ಪದಸಾಗರ
ನವೀನ್ ಸಾಗರ್
ಸರಿಯಾಗಿ ಎರಡು ವರ್ಷಗಳ ಹಿಂದಿನ ಮಾತು. ಗೆಳೆಯ ಅಭಿ ಶ್ವಾಸಕೋಶದ ಸಮಸ್ಯೆಗೆ ಒಳಗಾಗಿ ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದ. ಐಸಿಯುದಲ್ಲಿ ಇದ್ದ ಅವನಿಗೆ ಡಾಕ್ಟರ್ ಕೊಟ್ಟ ಭರವಸೆ ಒಂದು ಪರ್ಸೆಂಟ್ ಮಾತ್ರ. ಕೊರೋನಾ ಸಮಯದಲ್ಲಿ ಕೋವಿಡ್ ವಾರಿಯರ್ ಆಗಿ ದುಡಿದಿದ್ದ ಅಭಿಗೆ ಅದೆಲ್ಲ ಮುಗಿದು ವರ್ಷಗಳೇ ಕಳೆದಾದ ನಂತರ ಸಣ್ಣ ಜ್ವರ, ಉಸಿರಾಟದ ಸಮಸ್ಯೆ ಥರ ಕಂಡದ್ದು ಸೀದಾ ಸಾವಿನಮನೆ ಬಾಗಿಲಿಗೆ ಕರೆದೊಯ್ದಿತ್ತು. ತನ್ನ ಆರ್ಥಿಕ ಮಿತಿಯಲ್ಲೇ ಅತ್ಯಂತ ಪ್ಯಾಶನೇಟ್ ಆಗಿ ಬದುಕುವ ಹುಡುಗ ಅಭಿ. ಪೂರ್ತಿ ಹೆಸರು ಅಭಿಜಿತ್ ಪುರೋಹಿತ್. ಚಿತ್ರನಟನಾಗೋ ಕನಸು ಹೊತ್ತು ಬಂದ ಅವನನ್ನು ಬದುಕಿನ ಅನಿವಾರ್ಯತೆಗಳು ತೆರೆಹಿಂದಿನ ಕೆಲಸಕ್ಕೆ ತಳ್ಳಿದವು.
ಹುಡುಗ ಅಲ್ಲೇ ಶ್ರದ್ಧೆಯಿಂದ ದುಡೀತಾ ಬಂದ. ಸಿಕ್ಕ ಅವಕಾಶ ಒಂದನ್ನೂ ಬಿಡಲಿಲ್ಲ. ತನ್ನದೇ ಹತಾಶೆ ಗಳನ್ನು,ಕನಸುಗಳನ್ನು ಕಥೆಯಾಗಿ ಕಟ್ಟಿ ಹೋಪ್ ಅನ್ನೋ ಒಂದು ಕಿರುಚಿತ್ರ ನಿರ್ದೇಶಿಸಿದ. ಅದರಲ್ಲಿ ದ್ವಿಪಾತ್ರದಲ್ಲಿ ನಟಿಸಿದ. ಪ್ರಶಸ್ತಿಯನ್ನೂ ಗಿಟ್ಟಿಸಿದ. ಬೆಳ್ಳಿತೆರೆಯಲ್ಲಿ, ಕಿರುತೆರೆಯಲ್ಲಿ ನಟನೆಗೆ ಅವಕಾಶ ಸಿಕ್ಕದೇ ಹೋದಾಗ, ಬಿಗ್ ಬಾಸ್, ಕೋಟ್ಯಧಿಪತಿ ಮುಂತಾದ ರಿಯಾಲಿಟಿ ಶೋಗಳ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡಿದ.
ಹೀಗಿದ್ದಾಗ ಜಗತ್ತಿಗೆ ಕೋವಿಡ್ ಅಟಕಾಯಿಸಿಕೊಳ್ತು. ಕೆಲಸ ಇಲ್ಲದಾಯ್ತು. ಆದರೇನಂತೆ. ಕೋವಿಡ್ ವಾರಿಯರ್ ಆಗಿ ದುಡೀತೀನಿ ಅಂತ ಇಪ್ಪತ್ತು ಸಾವಿರ ಸಂಬಳಕ್ಕೆ ರಾಜ್ಯದ ತುಂಬ ಕೆಲಸ ಮಾಡಿದ.
ಇದನ್ನೂ ಓದಿ: Naveen Sagar Column: ಮೆರೆಯದಿರು, ಮೈ ಮರೆಯದಿರು..! ಆಟ ಕಲಿಸಿದ ಪಾಠ !!
ಕೊರೋನಾ ಸೋಂಕಿತರ ನಡುವೆ ಅಷ್ಟೆಲ್ಲಾ ಓಡಾಡಿದರೂ ಏನೂ ಆಗಿರಲಿಲ್ಲ. ಆದರೆ ಅದ್ಯಾವ ಕೆಟ್ಟ ಘಳಿಗೆಯೋ, ಅಭಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ಐಸಿಯು ಪಾಲಾಗಿಬಿಟ್ಟ. ಆತನ ಗೆಳೆಯನ ಮೂಲಕ ಫೇಸ್ಬುಕ್ಕಲ್ಲಿ ಒಂದು ಪೋಸ್ಟ್ ಬಂತು. ಅಭಿಜಿತ್ ಆರೋಗ್ಯ ಗಂಭೀರ ಸ್ಥಿತಿಯಲ್ಲಿದೆ. ಆತನನ್ನು ಬದುಕಿಸಿಕೊಳ್ಳೋಕೆ ಚಿಕಿತ್ಸೆಯ ವೆಚ್ಚ ತಿಂಗಳಿಗೆ ಹದಿನೆಂಟು ಲಕ್ಷ ಆಗಬಹುದು ಅಂತ ಡಾಕ್ಟರ್ ಹೇಳಿದ್ದಾರೆ. ದಯವಿಟ್ಟಿ ಕೈಲಾದ ಸಹಾಯ ಮಾಡಿ ಅಂತ.
ಫೇಸ್ಬುಕ್ ಒಂದು ಹಣ ಕೀಳುವ ವಂಚನೆಯ ತಾಣ ಆಗಿರೋ ಈ ಸಂದರ್ಭದಲ್ಲಿ, ಕಷ್ಟಕ್ಕೆ ಸ್ಪಂದನೆ ಸಿಗುವುದು ಅಷ್ಟು ಸುಲಭ ಇಲ್ಲ. ಆದರೆ ಅಂತಃಕರಣ, ಕರುಣೆ, ಸಹಾಯ, ಮಾನವೀಯತೆ ಇಂಥ ಪದಗಳು ಇನ್ನೂ ಜೀವಂತ ಇವೆ. ಅಭಿಜಿತ್ ಸಹಾಯಕ್ಕೆ ದೊಡ್ಡ ಸಂಖ್ಯೆಯಲ್ಲಿ ಒಂದು ಸಮೂಹ ನಿಂತುಬಿಟ್ಟಿತು. ಭಾರೀ ಸ್ಪಂದನೆ ಸಿಕ್ಕು ಅಭಿಜಿತ್ ಗೆ ಎಲ್ಲೆಡೆಯಿಂದ ಧನಸಹಾಯ ಲಭಿಸಿತು.
ಸುಮಾರು ಎರಡುಮೂರು ತಿಂಗಳ ಆಸ್ಪತ್ರೆ ವಾಸದಲ್ಲಿ ಅಭಿ ಗುರುತು ಸಿಗದಷ್ಟು ನಿತ್ರಾಣ ನಾಗಿದ್ದ. ನಡೆಯೋಕೂ ಶಕ್ತಿ ಇಲ್ಲದಂತಾಗಿದ್ದ. ಐಸಿಯೂದಲ್ಲಿ ಮಲಗಿದವನು, ಅಮ್ಮನ ತೊಡೆ ಮೇಲೆ ಬಿಟ್ಟುಬಿಡಿ, ನಾನು ಆಕೆ ಮಡಿಲಲ್ಲಿ ಸಾಯ್ತೀನಿ ಅಂತ ಇಲ್ಲದ ಧ್ವನಿಯಲ್ಲೂ ಗೋಗರೆಯುತ್ತಿದ್ದ. ಹೋಪ್ ಎಂಬ ಸಿನಿಮಾ ಮಾಡಿದಾತನೇ ಬದುಕಿ ಉಳಿದೇನೆಂಬ ಹೋಪ್ ಕಳೆದುಕೊಂಡುಬಿಟ್ಟಿದ್ದ.
ಆದರೆ ಗೆಳೆಯರ ಬಳಗದ ಧನಸಹಾಯ, ಹಾರೈಕೆ, ಆತನ ತಾಯಿ ಮತ್ತು ಕುಟುಂಬದ ಪ್ರಾರ್ಥನೆ, ವೈದ್ಯರ ಪ್ರಯತ್ನ, ದೇವರ ಆಶೀರ್ವಾದ ಎಲ್ಲದರ ಫಲ, ಅಭಿ ಪವಾಡ ಸದೃಶ ಎಂಬಂತೆ ಬದುಕಿ ಬಂದುಬಿಟ್ಟ.
ಆತನ ವಿಲ್ ಪವರ್ ಎಷ್ಟು ಗಟ್ಟಿ ಇತ್ತು.. ಜೊತೆಗೆ ಜೀವನದ ಅನಿವಾರ್ಯತೆಗಳು ಹೇಗಿ ದ್ದವು ಅಂದ್ರೆ ಆತ ಆಸ್ಪತ್ರೆಯಿಂದ ಹೊರಬಂದು ಕೆಲವೇ ತಿಂಗಳಲ್ಲಿ ಮತ್ತೆ ದುಡಿಮೆಗೆ ಹೊರಟು ನಿಂತಿದ್ದ. ಆದರೆ ಕೆಲಸ ಅಷ್ಟು ತಕ್ಷಣಕ್ಕೆ ಸುಲಭಕ್ಕೆ ಸಿಕ್ಕಿಬಿಡುತ್ತಾ?
ಅಭಿ ಈ ಗ್ಯಾಪಲ್ಲಿ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯನಾದ. ಸೆಲ್ಫೀಗಳು ಕಾಣ ತೊಡಗಿದವು. ಆತನ ಮುಖದಲ್ಲಿ ಆರೋಗ್ಯ, ಲವಲವಿಕೆ ಕಾಣತೊಡಗಿತು. ಆತ ಹೊರಗಡೆ ಓಡಾಡತೊಡಗಿದ. ಐ ಯಾಮ್ ಬ್ಯಾಕ್ ಅನ್ನೋದನ್ನು ಪ್ರತಿ ಫೋಟೋ ಮೂಲಕ ಘೋಷಿಸಿಕೊಳ್ಳುತ್ತಿದ್ದ.
ಆತನನ್ನು ಬದುಕಿಸಿಕೊಂಡ ಸಮಾಜಕ್ಕೆ ಇದು ಖುಷಿ ಕೊಡಬೇಕಾಗಿರೋ ವಿಷಯವಾಗ ಬೇಕು. ಅಬ್ಬಾ ನಾವು ಮಾಡಿದ ಸಹಾಯ ಒಂದು ಜೀವವನ್ನು ಉಳಿಸಿ ಬಿಡ್ತು. ಅವನೀಗ ಸುಖವಾಗಿದ್ದಾನೆ ಅನ್ನೋದು ನಮಗೆ ಧನ್ಯತೆಯ ಸಾರ್ಥಕತೆಯ ಭಾವ ಹುಟ್ಟಿಸಬೇಕು. ಹೌದಲ್ವಾ?
ಆದರೆ ಕೆಲವು ಮನಸ್ಸುಗಳು ಬೇರೆಯೇ ರೀತಿ ಯೋಚಿಸ್ತವೆ. ಇವನೀಗ ಇಷ್ಟು ಆರಾಮಾಗಿ ದಾನೆ ಅಂದ್ರೆ ಇವ್ನಿಗೆ ಎಷ್ಟು ಲಕ್ಷ ಹಣ ಹರಿದು ಬಂದಿರಬಹುದು? ಇವನ ಚಿಕಿತ್ಸೆಗೆ ನಿಜಕ್ಕೂ ಅಷ್ಟೊಂದು ಖರ್ಚಾಗಿರೋಕೆ ಸಾಧ್ಯಾನಾ? ಇವ್ನು ಚಿಕಿತ್ಸೆ ಹೆಸರಲ್ಲಿ ಹಣ ಸಂಗ್ರಹ ಮಾಡಿ ಮಜಾ ಮಾಡ್ತಿದಾನೆ..
ಇವ್ನಿಗೆ ಕೃತಜ್ಞತೆ ಇಲ್ಲ. ಪರ್ಸನಲೀ ಒಂದು ಥ್ಯಾಂಕ್ಸ್ ಹೇಳಿಲ್ಲ.. ಚಿಕಿತ್ಸೆಗೆ ಹಣ ಇಲ್ಲದವನು ಈಗ ಇಷ್ಟು ಆರಾಮಾಗಿ ಸುತ್ತಾಡ್ಕೊಂಡು ಸೆಲ್ಫೀ ಹಾಕ್ಕೊಂಡು ಎಂಜಾಯ್ ಮಾಡ್ತಿದಾನೆ ಅಂದ್ರೆ .. ಎಲ್ಲ ಮೋಸ...!
ಈ ಥರದ್ದೊಂದು ಜಡ್ಜ್ ಮೆಂಟ್ ಗೆ ಬಂದು ಬಿಡುತ್ತೆ ಸಮಾಜದ ಒಂದು ವರ್ಗ.
ಎಲ್ಲೋ ಓದಿದ್ದೋ ಅಥವಾ ಸಿನಿಮಾದ ದೃಶ್ಯವೋ ನೆನಪಾಗ್ತಿಲ್ಲ.. “ಅಲ್ಲ ಗುರೂ ಕ್ಯಾನ್ಸರ್ ಅಂತ ಸುಳ್ಳು ಹೇಳಿ ಹಣ ಇಸ್ಕೊಂಡನಲ್ಲ ಆತ, ಅವನಿಗೆ ಕ್ಯಾನ್ಸರ್ ಇರೋದೇ ಸುಳ್ಳಂತೆ. ಮೋಸ ಹೋದ್ನಲ್ಲ ಅಂತ ಬೇಜಾರಾಗ್ತಾ ಇಲ್ವಾ ನಿಂಗೆ? ಅಂತ ಒಬ್ಬ ತನ್ನ ಗೆಳೆಯನನ್ನು ಕೇಳ್ತಾನೆ. ಅದ್ಕೆ ಗೆಳೆಯ ಹೇಳ್ತಾನೆ... “ಬೇಜಾರು ಯಾಕೆ? ಅವ್ನಿಗೆ ಕ್ಯಾನ್ಸರ್ ಇಲ್ಲವಲ್ಲ ಅಂತ ನಂಗೆ ಸಂತೋಷ ಆಗ್ತಿದೆ.”.
ಈ ಉದಾಹರಣೆ ಅತಿ ಒಳ್ಳೆಯತನ ಅನಿಸಬಹುದು. ಆದರೆ ನಾವು ಯಾಕೆ ನಮ್ಮಿಂದ ಸಹಾಯ ಪಡೆದ ವ್ಯಕ್ತಿ ಯಾವತ್ತಿಗೂ ನಮ್ಮ ಋಣದಲ್ಲೇ, ನಮ್ಮೆದುರು ತಗ್ಗಿಬಗ್ಗಿಯೇ ನಡೆಯಬೇಕೆಂದು ಬಯಸುತ್ತೇವೆ? ನಾವ್ಯಾಕೆ ಕಷ್ಟದಲ್ಲಿದ್ದ ವ್ಯಕ್ತಿ ನಮ್ಮ ಕಣ್ಣೆದುರು ಖುಷಿಯಾಗಿದ್ದರೆ ಚಡಪಡಿಸುತ್ತೇವೆ. ಉರಿದುಕೊಳ್ಳುತ್ತೇವೆ? ಆತ ಕಷ್ಟದಲ್ಲಿದ್ದಾಗ ನಾವು ಬಯಸಿದ್ದು ಆತನ ಸುಖವನ್ನೇ ಅಲ್ವಾ?
ಅದೊಮ್ಮೆ ನನ್ನ ಅಜ್ಜಿಗೆ ರಕ್ತದಾನ ಮಾಡೋ ಪುಣ್ಯ ನನಗೆ ಒದಗಿ ಬಂದಿತ್ತು. ರಕ್ತದಾನ ಮಾಡಿ ಬಂದಿದ್ದೆ. ಆದರೆ ರಕ್ತದಾನ ಮಾಡಿ ಕೆಲವೇ ದಿನಕ್ಕೆ ಅಜ್ಜಿ ತೀರಿಕೊಂಡರು. ನನ್ನ ರಕ್ತದಾನದಿಂದಲೇ ಅಜ್ಜಿ ಪ್ರಾಣ ಹೋಯಿತಾ ಎಂಬ ಗಿಲ್ಟ್ ಕಾಡಿತ್ತು. ಮುಂದೆ ಯಾರಾ ದರೂ ರಕ್ತದ ಅಗತ್ಯ ಇದೆ ಅಂದಾಗೆಲ್ಲ ಅಜ್ಜಿಯ ನೆನಪಾಗಿ ರಕ್ತ ಕೊಡೋಕೆ ಹಿಂಜರಿಯು ತ್ತಿದ್ದೆ. ಅಜ್ಜಿಗೆ ರಕ್ತ ನೀಡೋ ಮೊದಲು ಹಲವು ಬಾರಿ ರಕ್ತದಾನ ಮಾಡಿದ್ದೆ. ಆಗೆಲ್ಲ ರಕ್ತ ಪಡೆದವರು ಕ್ಷೇಮದಿಂದಿದ್ದಾರೆ ಎಂಬ ಸುದ್ದಿ ಕೇಳಿ ಸಮಾಧಾನ ಪಡುತ್ತಿದ್ದವನಿಗೆ ಅಜ್ಜಿಯ ಸಾವು ರಕ್ತದಾನ ಮಾಡೋದಕ್ಕೆ ಹಿಂಜರಿಯೋ ಹಾಗೆ ಮಾಡಿತ್ತು. ನಮ್ಮ ಸಹಾಯ ಸಾರ್ಥಕ ಅನಿಸೋದು, ಸಹಾಯ ಪಡೆದವರು ಚೆನ್ನಾಗಾದಾಗಲೇ ಹೊರತು ಅವರ ಥ್ಯಾಂಕ್ಸ್ ನಿಂದಲ್ಲ. ಅವರ ಮರುಸಹಾಯದಿಂದಲ್ಲ. ಅವರು ನಮ್ಮ ಅಡಿಯಾಳಿನ ಥರ ಬದುಕೋ ದ್ರಿಂದ ಅಲ್ಲ.
ಸಹಾಯ ಎಂಬುದು ಸಾಂಕ್ರಾಮಿಕವಾಗಬೇಕು. ನಾವು ನಮಗೆ ಸಹಾಯ ಮಾಡಿದೋವ್ರಿಗೇ ಸಹಾಯ ಮಾಡೋದು ಕೇವಲ ಋಣಸಂದಾಯ ಅಷ್ಟೆ. ಆದರೆ ನಾವೊಬ್ಬರಿಂದ ಸಹಾಯ ಪಡೆದು, ಬೆಳೆದು, ಕಷ್ಟದಲ್ಲಿರೋ ಇನ್ಯಾವುದೋ ನಾಲ್ಕು ಮಂದಿಗೆ ಸಹಾಯ ಮಾಡು ವಂತಾದರೆ ಅದು ನಿಜವಾದ ಸಾರ್ಥಕತೆ. ಇದನ್ನು ಯಾರ್ದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡಿದ ಅಂತಾನೋ, ಅತ್ತೆ ಹತ್ರ ಕಿತ್ಕೊಂಡು ಅಳಿಯಂಗೆ ದಾನ ಮಾಡಿದ ಅಂತಾನೋ ಅನ್ನೋದಲ್ಲ.
ನಮಗೆ ಸಹಾಯ ಮಾಡಿದ ವ್ಯಕ್ತಿಗೆ ಯಾವತ್ತಿಗೂ ನಮ್ಮ ಬಳಿ ಸಹಾಯ ಕೇಳೋ ಪರಿಸ್ಥಿತಿ ಬಾರದಿರಲಿ ಎಂಬುದು ನಮ್ಮ ಪ್ರಾರ್ಥನೆ ಆಗಿರಬೇಕು. ಆ ಕೈ ಯಾವತ್ತಿಗೂ ಕೊಡುಗೈಯೇ ಆಗಿರಲಿ ಎಂಬುದು ನಮ್ಮ ಹಾರೈಕೆಯಾಗಿರಬೇಕು.
ಪ್ರಾಕ್ಟಿಕಲ್ಲಾಗಿ ಒಂದು ಮಾತು ನಾವು ಯೋಚಿಸಬೇಕು. ಒಬ್ಬ ವ್ಯಕ್ತಿ ತನ್ನ ಜೀವ ಉಳಿಸ್ಕೊಳೋದಕ್ಕೂ ಹಣವಿಲ್ಲದವನಾಗಿ ಆಸ್ಪತ್ರೆ ಸೇರಿದಾಗ ನಾವು ಕೇವಲ ಆತನ ಆಸ್ಪತ್ರೆ ಖರ್ಚಿಗಾಗೋಷ್ಟು ಹಣ ಮಾತ್ರ ಕೊಟ್ಟರೆ ಏನುಪಯೋಗ? ನಾವು ಕೊಟ್ಟ ಹಣವೆಲ್ಲ ಆಸ್ಪತ್ರೆಯಿಂದ ಹೊರಬರೋದ್ರೊಳಗೆ ಖಾಲಿ ಆದರೆ, ಆತ ಹೊರಬಂದು ಬದುಕೋದಾ ದ್ರೂ ಹೇಗೆ? ಅಲ್ಲಿಂದ ಮುಂದೆ ಆತನ ಬದುಕಿನ ಬಂಡಿ ಮತ್ತೆ ಹಳಿಗೆ ಮರಳೋಕೆ ಒಂದಷ್ಟು ಹಣ ಬೇಡವೇ? ಆಸ್ಪತ್ರೆ ಸೇರಿದಾಗ ನಾವು ಕೊಟ್ಟ ಹಣದಲ್ಲಿ ಒಂದಷ್ಟು ಉಳೀತು ಅಂದ್ರೆ ಅದು ಅವನ ಭವಿಷ್ಯ ರಿಪೇರಿ ಮಾಡ್ಕೊಳೋದಕ್ಕಾಯ್ತು ಅನ್ನೋ ನಿಟ್ಟಿನಲ್ಲಿ ಯೋಚಿಸಬೇಕೇ ಹೊರತು, ಆಸ್ಪತ್ರೆ ಖರ್ಚಿನ ನಂತರ ಮಿಕ್ಕಿದ ಹಣದ ಲೆಕ್ಕ ಕೇಳೋ ಲೆವೆಲ್ಲಿಗೆ ಇಳೀಬಾರ್ದು. ಹಾಗೆ ಮಾಡಿದಲ್ಲಿ ನಾವು ಆತನನ್ನು ಸಾವಿನಿಂದ ಹೊರತಂದು ಬದುಕನ್ನು ನರಕ ಮಾಡ್ತಿದ್ದೇವೆ ಅಂತರ್ಥ.
ಗೆಳೆಯ ಅಭಿಜಿತ್ ಆಸ್ಪತ್ರೆಯಿಂದ ಬದುಕಿ ಬಂದವನು ತನ್ನ ಫೋನ್ ಪೇ ಗೂಗಲ್ ಪೇ ಇತ್ಯಾದಿಗಳಲ್ಲಿ ಹಣ ಕಳಿಸಿದ ಪ್ರತಿಯೊಬ್ಬರಿಗೂ ಸಂದೇಶ ಕಳಿಸಿ ಥ್ಯಾಂಕ್ಸ್ ಹೇಳಿದ. ಫೇಸ್ ಬುಕ್ ಪೋಸ್ಟ್ ಮೂಲಕ ಧನ್ಯವಾದ ಅರ್ಪಿಸಿದ. ಪರ್ಸನಲ್ಲಾಗಿ ಕೆಲವರನ್ನು ಭೇಟಿ ಮಾಡಿ ಕೃತಜ್ಞತೆ ಅರ್ಪಿಸಿದ.
ಆದರೆ ಅದೆಲ್ಲಕ್ಕಿಂತ ಅದ್ಭುತವಾಗಿ ಆತ ಈ ಸಮಾಜಕ್ಕೆ ಒಂದು ಕಾಣಿಕೆ ನೀಡಿಬಿಟ್ಟ. ಹೌದು. ಲಕ್ಷ್ಮೀ ಎಂಬ ಕಿರುಚಿತ್ರದ ಮೂಲಕ!
ಹತ್ತು ವರ್ಷದ ಹಿಂದೆ ರಾಷ್ಟ್ರಕವಿ ಕುವೆಂಪು ಅವರ ಮನೆಗೆ ಹೋದಾಗ ಅಭಿಗೆ ಕನಸೊಂದು ಶುರುವಾಗಿತ್ತು. ಐಸಿಯೂದಲ್ಲಿ ಮಲಗಿದಾಗ, ಆ ಕನಸು ನನಸು ಮಾಡಿಕೊ ಳ್ಳದೇ ಹೋಗಿಬಿಡ್ತೀನೇನೋ ಅಂತ ಸಂಕಟ ಪಡ್ತಾ ಇದ್ದ. ತನ್ನ ತಾಯಿಯನ್ನೇ ನಾಯಕಿ ಯನ್ನಾಗಿಸಿ ಒಂದು ಕಿರುಚಿತ್ರ ನಿರ್ದೇಶಿಸುವ ಆಕಾಂಕ್ಷೆ ಕಮರಿ ಹೋಗಿ ಬಿಡ್ತು ಅಂತ ಅತ್ತಿದ್ದ. ಆದರೆ ಬದುಕು ಅವನಿಗೆ ಪುನರ್ಜನ್ಮ ನೀಡಿತು. ಇನ್ನೊಂದು ಅವಕಾಶ ಕೊಟ್ಟಾಗ ಅಭಿ ತಡ ಮಾಡಲಿಲ್ಲ. ತನಗಾಗಿ ಸರ್ವಸ್ವವನ್ನೂ ಧಾರೆ ಎರೆದಿದ್ದ ಅಮ್ಮನನ್ನು ಆಕೆಯ ಎಪ್ಪತ್ತನೇ ವಯಸ್ಸಿನಲ್ಲಿ ನಾಯಕಿಯಾಗಿಸಿ ಕಿರುಚಿತ್ರ ನಿರ್ಮಿಸಿಬಿಟ್ಟ.
ಯೂಟ್ಯೂಬಿನಲ್ಲಿ ಲಕ್ಷಗಟ್ಟಲೆ ಮಂದಿ ಅದನ್ನು ನೋಡಿ ಭಾವುಕರಾದರು. ನಟನೆ ಏನೆಂದು ಗೊತ್ತಿಲ್ಲದ ತಾಯಿ ನಳಿನಿ ಪುರೋಹಿತ್, ಮಗನ ಆಸೆಗೆ ಒತ್ತಾಯಕ್ಕೆ ಮಣಿದು ಕೆಮೆರಾ ಮುಂದೆ ಬಂದರು. ಕಿರುಚಿತ್ರ ಜಗತ್ತಿನಾದ್ಯಂತ ಸುತ್ತಿಬಂತು. ಇಪ್ಪತ್ತಕ್ಕೂ ಹೆಚ್ಚು ಫೆಸ್ಟಿವಲ್ ಗಳಲ್ಲಿ ಪ್ರದರ್ಶನಗೊಂಡಿತು. ಅಮ್ಮನಿಗೆ ಅತ್ಯುತ್ತಮ ನಟಿ ಅವಾರ್ಡ್ ಬಂದವು. ದೊಡ್ಡದೊಡ್ಡ ವೇದಿಕೆಗಳಲ್ಲಿ ಸನ್ಮಾನಗಳಾದವು. ತಾಯಿಯನ್ನು ಜಗತ್ತಿಗೆ ಹೀಗೆ ಪರಿಚಯಿಸಬೇಕು ಎಂಬ ಅಭಿಯ ಕನಸು ನನಸಾಯ್ತು. ಆ ಅಮ್ಮನಿಗೆ ಇದ್ದದ್ದು ಎರಡು ಆಸೆ. ಹಿಮದಲ್ಲಿ ಆಡಬೇಕು ಅಂತ. ಅದನ್ನೂ ಅಭಿ ಪೂರೈಸಿಬಿಟ್ಟ. ಅಮ್ಮನ ಇನ್ನೊಂದು ಆಸೆ ಏನು ಗೊತ್ತಾ? ಸ್ಟೇಡಿಯಮ್ಮಲ್ಲಿ ಒಂದಾದ್ರೂ ಲೈವ್ ಮ್ಯಾಚ್ ನೋಡಬೇಕು ಅಂತ. ಆ ಆಸೆ ಪೂರೈಸೋ ಪ್ರಯತ್ನದಲ್ಲಿದ್ದಾನೆ ಅಭಿ.
ಇದನ್ನು ಯಾಕೆ ಹೇಳ್ದೆ ಅಂದ್ರೆ .. ಅಭಿ ಇದೆಲ್ಲ ಮಾಡ್ತಿದಾನೆ ಅಂದ್ರೆ ಅಯ್ಯೋ ನಮ್ಮ ದುಡ್ಡಲ್ಲಿ ಮಜಾ ಮಾಡ್ತಾ ಇದಾನೆ.. ಸಿನಿಮಾ ತೆಗೆದು, ಅವಾರ್ಡ್ ತಗೊಂಡು ಊರೂರು ಸುತ್ತುತಾ ಇದಾನೆ ಅಂತ ನಾವು ಉರ್ಕೋಳೋದಲ್ಲ.. ಖುಷಿ ಪಡಬೇಕು. ಸಿಕ್ಕ ಮರುಜನ್ಮ ವನ್ನು ಸಾರ್ಥಕಗೊಳಿಸಿಕೊಳ್ಳೋದು ಹೀಗೆ ಅಲ್ವಾ?
ಆತನಿಂದ ನಮಗೆ ಒಂದು ಅದ್ಭುತ ಕಿರುಚಿತ್ರ ಸಿಕ್ಕಿದೆ. ಫ್ರೀಯಾಗಿ ನೋಡಲಿಕ್ಕೆ. ಆತ ತನಗೆ ಸಿಕ್ಕಿದ ಪುನರ್ಜನ್ಮದಲ್ಲಿ ಕೆಟ್ಟದಾಗಿ ಬದುಕುತ್ತಿಲ್ಲ. ಅರ್ಥಪೂರ್ಣವಾಗಿ ಬದುಕುತ್ತಿದ್ದಾನೆ. ಮಾದರಿ ಜೀವನ ಮಾಡ್ತಿದಾನೆ. ಸಮಾಜದಿಂದ ಗಳಿಸಿಕೊಂಡ ಬದುಕನ್ನು ತನ್ನದೇ ರೀತೀಲಿ ಸಮಾಜಕ್ಕೆ ಕೊಡಲು ತಯಾರಾಗ್ತಿದ್ದಾನೆ. ಸಂತಸ ಪಡೋಣ ಅಲ್ವಾ?
ನೀವೊಮ್ಮೆ ಯೂಟ್ಯೂಬಲ್ಲಿ ಲಕ್ಷ್ಮೀ ಕಿರುಚಿತ್ರವನ್ನು ನೋಡಿಬನ್ನಿ. ನಳಿನಿಯವರ ಮುಗ್ಧ ಸಹಜ ಅಭಿನಯ ಕಣ್ಣನ್ನು ತೇವಗೊಳಿಸುತ್ತದೆ. ಅಭಿಜಿತ್ ನನ್ನು ಬದುಕಿಸಿಕೊಂಡದ್ದು ಸಾರ್ಥಕ ಅನಿಸುತ್ತದೆ.