Sudha Murthy: ಬರ್ತ್‌ಡೇ ಪಾರ್ಟಿಗಾಗಿ ಉಳಿಸಿದ ಹಣ ದಾನ ಮಾಡುವಂತೆ ಮಗಳಿಗೆ ಹೇಳಿದ್ರಂತೆ ಸುಧಾ ಮೂರ್ತಿ!
ರಾಜ್ಯಸಭಾ ಸದಸ್ಯೆ ಹಾಗೂ ಇಬ್ಬರು ಯಶಸ್ವಿ ಮಕ್ಕಳ ತಾಯಿಯಾಗಿರುವ ಇನ್‌ಫೋಸಿಸ್ ಫೌಂಡೇಶನ್‌ನ ಸುಧಾ ಮೂರ್ತಿ ಹಾಗೂ ಅವರ ಮಗಳು ಅಕ್ಷತಾ ಮೂರ್ತಿ ಅವರ ನಡುವಿನ ಆಕರ್ಷಕ ಸಂವಾದಕ್ಕೆ ಈ ಗೋಷ್ಠಿ ಸಾಕ್ಷಿಯಾಯಿತು. ವಿಷಯ: ಪೋಷಕರು ಹಾಗೂ ಮಕ್ಕಳ ಸಂಬಂಧ, ಅವರು ಹಂಚಿಕೊಳ್ಳುವ ಮೌಲ್ಯಗಳು, ಜೀವನದ ದೃಷ್ಟಿಕೋನಗಳು ಇತ್ಯಾದಿ.
ಜೈಪುರ: ನನ್ನ ಬಾಲ್ಯದಲ್ಲಿ ಬರ್ತ್‌ಡೇ ಪಾರ್ಟಿಗಾಗಿ ನಾನು ಉಳಿತಾಯ ಮಾಡಿದ ಹಣವನ್ನು ದಾನ ಮಾಡುವಂತೆ ನೀವು ಹೇಳಿದಾಗ ನನಗೆ ಬೇಸರವಾಗಿತ್ತು. ಆದರೆ ಅದೇ ನನ್ನಲ್ಲಿ ಮುಂದೆ ಸೇವೆಯ ಮೌಲ್ಯವನ್ನು ನನ್ನಲ್ಲಿ ರೂಢಿಸಿತು. ಅದು ಸಿಎಸ್‌ಆರ್ ಪರಿಕಲ್ಪನೆ ಕಡ್ಡಾಯವಾಗಿಲ್ಲದ ಕಾಲವಾಗಿತ್ತು. ನಿನ್ನ ಕೆಲಸ ಮಾಡು ಹಾಗೂ ಫಲದ ಬಗ್ಗೆ ಚಿಂತೆ ಮಾಡದಿರು ಎಂದು ನೀವು ನನಗೆ ಕಲಿಸಿದಿರಿ ಎಂದು ಉದ್ಯಮಿ, ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರು ತಮ್ಮ ತಾಯಿ ಸುಧಾ ಮೂರ್ತಿ ಅವರಿಗೆ ಹೇಳಿದರು.
ಇದು ನಡೆದದ್ದು ಜೈಪುರ ಲಿಟರೇಚರ್ ಫೆಸ್ಟಿವಲ್‌ನಲ್ಲಿ ನಡೆದ ಗೋಷ್ಠಿಯಲ್ಲಿ. ರಾಜ್ಯಸಭಾ ಸದಸ್ಯೆ ಹಾಗೂ ಇಬ್ಬರು ಯಶಸ್ವಿ ಮಕ್ಕಳ ತಾಯಿಯಾಗಿರುವ ಇನ್‌ಫೋಸಿಸ್ ಫೌಂಡೇಶನ್‌ನ ಸುಧಾ ಮೂರ್ತಿ ಹಾಗೂ ಅವರ ಮಗಳು ಅಕ್ಷತಾ ಮೂರ್ತಿ ಅವರ ನಡುವಿನ ಆಕರ್ಷಕ ಸಂವಾದಕ್ಕೆ ಈ ಗೋಷ್ಠಿ ಸಾಕ್ಷಿಯಾಯಿತು. ವಿಷಯ: ಪೋಷಕರು ಹಾಗೂ ಮಕ್ಕಳ ಸಂಬಂಧ, ಅವರು ಹಂಚಿಕೊಳ್ಳುವ ಮೌಲ್ಯಗಳು, ಜೀವನದ ದೃಷ್ಟಿಕೋನಗಳು ಇತ್ಯಾದಿ. ಸ್ವತಃ ಸುಧಾ ಮೂರ್ತಿ ಅಳಿಯ, ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್, ಪತಿ ನಾರಾಯಣ ಮೂರ್ತಿ ಈ ಸಂವಾದ ನಡೆದಾಗ ಅಲ್ಲಿದ್ದರು.
ಕೆರಿಯರ್ ಬಗ್ಗೆ ಫೋಕಸ್ ಮಾಡುವುದು ಹಾಗೂ ಮಕ್ಕಳನ್ನು ಬೆಳೆಸುವುದು ಇದೆರಡರ ನಡುವೆ ಬ್ಯಾಲೆನ್ಸ್ ಹೇಗೆ ಎಂಬುದನ್ನು ಸುಧಾ ಮೂರ್ತಿ ವಿವರಿಸಿದರು. "ನನ್ನ ತಂದೆ ವೈದ್ಯರಾಗಿದ್ದರು. ಅವರಿಗೆ ಆಸ್ಪತ್ರೆಯೇ ದೇವಾಲಯವಾಗಿತ್ತು. ಕೆಲಸದಲ್ಲಿ ಸಂಪೂರ್ಣವಾಗಿ ಹೇಗೆ ಸಮರ್ಪಿಸಿಕೊಳ್ಳಬೇಕು ಎಂಬುದನ್ನು ಅವರಿಂದ ನಾನು ಕಲಿತಿದ್ದೇನೆ" ಎಂದು ಸುಧಾ ಮೂರ್ತಿ ಹೇಳಿದರು.
"ನಾನು ಕೂಡ ಮಕ್ಕಳಿಗೆ ಸಮಯ ಕೊಡುವುದಕ್ಕಾಗಿ ನನ್ನ ಕೆಲಸವನ್ನು ಬಿಟ್ಟೆ. ತಾಯಿ ತನ್ನ ಮಕ್ಕಳಿಗೆ ನಡವಳಿಕೆಯ ಮೂಲಕ ನೈತಿಕ ಮೌಲ್ಯಗಳನ್ನು ಕಲಿಸಬೇಕು" ಎಂದು ಸುಧಾ ಮಕ್ಕಳಲ್ಲಿ ಮೌಲ್ಯಗಳನ್ನು ತುಂಬುವುದರ ಮಹತ್ವವನ್ನು ಒತ್ತಿ ಹೇಳಿದರು. ಇದಕ್ಕೆ ಸಮ್ಮತಿಸಿದ ಅಕ್ಷತಾ, "ಎರಡು ಕೆಲಸಗಳನ್ನು ಏಕಕಾಲದಲ್ಲಿ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ಮೊದಲ ಆದ್ಯತೆ ನೀಡಬೇಕು" ಎಂದರು.
At the Jaipur Literature Festival 2025, an animated discussion takes place between an iconic mother and her daughter, where the two women share insights into their lives, the choices they make, and the paths they take. A dialogue showcases their intelligence, charm, and iron… pic.twitter.com/YituDpV92t
— jaipurlitfest (@JaipurLitFest) February 1, 2025
ತಮ್ಮ ಮಕ್ಕಳ ಪೋಷಣೆ ಪಯಣದಲ್ಲಿ ಪತಿ ನಾರಾಯಣ ಮೂರ್ತಿ ಅವರ ಬೆಂಬಲವನ್ನು ಶ್ಲಾಘಿಸಿದ ಸುಧಾ ಮೂರ್ತಿ, "ಯಶಸ್ವಿ ಮಹಿಳೆಯ ಹಿಂದೆ ಒಬ್ಬ ಬುದ್ಧಿವಂತ ವ್ಯಕ್ತಿ ಇರುತ್ತಾನೆ. ನನ್ನ ಪತಿ ಯಾವಾಗಲೂ ನನ್ನನ್ನು ಬೆಂಬಲಿಸಿದ್ದಾರೆ ಮತ್ತು ನಾನು ಮುಂದುವರಿಯಲು ಸಹಾಯ ಮಾಡಿದ್ದಾರೆ" ಎಂದು ಹೇಳಿದರು.
ಅಕ್ಷತಾ ಮೂರ್ತಿ ತಮ್ಮ ಪೋಷಕರಿಗೆ ಕೃತಜ್ಞತೆ ಸಲ್ಲಿಸಿದರು. "ನೀವು ಮತ್ತು ಪಾಪಾ ನನಗೆ ರೋಲ್ ಮಾಡೆಲ್ ಆಗಿದ್ದೀರಿ. ನೀವಿಬ್ಬರೂ ಯಾವಾಗಲೂ ಒಬ್ಬರನ್ನೊಬ್ಬರು ಬೆಂಬಲಿಸಿದ್ದೀರಿ" ಎಂದು ಹೇಳಿದರು. ಇದಕ್ಕೆ ಆತ್ಮೀಯವಾಗಿ ಪ್ರತಿಕ್ರಿಯಿಸಿದ ಸುಧಾ ಮೂರ್ತಿ, "ನನ್ನ ಮಕ್ಕಳು ಉತ್ತಮ ಪ್ರಜೆಗಳಾಗಬೇಕು ಎಂದು ನಾನು ಸದಾ ಬಯಸಿದ್ದೆ. ಮುಂದೊಂದು ದಿನ ನಿನ್ನ ಪತಿ ಮತ್ತು ಮಕ್ಕಳು ನಿನ್ನ ಬಗ್ಗೆ ಹೆಮ್ಮೆ ಪಡುವ ಕಾಲವನ್ನು ನೀವೂ ನೋಡುತ್ತೀರಿ" ಎಂದು ಮಗಳು ಅಕ್ಷತಾಗೆ ಹೇಳಿದರು.
ಚರ್ಚೆಯಲ್ಲಿ ಸುಧಾ ಮೂರ್ತಿ ಅವರು ಜೀವನದ ಸಮಗ್ರತೆಯ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡರು. "74ರ ಹರೆಯದಲ್ಲೂ ನಾನೊಬ್ಬ ಆದರ್ಶವಾದಿ. ನನ್ನ ಮಕ್ಕಳಿಗೆ ಮೊದಲು ನೀವು ಒಳ್ಳೆಯವನಾಗಬೇಕು, ಹೃದಯವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ನಂಬಿದ್ದನ್ನು ಹೇಳು, ಹೇಳಿದ್ದನ್ನು ಮಾಡು ಎಂದು ಹೇಳಿಕೊಟ್ಟೆ" ಎಂದರು.
"ನಾನು ಭಾರತದವಳು ಮತ್ತು ಭಾರತದಲ್ಲಿ ಕೆಲಸ ಮಾಡುತ್ತೇನೆ. ನನ್ನ ಮೊಮ್ಮಕ್ಕಳಿರುವುದರಿಂದ ನಾನು ಲಂಡನ್‌ಗೆ ಹೋಗುತ್ತೇನೆ. ಅದನ್ನು ಮೀರಿ ನನಗೆ ವಿದೇಶಗಳೊಂದಿಗೆ ಯಾವುದೇ ಸಂಬಂಧವಿಲ್ಲ" ಎಂದು ಸುಧಾ ಹೇಳಿದರು.
ಅತಿಯಾದ ಸ್ಪರ್ಧೆಯ ಚಿಂತೆ ಮೀರಿ ಮುನ್ನಡೆಯಲು ಮತ್ತು ಮಕ್ಕಳಲ್ಲಿ ಸಹಕಾರವನ್ನು ಪ್ರೋತ್ಸಾಹಿಸಲು ಸುಧಾ ಮೂರ್ತಿ ಪೋಷಕರಿಗೆ ಸಲಹೆ ನೀಡಿದರು. "ಪೋಷಕರು ಯಾವಾಗಲೂ ತಮ್ಮ ಮಕ್ಕಳಿಗೆ ಕಷ್ಟಪಟ್ಟು ಓದಿ ಉತ್ತಮ ಅಂಕಗಳನ್ನು ಗಳಿಸಲು ಹೇಳುತ್ತಾರೆ. ನೆರೆಹೊರೆಯವರ ಮಗು ಉತ್ತಮ ಅಂಕ ಗಳಿಸಿದರೆ ಖಿನ್ನತೆಗೆ ಒಳಗಾಗುತ್ತಾರೆ. ಆದರೆ ಬದುಕು ಮೂರು ಗಂಟೆಯ ಚಲನಚಿತ್ರವಲ್ಲ. ಮಕ್ಕಳನ್ನು ಮೊಬೈಲ್ ಫೋನ್‌ಗಳ ಪ್ರಪಂಚದಿಂದ ಹೊರತನ್ನಿ. ಆದರೆ ಮೊದಲು ನೀವೇ ಅದರಿಂದ ಹೊರಬನ್ನಿ" ಎನ್ನುವ ಮೂಲಕ ಪೋಷಕರು ಮತ್ತು ಮಕ್ಕಳ ಸ್ಕ್ರೀನ್ ಟೈಮ್ ಕಡಿಮೆ ಮಾಡುವ ಅಗತ್ಯವನ್ನು ಒತ್ತಿ ಹೇಳಿದರು.
ಇದನ್ನೂ ಓದಿ: Mahakumbh 2025: ಮಹಾಕುಂಭ ಮೇಳದಲ್ಲಿ ಮಹಾ ಪ್ರಸಾದ ವಿತರಿಸಿದ ಸುಧಾಮೂರ್ತಿ