ಮಗು ಉಳಿಯಿತೆಂಬ ಆನಂದ ಪೋಷಕರ ಕಣ್ಣಲ್ಲಿ ನೋಡುವುದು ದ್ವಿಶತಕ ಸಿಡಿಸುವುದಕ್ಕಿಂತ ಹೆಚ್ಚು ತೃಪ್ತಿ ನೀಡುತ್ತೆ: ಸುನೀಲ್ ಗವಾಸ್ಕರ್
Sunil Gavaskar: ಬೆಂಗಳೂರು ನಗರದಲ್ಲಿ ಶನಿವಾರ ಆಯೋಜಿಸಿದ್ದ ಶ್ರೀ ಮಧುಸೂದನ ಸಾಯಿ ಅವರ 'ಕಂಪ್ಯಾಷನ್ ಇನ್ ಆ್ಯಕ್ಷನ್' (ಕ್ರಿಯಾರೂಪದ ಕರುಣೆ) ಕಾರ್ಯಕ್ರಮದಲ್ಲಿ ಕ್ರಿಕೆಟ್ ದಂತಕತೆ ಸುನೀಲ್ ಗವಾಸ್ಕರ್ ಅವರು ಮಾತನಾಡಿದ್ದು, ಸದ್ಗುರುಗಳ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
-
ಬೆಂಗಳೂರು: ಮಗು ಉಳಿಯಬಹುದು ಎನ್ನುವ ಭರವಸೆಯನ್ನೇ ಕಳೆದುಕೊಂಡಿದ್ದ ಪೋಷಕರಿಗೆ ಆ ಮಗುವಿನ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ತಿಳಿದಾಗ ಆಗುವ ಸಂತೋಷ, ಅವರ ಮೊಗದಲ್ಲಿ ಅರಳುವ ನಗು, ಆನಂದಬಾಷ್ಪವನ್ನು ನೋಡುವುದು ಕ್ರಿಕೆಟ್ ಮೈದಾನದಲ್ಲಿ ದ್ವಿಶತಕ ಬಾರಿಸುವುದಕ್ಕಿಂತ ಹೆಚ್ಚಿನ ತೃಪ್ತಿ ನೀಡುತ್ತದೆ ಎಂದು ಭಾರತದ ದಿಗ್ಗಜ ಕ್ರಿಕೆಟಿಗ ಸುನೀಲ್ ಗವಾಸ್ಕರ್ (Sunil Gavaskar) ಹೇಳಿದರು.
ನಗರದಲ್ಲಿ ಶನಿವಾರ ಆಯೋಜಿಸಿದ್ದ ಶ್ರೀ ಮಧುಸೂದನ ಸಾಯಿ ಅವರ 'ಕಂಪ್ಯಾಷನ್ ಇನ್ ಆ್ಯಕ್ಷನ್' (ಕ್ರಿಯಾರೂಪದ ಕರುಣೆ) ಕಾರ್ಯಕ್ರಮದಲ್ಲಿ ಕ್ರಿಕೆಟ್ ದಂತಕತೆ ಸುನೀಲ್ ಗವಾಸ್ಕರ್ ಅವರು ಮಾತನಾಡಿದರು.
ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ನೇತೃತ್ವದಲ್ಲಿ ಮುನ್ನಡೆಯುತ್ತಿರುವ 'ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್' ಮೂಲಕ ನಾವು ಇಂಥ ಮಕ್ಕಳ ಆರೋಗ್ಯ ಕಾಪಾಡುವುದಷ್ಟೇ ಅಲ್ಲ, ಶಿಕ್ಷಣದ ಜವಾಬ್ದಾರಿಯನ್ನೂ ನೋಡಿಕೊಳ್ಳುತ್ತಿದ್ದೇವೆ" ಎಂದು ವಿವರಿಸಿದರು.

ಮಕ್ಕಳಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ಈ ಪ್ರಯತ್ನವು ನನ್ನ ಜೀವನದ ಮೂರನೇ ಇನ್ನಿಂಗ್ಸ್. ಇದು ನನ್ನ ಬದುಕಿನ ಸಾರ್ಥಕ ಇನ್ನಿಂಗ್ಸ್ ಕೂಡ ಹೌದು. ಜನ್ಮಜಾತ ಹೃದಯ ದೋಷಗಳೊಂದಿಗೆ ಹುಟ್ಟಿದ ಮಕ್ಕಳಿಗೆ 'ಶ್ರೀ ಸತ್ಯಸಾಯಿ ಸಂಜೀವಿನಿ ಆಸ್ಪತ್ರೆ'ಗಳಲ್ಲಿ ಸಂಪೂರ್ಣ ಉಚಿತವಾಗಿ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತಿದೆ. ಇಲ್ಲಿ ಶೇ 99 ರಷ್ಟು ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿವೆ ಎಂದು ಅಭಿಮಾನದಿಂದ ಹೇಳಿದರು.
'ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್' ಮೂಲಕ ಒಂದು ಕೋಟಿಗೂ ಹೆಚ್ಚು ಮಕ್ಕಳಿಗೆ ಉಚಿತ ಪೌಷ್ಟಿಕಾಂಶ ದೊರೆಯುತ್ತಿದೆ. ಮುದ್ದೇನಹಳ್ಳಿಯಲ್ಲಿ ಸುಸಜ್ಜಿತ 600 ಹಾಸಿಗೆಗಳ ನೂತನ ಆಸ್ಪತ್ರೆ, ಉಚಿತ ವೈದ್ಯಕೀಯ ಕಾಲೇಜು ಸೇರಿದಂತೆ ಹಲವು ಸೌಲಭ್ಯಗಳು ಸರ್ವರಿಗೂ ಉಚಿತವಾಗಿ ದೊರೆಯುತ್ತಿವೆ ಎಂದು ತಿಳಿಸಿದರು.
ತಮ್ಮದೇ ಕ್ರಿಕೆಟ್ ಬದುಕಿನ ಚೊಚ್ಚಿನ ಟೆಸ್ಟ್ ಪಂದ್ಯವನ್ನು ನೆನಪಿಸಿಕೊಂಡ ಅವರು, 1971 ರಲ್ಲಿ ನನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಸರ್ ಗಾರ್ಫೀಲ್ಡ್ ಸೋಬರ್ಸ್ ತಮ್ಮ ಕೈಗೆ ಬಂದಿದ್ದ ಕ್ಯಾಚ್ ಬಿಟ್ಟು ನನಗೆ ಜೀವದಾನ ನೀಡಿದರು. ಎರಡನೇ ಟೆಸ್ಟ್ನಲ್ಲಿ ಜಾಯ್ ಕೇರ್ ಇದೇ ರೀತಿ ನನಗೆ ಮರುಜೀವ ನೀಡಿದರು. ನಾನು ಕ್ರಮವಾಗಿ ಅರ್ಧಶತಕ ಮತ್ತು ಶತಕ ಬಾರಿಸಿದೆ. ನನ್ನ ಕ್ರಿಕೆಟ್ ವೃತ್ತಿಜೀವನವನ್ನು ಈ ಜೀವದಾನಗಳು ಗಟ್ಟಿಮಾಡಿದವು. ಅದು ಸತ್ಯ ಸಾಯಿ ಬಾಬಾ ಅವರ ಕೃಪಾಶೀರ್ವಾದ. ಅದನ್ನೇ ನಾನು ಇಂದು ಇತರ ಜೀವಗಳಲ್ಲಿ ಕಾಣಲು ಬಯಸುತ್ತಿದ್ದೇವೆ ಎಂದು ಸ್ಮರಿಸಿದರು.