ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸ್ಟಿಂಗ್ ಕೆಸರೆರಚಾಟ

‘ನಮ್ಮ ಸರ್ಕಾರದ ಸಚಿವರನ್ನು ಗುರಿಯಾಗಿಸಿಕೊಂಡು ಸ್ಟಿಂಗ್ ಆಪರೇಶನ್ ಮಾಡಲಾಗುತ್ತಿದೆ. ಸಚಿವರೇ ಹುಷಾರ್’ ಎಂದು ಸ್ವತಃ ಸಿಎಂ ಡಿಕೆ ಶಿವಕುಮಾರ್ ಅವರೇ ಎಚ್ಚರಿಸಿದ್ದಾರೆ. ‘ಈ ಕುತಂತ್ರ ದ ಹಿಂದೆ ಕೇಂದ್ರ ಸಚಿವ ಹಾಗೂ ರಾಜ್ಯದ ಬಿಜೆಪಿ ನಾಯಕರೊಬ್ಬರು ಇದ್ದಾರೆ’ ಎಂದು ಆಡಳಿತ ಪಕ್ಷದ ಶಾಸಕರೊಬ್ಬರು ಆರೋಪ ಮಾಡಿದ್ದಾರೆ. ‘ಸ್ವತಃ ಸಿಎಂ ಡಿಕೆಶಿ, ಜಾರಕಿಹೊಳಿ ವಿರುದ್ಧ ಸ್ಟಿಂಗ್ ಮಾಡಿಸಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯರೊಬ್ಬರು ಆರೋಪಿಸಿದ್ದಾರೆ.

ಸ್ಟಿಂಗ್ ಕೆಸರೆರಚಾಟ

-

Profile
Ashok Nayak Oct 10, 2026 1:39 PM

ರಾಜ್ಯ ರಾಜಕೀಯ ಅಕ್ಷರಶಃ ಕೆಸರೆರಚಾಟದ ಕಣವಾಗಿಬಿಟ್ಟಿದೆ. ‘ಸ್ಟಿಂಗ್ ಆಪರೇಶನ್’ನ ಹೆಸರಿನಲ್ಲಿ ಪರಸ್ಪರ, ನಿಂದೆ ಆರೋಪ ಪ್ರತ್ಯಾರೋಪ ವಾಗ್ಯುದ್ಧ ನಡೆಯುತ್ತಿದೆ. ರಾಜ್ಯದ ಬರಗಾಲ, ಬೆಲೆಯೇರಿಕೆ, ಎಸ್‌ಐಆರ್ ಮೊದಲಾದ ಗಂಭೀರ ವಿಷಯಗಳ ಬಗೆಗೆ ತಲೆ ಕೆಡಿಸಿಕೊಳ್ಳಬೇಕಾದ ನಾಯಕರೆಲ್ಲಾ ಎದುರಾಳಿಗಳ ಪಂಚೆ ಎಳೆಯಲು ಟೊಂಕ ಕಟ್ಟಿ ನಿಂತಿದ್ದಾರೆ. ಸ್ಟಿಂಗ್ ಆಪರೇಶನ್ ಸಂಬಂಧ ಸಿಬಿಐ ತನಿಖೆ ಕೋರಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಸಾಮಾಜಿಕ ಹೋರಾಟಗಾರರೊಬ್ಬರು ಪತ್ರ ಬರೆದಿದ್ದಾರೆ.

‘ನಮ್ಮ ಸರ್ಕಾರದ ಸಚಿವರನ್ನು ಗುರಿಯಾಗಿಸಿಕೊಂಡು ಸ್ಟಿಂಗ್ ಆಪರೇಶನ್ ಮಾಡಲಾಗುತ್ತಿದೆ. ಸಚಿವರೇ ಹುಷಾರ್’ ಎಂದು ಸ್ವತಃ ಸಿಎಂ ಡಿಕೆ ಶಿವಕುಮಾರ್ ಅವರೇ ಎಚ್ಚರಿಸಿದ್ದಾರೆ. ‘ಈ ಕುತಂತ್ರ ದ ಹಿಂದೆ ಕೇಂದ್ರ ಸಚಿವ ಹಾಗೂ ರಾಜ್ಯದ ಬಿಜೆಪಿ ನಾಯಕರೊಬ್ಬರು ಇದ್ದಾರೆ’ ಎಂದು ಆಡಳಿತ ಪಕ್ಷದ ಶಾಸಕರೊಬ್ಬರು ಆರೋಪ ಮಾಡಿದ್ದಾರೆ. ‘ಸ್ವತಃ ಸಿಎಂ ಡಿಕೆಶಿ, ಜಾರಕಿಹೊಳಿ ವಿರುದ್ಧ ಸ್ಟಿಂಗ್ ಮಾಡಿಸಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯರೊಬ್ಬರು ಆರೋಪಿಸಿದ್ದಾರೆ.

ಇದನ್ನೂ ಓದಿ: Vishwavani Editorial: ಹಾಲು ದುಬಾರಿಯ ಬರೆ

‘ಸಿದ್ದರಾಮಯ್ಯ ವಿರುದ್ಧವೇ ಡಿಕೆಶಿ ಸ್ಟಿಂಗ್ ಮಾಡಿ ಅವರನ್ನು ಕೆಳಗಿಳಿಸಿದರು’ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಬಾಂಬ್ ಹಾಕಿದ್ದಾರೆ. ಇನ್ನೂ ಹಲವು ಕಾಂಗ್ರೆಸ್ ನಾಯಕರು, ವಿಪಕ್ಷಗಳ ನಾಯಕರು ಈ ಬಗ್ಗೆ ಬೇಕು ಬೇಕಾದಂತೆ ಮಾತಾಡುತ್ತಿದ್ದಾರೆ. ಆದರೆ ಯಾರೂ ತಮ್ಮ ಮಾತುಗಳಿಗೆ ಸೂಕ್ತ ಸಾಕ್ಷ್ಯ ಇದುವರೆಗೂ ನೀಡಿಲ್ಲ. ರಾಜ್ಯದ ಜನ ಇದನ್ನೆಲ್ಲ ನೋಡುತ್ತಿದ್ದಾರೆ ಎಂಬ ಯೋಚನೆಯೂ ಈ ನಾಯಕರಿಗೆ ಇದ್ದಂತಿಲ್ಲ.

ಸಾಕ್ಷ್ಯ ರುಜುವಾತುಗಳು ಇಲ್ಲದೆ ಬೇರೊಬ್ಬರ ಚಾರಿತ್ರ್ಯ ಹನನ ಮಾಡುವುದು ಸರಿಯಾದ ರಾಜಕಾರಣವೂ ಅಲ್ಲ, ಮಾನವೀಯತೆಯೂ ಅಲ್ಲ. ಆರೋಪಗಳೆಲ್ಲಾ ನಿಜವಾಗಿದ್ದರೆ, ಇಲ್ಲಿ ಯಾರೂ ಶುದ್ಧಹಸ್ತರೇ ಇಲ್ಲ ಎಂದು ರಾಜ್ಯದ ಜನತೆ ತಿಳಿಯಬೇಕಾಗುತ್ತದೆ. ದೋಷಾರೋಪ ಈ ಮಟ್ಟಕ್ಕೆ ಇಳಿಯಬಾರದು. ಯಾರ ಬಳಿ ಸಾಕ್ಷ್ಯ ಇದೆಯೋ ಅವರು ಅದನ್ನು ಮುಂದಿಟ್ಟುಕೊಂಡು ಪತ್ರಿಕಾಗೋಷ್ಠಿ ನಡೆಸಿದರೆ, ತನಿಖಾ ಸಂಸ್ಥೆಗಳಿಗೆ ದೂರು ನೀಡಿ ತನಿಖೆಗೆ ಚಾಲ್ತಿ ನೀಡಿದರೆ ಅದಕ್ಕೊಂದು ಅರ್ಥವಿರುತ್ತದೆ.

ಭ್ರಷ್ಟಾಚಾರ ಬಯಲಿಗೆಳೆಯುವ ಉದ್ದೇಶದಿಂದ ಸ್ಟಿಂಗ್ ಕಾರ್ಯಾಚರಣೆ ಮಾಡುವುದು ತಪ್ಪಲ್ಲ. ಮಾಧ್ಯಮಗಳೂ ಅದನ್ನು ಮಾಡುತ್ತವೆ. ಆದರೆ ಅದರ ಮೂಲಕ ಬ್ಲ್ಯಾಕ್‌ಮೇಲ್ ತಪ್ಪು. ಆದರೆ ಈಗ ಹುಟ್ಟಿಕೊಂಡಿರುವ ಗೊಂದಲ ವೃಥಾಪವಾದ, ಮಾನನಷ್ಟ, ಜನರ ನಂಬಿಕೆಹಾನಿಗೆ ಈಡು ಮಾಡುವಂಥದ್ದು. ನಾಯಕರು ಗಂಭಿರ ಸಮಸ್ಯೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಲಿ. ಇಲ್ಲವೇ ತಮ್ಮ ಆರೋಪಗಳನ್ನು ಸಾಬೀತುಪಡಿಸಲಿ.