ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

45 Review: 45ರ ಆಟದಲ್ಲಿ ಶಿವಣ್ಣನ ವಿಶ್ವರೂಪ ದರ್ಶನ; ಉಪ್ಪಿ - ರಾಜ್‌ ನಡುವೆ ಹುಟ್ಟು ಸಾವಿನ ಓಟದ ಅಂಕಣ!

45 Movie Review: ಅರ್ಜುನ್ ಜನ್ಯ ನಿರ್ದೇಶನದ ಮೊದಲ ಚಿತ್ರವೇ ಫ್ಯಾಂಟಸಿ ಮತ್ತು ಆಧ್ಯಾತ್ಮದ ಸಂಗಮವಾಗಿದ್ದು, ಗರುಡಪುರಾಣದ ಹಿನ್ನೆಲೆಯಲ್ಲಿ ಪಾಪ-ಕರ್ಮಗಳ ಲೆಕ್ಕಾಚಾರವನ್ನು ಚಿತ್ರದಲ್ಲಿ ಕಲಾತ್ಮಕವಾಗಿ ವಿವರಿಸಲಾಗಿದೆ. 45 ಸಿನಿಮಾದ ಪೂರ್ಣ ವಿಮರ್ಶೆ ಇಲ್ಲಿದೆ ಓದಿ.

45 Review: ಶಿವಣ್ಣ, ಉಪೇಂದ್ರ, ರಾಜ್‌ ಕಾಂಬಿನೇಷನ್‌ನ ʼ45ʼ ಚಿತ್ರ ಹೇಗಿದೆ?

-

Avinash GR
Avinash GR Dec 24, 2025 12:17 PM

Movie: 45
Release Date: ಡಿಸೆಂಬರ್‌ 25, 2025
Language: ಕನ್ನಡ
Genre: ಥ್ರಿಲ್ಲರ್‌, ಡ್ರಾಮಾ, ಫ್ಯಾಂಟಸಿ
Director: ಅರ್ಜುನ್‌ ಜನ್ಯ
Cast: ಶಿವರಾಜ್‌ಕುಮಾರ್‌, ಉಪೇಂದ್ರ, ರಾಜ್‌ ಬಿ ಶೆಟ್ಟಿ, ಕೌಸ್ತುಭಮಣಿ, ಮೊಟ್ಟೈ ರಾಜೇಂದ್ರ, ಪ್ರಮೋದ್‌ ಶೆಟ್ಟಿ
Duration: 150 ನಿಮಿಷ
Rating: 4/5


ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ ಎಂದಾಗ ಒಂದು ನಿರೀಕ್ಷೆ ಹುಟ್ಟಿಕೊಂಡಿತ್ತು. ಅದು ಮಲ್ಟಿಸ್ಟಾರರ್‌ ಸಿನಿಮಾ ಎಂದಾಗ ನಿರೀಕ್ಷೆ ಡಬಲ್‌ ಆಗಿತ್ತು. ಬಹುತೇಕರಿಗೆ ಅದೆಂಥಾ ಸಿನಿಮಾ ಮಾಡಬಹುದು ಎಂಬ ಅನುಮಾನವೂ ಇತ್ತು. ಆದರೆ ಟ್ರೇಲರ್‌ ರಿಲೀಸ್‌ ಆದಮೇಲೆ ಅಚ್ಚರಿ ಎನಿಸಿದ್ದಂತೂ ಸುಳ್ಳಲ್ಲ. ಇದೀಗ 45 ಚಿತ್ರದ ದರ್ಶನ ಶುರುವಾಗಿದೆ. ಹಾಗಾದರೆ, ಸಿನಿಮಾ ಹೇಗೆ ಮೂಡಿಬಂದಿರಬಹುದು? ಮುಂದೆ ಓದಿ.

ಇದೊಂದು ಫ್ಯಾಂಟಸಿ ಸಿನಿಮಾ

ಶಿವರಾಜ್‌ಕುಮಾರ್‌, ಉಪೇಂದ್ರ, ರಾಜ್‌ ಬಿ ಶೆಟ್ಟಿ ಈ ಮೂವರು ನಟರನ್ನು ಇಟ್ಟುಕೊಂಡು ಅರ್ಜುನ್‌ ಜನ್ಯ ಯಾವ ಜಾನರ್‌ನ ಕೈಗೆತ್ತಿಕೊಂಡಿರಬಹುದು ಎಂಬ ಕುತೂಹಲಕ್ಕೆ ಟ್ರೇಲರ್‌ನಲ್ಲೇ ಉತ್ತರ ಸಿಕ್ಕಿತ್ತು. ಇದೊಂದು ಫ್ಯಾಂಟಸಿ ಸಿನಿಮಾ. ಮನುಷ್ಯನ ಸಾವು, ಸಾವಿನ ನಂತರದ ಆತ್ಮದ ಪ್ರಯಾಣ, ಗರುಡಪುರಾಣ, ವಿಧಿ, ಪಾಪ-ಕರ್ಮ, ಕಾಯುವವನು, ಕೊಲ್ಲುವವನು ಜೊತೆಗೆ ಒಬ್ಬ ನಾರ್ಮಲ್‌ ಮನುಷ್ಯ.. ಇದೆಲ್ಲವನ್ನು ಇಟ್ಟುಕೊಂಡು, ಒಂದು ಹೊಸ ಲೋಕವನ್ನೇ ಸೃಷ್ಟಿಸಿದ್ದಾರೆ ಅರ್ಜುನ್‌ ಜನ್ಯ. ಅವರ ಈ ಕನಸಿಗೆ ಧಾರಾಳವಾಗಿ ಹಣ ಹಾಕಿದ್ದಾರೆ ರಮೇಶ್‌ ರೆಡ್ಡಿ.

45ರ ಕಥೆ ಏನು?

ಮಿಡಲ್‌ ಕ್ಲಾಸ್‌ ಕುಟುಂಬದ 29ರ ಹರೆಯದ ವಿನಯ್‌ (ರಾಜ್‌ ಬಿ ಶೆಟ್ಟಿ) ತಾಯಿಯೊಂದಿಗೆ ವಾಸವಾಗಿರುತ್ತಾನೆ. ಮೆಚ್ಚಿದ ಹುಡುಗಿಯೊಂದಿಗೆ ಮದುವೆಯಾಗಿ ಒಂದು ಸುಖ ಸಂಸಾರ ಕಟ್ಟಿಕೊಳ್ಳುವ ಸುಂದರ ಕನಸಿರುತ್ತದೆ. ಆದರೆ ವಿಧಿಯ ಆಟವೇ ಬೇರೆ ಇರುತ್ತದೆ. ವಿನಯ್‌ ಒಂದು ಕೆಟ್ಟ ಕನಸು ಕಾಣುತ್ತಾನೆ. ಅಲ್ಲಿಂದ ಶುರುವಾಗುವುದೇ 45ರ ಆಟ. ನಂತರ ಆಟದೊಳಗೆ ಎಂಟ್ರಿ ಕೊಡುವವರೇ ಶಿವಪ್ಪ (ಶಿವರಾಜ್‌ಕುಮಾರ್‌) ಮತ್ತು ರಾಯಪ್ಪ (ಉಪೇಂದ್ರ). ಅಷ್ಟಕ್ಕೂ ಆ ಕೆಟ್ಟ ಕನಸೇನು? ಈ ಶಿವಪ್ಪ, ರಾಯಪ್ಪ ಯಾರು? ಆ 45ರ ಆಟವೇನು? ಇದೆಲ್ಲವನ್ನು ಕೂತುಹಲಕಾರಿಯಾಗಿ ತೆರೆಮೇಲೆ ತರುವುದಕ್ಕೆ ಸಾಕಷ್ಟು ಎಫರ್ಟ್‌ ಹಾಕಿದ್ದಾರೆ ಅರ್ಜುನ್‌ ಜನ್ಯ. ಅದಕ್ಕಾಗಿ ಒಂದು ಫ್ಯಾಂಟಸಿ ಲೋಕವನ್ನೇ ಸೃಷ್ಟಿ ಮಾಡಿದ್ದಾರೆ.

ತಾಂತ್ರಿಕತೆಗೆ ಮೆರುಗು ತುಂಬಿದ ಅರ್ಜುನ್‌ ಜನ್ಯ

ಕಥೆಯ ಎಳೆ ಸರಳ ಎನಿಸಿದರೂ, ಅದನ್ನು ಬಹಳ ವಿಶೇಷವಾಗಿ ಕಟ್ಟಿಕೊಡುವುದಕ್ಕೆ ಅರ್ಜುನ್‌ ಜನ್ಯ ಪ್ರಯತ್ನಿಸಿದ್ದಾರೆ. ಅದಕ್ಕಾಗಿ ಅವರು ನೆಚ್ಚಿಕೊಂಡಿರುವುದು ತಂತ್ರಜ್ಞಾನವನ್ನು. ಹೌದು, ವಿಎಫ್‌ಎಕ್ಸ್‌ ಹೆಚ್ಚು ಸಮಯ ಸ್ಕ್ರೀನ್‌ ಅನ್ನು ಆವರಿಸಿಕೊಳ್ಳುತ್ತದೆ. ಗರುಡಪುರಾಣದ ಕಥೆಯನ್ನು ಹೇಳುವಾಗೆಲ್ಲಾ ವಿಎಫ್‌ಎಕ್ಸ್‌ ಹೈಲೈಟ್‌ ಆಗುತ್ತದೆ. ಜೊತೆಗೆ ಶಿವಪ್ಪ, ರಾಯಪ್ಪ ಮುಖಾಮುಖಿ ಸೀನ್‌ಗಳು, ಕ್ಲೈಮ್ಯಾಕ್ಸ್‌, ಲಾರಿ ಚೇಸಿಂಗ್‌ ಸೀನ್‌ಗಳಿಗೆಲ್ಲಾ ವಿಎಫ್‌ಎಕ್ಸ್‌ ಬಳಕೆ ಉತ್ತಮವಾಗಿದೆ. ನಿರ್ದೇಶಕ ಅರ್ಜುನ್‌ ಜನ್ಯ ಅವರು ಮೊದಲ ಪ್ರಯತ್ನದಲ್ಲೇ ಇಷ್ಟೊಂದು ದೊಡ್ಡ ಸ್ಕೇಲ್‌ನ ಸಿನಿಮಾವನ್ನು ಹ್ಯಾಂಡಲ್‌ ಮಾಡಿರುವುದು ಮತ್ತೊಂದು ವಿಶೇಷ. ಸಾಮಾನ್ಯವಾಗಿ ಸ್ಟಾರ್‌ ನಟರನ್ನು ಒಂದೇ ತರದ ಮಾಸ್‌ ಪಾತ್ರಗಳಲ್ಲಿ ನೋಡಿರುತ್ತೇವೆ. ಆದರೆ ಶಿವರಾಜ್‌ಕುಮಾರ್‌ ಮತ್ತು ಉಪೇಂದ್ರಗೆ ಅರ್ಜುನ್‌ ಜನ್ಯ ವಿಭಿನ್ನ ಪಾತ್ರದ ಪೋಷಾಕು ತೋಡಿಸಿದ್ದಾರೆ. ಹಿಂದೆಂದೂ ಕಾಣಿಸದಂತಹ ಪಾತ್ರಗಳಲ್ಲಿ ಈ ನಟರನ್ನು ನೋಡುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಬಹುದು.

45 Official Trailer: ‘45’ ಮೂವಿ ಟ್ರೈಲರ್‌ ಔಟ್‌! ಹಿಂದೆಂದೂ ಕಾಣದ ಅವತಾರದಲ್ಲಿ ಶಿವಣ್ಣ, ಉಪ್ಪಿ; ಡೈಲಾಗ್‌ಗೆ ಫ್ಯಾನ್ಸ್‌ ಫಿದಾ

ಟೆಕ್ನಿಕಲಿ ಸಿನಿಮಾವನ್ನು ಒಂದು ಹಂತಕ್ಕೆ ಕೊಂಡೊಯ್ಯುವುದರ ಜೊತೆಗೆ ಗರುಡ ಪುರಾಣವನ್ನು ಹೇಳುತ್ತಾ, ಅದನ್ನು ಸ್ಕ್ರೀನ್‌ಪ್ಲೇ ಜೊತೆಗೆ ಬ್ಲೆಂಡ್‌ ಮಾಡಿಕೊಳ್ಳುತ ನಿರೂಪಣೆ ಮಾಡಿರುವ ಅರ್ಜುನ್‌ ಜನ್ಯ ಅವರ ಶೈಲಿ ಇಷ್ಟವಾಗುತ್ತದೆ. ಕೆಲವೊಂದು ಕಡೆ ಸಂಭಾಷಣೆ ಇನ್ನಷ್ಟು ಪರಿಣಾಮಕಾರಿಯಾಗಿರಬೇಕಿತ್ತು ಎನಿಸುತ್ತದೆ. ಸುಧಾರಾಣಿ ಪಾತ್ರವು ಕಥೆಯ ಆಚೆಗೆ ಹೋಗಿಬಂದಂತಹ ಫೀಲ್‌ ನೀಡುತ್ತದೆ. ಇನ್ನು, ಸಿನಿಮಾದ ವೇಗವನ್ನು ಗಮನಿಸಿದರೆ, ಅದಕ್ಕೆ ಹಾಡುಗಳ ಅವಶ್ಯಕತೆ ಕಾಣಿಸುವುದಿಲ್ಲ. ಹಾಗಾಗಿ, ಹಾಡುಗಳಿಲ್ಲ, ಆದರೂ ಅತ್ಯುತ್ತಮವಾದ ಬಿಜಿಎಂ ನೀಡುವಲ್ಲಿ ಅರ್ಜುನ್‌ ಜನ್ಯ ಹಿಂದೆ ಬಿದ್ದಿಲ್ಲ. ಸತ್ಯ ಹೆಗಡೆ ಅವರ ಛಾಯಾಗ್ರಹಣ ಉತ್ತಮವಾಗಿದೆ. ಸಾಹಸ ಸನ್ನಿವೇಶಗಳು ಟಾಪ್‌ ಕ್ಲಾಸ್..‌ ಚೇಸಿಂಗ್‌ ಸೀನ್‌ ಹೈಕ್ಲಾಸ್‌ ಆಗಿದೆ. ಸನ್ನಿವೇಶಕ್ಕೆ ತಕ್ಕಂತೆ ಅಲ್ಲಲ್ಲಿ ಕೇಳಿಸುವ ಹಳೆಯ ಸಿನಿಮಾ ಗೀತೆಗಳು ಅಭಿಮಾನಿಗಳಿಗೆ ಖುಷಿ ನೀಡಬಹುದು. ಲವ್‌ ಸ್ಟೋರಿ, ತಾಯಿ ಸೆಂಟಿಮೆಂಟ್‌ ಇದೆಯಾದರೂ, ಅದೆಲ್ಲದಕ್ಕಿಂತ ಇಲ್ಲಿ ಹೈಲೈಟ್‌ ಆಗಿರುವುದು ನಾಯಿ ಸೆಂಟಿಮೆಂಟ್‌! ಅಲ್ಲಲ್ಲ, ರೋಸಿ ಸೆಂಟಿಮೆಂಟ್!‌ ಅದೇನು ಎಂಬುದು ಸಿನಿಮಾದಲ್ಲಿ ನೋಡಬೇಕು.

45 Movie: ಬಹು ನಿರೀಕ್ಷಿತ ಮಲ್ಟಿಸ್ಟಾರರ್ '45' ಚಿತ್ರದ 'AFRO ಟಪಾಂಗ್' ಪ್ರಮೋಷನ್ ಸಾಂಗ್ ಬಿಡುಗಡೆ

ಸಿನಿಮಾವನ್ನು ಹೊತ್ತುತಿರುಗಿದ ಶಿವಣ್ಣ

ಇಡೀ ಚಿತ್ರದ ತೂಕವೇ ಒಂದು ಕಡೆಯಾದರೆ, ಶಿವಣ್ಣ ಎಂಟ್ರಿ ನಂತರದ ತೂಕವೇ ಮತ್ತೊಂದು. ಇಂಟರ್ವಲ್‌ಗಿಂತ 45ರ ಆಟಕ್ಕೆ ಎಂಟ್ರಿ ನೀಡುವ ಶಿವಣ್ಣ, 360 ಡಿಗ್ರಿ ಆಂಗಲ್‌ನಲ್ಲೂ ಸಿನಿಮಾವನ್ನು ಕವರ್‌ ಮಾಡಿದ್ದಾರೆ. ಅದರಲ್ಲೂ ಕ್ಲೈಮ್ಯಾಕ್ಸ್‌ನಲ್ಲಿ ಶಿವಣ್ಣನ ಹಲವು ಅವತಾರಗಳ ಆಗಮನ ಅಭಿಮಾನಿಗಳ ಪಾಲಿಗೆ ಹಬ್ಬವೇ ಸರಿ. ಒಂದೊಂದು ಅವತಾರದಲ್ಲೂ ಎಂಟ್ರಿ ಕೊಡುವಾಗ ಶಿವಣ್ಣ ನಡೆಸುವ ಶಿವ ತಾಂಡವ ಅಭಿಮಾನಿಗಳಿಗೆ ರೊಮಾಂಚನ ನೀಡುತ್ತದೆ. ಚಿತ್ರದ ಕೊನೆಯ 45 ನಿಮಿಷಗಳನ್ನು ಅಕ್ಷರಶಃ ಶಿವಣ್ಣ ಆವರಿಸಿಕೊಂಡು ಬಿಟ್ಟಿದ್ದಾರೆ.

ಉಪ್ಪಿ & ರಾಜ್‌ ಬಿ ಶೆಟ್ಟಿಯ Tom and Jerry ಗೇಮ್‌

ಚಿತ್ರದ ಆರಂಭದಿಂದಲೂ ಉಪೇಂದ್ರ ಮತ್ತು ರಾಜ್‌ ಬಿ ಶೆಟ್ಟಿ ನಡುವೆ Tom and Jerry ಗೇಮ್‌ ನಡೆಯುತ್ತಿರುತ್ತದೆ. ಉಪ್ಪಿ ಅಂತೂ ಡಿಫರೆಂಟ್‌ ಗೆಟಪ್‌ನಲ್ಲಿ, ವಿಭಿನ್ನ ರೀತಿಯ ಮ್ಯಾನರಿಸಂ ಮೂಲಕ ಹೊಸದಾಗಿ ಕಾಣಿಸುತ್ತಾರೆ. ಇಷ್ಟು ದಿನಗಳ ಅವರ ಕರಿಯರ್‌ನಲ್ಲಿ ಇಂತಹ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದು ಇದೇ ಮೊದಲು. ಇನ್ನು, ಅವರ ಎದುರು ಪ್ರಾಣ ಉಳಿಸಿಕೊಳ್ಳಲು ಓಡುವ ಸಾಧು ವ್ಯಕ್ತಿತ್ವದ ಹುಡುಗನಾಗಿ ರಾಜ್‌ ಬಿ ಶೆಟ್ಟಿ ಅವರದ್ದು ಇಷ್ಟವಾಗುವಂತಹ ಪಾತ್ರ. ವಿಶೇಷ ಅಂದರೆ, ನೀವಿಲ್ಲಿ ಒಂದು ಮೊಟ್ಟೆಯ ಕಥೆಯ ಜನಾರ್ದನನನ್ನೂ ನೋಡಬಹುದು, ಜೊತೆಗೆ ಗರಡು ಗಮನ ವೃಷಭ ವಾಹನದ ಶಿವನನ್ನೂ ನೋಡಬಹುದು. ಅದೇಗೆ ಅನ್ನೋದನ್ನು ತೆರೆಮೇಲೆ ಕಂಡುಕೊಂಡರೆ ಚೆಂದ. ಉಳಿದಂತೆ, ಪ್ರಮೋದ್‌ ಶೆಟ್ಟಿ ನಗಿಸಿ ಹೋಗುತ್ತಾರೆ. ಮೊಟ್ಟೈ ರಾಜೇಂದ್ರನ್‌ ನಿಭಾಯಿಸಿರುವ ಮುತ್ತು ಮಾಮ ಪಾತ್ರದಲ್ಲಿ ಸ್ಪಷ್ಟತೆ ಕೊರತೆ ಕಾಣಿಸುತ್ತದೆ. ಕೌಸ್ತುಭ ಮಣಿ, ಜಾಫರ್‌ ಸಾಧಿಕ್‌, ಮಾನಸಿ ಸುಧೀರ್‌ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಒಟ್ಟಾರೆಯಾಗಿ, ಇದೊಂದು ಡಿವೋಷನಲ್‌ ಸ್ಟೋರಿ ಹೊಂದಿರುವ ಫ್ಯಾಂಟಸಿ ಕಮರ್ಷಿಯಲ್‌ ಸಿನಿಮಾ. ಜೊತೆಗೆ ಶಿವಣ್ಣನ ವಿಶ್ವರೂಪ ದರ್ಶನ ಮಾಡಿಸುವ ಸಿನಿಮಾ. ಶಿವರಾಜಕುಮಾರ್ ಅವರ ರುದ್ರಾವತಾರ, ಉಪೇಂದ್ರ ಅವರ ವಿಭಿನ್ನ ಮ್ಯಾನರಿಸಂ ಮತ್ತು ರಾಜ್ ಬಿ ಶೆಟ್ಟಿ ಅವರ ಮುಗ್ಧ ನಟನೆ ಪ್ರೇಕ್ಷಕರನ್ನು ಕಟ್ಟಿಹಾಕುತ್ತದೆ. ವಿಶೇಷವಾಗಿ ಕ್ಲೈಮ್ಯಾಕ್ಸ್‌ನ ಆ 45 ನಿಮಿಷಗಳು ಶಿವಣ್ಣನ ಅಭಿಮಾನಿಗಳಿಗೆ ಹಬ್ಬದೂಟದಂತಿದೆ.