ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Hunj Column: ಜನಕನ ಆಸ್ಥಾನವೂ, ಅನುಭವ ಮಂಟಪವೂ

ವೇದ, ಶಾಸ್ತ್ರ, ಸೂತ್ರ, ಉಪನಿಷತ್ತು, ಆಗಮಗಳ ಸಾರವು ಹೇಗೆ ಧರ್ಮ, ನೀತಿ, ನೈತಿಕತೆ, ಬದ್ಧತೆ, ಸಾಮಾಜಿಕ ನ್ಯಾಯಗಳ ಅನುಷ್ಠಾನದ ಗುರಿ ಹೊಂದಿದ್ದವು ಎಂಬುದನ್ನು ಸಾಮಾನ್ಯರಿಗೆ ತಿಳಿಸಲು ಸೃಜನಶೀಲ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಗಳನ್ನು ರಚಿಸಲಾಗಿದೆ ಎಂದು ಅನೇಕ ವಿದ್ವಾಂಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜನಕನ ಆಸ್ಥಾನವೂ, ಅನುಭವ ಮಂಟಪವೂ

Profile Ashok Nayak Apr 7, 2025 11:33 AM

ಬಸವ ಮಂಟಪ

ರವಿ ಹಂಜ್

ನಾನು ವಿದ್ಯಾರ್ಥಿಯಾಗಿದ್ದಾಗ ನಮ್ಮ ಪ್ರೊಫೆಸರರು ಕೃತಕ ಬುದ್ಧಿಮತ್ತೆ ಕುರಿತಾಗಿ ಬೋಧಿಸುತ್ತಿದ್ದರು. ಅವರು, ಪಾರ್ವತಿಯು ಗಣಪತಿಯನ್ನು ಸೃಷ್ಟಿಸಿದ ಪೌರಾಣಿಕ ಕತೆ ಯನ್ನು ಹೇಳುತ್ತ, “ಜಗತ್ತಿನ ಪ್ರಪ್ರಥಮ ಕೃತಕ ಬುದ್ಧಿಮತ್ತೆಯನ್ನು ಸೃಷ್ಟಿಸಿದ್ದು ಪಾರ್ವತಿ" ಎಂದು ವಿದ್ಯಾರ್ಥಿಗಳಲ್ಲಿ ವಿಷಯದ ಬಗ್ಗೆ ಆಸಕ್ತಿ ಮೂಡಿಸಿ ನಂತರ ಕೃತಕ ಬುದ್ಧಿಮತ್ತೆಯ ವೈಜ್ಞಾನಿಕ ವಿಷಯವನ್ನು ಮನಮುಟ್ಟುವಂತೆ ವಿವರಿಸುತ್ತಿದ್ದರು. ಇಂಥ ವಿಧಾನವನ್ನು ಸಾಕಷ್ಟು ಉಪಾ ಧ್ಯಾಯರು ಅಳವಡಿಸಿಕೊಂಡಿರುವರು. ಕಬ್ಬಿಣದ ಕಡಲೆಯಂಥ ವಿಷಯ ವನ್ನು ದೃಷ್ಟಾಂತಗಳ ಮೂಲಕ ವರ್ಣಿಸಿ ಕೇಳುಗರ ಮನ ಮುಟ್ಟುವಂತೆ ವರ್ಣಿಸುವ ವಿಧಾನದ ಆದ್ಯ ಸೃಷ್ಟಿಕರ್ತರು ಭಾರತೀಯರು. ಇದೇ ತಂತ್ರವು ಪಂಚತಂತ್ರ, ಪ್ರವಚನಗಳ ದೃಷ್ಟಾಂತ, ಅಥವಾ ಜನಪದ ಕಥೆಗಳದ್ದು. ಒಟ್ಟಾರೆ ರೂಪಕೋಕ್ತಿಯು ಸಾಹಿತ್ಯದ ಪ್ರಮುಖ ವಿಧಾನ.

ವೇದ, ಶಾಸ್ತ್ರ, ಸೂತ್ರ, ಉಪನಿಷತ್ತು, ಆಗಮಗಳ ಸಾರವು ಹೇಗೆ ಧರ್ಮ, ನೀತಿ, ನೈತಿಕತೆ, ಬದ್ಧತೆ, ಸಾಮಾಜಿಕ ನ್ಯಾಯಗಳ ಅನುಷ್ಠಾನದ ಗುರಿ ಹೊಂದಿದ್ದವು ಎಂಬುದನ್ನು ಸಾಮಾ ನ್ಯರಿಗೆ ತಿಳಿಸಲು ಸೃಜನಶೀಲ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಗಳನ್ನು ರಚಿಸಲಾಗಿದೆ ಎಂದು ಅನೇಕ ವಿದ್ವಾಂಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಮಹಾಕಾವ್ಯ ಗಳು ಭಾರತದ ಶ್ರೀಮಂತ ರೂಪಕೋಕ್ತಿ ಸಾಹಿತ್ಯಕ್ಕೆ ಭದ್ರ ಬುನಾದಿ ಯನ್ನು ಹಾಕಿಕೊಟ್ಟವು. ಈ ಮಹಾಕಾವ್ಯಗಳ ಮಾದರಿಯನ್ನೇ ಎಲ್ಲಾ ನೀತಿಕತೆ, ದೃಷ್ಟಾಂತ, ಪ್ರವಚನ, ಜನಪದ ಪ್ರಕಾರಗಳು ಅಳವಡಿಸಿಕೊಂಡಿವೆ.‌

ಇದನ್ನೂ ಓದಿ: Ravi Hunj Column: ಜಾತಿಪೀಠಿಗಳು ನಾಟಕ ಆಡಿಸುವುದರಲ್ಲಿ ಮಗ್ನರಾಗಿದ್ದಾರೆ !

ರಾಮಾಯಣ ಮತ್ತು ಮಹಾಭಾರತಗಳು ಕಾಲ್ಪನಿಕ ಕಾವ್ಯಗಳೆನಿಸಿದರೂ ಅವುಗಳಲ್ಲಿ ಐತಿಹಾಸಿಕ ಅಂಶಗಳಿವೆ. ರಾಮಾಯಣದ ಬಾಲಕಾಂಡದ ಶ್ಲೋಕವೊಂದು ಹೀಗಿದೆ:

ತಸ್ಯಾಃ ಹುಮ್ ಕಾರತಃ

ರವಿ ಸನ್ನಿಭಾಃ ಕಾಂಭೊಜಾ ಜಾತಾಃ

ಅಥ ಉಧಸಃ ಶಸ್ತ್ರ ಪಾಣಯಃ

ಪಹ್ಲವಾಃ ಸಂಜಾತಾಃ

ಯೋನಿ ದೆಶಾತ್ ಯವನಃ ಚ

ತಥಾ ಶಕ್ಯಿಚ ದೆಶಾತ್ ಶಕಾಃ

ರೋಮ ಕುಪೆಶು ಮ್ಲೇಚ್ಛಾಃ ಚ

ಸ ಕಿರಾತಕಾಃ ಹಾರಿತಾಃ

ಅಂದರೆ, ಕಾಮಧೇನುವಿನ ಯಾವ ಯಾವ ಭಾಗಗಳಿಂದ ಕಾಂಭೋಜ, ಪಹಲ್ವ (ಪಲ್ಲವ), ಯವನ, ಶಕ (ಶಾಕ್ಯ), ಮ್ಲೇಚ್ಚರು, ಮತ್ತು ಕಿರಾತಕರು ಹುಟ್ಟಿದರೆಂದು ಈ ಶ್ಲೋಕ ಹೇಳು ತ್ತದೆ. ಇಲ್ಲಿ ಮ್ಲೇಚ್ಚರನ್ನು ವಿದೇಶಿ ಅರೆನಾಗರಿಕ ಬಂಡುಕೋರರೆನ್ನಲಾದರೆ, ಕಿರಾತಕರು ಗುಡ್ಡಗಾಡುವಾಸಿಗಳೆಂದು ತಿಳಿದುಬರುತ್ತದೆ. ಇನ್ನು ಕಾಂಭೋಜ, ಪಹಲ್ವ, ಯವನ, ಶಕರ ಬಗ್ಗೆ ಐತಿಹಾಸಿಕ ದಾಖಲೆಗಳಿವೆ. ಒಟ್ಟಾರೆ ವಾಸ್ತವ ಜನಾಂಗ ರೂಪಕ ಕಾಮಧೇನುವಿನಿಂದ ಉದ್ಭವಿಸಿದರು ಎಂಬುದು ಒಂದು

ಅರ್ಥವಾಗದ ರೂಪಕೋಕ್ತಿ. ಇದೇ ರೀತಿ ವಿಷ್ಣುಪುರಾಣವು, ಜರಾಸಂಧನು ಕೃಷ್ಣನನ್ನು ಗೆಲ್ಲಲಾಗದೇ ಕಾಳಯವನನೆಂಬ ಯವನ ರಾಜನನ್ನು ಆಹ್ವಾನಿಸಿ ಜಂಟಿಯಾಗಿ ಕೃಷ್ಣನ ಮೇಲೆ ಯುದ್ಧ ಹೂಡುತ್ತಾನೆ ಎನ್ನುತ್ತದೆ. ಕಾಳಯವನನ ಶೌರ್ಯ ಸಾಹಸಗಳನ್ನು ಬಲ್ಲ ಕೃಷ್ಣನು ತನ್ನ ಪ್ರಜೆಗಳನ್ನು ಸುರಕ್ಷಿತವಾಗಿಡಲು ದ್ವಾರಕೆಯನ್ನು ಕಟ್ಟಿದನೆನ್ನಲಾಗುತ್ತದೆ.

ಈ ಕಾಳಯವನನು ಯಾವುದೇ ಯುದ್ಧಗಳಲ್ಲಿ ಸೋತಿರದ ಕಾರಣ ಕೃಷ್ಣನು ಸೋಲುವ ಭೀತಿಯಿಂದ ಪಾರಾಗಲು ಉಪಾಯ ಹೂಡುತ್ತಾನೆ. ತಮ್ಮಿಬ್ಬರ ನಡುವಿನ ಕಾಳಗಕ್ಕೆ ಅಪಾರ ಜನಹಾನಿ ಬೇಡವೆಂದು ಕಾಳಯವನನನ್ನು ತಮ್ಮಿಬ್ಬರ ನಡುವಿನ ದ್ವಂದ್ವ ಯುದ್ಧಕ್ಕೆ ಒಪ್ಪಿಸುತ್ತಾನೆ.

ನಂತರ ಉಪಾಯವಾಗಿ ಕಾಳಯವನನನ್ನು ಮುಚುಕುಂದನ ಗುಹೆಗೆ ಕರೆತರುತ್ತಾನೆ. ಮುಚುಕುಂದನಿಂದ ಕಾಳಯವನನ ಸಾವು ವಿಧಿನಿಶ್ಚಿತವಾಗಿದ್ದರಿಂದ ಅಲ್ಲಿ ಕಾಳಯವನನ ಹತ್ಯೆಯಾಗುತ್ತದೆ. ಇದು ಮಹಾಭಾರತದಲ್ಲಿ ಬರುವ ಯವನರ ಸಾರಾಂಶ. ಇಲ್ಲಿ ಗಮನಿಸ ಬೇಕಾದ ಇನ್ನೊಂದು ಅಂಶವೆಂದರೆ ಬಾಹುಬಲಿ ತನ್ನ ಸೋದರನೊಂದಿಗೆ ದ್ವಂದ್ವಯುದ್ಧ ದಲ್ಲಿ ತೊಡಗಿದಂತೆಯೇ ಕೃಷ್ಣನು ಕೂಡಾ ಕಾಳಯವನನನ್ನು ದ್ವಂದ್ವಯುದ್ಧಕ್ಕೆ ಆಹ್ವಾನಿಸಿದ್ದುದು.

ಅಂದರೆ ಬಾಹುಬಲಿಯ ಕತೆಯ ಮೇಲೆ ಮಹಾಭಾರತದ ಅಥವಾ ಮಹಾಭಾರತದ ಮೇಲೆ ಬಾಹುಬಲಿಯ ಅಂಶಗಳ ಸಾಮ್ಯತೆ, ಧರ್ಮಗಳ ನಡುವಿನ ದ್ವಂದ್ವಯುದ್ಧದ ಪ್ರತೀಕ ವೇನೋ ಎನಿಸಿ ಬಿಡುತ್ತದೆ!

ಈ ದ್ವಂದ್ವಯುದ್ಧದ ಪ್ರಭಾವ ಇಂದಿನ ಭಾರತೀಯ ಸಿನಿಮಾಗಳ ಮೇಲೆ ಖಂಡಿತಾ ಆಗಿದೆ. ಹಾಗಾಗಿಯೇ ಅಸಂಖ್ಯಾತ ಸಿನಿಮಾಗಳಲ್ಲಿ ‘ನಾನೂ ಒಬ್ಬನೇ ಬರ್ತೀನಿ, ನೀನೂ ಒಬ್ಬನೇ ಬಾ’ ಎಂದು ನಾಯಕ-ಖಳನಾಯಕರು ಹೊರಡಿಸುವ ಫರ್ಮಾನುಗಳ ಮೂಲ ಕೂಡಾ ಇದೇ ಅನಿಸುತ್ತದೆ.

ಒಟ್ಟಾರೆ ರಾಮಾಯಣ ಮತ್ತು ಮಹಾಭಾರತಗಳಲ್ಲಿ ಯವನರು ಹಾಸು ಹೊಕ್ಕಾಗಿದ್ದಾರೆ. ಅಂದರೆ ಗ್ರೀಕರು ಭಾರತದಲ್ಲಿ ಐತಿಹಾಸಿಕವಾಗಿ ಮತ್ತು ಪೌರಾಣಿಕವಾಗಿ ಪ್ರಸ್ತುತವಾಗಿzರೆ. ಅದೆಲ್ಲಕ್ಕಿಂತ ಮಿಗಿಲಾಗಿ ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳು ಗ್ರೀಕರು ಭಾರತದಲ್ಲಿ ನೆಲೆ ನಿಂತ ನಂತರವೇ ಸೃಷ್ಟಿಯಾಗಿವೆ.

ಇನ್ನು ವ್ಯಾಸರನ್ನು ವೇದಗಳನ್ನು ವಿಭಜಿಸಿದವರೆಂದು ಹೇಳಲಾಗುತ್ತದೆ. ಹಾಗಿದ್ದರೆ ವ್ಯಾಸರು ವೇದಗಳ ರಚನೆಯ ನಂತರದವರಾಗಿರಬೇಕು. ವೇದಗಳು ವಿಸ್ತಾರಗೊಂಡು ವಿಭಜನೆಗೊಳ್ಳುವಂಥ ಸಮಗ್ರತೆಯನ್ನು ತಲುಪಿದ ಕಾಲವನ್ನು ವೇದವ್ಯಾಸರ ಕಾಲವೆನ್ನ ಬಹುದು.

ಇರಲಿ, ಈ ಎ ವಿವರಗಳನ್ನು ಏಕೆ ಹೇಳಲಾಯಿತೆಂದರೆ, ಅಂದಿದ್ದ ಕೆಲ ರಾಜವಂಶಗಳ, ಪಟ್ಟಣಗಳ, ಭೌಗೋಳಿಕ ನಿದರ್ಶನಗಳನ್ನು ಬಳಸಿ, ಕೃತಿಕಾರರು ತಮ್ಮನ್ನೂ ಪಾತ್ರಗಳೆನಿಸಿ ವಿಭಿನ್ನವಾಗಿ ಹೆಣೆದ ರೋಚಕ ರೂಪಕ ತಂತ್ರ ಅಂದಿನ ಎಲ್ಲಾ ಕಾವ್ಯ ರಚನೆಯ ನಿಯಮ ಗಳನ್ನು ತಲೆಕೆಳಗು ಮಾಡಿತ್ತು. ಇತಿಹಾಸವಲ್ಲದ ಆದರೆ ಚರಿತ್ರೆ ಎನಿಸುವ, ವಾಸ್ತವವಲ್ಲದ ಆದರೆ ಕಾಲ್ಪನಿಕವೆನಿಸದ, ತತ್ವಶಾಸ್ತ್ರವೆನಿಸದ ಆದರೆ ಅಧ್ಯಾತ್ಮವಿರುವ, ವೇದವಲ್ಲದ ಆದರೆ ನೀತಿಯಿರುವ ಈ ಮಹಾಕಾವ್ಯಗಳು ಎಲ್ಲಾ ವರ್ಗದ ಜನರಿಗೂ ಹಿತವೆನ್ನಿಸಿದ್ದವು.

ವೇದ, ಶಾಸ್ತ್ರ, ಸೂತ್ರ, ಆಗಮ, ಉಪನಿಷತ್ತುಗಳ ತರ್ಕ, ನ್ಯಾಯ, ನೀತಿ, ಧರ್ಮ, ಬದ್ಧತೆ, ಕರ್ತವ್ಯಪ್ರಜ್ಞೆ, ಅಧ್ಯಾತ್ಮ, ಸಾಕ್ಷಾತ್ಕಾರದ ಸ್ವರೂಪವನ್ನು ಕಥರೂಪಕದಲ್ಲಿ ಮನನ ಮಾಡಿಸುವ ಈ ಗ್ರಂಥಗಳ ಉದ್ದೇಶ ಅಮೋಘವಾಗಿ ಫಲ ನೀಡಿತು. ಆ ಮಹಾಕಾವ್ಯಗಳ ಖ್ಯಾತಿ ಮುಂದಿನ ಶತಮಾನಗಳಲ್ಲಿ ಅವುಗಳನ್ನು ಹಿಂದೂ ಧರ್ಮಗ್ರಂಥ ಗಳಾಗಿಸಿತು.

ಆ ಕಾವ್ಯಗಳ ಅರೆ ಕಾಲ್ಪನಿಕ ಪಾತ್ರಗಳೆ ಸತ್ಯವೆನಿಸಿ ರೂಪಕಗಳಿಗೆ ತಕ್ಕ ಸ್ಮಾರಕಗಳೆದ್ದವು. ತಮ್ಮ ಅರೆ ಕಾಲ್ಪನಿಕ ಪಾತ್ರಗಳೆ ವಾಸ್ತವವಾದ ಮೇಲೆ ಬ್ರಾಹ್ಮಣ ವ್ಯಾಸ, ವಾಲ್ಮೀಕಿ ಯರ ಶೂದ್ರ ಪಾತ್ರಗಳೇ ಅವರ ಜೀವನಗಾಥೆ ಯಾಯಿತು. ಆಚಾರ್ಯ ವೇದವ್ಯಾಸ ಬೆಸ್ತರ ಮಹಾ ಪುರುಷನಾದರೆ, ಆಚಾರ್ಯ ವಾಲ್ಮೀಕಿ ಬೇಡರ ಸತ್ಪುರುಷನಾಗಿಬಿಟ್ಟ. ಹುಟ್ಟು ಮತ್ತು ವೃತ್ತಿಯಿಂದಷ್ಟೇ ಅಲ್ಲದೇ ಪಾತ್ರಗಳಿಂದಲೂ ವರ್ಣಗಳು ಬದಲಾಗುತ್ತದೆಂಬುದಕ್ಕೆ ಈ ಬ್ರಾಹ್ಮಣರು ಸಾಕ್ಷಿಯಾದರು.

ಅಯೋಧ್ಯೆಯೆಂದು ಸಾದರಪಡಿಸಿದ್ದ ಸಾಕೇತ, ಅಯೋಧ್ಯೆಯೇ ಆಗಿಹೋಯಿತು. ಇದನ್ನೇ ಮಾದರಿಯಾಗಿಟ್ಟುಕೊಂಡು ಕೆಲ ರಾಜವಂಶಗಳ, ಪಟ್ಟಣಗಳ, ಭೌಗೋಳಿಕ ನಿದರ್ಶನ ಗಳನ್ನು ಬಳಸಿ ಮುಂದೆ ಅನೇಕ ಸಂಕಥನಗಳು ಪುರಾಣದ ರೂಪದಲ್ಲಿ, ಭಕ್ತಿಪ್ರಧಾನವಾಗಿ ರೂಪುಗೊಂಡವು.

ಭಾರತದಲ್ಲಿ ಶಾಸ್ತ್ರಗಳಿಗಿಂತ ಕಥಾನಕಗಳು ಹೆಚ್ಚು ಹೆಚ್ಚು ಪ್ರಾಧಾನ್ಯ ಪಡೆದುಕೊಂಡವು. ನೂರಾರು ಭಾಷೆಗಳು ಉದಯಿಸಿದವು. ಆಯಾ ಎಲ್ಲಾ ಭಾಷೆಗಳಲ್ಲಿಯೂ ಸಂಸ್ಕೃತ ಮೂಲದ ಮಹಾಕಾವ್ಯಗಳು ಅನುವಾದಗೊಂಡದ್ದಕ್ಕಿಂತ ಹೆಚ್ಚಾಗಿ ಮರುಬರೆಯಲ್ಪಟ್ಟವು.

ಶಾಸ್ತ್ರ ವಿಜ್ಞಾನಗಳ ತವರಾಗಿದ್ದ ಭಾರತದಲ್ಲಿ ನಿಧಾನವಾಗಿ ಶಾಸ್ತ್ರಗಳು ಕುಂಠಿತಗೊಳ್ಳುತ್ತಾ ಭಾಷೆ, ಸಾಹಿತ್ಯ, ಕಾವ್ಯ, ನಾಟಕಗಳ ಭಾವಾವೇಶ, ರೋಚಕತೆಗಳು ಮೆರೆಯುತ್ತಾ ಸಾಗಿದವು. ನಂತರದ ಕಾಲಘಟ್ಟದಲ್ಲಿ ಶಾಸ್ತ್ರಗಳು ಕಾವ್ಯಕಥನಗಳ ಭಾಗವಾಗಿ ಅಭಿವ್ಯಕ್ತಗೊಳ್ಳು ತ್ತಿದ್ದವೇ ಹೊರತು ಶಾಸ್ತ್ರಗಳಾಗಿ ಬೋಧಿಸುವುದು ನಿಂತೇ ಹೋಯಿತು. ಹಾಗಾಗಿ ಆ ರೀತಿ ಅಭಿವ್ಯಕ್ತಗೊಂಡ ಶಾಸ್ತ್ರಗಳೆ ಭವಿಷ್ಯದ ಕಾಲಘಟ್ಟಗಳಲ್ಲಿ ಕಾಲ್ಪನಿಕವೆನಿಸಿ ಕಥೆಗಳಿಗೆ ಮಾತ್ರ ಪ್ರಾಮುಖ್ಯ ದೊರೆಯಿತು.

ಶಾಸ್ತ್ರಗಳನ್ನೋ, ನೀತಿಯನ್ನೋ, ಅಧ್ಯಾತ್ಮಿಕ ತತ್ವಗಳನ್ನೋ ಗೂಢಾರ್ಥಗಳನ್ನೋ ಹುದುಗಿಸಿಕೊಂಡಿದ್ದ ಕಾವ್ಯಗಳು ಕೇವಲ ಕಥಾತ್ಮಕಗಳಾಗಿ ಪರಿಗಣಿಸಲ್ಪಟ್ಟವು. ವಿದೇಶಿ ದಾಳಿಯ ಪಲ್ಲಟದ ಕಾಲದಲ್ಲುಂಟಾದ ಭಕ್ತಿಪಂಥದ ಚಳವಳಿಯಲ್ಲಿ ಭಕ್ತಿಯನ್ನು ಉಕ್ಕಿಸಲು ಮಹಾಕಾವ್ಯಗಳ ಮೇಲ್ಪಂಕ್ತಿಯನ್ನೇ ಪುನಃ ಬಳಸಲಾಯಿತು.

ವೇದ, ಉಪನಿಷತ್ತು, ಆಗಮಗಳ ಸಾರವನ್ನೇ ಸರಳ ರೂಪದ ಕವನ, ವಚನ, ಭಜನೆ, ಕೀರ್ತನೆ, ಗುರ್ಬಾಣಿ, ದೋಹಾ, ಕವ್ವಾಲಿ, ಜನಪದ, ಲಾವಣಿ ಮುಂತಾಗಿ ಎಲ್ಲಾ ಆಡುಭಾಷೆಗಳಲ್ಲಿ ರಚಿಸಲಾಯಿತು. ಅಂತೆಯೇ ಈ ಚಳವಳಿಯ ನಾಯಕರ ಕುರಿತಾದ ಅವತಾರಗಳು, ಪವಾಡಗಳು, ದೃಷ್ಟಾಂತಗಳನ್ನು ಸೃಜಿಸಿ ಭಕ್ತಿಯನ್ನು ಉಕ್ಕಿಸಲಾಯಿತು. ಇದಕ್ಕೆ ರೇಣುಕ, ರೇವಣಸಿದ್ಧ, ಶಂಕರ, ಪಂಡಿತಾರಾಧ್ಯ, ರಾಮಾನುಜ, ಬಸವಣ್ಣ ಮತ್ತು ಶರಣ ಸಂಕುಲ, ಜ್ಞಾನದೇವ, ತುಳಸಿದಾಸ, ಮೀರಾ, ಕಬೀರ, ಕನಕ, ಪುರಂದರ... ಹೀಗೆ ಯಾರೂ ಹೊರತಲ್ಲ.

ಈ ಎಲ್ಲಾ ವಾಸ್ತವ ವ್ಯಕ್ತಿಗಳು ವ್ಯಾಸ, ವಾಲ್ಮೀಕಿಯರಂತೆ ಪೌರಾಣಿಕ ಕಥಾಪಾತ್ರಗಳೂ ಆಗಿರುವರು. ಈ ಮಹನೀಯರು ಬೋಧಿಸಿದ ತತ್ವಗಳ ಆಧಾರವಾಗಿ ರಚಿಸಿದ ರೂಪ ಕೋಕ್ತಿಯ ಸಂಕಥನಗಳೇ ಪುರಾಣ ಪ್ರವಚನಗಳು. ಇದಕ್ಕೆ ಬಸವರಾಜದೇವರ ರಗಳೆ, ಬಸವ ಪುರಾಣಗಳೂ ಹೊರತಲ್ಲ!

ಇದೆಲ್ಲವನ್ನೂ ಹೇಳಿದ್ದು ಏಕೆಂದರೆ ಈಗ ಲಿಂಗಾಯತ ಪ್ರತ್ಯೇಕ ಧರ್ಮ ಕೂಗಿಗರ ನಿದ್ದೆ ಗೆಡಿಸಿರುವ ವೀಣಾ ಬನ್ನಂಜೆಯವರ ಭಾಷಣ! ವೀಣಾ ಬನ್ನಂಜೆಯವರ ಅಭಿಪ್ರಾಯ ಸರಿಯಿದೆ. ಆದರೆ ಅವರು ಉಲ್ಲೇಖಿಸಿದ ಜನಕನ ಆಸ್ಥಾನದ ಗೋಷ್ಠಿ ಸಹ ರಗಳೆ, ಪುರಾಣ, ಶೂನ್ಯ ಸಂಪಾದನೆಯಷ್ಟೇ ಕಾಲ್ಪನಿಕವಲ್ಲದೆ ಇತಿಹಾಸವಲ್ಲ. ಆದರೆ ಜನಕನ ಪುರಾಣ, ಶೂನ್ಯಸಂಪಾದನೆಗಿಂತ ಪುರಾತನ ಎಂಬುದಷ್ಟೇ ಸತ್ಯ!

***

ವೀಣಾ ಬನ್ನಂಜೆ ಅವರ ಅಭಿಪ್ರಾಯ ಮತ್ತು ಅನುಭವ ಮಂಟಪ ಇರಲಿಲ್ಲ ಎಂಬ ಅವರ ಹೇಳಿಕೆಯನ್ನು ವಿರೋಧಿಸುವ ಭರದಲ್ಲಿ ಪುರಾವೆಯಾಗಿ ಶರಣ ಜಾಮದಾರರು ಯಾವ ಹರಿಹರ, ಪಾಲ್ಕುರಿಕೆ ಸೋಮನಾಥರನ್ನು ಮೊನ್ನೆಯ ತನಕ ವೀರಶೈವ ಪದ ತುರುಕಿದ ಭ್ರಷ್ಟರು ಎಂದಿದ್ದರೋ ಈಗ ಆ ಭ್ರಷ್ಟರ ಪುರಾಣಗಳಿಗೇ ಜೋತು ಬಿದ್ದಿದ್ದಾರೆ.

ಇರಲಿ, ಇವೆರಡೂ ಆಕರಗಳು ಬಸವಣ್ಣನು ತನ್ನ ಸಹ ಶರಣರೊಂದಿಗೆ ‘ಗೀತಗೋಷ್ಠಿ’ ನಡೆಸುತ್ತಿದ್ದನೆಂದು ತಿಳಿಸುತ್ತವೆ. ಈ ಗೀತಗೋಷ್ಠಿಯು ಎಲ್ಲಾ ಭಕ್ತಿಪಂಥಗಳೂ ನಿತ್ಯಸಂಜೆ ಅಥವಾ ವಾರದ ಸತ್ಸಂಗಗಳನ್ನು ಆಚರಿಸುತ್ತಿದ್ದಂತೆಯೇ ಇದ್ದೀತೇ ಹೊರತು ಇಂದಿನ ಪ್ರಜಾಪ್ರಭುತ್ವದ ಸಂಸತ್ತಿನಂತೆ ಇದ್ದಿತು ಎಂಬುದಕ್ಕೆ ಭಾವುಕ ಭ್ರಾಮಕ ಕಲ್ಪನೆಯನ್ನು ಬಿಟ್ಟರೆ ಯಾವುದೇ ಐತಿಹಾಸಿಕ, ಮಾನವಿಕ ಅಂಶ ಕಂಡುಬಂದಿಲ್ಲ.

ಈ ಗೀತಗೋಷ್ಠಿಯೇ ಅನುಭವ ಮಂಟಪ ಎಂದರೂ ಅದರ ಹೂರಣ ಇತರೆ ಭಕ್ತಿಪಂಥಗಳ ಸತ್ಸಂಗದಂತೆಯೇ ಹೊರತು ಇನ್ಯಾವುದೂ ಆಗಿರಲು ಸಾಧ್ಯವಿಲ್ಲ. ಮೇಲಾಗಿ ಬಸವಣ್ಣನು ಸಂಗೀತಗಾರನೂ ಸಂಗೀತಪ್ರಿಯನೂ ಆಗಿದ್ದನೆಂದು ಈ ಪುರಾಣ/ರಗಳೆಗಳಲ್ಲದೆ ವಚನ ಗಳಲ್ಲಿಯೂ ಕಾಣಬರುತ್ತದೆ. ಹಾಗಾಗಿ ಇಲ್ಲಿನ ಗೀತಗೋಷ್ಠಿ ಗೀತಗೋಷ್ಠಿಯೇ ಹೊರತು ಇನ್ಯಾವ ಅನುಭವ ಯಾ ಅನುಭಾವ ಮಂಟಪ ಅಲ್ಲವೆನಿಸುತ್ತದೆ.

ಹಾಗಾಗಿ ಈ ಕುರಿತು ಕಪಟರಾಳ ವರ್ಸಸ್ ಉತ್ತಂಗಿ ಚೆನ್ನಪ್ಪನವರ ವಾದ ಅವರವರ ಭಾವಕ್ಕೆ ಭಕುತಿಗೆ ಸಲ್ಲುವಂತೆ ಗೀತಗೋಷ್ಠಿಯೇ ವಿಶ್ವದ ಪ್ರಪ್ರಥಮ ಸಂಸತ್ತು ಎನ್ನುವುದು ಸಹ. ದಿವಂಗತ ನಿಜಲಿಂಗಪ್ಪನವರು ಸಹ ಇದನ್ನು ‘ಕವಿ ಮನಸ್ಸಿನ ವರ್ಣನೆ’ ಎಂದೇ ಹೇಳಿದ್ದರು.

ಆದರೆ ಜಾಮದಾರರು ‘ಕಪಟರಾಳ ಬ್ರಾಹ್ಮಣ, ಉತ್ತಂಗಿ ಚೆನ್ನಪ್ಪ ಹುಟ್ಟು ಕ್ರಿಶ್ಚಿಯನ್, ಚೆನ್ನಪ್ಪನವರ ತಂದೆ ಕ್ರಿಶ್ಚಿಯನ್, ಅಜ್ಜ ಕ್ರಿಶ್ಚಿಯನ್, ಹಾಗಾಗಿ ಅವರ ಸಂಶೋಧನೆಯಲ್ಲಿ ಪೂರ್ವಗ್ರಹವಿರಲಿಲ್ಲ’ ಎಂದು ತಮ್ಮ ಜಾತಿ ಪೂರ್ವಗ್ರಹವನ್ನು ತೋರುತ್ತಾರೆ. ಅಲ್ಲಮನ ‘ಮನದ ಮುಂದಣ ಆಸೆಯೇ ಮಾಯೆ ಕಾಣಾ’ ಎಂಬಂತೆ ತಮ್ಮ ಮನದಲ್ಲಿ ಬೇರೂರಿರುವ ಬ್ರಾಹ್ಮಣ ದ್ವೇಷ ಮತ್ತು ಜಾತೀಯತೆಯ ಪೂರ್ವಗ್ರಹವನ್ನು ಸದಾ ಮೆರೆಸುವ ಜಾಮದಾ ರರು ‘ಇವನಾರವ ಇವನಾರವ ಎಂದೆಣಿಸದಿರಯ್ಯ’ ಎಂಬ ಬಸವಣ್ಣನ ಆಶಯದಂತೆ ಬದುಕುವ ಅರ್ಹ ಲಿಂಗಾಯತರೇ? ಎಂಬಲ್ಲಿಗೆ ಅವರ ತಾತ್ವಿಕತೆ ಲಿಂಗಾಹತವಾಗುತ್ತದೆ.

(ಲೇಖಕರು ಶಿಕಾಗೋ ನಿವಾಸಿ ಮತ್ತು ಸಾಹಿತಿ)