೇಷ ಅತಿಥಿಯಾಗಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರು ಭಾಗಿಯಾಗಲಿದ್ದಾರೆ. ಈ ಬಾರಿ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ದೇಶಾದ್ಯಂತ ಸಕಲ ಸಿದ್ಧತೆಗಳು ನಡೆಯುತ್ತಿವೆ. ಪ್ರತಿ ವರ್ಷ ಜನವರಿ 26ರಂದು ಗಣರಾಜ್ಯೋತ್ಸವನ್ನು ದೇಶದ ಪ್ರತಿಯೊಂದು ಹಳ್ಳಿಯಲ್ಲೂ ಆಚರಣೆ ಮಾಡಲಾಗುತ್ತದೆ.
ಜನವರಿ 26ರಂದು ಆಚರಿಸಲಾಗುವ ಗಣರಾಜ್ಯೋತ್ಸವ ಪ್ರತಿ ಭಾರತೀಯನ ಪಾಲಿಗೆ ಹೆಮ್ಮೆಯ ದಿನವಾಗಿದೆ. ಸ್ವಾತಂತ್ರ್ಯ ದಿನಾಚರಣೆಯನ್ನು ಎಷ್ಟು ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆಯೋ, ಅಷ್ಟೇ ಸಂಭ್ರಮದಿಂದ ದೇಶದಲ್ಲಿ ಗಣರಾಜ್ಯೋತ್ಸವವನ್ನು ಕೊಂಡಾಡಲಾಗುತ್ತದೆ. ಗಣರಾಜ್ಯೋತ್ಸವ ಆಚರಣೆಯ ಹಿನ್ನೆಲೆ, ಇತಿಹಾಸ ಮತ್ತು ಮಹತ್ವವೇನು? ಇಲ್ಲಿದೆ ಮಾಹಿತಿ.
ಗಣರಾಜ್ಯೋತ್ಸವ ಇತಿಹಾಸ
1947ರ ಆಗಸ್ಟ್ 15ರಂದು ಬ್ರಿಟಿಷರಿಂದ ತಾತ್ವಿಕವಾಗಿ ಭಾರತ ಸ್ವಾತಂತ್ರ್ಯವನ್ನು ಪಡೆದುಕೊಂಡ ದಿನವಾದರೆ, 1950ರ ಜನವರಿ 26 ಭಾರತ ತನ್ನ ಸಂವಿಧಾನವನ್ನು ಜಾರಿಗೊಳಿಸಿದ ದಿನ. ರಾಜ ಪ್ರಭುತ್ವವನ್ನು ತ್ಯಜಿಸಿ ಪ್ರಜಾಪ್ರಭುತ್ವದಲ್ಲಿ ತನ್ನ ನಿಜ ಅಸ್ಥಿತ್ವವನ್ನು ಸ್ಥಾಪಿಸಿದ ದಿನ ಇದು. ಈ ಕಾರಣಕ್ಕಾಗಿ ಗಣರಾಜ್ಯೋತ್ಸವ ಭಾರತೀಯರ ಪಾಲಿಗೆ ಅತ್ಯಂತ ಮಹತ್ವದ ದಿನವಾಗಿದೆ.
ಜನವರಿ 26ರಂದೇ ಗಣರಾಜ್ಯೋತ್ಸವ ಆಚರಣೆ ಏಕೆ ?
1929ರ ಲಾಹೋರ್‌ನಲ್ಲಿ ನಡೆದ ಕಾಂಗ್ರೆಸ್ ಸೆಷನ್‌ನಲ್ಲಿ ಜವಹಾರ್ ಲಾಲ್ ನೆಹರೂ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. 1930ರ ಜನವರಿ 26ರಂದು ದೇಶ ಸಂಪೂರ್ಣ ಸ್ವಾತಂತ್ರ್ಯ ಪಡೆಯಬೇಕೆಂಬ ನಿರ್ಣಯವನ್ನೂ ಕೈಗೊಳ್ಳಲಾಗಿತ್ತು. ಅದನ್ನೇ ಪೂರ್ಣ ಸ್ವರಾಜ್ ದಿವಸ್ ಅಥವಾ ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಘೋಷಣೆ ಮಾಡಲಾಗಿತ್ತು. ಆದರೆ ಇದು 1947ರವರೆಗೂ ಈಡೇರಲಿಲ್ಲ. ಆದ್ದರಿಂದ ನಿರ್ಣಯದಲ್ಲಿ ಕೈಗೊಂಡಂತೆ ಮೊದಲ ಆಚರಣೆ ಮಾಡಬೇಕೆಂದುಕೊಂಡಿದ್ದ ಸ್ವಾತಂತ್ರ್ಯ ದಿನದ ದಿನಾಂಕವಾದ ಜನವರಿ 26ರಂದೇ ಸಂವಿಧಾನವನ್ನು ಜಾರಿಗೊಳಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಜನವರಿ 26ರಂದೇ ಗಣರಾಜ್ಯೋತ್ಸವ ದಿನವನ್ನು ಆಚರಣೆ ಮಾಡಲಾಗುತ್ತಿದೆ.
1950ರ ಜನವರಿ 26ರಂದು ಸಂವಿಧಾನ ಜಾರಿ
ಭಾರತ ತನ್ನದೇ ಆದ ಸಂವಿಧಾನವನ್ನು ಜಾರಿಗೆ ತರುತ್ತಿದ್ದಂತಯೇ ಪ್ರಜಾಪ್ರಭುತ್ವ ಗಣರಾಜ್ಯವಾಗಿ ಬದಲಾಯಿತು. ಭಾರತಕ್ಕೆ ಉತ್ತಮ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಅಗತ್ಯ ಸಂವಿಧಾನದ ರಚನೆಗೆ ಸಮಿತಿಯನ್ನು ನೇಮಿಸಲಾಗಿತ್ತು. 1947ರ ಆಗಸ್ಟ್ 29ರಂದು ಅಂಬೇಡ್ಕರ್ ಭಾರತದ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾದರು. 1949ರ ನವೆಂಬರ್ 26ರಂದು ಭಾರತದ ಸಂವಿಧಾನವನ್ನು ಅಂಗೀಕರಿಸಲಾಯಿತು. ಪ್ರಜಾಪ್ರಭುತ್ವ ಸರ್ಕಾರ ವ್ಯವಸ್ಥೆಯೊಂದಿಗೆ 1950ರ ಜನವರಿ 26ರಂದು ಸಂವಿಧಾನವನ್ನು ಭಾರತದಲ್ಲಿ ಜಾರಿಗೊಳಿಸಲಾಯಿತು. ಈ ಸಂವಿಧಾನವನ್ನು ರಷ್ಯಾ, ಬ್ರಿಟನ್, ಅಮೆರಿಕ ಮತ್ತಿತರ ಹಲವು ದೇಶಗಳ ಸಂವಿಧಾನದ ಪ್ರಮುಖ ಅಂಶಗಳ ಸಂಯೋಜನೆಯಾಗಿದೆ.
ಈ ಸುದ್ದಿಯನ್ನು ಓದಿ: Mahanayaka: ಗಣರಾಜ್ಯೋತ್ಸವ ಪ್ರಯುಕ್ತ ಜೀ ಕನ್ನಡದಿಂದ ಮನರಂಜನೆಯ ಮಹಾಪೂರ; ಪ್ರಸಾರವಾಗಲಿದೆ ಮಹಾನಾಯಕ ಸೀರಿಯಲ್‌ನ ಮಹಾಸಂಚಿಕೆ
ಮೊದಲ ಗಣರಾಜ್ಯೋತ್ಸವ ಆಚರಣೆ
ಭಾರತದ ಮೊದಲ ಗಣರಾಜ್ಯೋತ್ಸವವನ್ನು 1950ರ ಜನವರಿ 26ರಂದು ಆಚರಿಸಲಾಯಿತು. ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ದೆಹಲಿಯ ಇರ್ವಿನ್ ಸ್ಟೇಡಿಯಂನಲ್ಲಿ (ಈಗ ಈ ಸ್ಟೇಡಿಯಂಗೆ ಮೇಜರ್ ಧ್ಯಾನ್‌ಚಂದ್ ರಾಷ್ಟ್ರೀಯ ಕ್ರಿಡಾಂಗಣ ಎಂದು ಮರು ನಾಮಕರಣ ಮಾಡಲಾಗಿದೆ) ರಾಷ್ಟ್ರಧ್ವಜವನ್ನು ಹಾರಿಸಿ ನಂತರ ರಾಷ್ಟ್ರಗೀತೆಯನ್ನು ಹಾಡಲಾಗಿತ್ತು. ಮೊದಲ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಇಂಡೋನೇಷ್ಯಾ ಅಧ್ಯಕ್ಷ ಡಾ. ಸುಕರ್ನೋ ಮತ್ತು ಅವರ ಪತ್ನಿ ಆಗಮಿಸಿದ್ದರು. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸುಮಾರು 15ರಿಂದ 20 ಸಾವಿರ ಜನರು ಸಾಕ್ಷಿಯಾಗಿದ್ದರು.
ಗಣರಾಜ್ಯೋತ್ಸವ ಆಚರಣೆ ಹೇಗೆ?
ಮೊದಲಿಗೆ ರಾಜಪಥದಲ್ಲಿ ಭಾರತದ ರಾಷ್ಟ್ರಪತಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಆರಂಭಿಸಲಾಗುತ್ತದೆ. ನಂತರ ಸುದೀರ್ಘ ಮೆರವಣಿಗೆ ನಡೆಯುತ್ತದೆ. ಈ ದಿನ ಹಲವು ಸಾಧಕರಿಗೆ ಪದ್ಮಶ್ರೀ, ಪದ್ಮಭೂಷಣ, ಅಶೋಕ ಚಕ್ರ ಪ್ರಶಸ್ತಿ, ಕೀರ್ತಿ ಚಕ್ರ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಇನ್ನು ಪ್ರತಿ ವರ್ಷವು ದೇಶಾದ್ಯಂತ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಇದರ ಪ್ರಮುಖ ಆಕರ್ಷಣೆಯೆಂದರೆ ಪರೇಡ್. ಇದು ದೆಹಲಿಯ ರಾಜಪಥದಿಂದ ಪ್ರಾರಂಭವಾಗಿ ಇಂಡಿಯಾ ಗೇಟ್‌ವರೆಗೆ ನಡೆಯುತ್ತಿದೆ. ಈವೇಳೆ ಸೇನೆ ತನ್ನ ಶಕ್ತಿ ಪ್ರದರ್ಶನ ತೋರಿಸುತ್ತದೆ. ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯಿಂದ ಭಾರತದ ಸಾಂಸ್ಕೃತಿಕ ಮತ್ತು ಸಾಮಾಜಿಕ ಪರಂಪರೆಯನ್ನು ಪ್ರದರ್ಶಿಸಲಾಗುತ್ತದೆ. ಇದರೊಂದಿಗೆ ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳು ರಾಜಪಥದಲ್ಲಿ ಕಾಣಿಸಿಕೊಳ್ಳುತ್ತವೆ. ಇವು ಆಯಾ ರಾಜ್ಯಗಳ ಸಂಸ್ಕೃತಿಯನ್ನು ಬಿಂಬಿಸುತ್ತವೆ.