Mahakumbh 2025: ಮಹಾಕುಂಭ ಮೇಳದಲ್ಲಿ ಮಹಾ ಪ್ರಸಾದ ವಿತರಿಸಿದ ಸುಧಾಮೂರ್ತಿ
ಮಹಾಕುಂಭ ಮೇಳಕ್ಕೆ ಪ್ರತೀದಿನ ಆಗಮಿಸುವವರಿಗಾಗಿ ಮಹಾಪ್ರಸಾದದ ವ್ಯವಸ್ಥೆಯನ್ನು ಇಸ್ಕಾನ್ ಮಾಡುತ್ತಿದ್ದು, ಸುಧಾ ಮೂರ್ತಿ ಅವರು ಇಲ್ಲಿ ಮಹಾಪ್ರಸಾದವನ್ನು ಭಕ್ತರಿಗೆ ವಿತರಿಸಿ ಗಮನ ಸೆಳೆದಿದ್ದಾರೆ.
ನವದೆಹಲಿ: ಉತ್ತರ ಪ್ರದೇಶದ (Uttar Pradesh) ಪ್ರಯಾಗ್ ರಾಜ್ ನಲ್ಲಿ (Prayagraj) ನಡೆಯುತ್ತಿರುವ ಮಹಾಕುಂಭ ಮೇಳ (Maha Kumbh) ಈಗಾಗಲೇ ಹಲವು ಘಟನೆಗಳಿಗೆ ಸಾಕ್ಷಿಯಾಗಿದೆ. ಮಾತ್ರವಲ್ಲದೇ ಹಲವಾರು ಪ್ರಮುಖರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಮಹಾಕುಂಭ ಮೇಳಕ್ಕೆ ಮೂರು ದಿನಗಳ ಭೇಟಿಯಲ್ಲಿರುವ ಲೇಖಕಿ, ದಾನಿ ಮತ್ತು ಇನ್ಫೋಸಿಸ್ (Infosys) ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿಯಾಗಿರುವ ಸುಧಾಮೂರ್ತಿ (Sudha Murty) ಅವರು ಪ್ರಯಾಗ್ ರಾಜ್ ನಲ್ಲಿರುವ ಇಸ್ಕಾನ್ (ISKCON) ಶಿಬಿರದಲ್ಲಿ ಮಹಾ ಪ್ರಸಾದವನ್ನು ಭಕ್ತರಿಗೆ ಬಡಿಸುವ ಮೂಲಕ ಗಮನ ಸೆಳೆದಿದ್ದಾರೆ.
ಹಸಿರು ಸೀರೆ ಮತ್ತು ಹೆಗಲಿನಲ್ಲಿ ಬ್ಯಾಗೊಂದನ್ನು ಸಿಕ್ಕಿಸಿಕೊಂಡು ತನ್ನ ಸರಳತೆಗೆ ಹೆಸರುವಾಸಿಯಾಗಿರುವ ಸುಧಾ ಮೂರ್ತಿ ಇಲ್ಲಿನ ಇಸ್ಕಾನ್ ಶಿಬಿರದ ಫುಡ್ ಕೌಂಟರ್ ಬಳಿ ನಿಂತು ಮಹಾಕುಂಭಕ್ಕೆ ಆಗಮಿಸುವವರಿಗೆ ಚಪಾತಿಯನ್ನು ವಿತರಿಸಿದ್ದಾರೆ.
ಇನ್ನೊಂದು ವಿಡಿಯೋದಲ್ಲಿ ಸುಧಾಮೂರ್ತಿ ಅವರು ಇಲ್ಲಿರುವ ಇಸ್ಕಾನ್ ನ ಮಹಾಪ್ರಸಾದದ ಅಡುಗೆ ಮನೆಗೆ ಭೇಟಿ ನೀಡಿ ಅಲ್ಲಿ ಆಹಾರ ತಯಾರಿ ವಿಧಾನಗಳನ್ನು ವೀಕ್ಷಿಸಿದ್ದಾರೆ. ಈ ಸಂದರ್ಭದಲ್ಲಿ ಸುಧಾಮೂರ್ತಿ ಅವರು ಅಲ್ಲಿನ ಸ್ವಯಂ ಸೇವಕರೊಂದಿಗೆ ಮಾತನಾಡಿ, ಆಹಾರ ತಯಾರಿಸುವ ವಿಧಾನಗಳ ಬಗ್ಗೆ ತಿಳಿದುಕೊಂಡಿದ್ದಾರೆ.
ಇಸ್ಕಾನ್ ಜೊತೆ ಸಹಭಾಗಿತ್ವದೊಂದಿಗೆ ಅದಾನಿ ಸಮೂಹ ಸಂಸ್ಥೆಗಳು ಮಹಾಕುಂಭ ಮೇಳದಲ್ಲಿ ಪ್ರತೀದಿನ 40 ಸಾವಿರಕ್ಕೂ ಹೆಚ್ಚಿನ ಜನರಿಗೆ ಮಹಾ ಪ್ರಸಾದವನ್ನು ನೀಡುತ್ತಿದ್ದಾರೆ. ಪ್ರಯಾಗ್ ರಾಜ್ ನ 19ನೇ ಸೆಕ್ಟರ್ ನಲ್ಲಿ ನಿರ್ಮಿಸಲಾಗಿರುವ ಅಡುಗೆ ಮನೆಯಲ್ಲಿ ಈ ಮಹಾ ಪ್ರಸಾದವನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ಇಸ್ಕಾನ್ ವಹಿಸಿಕೊಂಡಿದೆ.
📍Prayagraj | #Watch: Sudha Murthy helps serve the Mahaprasad in the ISKCON camp at Prayagraj#MahaKumbh2025 pic.twitter.com/NJjWykSxn8
— NDTV (@ndtv) January 22, 2025
ಈ ಮಹಾಪ್ರಸಾದ ಸಿದ್ಧಗೊಳ್ಳುವ ಅಡುಗೆ ಮನೆಯಲ್ಲಿ ಅತ್ಯಾಧುನಿಕ ಸೌಕರ್ಯಗಳಾದ ಬಾಯ್ಲರ್ ವ್ಯವಸ್ಥೆಯಿದ್ದು ಇದರ ಮೂಲಕ, ನೀರು ಕುದಿಸಲು, ತರಕಾರಿ ಮತ್ತು ಅನ್ನ ಬೇಯಿಸಲು ಸಾಧ್ಯವಿದೆ. ಬೃಹತ್ ಫುಡ್ ಕಂಟೈನರ್ ಗಳನ್ನು ಸಾಗಿಸಲು ಹಳಿ ವ್ಯವಸ್ಥೆಯನ್ನು ಸಹ ಇಲ್ಲಿ ಮಾಡಲಾಗಿದೆ. ರೋಟಿ ಸಿದ್ಧಪಡಿಸಲು ಬೃಹತ್ ಯಂತ್ರಗಳನ್ನು ಇಲ್ಲಿ ಸ್ಥಾಪಿಸಲಾಗಿದೆ. ಈ ಎಲ್ಲಾ ಯಂತ್ರಗಳು ಒಟ್ಟಾಗಿ ಗಂಟೆಗೆ 10 ಸಾವಿರ ರೋಟಿಯನ್ನು ತಯಾರಿಸುತ್ತವೆ.
ಇದನ್ನೂ ಓದಿ: KSTDC: ಮಧ್ಯಮ ವರ್ಗದ ಜನರಿಗೆ ಕೈಗೆಟಕುವ ದರದಲ್ಲಿ ವಾರಗಟ್ಟಲೇ ಪ್ರವಾಸ
ಪ್ರಯಾಗ್ ರಾಜ್ ಗೆ ಜ.20ರ ಸೋಮವಾರದಂದು ಆಗಮಿಸಿದ ಸುಧಾ ಮೂರ್ತಿ ಅವರು ಇಲ್ಲಿಯ ವ್ಯವಸ್ಥೆಗಳನ್ನು ಕಂಡು ರೊಮಾಂಚಿತಗೊಂಡಿದ್ದಾರೆ. ಈ ಮಹಾಕುಂಭವನ್ನು ಅವರು ‘ತೀರ್ಥರಾಜ್’ ಎಂದು ಉದ್ಘರಿಸಿದ್ದಾರೆ. ‘ನಾನಿಲ್ಲಿಗೆ ಬಂದು ಸಂತೋಷಗೊಂಡಿದ್ದೇನೆ, ರೋಮಾಂಚಿತಳಾಗಿದ್ದೇನೆ ಮತ್ತು ಆಶಾವಾದಿಯಾಗಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.
ತನ್ನ ಭೇಟಿಯ ಮೊದಲ ಎರಡು ದಿನ ಸುಧಾ ಮೂರ್ತಿ ಅವರು ಇಲ್ಲಿನ ಸಂಗಮ ಪ್ರದೇಶದಲ್ಲಿ ಪವಿತ್ರ ಸ್ನಾನವನ್ನು ಪೂರೈಸಿದ್ದಾರೆ. ‘ನನ್ನ ತಾತ, ಅಜ್ಜಿ ಸೇರಿದಂತೆ ಯಾರು ಸಹ ಕುಂಭ ಮೇಳದಲ್ಲಿ ಭಾಗಿಯಾಗಲು ಸಾಧ್ಯವಾಗಿರಲಿಲ್ಲ, ಹಾಗಾಗಿ ನಾನು ಇಲ್ಲಿಗೆ ಬಂದು ಅವರ ಹೆಸರಿನಲ್ಲಿ ತರ್ಪಣವನ್ನು ನೀಡಿದ್ದೆನೆ, ಮತ್ತು ನಾನು ತುಂಬಾ ಸಂತೋಷಗೊಂಡಿದ್ದೆನೆ’ ಎಂದು ಸುಧಾ ಮೂರ್ತಿ ಅವರು ಮಾಧ್ಯಮ ಸಂಸ್ಥೆಯೊಂದಿಗೆ ಮಾತನಾಡುತ್ತಾ ತನ್ನ ಮನದಾಳದ ಅಭಿಪ್ರಾಯಗಳನ್ನು ಹಂಚಿಕೊಂಡರು.
📍Prayagraj | #Watch: Sudha Murthy touring the ISKCON Mahaprasadam Kitchen at Mahakumbh 2025, Prayagraj.#MahaKumbh2025 pic.twitter.com/whSSmzCMiz
— NDTV (@ndtv) January 22, 2025