ಉಚಿತ ಯುಪಿಐ ವಹಿವಾಟಿನಲ್ಲಿ ವ್ಯಾಪಾರಿಗಳಿಗೆ ಶುಲ್ಕದ ಬಲೆ, ಅಂತಿಮವಾಗಿ ಗ್ರಾಹಕನಿಗೆ ಬರೆ: ಡಾ. ಆನಂದ ಕುಮಾರ್
ಡಿಜಿಟಲ್ ಪಾವತಿ ವ್ಯವಸ್ಥೆಯ ಯುಪಿಐಗೆ ಈಗ ಶುಲ್ಕದ ಕರಿನೆರಳು ಆವರಿಸಿದೆ. ವರ್ಷಗಳ ಕಾಲ “ಸರಳ, ವೇಗ, ಸುರಕ್ಷಿತ ಮತ್ತು ಉಚಿತ” ಎಂಬ ಭರವಸೆಯೊಂದಿಗೆ ಜನರನ್ನು ನಂಬಿಸಿ ಡಿಜಿಟಲ್ ಪಾವತಿಯತ್ತ ಕರೆದೊಯ್ದ ಬಳಿಕ, ₹2,000ಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ 0.4% ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂ.ಡಿ.ಆರ್) ತೆರಿಗೆ ವ್ಯವಸ್ಥೆ ಜಾರಿಗೆ ತರಲಾಗಿದೆ.
-
ಬೆಂಗಳೂರು: ಅಧಿಕ ಮೌಲ್ಯದ ನೋಟು ಅಮಾನ್ಯೀಕರಣದಿಂದ ಡಿಜಿಟಲ್ ಭಾರತ ನಿರ್ಮಿಸಿದ ಕೇಂದ್ರ ಸರ್ಕಾರ ಇದೀಗ ಡಿಜಿಟಲ್ ಭಾರತದಿಂದ ಯುಪಿಐ(UPI) ವಹಿವಾಟುಗಳಿಗೆ ತೆರಿಗೆ ವಿಧಿಸುವ ಮೂಲಕ ದೇಶದ ಆರ್ಥಿಕತೆ ಕುಸಿಯುವಂತೆ ಮಾಡಿದೆ. ಯುಪಿಐ ಸುಂಕ ವ್ಯಾಪಾರಿಯಿಂದ ಗ್ರಾಹಕನಿಗೆ ವರ್ಗಾವಣೆಯಾಗಲಿದ್ದು, ಅಂತಿಮವಾಗಿ ಸಾಮಾನ್ಯ ಜನರ ಜೇಬಿಗೆ ಭಾರೀ ಹೊರೆ ಯಾಗಲಿದೆ ಎಂದು ಎಐಸಿಸಿ(AICC) ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕರು ಹಾಗೂ ಮಹಾರಾಷ್ಟ್ರ ಉಸ್ತುವಾರಿ ಡಾ. ಆನಂದ ಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ.
ಡಿಜಿಟಲ್ ಪಾವತಿ ವ್ಯವಸ್ಥೆಯ ಯುಪಿಐಗೆ ಈಗ ಶುಲ್ಕದ ಕರಿನೆರಳು ಆವರಿಸಿದೆ. ವರ್ಷಗಳ ಕಾಲ “ಸರಳ, ವೇಗ, ಸುರಕ್ಷಿತ ಮತ್ತು ಉಚಿತ” ಎಂಬ ಭರವಸೆಯೊಂದಿಗೆ ಜನರನ್ನು ನಂಬಿಸಿ ಡಿಜಿಟಲ್ ಪಾವತಿಯತ್ತ ಕರೆದೊಯ್ದ ಬಳಿಕ, ₹2,000ಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ 0.4% ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂ.ಡಿ.ಆರ್) ತೆರಿಗೆ ವ್ಯವಸ್ಥೆ ಜಾರಿಗೆ ತರಲಾಗಿದೆ. ಯುಪಿಐಯನ್ನು ದೇಶದಾ ದ್ಯಂತ ವ್ಯಾಪಕಗೊಳಿಸಲು ಸರ್ಕಾರ 2021-22ರಿಂದ 2024-25ರವರೆಗೆ ಯುಪಿಐ ಪರಿಸರ ವ್ಯವಸ್ಥೆಗೆ ಸುಮಾರು ₹8,730 ಕೋಟಿ ಪ್ರೋತ್ಸಾಹಧನ ನೀಡಿದೆ. ವಹಿವಾಟು ಶುಲ್ಕ ವಿಧಿಸುವ ಪ್ರಸ್ತಾವವೇ ಇಲ್ಲ ಎಂದು ಸರ್ಕಾರ ಕಳೆದ ವರ್ಷ ಹೇಳಿತ್ತು. ಹಾಗಿದ್ದರೆ ಕೇವಲ ಒಂದು ವರ್ಷದೊಳಗೆ ನೀತಿಯಲ್ಲಿ ಇಂತಹ ಮಹತ್ವದ ಬದಲಾವಣೆ ತಂದಿದ್ದು ಏಕೆ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ತನ್ನ ಪ್ರಮುಖ ಕ್ರೆಡಿಟ್ ಕಾರ್ಡ್ ಮತ್ತು ಭಾರತದ ಮೊದಲ UPI-ಚಾಲಿತ ಬ್ಯಾಂಕ್ ಶಾಖೆ ಪ್ರಾರಂಭಿಸುತ್ತಿರುವ ಸ್ಲೈಸ್
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಅಮೆಜಾನ್ ಹುಲ್ಲುಗಾವಲಿನಂತೆ ಡಿಜಿಟಲ್ ಪಾವತಿ ವ್ಯವಸ್ಥೆ ಇದೀಗ ದೇಶದಲ್ಲಿ ಸಮೃದ್ಧವಾಗಿದ್ದು, ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ವಹಿವಾಟು ನಡೆಸುವ ದೇಶವಾಗಿ ಹೊರ ಹೊಮ್ಮಿದೆ. ಡಿಜಿಟಲ್ ಪಾವತಿ ವ್ಯವಸ್ಥೆಯ ನಿರ್ವಹಣೆ ಹೆಸರಿನಲ್ಲಿ ವ್ಯಾಪಾರಿಗಳ ಮೇಲೆ ಹೊರೆ ವಿಧಿಸಿರುವುದು ಸರಿಯಲ್ಲ. ವ್ಯಾಪಾರಿ ತೆರಿಗೆ ಪಾವತಿಸು ತ್ತಾನೆ. ಕೊನೆಗೆ ಗ್ರಾಹಕನೇ ತೆರಿಗೆ ಭರಿಸುವ ಬಲಿಪಶುವಾಗಲಿದ್ದಾನೆ. ವ್ಯಾಪಾರಿಯ ವ್ಯವಹಾರ ವೆಚ್ಚ ಹೆಚ್ಚಾದಾಗ, ಆ ಹೆಚ್ಚುವರಿ ಖರ್ಚುಗಳನ್ನು ಸರಕುಗಳ ಬೆಲೆ, ಸೇವಾ ಶುಲ್ಕ ಅಥವಾ ಬೇರೆ ರೂಪದಲ್ಲಿ ಗ್ರಾಹಕರ ಮೇಲೆ ವರ್ಗಾಯಿಸಲಿದ್ದಾರೆ.
ಚಹಾ ಅಂಗಡಿಯಿಂದ ತರಕಾರಿ ವ್ಯಾಪಾರಿ ವರೆಗೆ, ಆಟೋ ಚಾಲಕರಿಂದ ಸಣ್ಣ ಉದ್ಯಮಿಗಳವರೆಗೆ, ಬ್ಯಾಂಕ್ ಖಾತೆ ಮತ್ತು ಮೊಬೈಲ್ ಇರುವ ಬಹುತೇಕ ಜನ ಡಿಜಿಟಲ್ ಪಾವತಿಗೆ ಒಗ್ಗಿಕೊಂಡಿದ್ದಾರೆ. ಕುರಿ ಕೊಬ್ಬಿದರೆ ಕುರಬನಿಗೆ ಲಾಭ ಎನ್ನುವಂತೆ ಕುರಿಯನ್ನು ಕೊಬ್ಬಿಸಿ ಬಲಿ ಕೊಡಲು ಸರ್ಕಾರ ಮುಂದಾಗಿದೆ. ಈ ವ್ಯವಸ್ಥೆಯ ಬಗ್ಗೆ ವಿಶ್ವಾಸ ಮೂಡಿಸಲು ವರ್ಷಗಳೇ ಬೇಕಾಯಿತು. ಆದರೆ ಶುಲ್ಕದ ವ್ಯವಸ್ಥೆ ಹಂತಹಂತವಾಗಿ ವಿಸ್ತರಿಸಿದರೆ ಹೇಗೆ ಎಂಬ ಆತಂಕ ವ್ಯಕ್ತವಾಗಿದೆ. ಇಂದು ₹2,000 ಮಿತಿ. ನಾಳೆ ಇನ್ನಷ್ಟು ಹೆಚ್ಚಾದರೆ? ಇಂದು ನಿರ್ದಿಷ್ಟ ವ್ಯಾಪಾರಿ, ವಹಿವಾಟು, ಮುಂದೆ ಇತರ ವಹಿವಾಟುಗಳಿಗೂ ಶುಲ್ಕ ವಿಧಿಸುವುದಿಲ್ಲ ಎಂಬ ಭರವಸೆ ಎಲ್ಲಿದೆ? ಎಂದು ಡಾ. ಆನಂದ ಕುಮಾರ್ ಪ್ರಶ್ನಿಸಿದ್ದಾರೆ.
ಯುಪಿಐ ಪಾವತಿ ಪರಿಸರದಲ್ಲಿ ಶುಲ್ಕದ ಬಾಗಿಲು ತೆರೆಯಲಾಗಿದೆ. ಇಂದು ₹2,000ಕ್ಕಿಂತ ಹೆಚ್ಚಿನ ನಿರ್ದಿಷ್ಟ ವಹಿವಾಟುಗಳಿಗೆ ಮಾತ್ರ ಅನ್ವಯಿಸುವ ಶುಲ್ಕ ನಾಳೆ ಇನ್ನಷ್ಟು ವಹಿವಾಟುಗಳಿಗೆ ವಿಸ್ತರಿಸಲಿದೆ. ಡಿಜಿಟಲ್ ಇಂಡಿಯಾದ ಯಶಸ್ಸಿಗೆ ಯುಪಿಐ ಪ್ರಮುಖ ಸಾಧನವಾಗಿದ್ದರೆ, ಅದರ ವೆಚ್ಚವನ್ನು ಸಾರ್ವಜನಿಕ ಮೂಲಸೌಕರ್ಯದಂತೆ ಸರ್ಕಾರವೇ ಭರಿಸಬೇಕಿತ್ತು.
ಯುಪಿಐ ಭಾರತದ ತಂತ್ರಜ್ಞಾನ ಸಾಮರ್ಥ್ಯದ ಪ್ರತೀಕ. ಅದನ್ನು ದುರ್ಬಲಗೊಳಿಸುವ ಯಾವುದೇ ನೀತಿ ದೇಶದ ಡಿಜಿಟಲ್ ಪ್ರಗತಿಗೆ ಹಿನ್ನಡೆಯಾಗಲಿದೆ. ಡಿಜಿಟಲ್ ಕ್ರಾಂತಿ ಎಂದರೆ ಕೇವಲ ವಹಿವಾಟುಗಳ ಸಂಖ್ಯೆ ಹೆಚ್ಚಿಸುವುದಲ್ಲ. ಅದರ ಅರ್ಥ ಸಾಮಾನ್ಯ ನಾಗರಿಕನಿಗೆ ಸುಲಭ, ಕಡಿಮೆ ವೆಚ್ಚದ ಮತ್ತು ವಿಶ್ವಾಸಾರ್ಹ ಹಣಕಾಸು ವ್ಯವಸ್ಥೆ ಕಲ್ಪಿಸುವುದು ನೈಜ ಕ್ರಾಂತಿಯಾಗಲಿದೆ.
ಯುಪಿಐಯನ್ನು ವಿಶ್ವದ ಮಾದರಿ ಎಂದು ಬಿಂಬಿಸುವುದಾದರೆ, ಅದರ ಯಶಸ್ಸಿನ ಫಲವೂ ಜನರಿಗೇ ಸಿಗಬೇಕು. ಶುಲ್ಕದ ಹೊರೆ ನಿಧಾನವಾಗಿ ಜನರ ಬೇಜಿಗೆ ಭಾರವಾಗಲಿದೆ. ಯುಪಿಐ ಭಾರತದ ಜನರ ಡಿಜಿಟಲ್ ಹಕ್ಕಿನಂತಿದ್ದ ವ್ಯವಸ್ಥೆಯನ್ನು ಆದಾಯದ ಮತ್ತೊಂದು ಮಾರ್ಗವನ್ನು ರೂಪಿಸಿರುವುದು ಸರಿಯಲ್ಲ. ತೆರಿಗೆ ವಿಧಿಸಿರುವುದನ್ನು ಕೈಬಿಟ್ಟು ಜನಸಾಮಾನ್ಯರ ಡಿಜಿಟಲ್ ಸಬಲೀಕರಣದ ಸಾಧನವಾಗಿಯೇ ಉಳಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.