Kalpana Raghavendar: ಖ್ಯಾತ ಹಿನ್ನೆಲೆ ಗಾಯಕಿ ಆತ್ಮಹತ್ಯೆಗೆ ಯತ್ನ; ಮನೆಯಲ್ಲೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
ಖ್ಯಾತ ಹಿನ್ನೆಲೆ ಗಾಯಕಿ ಕಲ್ಪನಾ ರಾಘವೇಂದ್ರ ಹೈದರಾಬಾದ್‌ನಲ್ಲಿ ತಮ್ಮ ಫ್ಲ್ಯಾಟ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿರುವ ವರದಿಯಾಗಿದೆ. ಅವರು ನಿದ್ದೆ ಮಾತ್ರೆಗಳನ್ನು ಸೇವಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಅವರ ಸ್ಥಿತಿ ಸ್ಥಿರವಾಗಿದೆ.


ಹೈದರಾಬಾದ್: ಜನಪ್ರಿಯ ತೆಲುಗು ಗಾಯಕಿ ಕಲ್ಪನಾ ರಾಘವೇಂದ್ರ(Kalpana Raghavendar) ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ವರದಿಯಾಗಿದೆ. ಹೈದರಾಬಾದ್‌ನಲ್ಲಿರುವ ತಮ್ಮ ಮನೆಯಲ್ಲೇ ಕಲ್ಪನಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಅವರನ್ನು ಸ್ಥಳೀಯ ಅಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, ಕಲ್ಪನಾ ತಂಗಿದ್ದ ಅಪಾರ್ಟ್‌ಮೆಂಟ್‌ನಿಂದ ಸ್ಥಳೀಯ ನಿವಾಸಿಗಳಿಂದ ಬಂದ ಮಾಹಿತಿ ಪಡೆದ ಬೆನ್ನಲ್ಲೇ ಪೊಲೀಸರು ಮಂಗಳವಾರ ಅವರ ಮನೆಗೆ ದೌಡಾಯಿಸಿದ್ದಾರೆ. ಮನೆಯ ಬಾಗಿಲು ಒಡೆದು ನೋಡಿದಾಗ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ ತಕ್ಷಣ ಅವರನ್ನು ಸ್ಥಳಾಂತರಿಸಲಾಯಿತು ಎಂದು ಹೇಳಿದ್ದಾರೆ.
ನಿದ್ರೆ ಮಾತ್ರೆ ತೆಗೆದುಕೊಂಡ್ರಾ?
ಅವರಿಗೆ ಚಿಕಿತ್ಸೆ ನೀಡಿರುವ ವೈದ್ಯರು ಮಾಹಿತಿ ನೀಡಿದ್ದು, ಕಲ್ಪನಾ ಅವರು ನಿದ್ರೆ ಮಾತ್ರೆಗಳನ್ನು ಸೇವಿಸಿದ್ದಾರೆ. ಅವರು ಪ್ರಜ್ಞೆ ಮರಳಿದ ನಂತರ ವಿವರಗಳು ತಿಳಿಯಲಿವೆ ಎಂದು ಹೇಳಿದ್ದಾರೆ. ಸದ್ಯ ಅವರು ಅಪಾಯದಿಂದ ಪಾರಾಗಿದ್ದಾರೆ. ಟಿವಿ ಪ್ರಕಾರ, ಕಲ್ಪನಾ ಪ್ರಸ್ತುತ ಸ್ಥಿರ ಸ್ಥಿತಿಯಲ್ಲಿದ್ದಾರೆ. ಅವರನ್ನು ನಿಜಾಮ್‌ಪೇಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರು ಕರೆಗಳನ್ನು ಸ್ವೀಕರಿಸದಿದ್ದಾಗ ಅವರ ಪತಿ ಪ್ರಸಾದ್ ಅಪಾರ್ಟ್‌ಮೆಂಟ್ ಕಮ್ಯೂನಿಟಿ ಜನರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಘಟನಾ ಸಂದರ್ಭದಲ್ಲಿ ಪತಿ ಚೆನ್ನೈನಲ್ಲಿದ್ದರು ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: Ranya Rao: ರನ್ಯಾ ರಾವ್‌ಗೆ ಮತ್ತಷ್ಟು ಸಂಕಷ್ಟ, ಮನೆಯಲ್ಲಿ ಚಿನ್ನ- ನಗದು ಸೇರಿ 17.29 ಕೋಟಿ ಪತ್ತೆ
ಇದಕ್ಕೂ ಮೊದಲು, ಕಲ್ಪನಾ ಕೇರಳದಿಂದ ಹೈದರಾಬಾದ್‌ಗೆ ಕಾರ್ಯಕ್ರಮವೊಂದಕ್ಕೆ ಮರಳಿದ್ದರು. ಗಾಯಕಿ ಈ ಮಟ್ಟದ ನಿರ್ಧಾರಕ್ಕೆ ಹೋಗಲು ಕಾರಣಗಳೇನು ಎಂಬ ತನಿಖೆ ನಡೆಸಲಾಗುತ್ತಿದೆ. ಗಾಯಕಿಯರಾದ ಗೀತಾ ಮಾಧುರಿ, ಸುನೀತಾ ಮತ್ತು ಇತರರು ಅವರನ್ನು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದಾರೆ.
ಕಲ್ಪನಾ ಬಗ್ಗೆ
ಕಲ್ಪನಾ ಅವರು ಪ್ರಸಿದ್ಧ ಹಿನ್ನೆಲೆ ಗಾಯಕರಾದ ಟಿಎಸ್ ರಾಘವೇಂದ್ರ ಮತ್ತು ಸುಲೋಚನಾ ಅವರ ಪುತ್ರಿ. ಇವರು ಐಡಿಯಾ ಸ್ಟಾರ್ ಸಿಂಗರ್ ಮಲಯಾಳಂ ಸೀಸನ್ ಐದರ ವಿಜೇತರಾಗಿದ್ದರು. ಅವರು ಬಿಗ್ ಬಾಸ್ ತೆಲುಗು ಸೀಸನ್ ಒಂದರಲ್ಲಿ ಭಾಗವಹಿಸಿದ್ದರು. ಅವರು ಐದನೇ ವಯಸ್ಸಿನಲ್ಲಿ ಹಿನ್ನೆಲೆ ಗಾಯಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 2013 ರ ಹೊತ್ತಿಗೆ, ಅವರು 1,500 ಹಾಡುಗಳನ್ನು ರೆಕಾರ್ಡ್ ಮಾಡಿದ್ದರು.