ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೆಹಲಿಯಲ್ಲಿ ಸಿಜೆಪಿ ಪ್ರತಿಭಟನೆ: 250ಕ್ಕೂ ಹೆಚ್ಚು ರೈಲುಗಳು ರದ್ದು, ಪ್ರಯಾಣಿಕರಿಗೆ ತಪ್ಪದ ಸಂಕಷ್ಟ

CJP Protest in Delhi: ಸಿಜೆಪಿಯ ಪ್ರತಿಭಟನೆ ಹಿನ್ನೆಲೆಯಲ್ಲಿ, ನವದೆಹಲಿ ಮತ್ತು ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣಗಳಿಗೆ ಸಂಬಂಧಿಸಿದ 250ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ರೈಲ್ವೆ ಮಂಡಳಿ ರದ್ದುಗೊಳಿಸಿದೆ. ಈ ಕ್ರಮಕ್ಕೆ ರೈಲ್ವೆ ತಜ್ಞರು, ಪ್ರಯಾಣಿಕರ ಸಂಘಟನೆಗಳು ಹಾಗೂ ಮಾನ್ಯತೆ ಪಡೆದ ಒಕ್ಕೂಟಗಳಿಂದ ತೀವ್ರ ಟೀಕೆ ವ್ಯಕ್ತವಾಗಿದೆ.

ದೆಹಲಿಯಲ್ಲಿ ಸಿಜೆಪಿ ಪ್ರತಿಭಟನೆ: 250ಕ್ಕೂ ಹೆಚ್ಚು ರೈಲುಗಳು ರದ್ದು

ಸಾಂದರ್ಭಿಕ ಚಿತ್ರ -

Priyanka P
Priyanka P Oct 10, 2026 1:47 PM

ನವದೆಹಲಿ, ಅ.10: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ಅವರನ್ನು ಹುದ್ದೆಯಿಂದ ತೆಗೆದುಹಾಕುವಂತೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (Cockroach Janata Party) ಇಂದು ಪ್ರತಿಭಟನೆಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ, ನವದೆಹಲಿ ಮತ್ತು ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣಗಳಿಗೆ ಸಂಬಂಧಿಸಿದ 250ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ರೈಲ್ವೆ ಮಂಡಳಿ ರದ್ದುಗೊಳಿಸಿದೆ. ಈ ಕ್ರಮಕ್ಕೆ ರೈಲ್ವೆ ಕ್ಷೇತ್ರದ ಪರಿಣತರು, ಪ್ರಯಾಣಿಕರ ಸಂಘಟನೆಗಳು ಹಾಗೂ ಮಾನ್ಯತೆ ಪಡೆದ ಒಕ್ಕೂಟಗಳಿಂದ ತೀವ್ರ ಟೀಕೆ ವ್ಯಕ್ತವಾಗಿದೆ.

ರೈಲುಗಳ ಸಂಚಾರ ರದ್ದತಿ ದುರದೃಷ್ಟಕರ ಹಾಗೂ ಪ್ರಯಾಣಿಕರಿಗೆ ತೊಂದರೆ ಉಂಟುಮಾಡುವ ಕ್ರಮ ಎಂದು ಟೀಕಿಸಲಾಗಿದೆ. ನೂರಾರು ರೈಲುಗಳ ಸಂಚಾರ ರದ್ದತಿಯಿಂದ ದೇಶಾದ್ಯಂತ ಸಾವಿರಾರು ಪ್ರಯಾಣಿಕರಿಗೆ ತೀವ್ರ ಅನಾನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಕ್ಟೋಬರ್ 9 ರಂದು ಮಧ್ಯಾಹ್ನ 2 ಗಂಟೆಯ ನಂತರ ತಮ್ಮ ಮೂಲ ನಿಲ್ದಾಣಗಳಿಂದ ಹೊರಡುವ ಪ್ರಯಾಣಿಕ ರೈಲುಗಳು ಹಾಗೂ ಇಂದು ಬೆಳಗ್ಗೆ 4 ರಿಂದ ಮಧ್ಯಾಹ್ನ 2 ಗಂಟೆಯ ನಡುವೆ ನವದೆಹಲಿ ಅಥವಾ ಹಜರತ್ ನಿಜಾಮುದ್ದೀನ್‌ಗೆ ಆಗಮಿಸುವ ರೈಲುಗಳು ರದ್ದಾಗಿವೆ.

ರೈಲ್ವೆ ಮಂಡಳಿಯು ಸ್ಥಳೀಯ ರೈಲುಗಳ ಜೊತೆಗೆ ಈ ಎರಡು ನಿಲ್ದಾಣಗಳಿಂದ ತಮ್ಮ ಗಮ್ಯಸ್ಥಾನಗಳಿಗೆ ಹೊರಡುವ ರೈಲುಗಳನ್ನು ಸಹ ರದ್ದುಗೊಳಿಸಿದೆ. ಒಟ್ಟು ರದ್ದತಿಗಳ ಸಂಖ್ಯೆ 250 ಕ್ಕಿಂತ ಹೆಚ್ಚಾಗಿದೆ. ರೈಲ್ವೆ ಮಂಡಳಿಯ ಎಂಜಿನಿಯರಿಂಗ್ ಮಾಜಿ ಸದಸ್ಯ ಸುಬೋಧ್ ಜೈನ್ ಅವರು ಈ ನಿರ್ಧಾರವನ್ನು ಟೀಕಿಸಿದ್ದು, ಈ ಕ್ರಮವು ಪ್ರತಿಭಟನಾಕಾರರಿಗೆ ಶರಣಾದಂತೆ ಎಂದು ಹೇಳಿದ್ದಾರೆ.

ಸಿಜೆಪಿಯ ದೆಹಲಿ ಪ್ರತಿಭಟನೆಗೂ ಮುನ್ನ 400 ಜನರ ಬಂಧನ: ಮೆಟ್ರೋ ಸಂಚಾರ ಸ್ಥಗಿತ, ರೈಲುಗಳ ಸಂಚಾರ ರದ್ದು

“ಇಷ್ಟೊಂದು ದೊಡ್ಡ ಸಂಖ್ಯೆಯ ರೈಲುಗಳ ಸಂಚಾರವನ್ನು ರದ್ದುಗೊಳಿಸಿರುವುದು ಪ್ರತಿಭಟನಾಕಾರರಿಗೆ ಶರಣಾದಂತೆಯೇ ಸರಿ. ಇದು ಅತ್ಯಂತ ದುರದೃಷ್ಟಕರ” ಎಂದು ಜೈನ್ ಹೇಳಿದ್ದಾರೆ. ಈಹಿಂದೆ ಪ್ರತಿಭಟನೆಗಳು ನಡೆದ ಸಂದರ್ಭಗಳಲ್ಲಿ ರೈಲ್ವೆ ಇಲಾಖೆ ಒಂದು ಅಥವಾ ಎರಡು ರೈಲುಗಳ ಸಂಚಾರವನ್ನು ರದ್ದುಗೊಳಿಸಿತ್ತು. ಆದರೆ, ಈ ಹಿಂದೆ ಎಂದಿಗೂ ಒಂದೇ ಬಾರಿಗೆ ಇಷ್ಟೊಂದು ದೊಡ್ಡ ಸಂಖ್ಯೆಯ ರೈಲುಗಳ ಸಂಚಾರವನ್ನು ರದ್ದುಗೊಳಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಆಲ್ ಇಂಡಿಯಾ ರೈಲ್ವೇಮೆನ್ಸ್ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಶಿವ್ ಗೋಪಾಲ್ ಮಿಶ್ರಾ ಕೂಡ ರೈಲುಗಳ ಸಂಚಾರ ರದ್ದತಿ ಕ್ರಮವನ್ನು ಖಂಡಿಸಿದ್ದಾರೆ. ಭಾರತೀಯ ರೈಲ್ವೆಯ ಇತಿಹಾಸದಲ್ಲೇ ಇಂತಹ ಘಟನೆ ಹಿಂದೆಂದೂ ನಡೆದಿಲ್ಲ ಎಂದು ಅವರು ಹೇಳಿದ್ದಾರೆ.

ಹಠಾತ್ತನೆ ರೈಲುಗಳ ಸಂಚಾರ ರದ್ದುಗೊಳಿಸಿದ್ದರಿಂದ ತುರ್ತು ವೈದ್ಯಕೀಯ ಅಗತ್ಯಗಳು, ಕೆಲಸ ಹಾಗೂ ಕಾರ್ಯಕ್ರಮಗಳಿಗಾಗಿ ಪ್ರಯಾಣಿಸುತ್ತಿದ್ದವರು ಸೇರಿದಂತೆ ಸಾವಿರಾರು ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗಿದೆ ಎಂದು ಅವರು ಹೇಳಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಿದ್ದು ಕೋವಿಡ್‌-19 ಲಾಕ್‌ಡೌನ್‌ ಸಂದರ್ಭದಲ್ಲಿ ಮಾತ್ರ. ಪ್ರತಿಭಟನೆಯ ಕಾರಣಕ್ಕೆ ಇಂತಹ ಕ್ರಮ ಕೈಗೊಂಡಿರಲಿಲ್ಲ ಎಂದು ಮಿಶ್ರಾ ತಿಳಿಸಿದ್ದಾರೆ.