ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Naveen Sagar Column: ಮೆರೆಯದಿರು, ಮೈ ಮರೆಯದಿರು..! ಆಟ ಕಲಿಸಿದ ಪಾಠ !!

ನೈಜ ಕ್ರಿಕೆಟ್ ಪ್ರೇಮಿಗೆ ಐಪಿಎಲ್ ಕೇವಲ ಆಟವಾಗಿ ರುಚಿಸುತ್ತದೆಯೇ ಹೊರತು ಅವನಿಗೆ ಫ್ಯಾನ್ ವಾರ್, ಫ್ರಾಂಚೈಸ್ ವಾರ್ ಇತ್ಯಾದಿಗಳಲ್ಲಿ ಆಸಕ್ತಿ ಇರೋದಿಲ್ಲ. ಆತ ಧೋನಿ, ಕೊಹ್ಲಿ, ಶರ್ಮ, ಪಾಂಡ್ಯ, ರಸೆಲ, ಬಟ್ಲರ್ ಯಾರೇ ಚೆನ್ನಾಗಿ ಆಡಿದರೂ ಆಸ್ವಾದಿಸ್ತಾನೆ. ಹೊಡಿಬಡಿ ಪಂದ್ಯದಲ್ಲಿ ಬೌಲರ್‌ಗಳು ಮೇಲುಗೈ ಸಾಧಿಸೋದನ್ನು ಎಂಜಾಯ್ ಮಾಡ್ತಾನೆ.

ಮೆರೆಯದಿರು, ಮೈ ಮರೆಯದಿರು..! ಆಟ ಕಲಿಸಿದ ಪಾಠ !!

ಹಿರಿಯ ಪತ್ರಕರ್ತ ನವೀನ್‌ ಸಾಗರ್

Profile Ashok Nayak Mar 22, 2025 6:32 AM

ಪದಸಾಗರ

ನವೀನ್‌ ಸಾಗರ್

ಬರೋಬ್ಬರಿ 8 ವರ್ಷಗಳ ನಂತರ ವಿಶ್ವವಾಣಿಯಲ್ಲಿ ಮತ್ತೆ ಅಂಕಣ ಬರೆಯುವ ಅವಕಾಶ ನನಗೆ ಒದಗಿ ಬಂದಿದೆ. ಸಂತಸದ ಜತೆಗೆ ಸಣ್ಣ ನರ್ವಸ್ ಭಾವ. ಓದುಗರಿಗೆ ನಾನು ಎಷ್ಟು ವರ್ಷದ ಮೇಲೆ ಬರೀತಾ ಇದೀನಿ ಇತ್ಯಾದಿ ವಿಷಯಗಳು ನಗಣ್ಯ. ಅವರಿಗೆ ಬರಹಗಾರ ಯಾರಾದರೂ ಆಗಲಿ, ಎಷ್ಟು ವರ್ಷದ ನಂತರವಾದರೂ ಬರೆಯಲಿ, ಬರಹ ಓದುವಂತಿರಬೇಕು ಅಷ್ಟೆ. ನಟನೊಬ್ಬ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಂಡಾಗ ಅಥವಾ ಬಹುದಿನಗಳ ನಂತರ ತೆರೆ ಮೇಲೆ ಕಂಡಾಗ ಪ್ರೇಕ್ಷಕ ನಿಗೆ ಒಂದು ಸಣ್ಣ ಎಕ್ಸೈಟ್‌ಮೆಂಟ್ ಮತ್ತು ಅಭಿಮಾನ ಮೂಡೋದು ಹೌದಾದರೂ, ಆತನಿಗೆ ಮುಖ್ಯವಾಗೋದು ನಟನ ಅಭಿನಯ ಮತ್ತು ಇಡಿಯಾಗಿ ಸಿನಿಮಾ ಹೇಗಿದೆ ಅನ್ನೋದು ಮಾತ್ರ. ಕ್ರಿಕೆಟಿಗನೊಬ್ಬ ಅಖಾಡಕ್ಕೆ ಇಳಿದಿದ್ದಾನೆ ಅಂದ್ರೆ ಆತನ ಪ್ರದರ್ಶನ ಮತ್ತು ಗೆಲುವಿಗೆ ಆತ ನೀಡೋ ಕೊಡುಗೆ ಅಷ್ಟೇ ವೀಕ್ಷಕನಿಗೆ ಮುಖ್ಯವಾಗುತ್ತೆಯೇ ಹೊರತು, ಆತ ಡಿಪ್ರೆಶನ್ನಲ್ಲಿದ್ದಾನೆ, ಪ್ರೇಯಸಿ ಕೈಕೊಟ್ಟಿರೋದಕ್ಕೆ ಆತನ ಆಟ ಡಲ್ ಆಗಿದೆ, ಆತ ಇಂಜುರಿಯಿಂದ ಈಗಷ್ಟೇ ಗುಣಮುಖ ನಾಗಿ ಬಂದಿದ್ದಾನೆ ಇತ್ಯಾದಿಗಳೆಲ್ಲ ಬೇಕಾಗಿಲ್ಲ.

ಇದನ್ನೂ ಓದಿ: Uma Mahesh Vaidya Column: ಸೌಜನ್ಯ ಪ್ರಕರಣವನ್ನು ಜೀವಂತರಾಗಿಸಿರುವ ಕಸರತ್ತು !

ಓದುಗ, ಪ್ರೇಕ್ಷಕ, ಗ್ರಾಹಕ ಇವರೆಲ್ಲ ನಿರೀಕ್ಷಿಸೋದು ತಮ್ಮ ಸಮಯಕ್ಕೆ, ಹಣಕ್ಕೆ ಮತ್ತು ನಿರೀಕ್ಷೆಗೆ ತಕ್ಕ ರಿಟ ಮಾತ್ರ. ಅದು ಸರಿ ಕೂಡ. ಹೀಗಾಗಿ ಬಹುದಿನದ ನಂತರ ಬರೆಯುತ್ತಿರೋ ಮೊದಲ ಅಂಕಣಬರಹ ಎಂಬ ಯಾವ ರಿಯಾಯಿತಿಯನ್ನೂ ನಿರೀಕ್ಷಿಸದೇ ಮೊದಲ ಅಂಕಣವನ್ನು ನಿಮ್ಮ ಮುಂದಿಡುತ್ತಿದ್ದೇನೆ.

ಆದರೆ ಮೊದಲ ಅಂಕಣಕ್ಕೆ ಯಾವ ವಸ್ತು ಆಯ್ದುಕೊಳ್ಳಲಿ ಅಂತ ಬಂದಾಗ ತಲೆಯಲ್ಲಿ ಹರಿದಾ ಡಿದ್ದು, ರಾಜ್ಯ ರಾಜಕೀಯ, ಅಂತಾರಾಷ್ಟ್ರೀಯ ವಿದ್ಯಮಾನಗಳು, ಸುನಿತಾ ವಿಲಿಯಮ್ಸ್, ಶೇರ್ ಮಾರ್ಕೆಟ್, ಸೌಜನ್ಯ ಹತ್ಯೆ ಕೇಸ್, ಕ್ರಿಕೆಟ್, ಐಪಿಎಲ್, ದರ್ಶನ್, ಯುಟ್ಯೂಬ್ ವೈರಲ್ ಐಟಮ್ಸ್.. ಹೀಗೆ ಸಾಲು‌ ಸಾಲು ಕಂಟೆಂಟ್‌ಗಳ ಮೆರವಣಿಗೆ.

ಫೇಸ್‌ಬುಕ್‌ನ ಓದುಗರು, “ಮೊದಲ ಅಂಕಣದಲ್ಲಿ ರಾಜಣ್ಣನಿಗೆ ರುಬ್ಬಿರಿ, ಬಂಡೆಗೆ ಗುದ್ದಿರಿ, ಟಗರನ್ನ ಗುಮ್ಮಿರಿ" ಅಂತ ಕೇಳಿಕೊಂಡ್ರು..! ಅವ್ರಿಗೆಲ್ಲ ಒಂದು ಭರ್ಜರಿ ಹಾರ್ಡ್ ಹಿಟ್ ಅಂಕಣದ ಮೂಲಕ ಕಂಬ್ಯಾಕ್ ಮಾಡ್ಲಿ.. ಒಂದು ಫೈರ್ ಬ್ರ್ಯಾಂಡ್ ಲೇಖನ ಬರಲಿ, ತಮ್ಮೆಲ್ಲ ಆಕ್ರೋಶಗಳನ್ನು ಪ್ರತಿನಿ ಧಿಸೋ ಅಂಕಣ ಬರಲಿ ಅನ್ನೋ ಆಸೆ.

ಇನ್ನು ಕೆಲವರು, ಭಾವುಕತೆ, ತುಂಟತನ, ಮುಗ್ಧತೆ, ಮಾನವೀಯ ಮೌಲ್ಯಗಳು ತುಂಬಿದ ಎಮೋ ಷನಲ್ ಅಂಕಣ ಬರಲಿ ಎಂಬ ಅನಿಸಿಕೆ ವ್ಯಕ್ತಪಡಿಸಿದರು. ಮಲ್ಲೇಶ್ವರದ ಆಶಾ ಫುಡ್ ಕ್ಯಾಂಪ್‌ನಲ್ಲಿ ಉದ್ಯೋಗಿಯಾಗಿರುವ ಸಹೃದಯಿ ಓದುಗ ಮಿತ್ರ ದೇವರಾಜ್ ನಾಕಿಕೆರೆ ಒಂದು ಮೆಸೇಜ್ ಕಳಿಸಿ ದ್ದರು- “ಸರ್, ಮಲ್ಲೇಶ್ವರದ ಕೆಸಿ ಜನರಲ್ ಆಸ್ಪತ್ರೆ ಸಿಗ್ನಲ್‌ನಲ್ಲಿ ನಿಂತಾಗ ಪ್ರತಿ ಸಲ, ಛತ್ರಿ ಮಾರೋ ಹುಡುಗ ಕಾಣ್ತಾನಾ ಅಂತ ಹುಡುಕ್ತೀನಿ ಸರ್.

ನೀವು ಬರೆದ ಆ ಬರಹ ಭಯಂಕರ ಕಾಡಿತ್ತು. ಅಂಥವು ಬರೀರಿ ಸರ್. ಮಳೆ ಹುಡುಗ-ಛತ್ರಿ-ಮಲ್ಲೇಶ್ವರಂ ಸಿಗ್ನಲ್! ಕೆಲವು ವಸ್ತುಗಳು ನಮ್ಮ ಜತೆಲೇ ಇದ್ರೂ ಅವು ನಮ್ಮವಾಗೋದಿಲ್ಲ ಅಂತ ಬರೆದಿದ್ರಿ. ಅಂಥ ಬರಹಗಳನ್ನು ಮಿಸ್ ಮಾಡ್ಕೋತಿದೀನಿ. ಪ್ಲೀಸ್ ಬರೀರಿ". ಅರೆ.. ಓದುಗರ ನೆನಪಿನ ಶಕ್ತಿ ಎಂಥದ್ದು ಅಲ್ವಾ? ನಿಜ. ವರ್ಷಗಳು ಕಳೆದರೂ ನೆನಪಿರುವಂಥ, ಮನಸೊಳಗೆ ಭದ್ರವಾಗಿ ಜಾಗ ಮಾಡಿಕೊಳ್ಳುವಂಥ ಬರಹ ಬರೀಬೇಕು ಅನಿಸೋದು ಇಂಥ ಪತ್ರಗಳು ಬಂದಾಗಲೇ. ಹಾಗಾದ್ರೆ ಇವತ್ತೇನು ಬರೀಲಿ ಅಂತ ಯೋಚಿಸಿದಾಗ ಬೇಡಬೇಡವೆಂದರೂ ಕೈ ಜಗ್ಗಿ ಎಳೆದದ್ದು ನನ್ನ ನೆಚ್ಚಿನ ಕ್ರಿಕೆಟ್. ಇಂದಿನಿಂದ ಐಪಿಎಲ್ ಶುರುವಾಗ್ತಿದೆ. ‌

ನಿನ್ನೆ ತನಕ ಗೆಳೆಯರಿದ್ದವರು ಇವತ್ತಿನಿಂದ ವೈರಿಗಳಾಗಿ ಬಿಡ್ತಾರೆ. ನಿನ್ನೆಯ ತನಕ ಬದ್ಧದ್ವೇಷಿಗಳ ಥರ ಇದ್ದವರು ಇಂದಿನಿಂದ ಆಪ್ತಮಿತ್ರರಾಗಿಬಿಡ್ತಾರೆ. ಬಹಳ ಹಿಂದೆ “ಡಿವೈಡೆಡ್ ಬೈ ನೇಷನ್ಸ್ ಯುನೈಟೆಡ್ ಬೈ ಕ್ರಿಕೆಟ್" ಅಂತ ಕಿಂಗ್ ಫಿಷರ್ ಒಂದು ಜಾಹೀರಾತು ಮಾಡಿತ್ತು. ಆಟ ಎಲ್ಲರನ್ನೂ ಒಂದು ಗೂಡಿಸುತ್ತದೆ ಅನ್ನೋ ಪರಿಕಲ್ಪನೆಯಲ್ಲಿ ಎಲ್ಲ ದೇಶದ ಒಬ್ಬೊಬ್ಬ ಕ್ರಿಕೆಟಿಗನನ್ನು ಸೇರಿಸಿ‌ ಕೊಂಡು ಅವರನ್ನು ಗೆಳೆಯರಂತೆ ತೋರಿಸುವ ಜಾಹೀರಾತು ಅದು.

ಮದ್ಯಪಾನದ ಜಾಹೀರಾತೇ ಆದರೂ ಅದರಂದು ಮೌಲ್ಯವಿತ್ತು. ಇಂದು ಐಪಿಎಲ್ ಅದೇ ರೀತಿ ಅನಿಸುತ್ತದೆ. ಡಿವೈಡೆಡ್ ಬೈ ನೇಷನ್ಸ್, ಯುನೈಟೆಡ್ ಬೈ ಐಪಿಎಲ್ ಅನಿಸುತ್ತದೆ. ಜಸ್ಟ್ ಒಂದ್ ತಿಂಗಳ ಹಿಂದೆ ತಮ್ಮ ತಮ್ಮ ದೇಶಗಳನ್ನು ಪ್ರತಿನಿಧಿಸುತ್ತಾ ಇದ್ದ ವಿದೇಶಿ ಆಟಗಾರರು, ಇವತ್ತು ಭಾರತದ ಲೀಗ್‌ನಲ್ಲಿ ಬೆರೆತು ಹೋಗುತ್ತಾರೆ.

ಲಿವಿಂಗ್ ಸ್ಟೋನ್, ಸಾಲ್ಟ್, ಮ್ಯಾಕ್ಸ್ ವೆಲ್ ಇವರೆಲ್ಲ ಇಷ್ಟು ದಿನ ಪರಕೀಯರು. ಇಂದಿನಿಂದ ನಮ್ಮ‌ ವರು. ಆದರೆ ದುರಂತ ನೋಡಿ, ಇಷ್ಟು ದಿನ ನಮ್ಮವರೇ ಅಗಿದ್ದ ರೋಹಿತ್ ಶರ್ಮ, ಹಾರ್ದಿಕ್ ಪಾಂಡ್ಯ, ಜಡೇಜ ಇವರೆಲ್ಲ ಕರ್ನಾಟಕದ ಪಾಲಿಗೆ ಶತ್ರುಗಳಾಗಿ ಬಿಡ್ತಾರೆ. ಧೋನಿ ಒಬ್ಬ ಪಾಕಿಸ್ತಾನಿ ಕ್ರಿಕೆಟಿಗನಿಗಿಂತ ಹೆಚ್ಚು ವೈರತ್ವಕ್ಕೆ ಗುರಿಯಾಗಿ ಬಿಡ್ತಾನೆ. ಕೊಹ್ಲಿ ಅಭಿಮಾನಿಗಳಿಗೂ ರೋಹಿತ್ ಅಭಿಮಾನಿಗಳಿಗೂ ಸೋಷಿಯಲ್ ಮೀಡಿಯಾ ವಾರ್ ಶುರುವಾಗುತ್ತದೆ.

ಐಪಿಎಲ್ ದೇಶದೇಶಗಳನ್ನು ಒಂದಾಗಿಸುತ್ತದೆ. ಆದರೆ ದೇಶದ ಒಳಗಿನವರ ನಡುವೆಯೇ ಕಂದಕ ಸೃಷ್ಟಿಸುತ್ತದೆ. ಅಫ್‌ ಕೋರ್ಸ್ ಇದು ತಾತ್ಕಾಲಿಕವೇ ಅಂದುಕೊಂಡರೂ ಎಷ್ಟೊಂದು ಮನಸುಗಳು ಕಹಿಯಾಗುತ್ತವೆ. ಎಷ್ಟೊಂದು ಸ್ನೇಹಗಳು ಶಿಥಿಲಗೊಳ್ಳುತ್ತವೆ. ಎಷ್ಟೊಂದು ಮಂದಿಯ ಅಂತರಂಗ ಇಷ್ಟು ಕುರೂಪವಾ ಎಂದು ಅಸಹ್ಯಪಡುವಂತೆ ಮಾಡುತ್ತದೆ.

ಎಷ್ಟೊಂದು ಜನರ ಬಯ್ಗುಳದ ಪದಭಂಡಾರದ ಪರಿಚಯವಾಗುತ್ತದೆ. ಆದರೂ ಐಪಿಎಲ್ ಒಂದು ಸಮ್ಮೋಹಿನಿಯೇ. ಪ್ರತಿದಿನ ಬಿಗ್ ಬಾಸ್ ಎಂಬ ಕಾರ್ಯಕ್ರಮವನ್ನು, ಬಯ್ತಾ, ಟೀಕಿಸ್ತಾ ಇದ್ದು, ಅದು ಶುರು ಆಗ್ತಾ ಇದ್ದ ಹಾಗೇ ಅದಕ್ಕೇ ಅಂಟಿ ಕೂರೋ ಆಡಿಯೆನ್ಸ್ ಥರ ಐಪಿಎಲ್‌ಗೆ ಅಡಿಕ್ಟ್ ಆಗೋ ಕೋಟ್ಯಂತರ ಮಂದಿ ಇದ್ದಾರೆ. ಕ್ರಿಕೆಟ್ಟೇ ಗೊತ್ತಿಲ್ಲದವರಿಗೂ ಐಪಿಎಲ್ ನೋಡ್ತೀನಿ ಅನ್ನೋ ದು ಒಂದು ಫ್ಯಾಶನ್. ಬೆಟ್ಟಿಂಗ್‌ಗೆ, ಸ್ಪಿಟ್ಟಿಂಗ್‌ಗೆ ಎಲ್ಲದಕ್ಕೂ ಐಪಿಎಲ್ ಒಂದು ಮೂಲ.

ಆದರೆ ನೈಜ ಕ್ರಿಕೆಟ್ ಪ್ರೇಮಿಗೆ ಐಪಿಎಲ್ ಕೇವಲ ಆಟವಾಗಿ ರುಚಿಸುತ್ತದೆಯೇ ಹೊರತು ಅವನಿಗೆ ಫ್ಯಾನ್ ವಾರ್, ಫ್ರಾಂಚೈಸ್ ವಾರ್ ಇತ್ಯಾದಿಗಳಲ್ಲಿ ಆಸಕ್ತಿ ಇರೋದಿಲ್ಲ. ಆತ ಧೋನಿ, ಕೊಹ್ಲಿ, ಶರ್ಮ, ಪಾಂಡ್ಯ, ರಸೆಲ್, ಬಟ್ಲರ್ ಯಾರೇ ಚೆನ್ನಾಗಿ ಆಡಿದರೂ ಆಸ್ವಾದಿಸ್ತಾನೆ. ಹೊಡಿಬಡಿ ಪಂದ್ಯ‌ ದಲ್ಲಿ ಬೌಲರ್‌ಗಳು ಮೇಲುಗೈ ಸಾಧಿಸೋದನ್ನು ಎಂಜಾಯ್ ಮಾಡ್ತಾನೆ.

ಕಷ್ಟದ ಪಿಚ್ಚಲ್ಲಿ ಬ್ಯಾಟರ್ ಒಬ್ಬ ರೌದ್ರಾವತಾರ ತಾಳೋದನ್ನು ನಿರೀಕ್ಷಿಸ್ತಾನೆ. ಕ್ಲೋಸ್ ಫಿನಿಶ್ ಮ್ಯಾಚ್‌ಗಳ ನಿರೀಕ್ಷೆಯಲ್ಲಿರ್ತಾನೆ. ಅಂಥ ಕ್ರಿಕೆಟ್ ಪ್ರೇಮಿಗೆ, ಐಪಿಎಲ್ ಮಾತ್ರವಲ್ಲ ಟೆಸ್ಟ್ ಪಂದ್ಯ, ರಣಜಿ ಪಂದ್ಯ, ಕ್ಲಬ್ ಲೆವೆಲ್ ಪಂದ್ಯಗಳು ಕೂಡ ಕ್ರಿಕೆಟ್ ಕಾರಣಕ್ಕೆ ಅಂಕಿ ಅಂಶಗಳ ಕಾರಣಕ್ಕೆ ಆಸಕ್ತಿ ಹುಟ್ಟಿಸುತ್ತವೆ. ಕ್ರಿಕೆಟನ್ನ ಆತ ಒಂದು ಟೆಕ್ಸ್ಟ್‌ಬುಕ್‌ನಂತೆ, ಕಥೆ ಪುಸ್ತಕದಂತೆ ನೋಡುತ್ತಾನೆ. ಅದರಲ್ಲಿ ಆತನಿಗೆ ಒಂದು ನೀತಿಪಾಠ ಸಿಗುತ್ತದೆ. ಅದರಲ್ಲಿ ಆತನಿಗೆ ಯಾವುದೋ ಫಿಲಾಸಫಿ ಹೊಳೆ ಯುತ್ತದೆ. ಅಂಥದ್ದೊಂದು ಕ್ರಿಕೆಟ್ ಕಥೆಯೊಂದಿಗೆ ಅಂಕಣ ಮುಗಿಸುತ್ತೇನೆ.

ಅದು 1990. ನಾನೀಗ ಹೇಳ್ತಾ ಇರೋದು ಯಾವುದೋ ಅನಧಿಕೃತ ಲೋಕಲ್ ಪಂದ್ಯದ ಕಥೆ ಅಲ್ಲ. ಅದು - ಕ್ಲಾಸ್ ಕ್ರಿಕೆಟ್ ಪಂದ್ಯ. ನ್ಯೂಜಿಲೆಂಡಿನ ಎರಡು ಪ್ರಬಲ ತಂಡಗಳ ನಡುವಿನ ಲೀಗ್ ಪಂದ್ಯ. ನಮ್ಮಲ್ಲಿ ರಣಜಿ ಟ್ರೋಫಿ ನಡೆಯೋ ಹಾಗೆ ನ್ಯೂಜಿಲೆಂಡಲ್ಲಿ ಶೆಲ್ ಟ್ರೋಫಿ ಎಂಬ ಪಂದ್ಯಾವಳಿ. ವೆಲ್ಲಿಂಗ್ಟನ್ ಮತ್ತು ಕ್ಯಾಂಟರ್‌ಬರಿ ಎಂಬ 2 ತಂಡಗಳ ನಡುವೆ ನಡೆದ 3 ದಿನಗಳ ಪಂದ್ಯ ಅದು.

ವೆಲ್ಲಿಂಗ್ಟನ್ ಮೊದಲ ಇನ್ನಿಂಗ್ಸಿನಲ್ಲಿ 202 ರನ್ ಹೊಡೆದು ಆಲೌಟ್ ಆಗುತ್ತದೆ. ಪ್ರತಿಯಾಗಿ ಕ್ಯಾಂಟ ರ್‌ಬರಿ ತಂಡ 7 ವಿಕೆಟ್‌ಗೆ 221 ರನ್ ಗಳಿಸಿ ಡಿಕ್ಲೇರ್ ಮಾಡುತ್ತದೆ. ಅಂದ್ರೆ 19 ರನ್‌ಗಳ ಮುನ್ನಡೆ ಯೊಂದಿಗೆ ಮತ್ತೆ ವೆಲ್ಲಿಂಗ್ಟನ್ ತಂಡಕ್ಕೆ ಆಡೋ ಅವಕಾಶ ನೀಡುತ್ತದೆ. ಆಗ ವೆಲ್ಲಿಂಗ್ಟನ್ ಎರಡನೇ ಇನ್ನಿಂಗ್ಸಲ್ಲಿ 309 ರನ್ ಹೊಡೆದು ಡಿಕ್ಲೇರ್ ಮಾಡುತ್ತದೆ. ಕ್ಯಾಂಟರ್‌ಬರಿ ತಂಡಕ್ಕೆ ಗೆಲ್ಲಲು 291 ರನ್‌ಗಳ ಗುರಿ ನೀಡಲಾಗುತ್ತೆ.

ಈ ಗುರಿ ಬೆನ್ನಟ್ಟುವ ಕ್ಯಾಂಟರ್‌ಬರಿ ತಂಡ ಕೇವಲ 108 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿಬಿಡುತ್ತೆ. ಈ ಹಂತದಲ್ಲಿ ವೆಲ್ಲಿಂಗ್ಟನ್‌ಗೆ ಗೆಲ್ಲೋಕೆ ಕೇವಲ 2 ವಿಕೆಟ್ ತೆಗೆದರೆ ಸಾಕು. ಆದರೆ ಕ್ಯಾಂಟರ್‌ಬರಿಗೆ ಉಳಿದಿರೋ 2 ವಿಕೆಟ್‌ಗಳಲ್ಲಿ 188 ರನ್ ಹೊಡೀಬೇಕು ಅಥವಾ ಸೋಲು ತಪ್ಪಿಸಿಕೊಳ್ಳೋಕೆ ಇನ್ನು ಉಳಿದಿರೋ ಅರ್ಧ ದಿನ ರಕ್ಷಣೆಯ ಆಟದ ಮೊರೆ ಹೊಗಬೇಕು.

ಅಸಾಧ್ಯದ ಮಾತಲ್ವಾ? ಒಂಬತ್ತನೇ ವಿಕೆಟ್‌ಗೆ ಕ್ಯಾಂಟರ್‌ಬರಿ ತಂಡ ಹಾಗೂ ಹೀಗೂ 88 ರನ್ ಕಲೆ ಹಾಕಿ ಪಂದ್ಯ ಉಳಿಸಿಕೊಳ್ಳೋಕೆ ಹರಸಾಹಸ ಪಡ್ತಾ ಇರುತ್ತೆ. ಇಂಥ ಹೊತ್ತಲ್ಲಿ ಬೌಲಿಂಗ್ ತಂಡದ ನಾಯಕ, ವೆಲ್ಲಿಂಗ್ಟನ್ ತಂಡದ ಕಪ್ತಾನ, ಆಕ್ರಮಣಕಾರಿ ಬೌಲರ್‌ಗೆ ಬೌಲಿಂಗ್ ಕೊಟ್ಟು ಎದುರಾಳಿ ತಂಡವನ್ನು ಆಲೌಟ್ ಮಾಡೋ ಬದಲು ಅಥವಾ ಟೈಟ್ ಓವರ್ ಹಾಕಿಸಿ ಪಂದ್ಯ ಮುಗಿಸೋ ಬದಲು, ಇನ್ನೇನು ಗೆದ್ದೇಬಿಟ್ವಿ ಬಿಡು ಅಂತ ಒಬ್ಬ ಪಾರ್ಟ್‌ಟೈಮ್ ಬೌಲರ್‌ಗೆ ಒಂದು ಓವರ್ ಬೌಲಿಂಗ್ ಮಾಡು ಅಂತ ಕೊಟ್ಟುಬಿಡ್ತಾನೆ.

ಆತನ ಹೆಸರು ಬರ್ಟ್ ವ್ಯಾನ್ಸ್. ಅಪರೂಪಕ್ಕೆ ಬೌಲಿಂಗ್ ಮಾಡುವ ಆಟಗಾರ. ಆತ ಬೌಲಿಂಗಿಗೆ ಬಂದಾಗ ಕ್ಯಾಂಟರ್‌ಬರಿ ತಂಡಕ್ಕೆ ಇನ್ನು 2 ಓವರ್‌ಗಳಲ್ಲಿ 96 ರನ್ ಬೇಕು. 12 ಎಸೆತಗಳಲ್ಲಿ ತೊಂಬ ತ್ತಾರರ ಗುರಿ. ಎಲ್ಲಾ ಚೆಂಡುಗಳನ್ನೂ ಸಿಕ್ಸರ್‌ಗೆ ಅಟ್ಟಿದರೂ, ವೈಡು-ನೋಬಾಲ್ ಅಂತ 10 ರನ್ ಎಕ್ಸ್‌ಟ್ರಾ ಕೊಟ್ಟರೂ ಎದುರಾಳಿಗೆ ಗುರಿ ಮುಟ್ಟೋಕಾಗಲ್ಲ ಅಂತ ಕಪ್ತಾನ ಬಹಳ ಹಗುರವಾಗಿ ತಗೊಳ್ತಾನೆ. ಆದರೆ ಅವತ್ತು ಬರ್ಟ್ ವ್ಯಾನ್ಸ್‌ನ ಗ್ರಹಚಾರವೋ ಏನೋ... ಆತ ಎಸೆದದ್ದೆಲ್ಲ ನೋ ಬಾಲ್ ಆಗ್ತವೆ.. ವೈಡ್ ಹೋಗ್ತವೆ.. ಅವೆರಡರ ಜತೆ ಮುಟ್ಟಿದ್ದೆಲ್ಲ ಬೌಂಡರಿ, ಸಿಕ್ಸರ್.

ಮೊದಲ 16 ಎಸೆತಗಳಲ್ಲಿ ಆತ ಒಂದೇ‌ ಒಂದು ಕ್ರಮಬದ್ಧ ಎಸೆತ ಎಸೆಯೋದಿಲ್ಲ. ಆತನ ಒಂದೇ ಓವರ್‌ನಲ್ಲಿ ಎದುರಾಳಿ ತಂಡ 77 ರನ್ ಗಳಿಸಿ ಬಿಡುತ್ತೆ. ಆತ ಓವರ್ ಮುಗಿಸೋಕೆ ಎಸೆದ ಒಟ್ಟು ಎಸೆತ ಇಪ್ಪತ್ತೆರಡು! ಅಂಪೈರ್‌ಗಳು, ಸ್ಕೋರರ್‌ಗಳು ಲೆಕ್ಕ ತಪ್ಪಿಬಿಡ್ತಾರೆ. ಏನು ನಡೀತಾ ಇದೆ ಗ್ರೌಂಡಲ್ಲಿ ಅಂತಾನೇ ಗೊತ್ತಾಗದ ಸ್ಥಿತಿ. ಕೊನೆಯ ಓವರ್‌ನಲ್ಲಿ ಕ್ಯಾಂಟರ್‌ಬರಿಗೆ 18 ರನ್‌ಗಳ ಅಗತ್ಯ!

ಅಲ್ಲಿಯೂ ಒಂದು ಟ್ವಿಸ್ಟ್! 17 ರನ್ ಮಾತ್ರ ಗಳಿಸೋ ಕ್ಯಾಂಟರ್‌ಬರಿ ಈ ಪಂದ್ಯವನ್ನು ಟೈ ಮಾಡಿ ಕೊಂಡು ಸೋಲಿನಿಂದ ಪಾರಾಗುತ್ತೆ. ಗೆಲುವಿನಿಂದ ವಂಚಿತವಾಗುತ್ತೆ. ಭಾರಿ ಅಂತರದ ಗೆಲುವು ಗಳಿಸಬೇಕಿದ್ದ ವೆಲಿಂಗ್ಟನ್ ‘ಸದ್ಯ ಸೋಲಲಿಲ್ವಲ್ಲ’ ಅಂತ ನಿಟ್ಟುಸಿರು ಬಿಡುತ್ತೆ. ಚುನಾವಣೆಯಲ್ಲಿ, ಆಟಗಳಲ್ಲಿ, ಬದುಕಿನಲ್ಲಿ ಅಂತಿಮ ಕ್ಷಣದ ತನಕ ಫಲಿತಾಂಶ ಹೇಳಲಾಗುವುದಿಲ್ಲ. ಕೊನೆಯ ಕ್ಷಣದ ತನಕ ಯಾವುದನ್ನೂ ಹಗುರವಾಗಿ ತೆಗೆದುಕೊಳ್ಳುವಂತೆಯೇ ಇಲ್ಲ. ಮೆರೆದರೆ ಮೈಮರೆತರೆ ಗೆಲುವು ಸೋಲಾಗಿ ಬದಲಾಗಬಹುದು. ಹೋರಾಟ, ಆತ್ಮವಿಶ್ವಾಸ ಜಾರಿಯಲ್ಲಿಟ್ಟರೆ ಸೋಲೂ ಗೆಲುವಾಗಿ ಬದಲಾಗಬಹುದು. ಇದು ಆಟ ಕಲಿಸುವ ಪಾಠಗಳ ಸೊಗಸು.