ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Saif Ali Khan: ಸೈಫ್‌ ಆಲಿ ಖಾನ್‌ ಶೀಘ್ರ ಚೇತರಿಕೆಗೆ ಕಾರಣವೇನು? ಡಾ.ದೀಪಕ್‌ ಕೃಷ್ಣಮೂರ್ತಿ ಬಿಚ್ಚಿಟ್ಟ ಮಾಹಿತಿ!

ಸೈಫ್ ಆಲಿ ಖಾನ್ ಇಷ್ಟು ಬೇಗ ಹೇಗೆ ಚೇತರಿಸಿಕೊಳ್ಳಲು ಸಾಧ್ಯ ಎಂದು ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಅವರಿಗೆ ನಿಜವಾಗಿಯೂ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ ಆಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಈ ಮಧ್ಯೆ ಬೆಂಗಳೂರು ಮೂಲದ ಹೃದ್ರೋಗ ತಜ್ಞ ಡಾ ದೀಪಕ್ ಕೃಷ್ಣಮೂರ್ತಿ ಅವರು ನಟನ ಶೀಘ್ರ ಚೇತರಿಕೆಯ ಹಿಂದಿನ ಕಾರಣವನ್ನು ವಿವರವಾಗಿ ಹೇಳಿದ್ದಾರೆ.

ಸೈಫ್‌ ಆಲಿ ಖಾನ್‌ ಶೀಘ್ರ ಚೇತರಿಕೆಗೆ ಇಲ್ಲಿದೆ ಕಾರಣ; ಡಾ. ದೀಪಕ್‌ ಕೃಷ್ಣಮೂರ್ತಿ ಹೀಗಂತಾರೆ!

Profile Deekshith Nair Jan 23, 2025 5:38 PM

ಮುಂಬೈ: ಬಾಲಿವುಡ್‌ ನಟ ಸೈಫ್ ಆಲಿ ಖಾನ್(Saif Ali Khan) ಎರಡು ಸರ್ಜರಿಗಳ ನಂತರ ಜನವರಿ 21 ರಂದು ಮುಂಬೈನ ಲೀಲಾವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬಾಂದ್ರಾದ(Bandra) ತಮ್ಮ ಸದ್ಗುರು ಶರಣ್(Sadguru Sharan) ಮನೆಯಲ್ಲಿ ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ಜನವರಿ 16 ರ ಬೆಳಗಿನ ಜಾವ 2 ಗಂಟೆಗೆ ಸೈಫ್ ಮನೆಗೆ ದುಷ್ಕರ್ಮಿಯೊಬ್ಬ ಏಕಾಏಕಿ ನುಗ್ಗಿ ಚಾಕುವಿನಿಂದ ಇರಿದು ಹಲ್ಲೆ ಎಸಗಿದ್ದನು. ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆದ ನಟನಿಗೆ ಎರಡು ಸರ್ಜರಿಗಳಾಗಿವೆ. ಈ ಮಧ್ಯೆ ಇಷ್ಟು ಬೇಗ ಹೇಗೆ ಚೇತರಿಸಿಕೊಳ್ಳಲು ಸಾಧ್ಯ ಎಂದು ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಅವರಿಗೆ ನಿಜವಾಗಿಯೂ ಬೆನ್ನು ಮೂಳೆಯ ಶಸ್ತ್ರಚಿಕಿತ್ಸೆ ಆಗಿದೆಯೇ ಎಂಬ ಪ್ರಶ್ನಿಸಿದ್ದಾರೆ. ಇದೀಗ ಬೆಂಗಳೂರು ಮೂಲದ ಹೃದ್ರೋಗ ತಜ್ಞ ಡಾ ದೀಪಕ್ ಕೃಷ್ಣಮೂರ್ತಿ(Dr Deepak Krishnamurthy) ಅವರು ನಟನ ಶೀಘ್ರ ಚೇತರಿಕೆಯ ಹಿಂದಿನ ಕಾರಣವನ್ನು ವಿವರವಾಗಿ ಹೇಳಿದ್ದಾರೆ.

ತಮ್ಮ ಎಕ್ಸ್‌ ಖಾತೆಯಲ್ಲಿ ದೀಪಕ್‌ ಕೃಷ್ಣಮೂರ್ತಿ ನಟ ಸೈಫ್ ಆಲಿ ಖಾನ್ ಅವರ ಶೀಘ್ರ ಚೇತರಿಕೆಯ ಕುರಿತು ವಿವರಣೆ ನೀಡಿದ್ದಾರೆ. “ಸೈಫ್ ಅಲಿಖಾನ್ ಅವರಿಗೆ ನಿಜವಾಗಿಯೂ ಬೆನ್ನುಮೂಳೆಯ ಶಸ್ತ್ರ ಚಿಕಿತ್ಸೆಯಾಗಿದೆಯೇ ಎಂದು ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ತಮಾಷೆಯೆಂದರೆ ಕೆಲವು ವೈದ್ಯರಿಗೂ ಇದರ ಬಗ್ಗೆ ಅನುಮಾನವಿದೆ" ಎಂದಿದ್ದು, ಅವರು ಸ್ವತಃ ತಮ್ಮ ತಾಯಿ ನಡೆಯುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆ ಬೆನ್ನು ಮೂಳೆ ಮುರಿತದಿಂದ ಅವರ ತಾಯಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಸರ್ಜರಿ ಆದ ಕೆಲವೇ ಗಂಟೆಗಳಲ್ಲಿ ಅವರು ತಮ್ಮ ತಾಯಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಿಕೊಂಡು ಮನೆಗೆ ಕರೆತಂದಿರುವ ವಿಷಯವನ್ನು ಈಗ ಹೇಳಿದ್ದಾರೆ.



ತಮ್ಮ ತಾಯಿ ನಡೆದಾಡುವ ವಿಡಿಯೊವೊಂದನ್ನು ಹಂಚಿಕೊಂಡಿರುವ ವೈದ್ಯರು “ಇದು 2022 ರ ವಿಡಿಯೊ. ಆಗ ನನ್ನ ತಾಯಿಗೆ 78 ವರ್ಷ ವಯಸ್ಸಾಗಿತ್ತು. ಅವರಿಗೆ ಪಾದದ ಮೂಳೆ ಮತ್ತು ಬೆನ್ನು ಮೂಳೆಯ ಶಸ್ತ್ರಚಿಕಿತ್ಸೆಯನ್ನು ಒಂದೇ ದಿನ ಮಾಡಲಾಗಿತ್ತು. ಇದು ಆ ದಿನದ ವಿಡಿಯೊ. ಶಸ್ತ್ರಚಿಕಿತ್ಸೆಯಾದ ಕೆಲವೇ ಗಂಟೆಗಳಲ್ಲಿ ಅಮ್ಮ ಆರಾಮವಾಗಿ ನಡೆದಾಡಿದ್ದರು. ಸೈಫ್‌ ಆಲಿ ಖಾನ್‌ ಅವರು ವಯಸ್ಸಿನಲ್ಲಿ ಕಿರಿಯರಾದ್ದರಿಂದ ಅವರು ಶೀಘ್ರವಾಗಿ ಚೇತರಿಸಿಕೊಂಡಿರುವ ಬಗ್ಗೆ ಯಾವುದೇ ಅನುಮಾನ ವ್ಯಕ್ತಪಡಿಸುವಂತಿಲ್ಲ" ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ:Saif Ali Khan: ಸೈಫ್‌ ಅಲಿ ‍ಖಾನ್‌ ಮೇಲೆ ಚಾಕು ದಾಳಿ ನಡೆದೇ ಇಲ್ವಾ? ಇದು ಬರೀ ‍ಆಕ್ಟಿಂಗಾ?

“ಇಂದಿನ ದಿನಗಳಲ್ಲಿ, ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾದವರು ಕೂಡ ಮೂರ್ನಾಲ್ಕು ದಿನಗಳಲ್ಲಿ ನಡೆದು ಮೆಟ್ಟಿಲುಗಳನ್ನು ಹತ್ತುತ್ತಾರೆ. ದಯವಿಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಇಷ್ಟ ಬಂದಂತೆ ಪೋಸ್ಟ್‌ ಮಾಡುವುದರೊಂದಿಗೆ ನಿಮ್ಮ ಅಜ್ಞಾನವನ್ನು ಪ್ರದರ್ಶಿಸಬೇಡಿ. ಮೊದಲು ವಿಷಯಗಳ ಬಗ್ಗೆ ತಿಳಿದುಕೊಳ್ಳಿ ತಜ್ಞರೊಂದಿಗೆ ಮಾತನಾಡಿ, ಓದಿ ಮತ್ತು ಕಲಿಯಿರಿ" ಎಂದು ಎಕ್ಸ್‌ ಖಾತೆಯಲ್ಲಿ ತಿಳಿಸಿದ್ದಾರೆ.