Ravi Hunj Column: ಜಾತಿಪೀಠಿಗಳು ನಾಟಕ ಆಡಿಸುವುದರಲ್ಲಿ ಮಗ್ನರಾಗಿದ್ದಾರೆ !
ವೀರಶೈವರಲ್ಲಿ ಎಲ್ಲರೂ ಇಷ್ಟಲಿಂಗವನ್ನು ಧರಿಸುವುದು ಮತ್ತು ಪ್ರತಿಯೊಬ್ಬನೂ/ಳೂ ಶಿವೈಕ್ಯ/ಲಿಂಗೈ ಕ್ಯರಾಗಿ ಶಿವನೇ ಆಗುತ್ತಾರೆ ಎಂಬ ನಂಬಿಕೆ ಇರುವುದು. ಆದ್ದರಿಂದಲೇ ಈ ಪಿನೀಲ್ ಗ್ರಂಥಿಯನ್ನು ಅಧ್ಯಾ ತ್ಮಿಗಳು ಶಿವನ ಮೂರನೇ ಕಣ್ಣು ಎನ್ನುತ್ತಾರೆ. ಈ ಆತ್ಮಜಾಗೃತಿಯ ತ್ರಾಟಕ ಮಾರ್ಗದಲ್ಲಿ ಮೊದಲಿಗೆ ಸಾಧಕನಿಗೆ ನಿರಾಳ ಭಾವವು ಮೂಡಲಾರಂಭಿಸಿ ನಂತರ ಆತನ ಎಲ್ಲಾ ನೋವಿನ ಭಾವಗಳು ಮಾಯ ವಾಗುತ್ತವೆ.

ಅಂಕಣಕಾರ ರವಿ ಹಂಜ್

ಬಸವ ಮಂಟಪ
ರವಿ ಹಂಜ್
(ಭಾಗ-2)
ಇನ್ನು, ಕ್ರಿಸ್ತಪೂರ್ವ ೨ನೇ ಶತಮಾನದಲ್ಲಿ ಪತಂಜಲಿ ಮಹರ್ಷಿಗಳು ರಚಿಸಿದ ಯೋಗಸೂತ್ರವು ಭಾರತದಲ್ಲಿ ಎಂದಿನಿಂದಲೂ ಪಾಲನೆಯಲ್ಲಿದೆ. ಯೋಗದ ಅಂಗವಾದ ತ್ರಾಟಕ ಯೋಗಸೂತ್ರದ ಮೂಲವೇ ವೀರಶೈವದ ಇಷ್ಟಲಿಂಗ ಸಾಧನೆಯಿಂದ ಪ್ರೇರಿತವಾಗಿದೆ. ಲಿಂಗಗಳನ್ನು ಕೊರಳು, ತಲೆ, ತೋಳುಗಳಲ್ಲಿ ಕಟ್ಟಿಕೊಂಡು ಸಂಚರಿಸುತ್ತಿದ್ದ ವೀರಶೈವರು ನಿತ್ಯ ಹಸ್ತಪೀಠದಲ್ಲಿಟ್ಟುಕೊಂಡು ಏಕಾಗ್ರಚಿತ್ತರಾಗಿ ಲಿಂಗದಲ್ಲಿ ನೋಟವನ್ನು ಕೇಂದ್ರೀಕರಿಸಿ ಆತ್ಮವನ್ನು ಜಾಗೃತಿಗೊಳಿಸಿ ಕೊಳ್ಳು ತ್ತಿದ್ದರು. ‘ಶಿವನ ಮೂರನೇ ಕಣ್ಣು’ ಎಂಬ ಸಂಕೇತಾರ್ಥದ ಮತ್ತು ಆತ್ಮದ ವಾಸಸ್ಥಾನ ಎನ್ನುವ ಪಿನೀಲ್ ( Pineal gland) ಗ್ರಂಥಿಯ ಜಾಗೃತಿ ಇದರಿಂದ ಉಂಟಾಗುತ್ತದೆ ಎಂದೇ ಯೋಗಶಾಸ್ತ್ರವು ಹೇಳುತ್ತದೆ. ಅದನ್ನೇ ವೈeನಿಕ ಯುಗದಲ್ಲಿಯೂ ಕೆಲವು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ. ಶಿವನ ಮೂರನೇ ಕಣ್ಣು ಕೇವಲ ಶಿವನಿಗಲ್ಲದೆ ಪ್ರತಿಯೊಬ್ಬ ಮಾನವನಿಗೂ ಇರುತ್ತದೆ. ಇದರಲ್ಲಿ ಹೆಣ್ಣು ಗಂಡೆಂಬ ಭೇದವಿಲ್ಲ.
ಹಾಗಾಗಿಯೇ ವೀರಶೈವರಲ್ಲಿ ಎಲ್ಲರೂ ಇಷ್ಟಲಿಂಗವನ್ನು ಧರಿಸುವುದು ಮತ್ತು ಪ್ರತಿಯೊಬ್ಬನೂ/ಳೂ ಶಿವೈಕ್ಯ/ಲಿಂಗೈಕ್ಯರಾಗಿ ಶಿವನೇ ಆಗುತ್ತಾರೆ ಎಂಬ ನಂಬಿಕೆ ಇರುವುದು. ಆದ್ದರಿಂದಲೇ ಈ ಪಿನೀಲ್ ಗ್ರಂಥಿಯನ್ನು ಅಧ್ಯಾತ್ಮಿಗಳು ಶಿವನ ಮೂರನೇ ಕಣ್ಣು ಎನ್ನುತ್ತಾರೆ. ಈ ಆತ್ಮಜಾಗೃತಿಯ ತ್ರಾಟಕ ಮಾರ್ಗದಲ್ಲಿ ಮೊದಲಿಗೆ ಸಾಧಕನಿಗೆ ನಿರಾಳ ಭಾವವು ಮೂಡಲಾರಂಭಿಸಿ ನಂತರ ಆತನ ಎಲ್ಲಾ ನೋವಿನ ಭಾವಗಳು ಮಾಯವಾಗುತ್ತವೆ.
ಇದನ್ನೂ ಓದಿ: Ravi Hunj Column: ಹಿಂದೂ ಪ್ರಭೇದಗಳ ಒಗ್ಗೂಡಿಸುವಿಕೆ ಒಡೆಯುವಿಕೆ !
ತದನಂತರ ಆತನ ಆತ್ಮವಿಶ್ವಾಸ ಹೆಚ್ಚುತ್ತಾ ದೇಹವು ಹಗುರಾಗಿ ಗಾಳಿಯಲ್ಲಿ ತೇಲಿದ ಅನುಭವ ವಾಗುತ್ತದೆ. ಹೆಚ್ಚು ಹೆಚ್ಚು ಸಾಧನೆ ಅಂದರೆ ಇಷ್ಟಲಿಂಗ ಧ್ಯಾನದಲ್ಲಿ ಲೀನವಾದಂತೆ ಹೆಚ್ಚಿನ ತ್ರಾಟಕ ಯೋಗದ ಸಾಧನೆಯಾಗಿ ಸಾಧಕನ ಮೂರನೇ ಕಣ್ಣು ಜಾಗೃತವಾಗುತ್ತದೆ. ಈ ಸಾಧನೆಯ ಆತ್ಮಜಾಗೃತಿಯ ಅರುಹನ್ನು ಮೂಡಿಸುವ ಕುರುಹಿನ ಸಾಧನವೇ ಇಷ್ಟಲಿಂಗವಾಗಿದೆ.
ವೀರಶೈವೇತರ ಸಾಧಕರು ಇಷ್ಟಲಿಂಗದ ಬದಲು ದೀಪವನ್ನು ಹೊತ್ತಿಸಿ ಅದರ ಜ್ವಾಲೆಯಲ್ಲಿ ನೋಟ ವನ್ನು ಲೀನವಾಗಿಸಿ ಧ್ಯಾನಿಸುತ್ತಾರೆ ಅಥವಾ ಯಾವುದೇ ಸಾಧನವಿಲ್ಲದೆ ಭ್ರೂ ಮಧ್ಯೆ ದೃಷ್ಟಿಯನ್ನು ಕೇಂದ್ರೀಕರಿಸಿಕೊಂಡು ಧ್ಯಾನಾಸಕ್ತರಾಗುತ್ತಾರೆ. ವೈಜ್ಞಾನಿಕವಾಗಿ ಸಹ ಇದನ್ನು ಸ್ವಸಮ್ಮೋಹ ಕ್ಕೊಳಗಾಗಿ ಪಿನೀಲ್ ಗ್ರಂಥಿಯ ಜಾಗೃತಿಗೊಳಿಸುವಿಕೆ ಎಂದೇ ಕರೆಯುತ್ತಾರೆ. ಇಂದಿನ ಆಧುನಿಕ ಧ್ಯಾನವಿಧಾನಗಳ ಮೂಲವು ಇಷ್ಟಲಿಂಗ ಸ್ವರೂಪದ ಶಿವಯೋಗವೇ ಆಗಿದ್ದು ಈ ನವವಿಧಾನಗಳು ಇಷ್ಟಲಿಂಗ ಧ್ಯಾನದ ವಿವಿಧ ರೂಪಗಳಾಗಿವೆಯಷ್ಟೇ. ಈ ಕುರಿತು ಹೆಚ್ಚಿನ ಮಾಹಿತಿಗೆ ಆಸಕ್ತರು ಸ್ವಾಮಿ ವಿವೇಕಾನಂದರ ಕೃತಿ, ‘ರಾಜಯೋಗ’ವನ್ನು ಪರಿಶೀಲಿಸಬಹುದು.
ಈ ವೈಜ್ಞಾನಿಕ ಯೋಗಸೂತ್ರದ ವಿಧವನ್ನೇ ಚಂದ್ರಜ್ಞಾನಾಗಮವು ಲಿಂಗತ್ರಯದ ಆರಾಧನೆ ಯನ್ನು ನಿರೂಪಿಸುತ್ತ, “ಜಾಗ್ರತ ಸ್ಥಿತಿಯಲ್ಲಿ ಇಷ್ಟಲಿಂಗದ ಆರಾಧನೆ, ತುರೀಯಾವಸ್ಥೆಯಲ್ಲಿ ಪ್ರಾಣ ಲಿಂಗದ ಆರಾಧನೆ, ಜತೆಗೆ ತುರೀಯಾತೀತ ಸ್ಥಿತಿಯಲ್ಲಿ ಭಾವಲಿಂಗವನ್ನು ಆರಾಧಿಸಬೇಕೆಂದು ತಿಳಿಸುತ್ತ ಇಷ್ಟಲಿಂಗದಲ್ಲಿ ಪೂಜೆ, ಪ್ರಾಣಲಿಂಗದಲ್ಲಿ ಧ್ಯಾನ, ಭಾವಲಿಂಗದಲ್ಲಿ ಅನುಸಂಧಾನ ಮಾಡುವುದರಿಂದ ಸಾಧಕ ಬೆಳೆಯುತ್ತಾ ಪರಿಶುದ್ಧ ಪರಿಪೂರ್ಣತೆಯತ್ತ ಸಾಗುತ್ತಾನೆ" ಎಂದು ಲಿಂಗತ್ರಯದ ಆರಾಧನೆಯ ಬಗೆಯನ್ನು ಹೇಳಿದೆ.
ಡಾ.ಪರಮೇಶ್ವರಿ ಹೀರೆಮಠ ಅವರು ಆಗಮಗಳ ಆಧಾರವಾಗಿ ತಮ್ಮ ಸಂಶೋಧನೆಯಲ್ಲಿ ಹೀಗೆ ನಿರೂಪಿಸಿದ್ದಾರೆ: ಮಹಾಲಿಂಗವೇ ಗುರುವಿನ ಅನುಗ್ರಹದಿಂದ ಕರಸ್ಥಲಕ್ಕೆ ಬಂದು ಇಷ್ಟಲಿಂಗ ವಾಗಿದೆ, ಪ್ರಾಣದಲ್ಲಿ ಪ್ರಾಣಲಿಂಗವೆನಿಸಿದೆ, ಭಾವದಲ್ಲಿ ಭಾವಲಿಂಗವೆನಿಸಿದೆ. ಶ್ರೀಗುರುವು ಜೀವನಿಗೆ ದೀಕ್ಷೆ ನೀಡುವಾಗ ಅವನಲ್ಲಿ ಕಂಡುಬರುವ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಭೇದಗಳನ್ನು ವಿಶ್ಲೇಷಿಸಿ ಸ್ಥೂಲ, ಸೂಕ್ಷ್ಮ, ಕಾರಣ ಶರೀರಗಳನ್ನು ಕಲ್ಪಿಸಿ ಅವುಗಳಲ್ಲಿ ಕ್ರಮವಾಗಿ ಈ ಲಿಂಗಗಳನ್ನು ಸ್ಥಾಪಿಸುವನು.
ಕಾರಣ ಇಷ್ಟಲಿಂಗದಲ್ಲಿ ದೃಷ್ಟಿಯೋಗ, ಪ್ರಾಣಲಿಂಗದಲ್ಲಿ ಮನೋಯೋಗ ಮತ್ತು ಭಾವಲಿಂಗ ದಲ್ಲಿ ಭಾವಯೋಗವನ್ನು ಏಕಕಾಲದಲ್ಲಿ ಸಾಧಿಸಿದ ಸಾಧಕರು ಮುಕ್ತರು. ಈ ಮೂರರ ಸಮನ್ವ ಯವೇ ಶಿವಯೋಗವೆಂಬುದು ಶೈವಾಗಮದ ಸಿದ್ಧಾಂತ. ಅದೇ ಶಿವಾರಾಧನೆಯ ಕ್ರಮ ಎನ್ನಲಾಗಿದೆ. ಇಷ್ಟಲಿಂಗವನ್ನು ಪೂಜೆಗೈಯುತ್ತ ಭಾವಲಿಂಗ ಮತ್ತು ಪ್ರಾಣಲಿಂಗವನ್ನು ಅರ್ಚಿಸಬೇಕು.
ಇದು ದ್ವೈತದಿಂದ ಅದ್ವೈತದೆಡೆಗೆ ಸಾಗುವ ಸಾಧನಾ ಪಥವಾಗಿದೆ. ಕಾರಣ ಮೂರು ವಿಧವಾದ ಲಿಂಗಗಳನ್ನು ಏಕಸೂತ್ರಾನುಸಂಧಾನದಿಂದ ಪೂಜಿಸಬೇಕೆಂದು ಆಗಮಗಳು ತಿಳಿಸಿವೆ. ಇದನ್ನೇ ಬಸವಣ್ಣನು, “ಇಷ್ಟಲಿಂಗವೊಂದು ಪ್ರಾಣಲಿಂಗವೊಂದು, ಭಾವಲಿಂಗವೊಂದೆಂಬ ಮಿಟ್ಟಿಯ ಭಂಡರ, ಅವರ ಮಾತ ಕೇಳಲಾಗದು. ಅಂಗಳದೊಳಗೊಬ್ಬಗಂಡ, ಮನೆಯೊಳಗೊಬ್ಬ ಗಂಡ, ಹಿತ್ತಿಲೊಳಗೊಬ್ಬ ಗಂಡನೆಂಬ ಸತಿಯರ ಲೋಕದ ಮಾನವರು ಮೆಟ್ಟಿ ಮೂಗಕೊಯ್ಯದೆ ಮಾಣ್ಬರೆ, ಅಯ್ಯಾ? ಲಿಂಗತ್ರಯವೆಂದು ತೋರಿದವರಾರೊ? ‘ಲಿಂಗಮೇಕಂ ಪರಂ ನಾಸ್ತಿ’ ಎಂದು ಸದ್ಗುರುಸ್ವಾಮಿ ಅರುಹಿದನಾಗಿ. ಷಟಿಂಶತ್ತತ್ವಕ್ಕೆ ಆಲಯಮಪ್ಪಂತಹ ಮಹಾಘನಲಿಂಗದ ಬೆಳಗು ಕರಸ್ಥಲದಲ್ಲಿ, ಮನಸ್ಥಲದಲ್ಲಿ, ಭಾವಸ್ಥಲದಲ್ಲಿ ವೇದ್ಯವಾದ ಬಳಿಕ ಸರ್ವಾಂಗಲಿಂಗ, ಕೂಡಲ ಸಂಗಯ್ಯಾ ನಿಮ್ಮ ಶರಣಂಗೆ" ಎಂದಿದ್ದಾನೆ.
ಹೀಗೆ ಇಷ್ಟಲಿಂಗವನ್ನು ಪೂಜಿಸುತ್ತಾ, ಪ್ರಾಣಲಿಂಗವನ್ನು ಧ್ಯಾನಿಸುತ್ತಾ ಮತ್ತು ಭಾವಲಿಂಗವನ್ನು ಭಾವಿಸುತ್ತಾ ಲಿಂಗತ್ರಯಗಳನ್ನು ಏಕಸೂತ್ರಾನುಸಂಧಾನದಿಂದ ಪೂಜಿಸುವುದರಿಂದ ಭಕ್ತನು ತನ್ನ ಸಾವಿನ ಕಟ್ಟುಗಳನ್ನು ಕತ್ತರಿಸಿಕೊಳ್ಳುತ್ತಾನೆ ಎಂದು ಲಿಂಗತ್ರಯ ಆರಾಧನೆಯ ಬಗೆಯನ್ನು ವಚನ ಗಳಲ್ಲಿ ವಿವರಿಸಲಾಗಿದೆ.
ಪೂಜಯನ್ನಿಷ್ಟಲಿಂಗಂ ತು ನಿಧ್ಯಾಯನ್ ಪ್ರಾಣಲಿಂಗಕಮ|
ಭಾವಯನ್ ಭಾವಲಿಂಗಂ ವೈ ಮೃತ್ಯುಪಾಶಾಂಶ್ಛಿನತ್ತಿ ಸಃ||
ಸರ್ವದೇವಮಯಂ ಲಿಂಗಂ ತಸ್ಮಿನ್ ಸಾಕ್ಷಾಚ್ಛಿವಃ ಸ್ವಯಮ|
ಅನುಗ್ರಹಾಯ ವಸತಿ ತಸ್ಮಾಲ್ಲಿಂಗಂ ಪ್ರಪೂಜಯೇತ್||
ಪೃಥಿವ್ಯಾಂ ಯಾನಿ ತೀರ್ಥಾನಿ ಪುಣ್ಯಾನ್ಯಾಯತನಾನಿ ಚ|
ಲೀಯಂತೇ ಲಿಂಗಮೂಲೇ ತು ತಸ್ಮಾಲ್ಲಿಂಗಂ ಪ್ರಪೂಜಯೇತ್||- ಅಂದರೆ, ಇಷ್ಟಲಿಂಗವನ್ನು ಪೂಜಿಸಿ ಅದರಲ್ಲಿ ದೃಷ್ಟಿಯೋಗವನ್ನು ಸಾಧಿಸಿ, ಪ್ರಾಣಲಿಂಗದಲ್ಲಿ ಮನಸ್ಸನ್ನು ನೆಲೆಗೊಳಿಸಿ, ನಿರಾಕಾರ, ನಿಷ್ಕಲ-ಭಾವಲಿಂಗದ ಭಾವನೆಯನ್ನು ಬಲಿಸಿಕೊಂಡು ಮಹಾಲಿಂಗದಲ್ಲಿ ಒಂದಾಗ ಬೇಕು.
ಹೀಗೆ ಆತ್ಮಸಾಕ್ಷಾತ್ಕಾರಕ್ಕೆ ಅತ್ಮಸಿದ್ಧಿಗಾಗಿ ಲಿಂಗಪೂಜೆಯು ಸಾಧನವಾಗಿದ್ದು ವಿಶ್ವರೂಪದ ಲಿಂಗ ವನ್ನು ಪೂಜಿಸುವುದರಿಂದ ವಿಶ್ವಾತ್ಮನಾದ ಪರಶಿವನಲ್ಲಿ ಬೆರೆತು ಬೇರಾಗದಂಥ ಕೌಶಲ ಸಿದ್ಧಿಸು ತ್ತದೆ ಎಂದು ಲಿಂಗಾರಾಧನೆಯ ಮಹಿಮೆಯನ್ನು ಅರುಹಿ, ಲಿಂಗವು ಮಾತಾಪಿತೃ ಸ್ವರೂಪ ವಾಗಿದ್ದು ಬಿಂದುನಾದಾತ್ಮಕವಾಗಿದೆ ಎಂದು ಇಷ್ಟಲಿಂಗದ ಸ್ವರೂಪವನ್ನು ವಿವರಿಸುತ್ತವೆ (ಆಕರ ಗ್ರಂಥ: ‘ಶಿವಾಗಮಗಳು ಮತ್ತು ವಚನ ಸಾಹಿತ್ಯ’, ಡಾ. ಪರಮೇಶ್ವರಿ ಹಿರೇಮಠ ಅವರ ಪಿಎಚ್‌ಡಿ ಸಂಶೋಧನಾ ಗ್ರಂಥ).
ಒಟ್ಟಾರೆ, ಯೋಗಸೂತ್ರ ಮತ್ತು ಆಗಮಶಾಸಗಳ ಸಾರವೆರಡೂ ಸಾಮಾನ್ಯನು ಶಿವನಾಗುವ ಮುಕ್ತಿ ಮಾರ್ಗದ ಪಥವನ್ನೇ ತೋರಿವೆ. ಇನ್ನು ಈ ಸನಾತನ ಸಾಧಕರೆಲ್ಲರಿಗೂ ಸಿಕ್ಕ ಮೋಕ್ಷ, ಸಾಕ್ಷಾತ್ಕಾರ, ನಿರ್ವಾಣಗಳು ಪ್ರತಿಯೊಬ್ಬ ಸಾಧಕನಿಗೂ ಸಾಧ್ಯ. ಆ ಸಾಧ್ಯತೆಯ ಮಾರ್ಗವೇ ಯೋಗ, ಶಿವಯೋಗ! ಹಾಗಾಗಿಯೇ ವೀರಶೈವವು ಪ್ರತಿಯೊಬ್ಬನೂ ಸಾಧನೆಯ ಮೂಲಕ ಶಿವನಲ್ಲಿ ಲೀನವಾಗಿ ಶಿವನೇ ಆಗುತ್ತಾನೆ ಎಂದಿರುವುದು. ಹಾಗಾಗಿಯೇ ಮಹಾಪುರುಷರನ್ನು ಭಾರತೀಯರು ದೇವರೆಂದೇ ಪೂಜಿಸುವುದು.
ಹೀಗೆ ಸಮಗ್ರವಾಗಿ ಭಾರತ ಇತಿಹಾಸದ ಮೂಲಕಾಲದಿಂದಲೂ ಇರುವ ವೀರಶೈವ ಮತ್ತು ಇಷ್ಟ ಲಿಂಗ ಪೂಜಾ ವಿಧಾನವನ್ನು ಹೆಚ್ಚು ಪ್ರಚಾರ ಮಾಡುವಲ್ಲಿ ವೀರಶೈವ ಜಂಗಮನೇ ಆಗಿದ್ದ ಬಸವ ಣ್ಣನ ಸಾಧನೆ ಅಪಾರವಿದೆಯೇ ಹೊರತು ಆತನೇ ಇಷ್ಟಲಿಂಗಜನಕನಲ್ಲ. ಬಸವಣ್ಣನು ಅಪ್ರತಿಮ ಧರ್ಮಾನುಯಾಯಿಯಾಗಿ ವೀರಶೈವ ಮತವನ್ನು ಎಡೆ ಪಸರಿಸಲು ತನ್ನ ಜೀವನವನ್ನೇ ಮುಡಿ ಪಾಗಿಟ್ಟಿದ್ದನು.
ಹಾಗಾಗಿಯೇ ‘ಭಕ್ತಿ ಭಂಡಾರಿ’ ಎನಿಸಿದ್ದನು. ಆದರೆ ಆತ ಕೇವಲ ಆಧ್ಯಾತ್ಮಿಕ ಪುರುಷನಷ್ಟೇ ಆಗಿರ ಲಿಲ್ಲ. ಹಾಗಾಗಿ ರಾಜಕೀಯ ವಿಪ್ಲವದಲ್ಲಿ ಸಿಲುಕಿ ಸಾಮಾಜಿಕ ಕ್ರಾಂತಿಗೆ ಎಡೆಯಾಗಿ ಬೇರೆಯದೇ ಆದ ಅಂತ್ಯವನ್ನು ಕಂಡನು. ಆತನ ಸಾಮಾಜಿಕ ಮತ್ತು ರಾಜಕೀಯ ನಡೆಗೂ ಧರ್ಮಕ್ಕೂ ತಾಳೆ ಹಾಕುವುದು ತಪ್ಪು. ಭಕ್ತಿಪಂಥದ ಚಳವಳಿಗಳಂತೆಯೇ ಆತನ ಚಳವಳಿಗೆ ಬೇರೆಯದೇ ಆಯಾಮ ವಿದ್ದರೂ ಇಂಥ ತಾಳೆಹಾಕುವ ಕಾರಣದಿಂದಲೇ ಆತನ ಬಗ್ಗೆ ಅನೇಕ ಸಂಕಥನಗಳು ಸೃಷ್ಟಿ ಯಾಗಿವೆ.
ಹಾಗಾಗಿಯೇ ಎಲ್ಲಾ ಶಾಸನಗಳ ಮೂಲವಾಗಿ ಜಂಗಮನೇ ಎಂದಿರುವ ಬಸವಣ್ಣನನ್ನು ಕಂತೆ ಪುರಾಣಗಳ ಮೂಲಕ ಬ್ರಾಹ್ಮಣನನ್ನಾಗಿಸಿ ವೀರಶೈವ ಮತಸ್ಥಾಪಕನೆನ್ನಲಾಗಿದೆ. ಅದೇ ರೀತಿ ಇಷ್ಟಲಿಂಗಜನಕನನ್ನಾಗಿ ಕಂತೆ ಕಟ್ಟಲಾಗಿದೆ. ಸಮಗ್ರವನ್ನು ಅರಿತು ವಿಶ್ಲೇಷಿಸಬೇಕಾದ ವಿನೂತನಿ ಬುದ್ಧಿಜೀವಿಗಳು ಸಂಕ್ಷಿಪ್ತವನ್ನು ಗ್ರಹಿಸಿ ಎಲ್ಲಾ ಬಲ್ಲೆ ಎಂಬಂತೆ ತಮ್ಮ ಮೂಗಿನ ನೇರಕ್ಕೆ ಸನಾ ತನವನ್ನು ಅಲ್ಲಗಳೆದಿದ್ದಾರೆ.
ಆದರೆ ತಮ್ಮ ವಿನೂತನ ಸಿದ್ಧಾಂತ ಹೇರಲು ಸನಾತನಿ ಬುದ್ಧ, ಸನಾತನಿ ಮಹಾವೀರ, ಸನಾತನಿ ಬಸವರನ್ನು ಕತ್ತಿ ಗುರಾಣಿಯಾಗಿ ಹಿಡಿದುಕೊಂಡಿದ್ದಾರೆ. ಬುದ್ಧನಿಗೆ ಸಿಕ್ಕ ಮೋಕ್ಷ, ಮಹಾವೀರನಿಗೆ ಪ್ರಾಪ್ತವಾದ ಸಾಕ್ಷಾತ್ಕಾರವು ಈ ಆಧುನಿಕ ಕಾಲದ ಜನರಲ್ಲಿ ಮೂಡಲು ಸಾಧ್ಯವೇ ಇಲ್ಲವೆಂದು ನಿರ್ಧರಿಸಿ ಆ ಮಹಾತ್ಮರನ್ನು ಮತಸ್ಥಾಪಕರನ್ನಾಗಿ ಮಾಡಿ ಅವರ ಬೋಧನೆಗಳನ್ನು ಮತಗಳೆಂದು ಕರೆದಿದ್ದಾರೆ.
ಅದೇ ನಿಟ್ಟಿನಲ್ಲಿ ಬಸವಣ್ಣನನ್ನು ಈಗ ಮತಸ್ಥಾಪಕನನ್ನಾಗಿ ಸ್ಥಾಪಿಸಲು ತೊಡಗಿದ್ದಾರೆ. ಈ ನಿಟ್ಟಿನಲ್ಲಿ ಇಂದು ಕರ್ನಾಟಕ ಸರಕಾರ ‘ಬಸವಣ್ಣ ಇಷ್ಟಲಿಂಗ ಜನಕ’ ಎಂಬ ಪಠ್ಯವನ್ನು ರೂಪಿ ಸಿದೆ. ಇಂಥ ಸುಳ್ಳನ್ನು ಮಕ್ಕಳ ಮೇಲೆ ಹೇರಿ brainwash ಮಾಡುವ ತಂತ್ರ ಕಮ್ಯುನಿಸ್ಟ್ ಪ್ರಣೀತ ರಾಷ್ಟ್ರಗಳಲ್ಲಿ ಸಾಕಷ್ಟು ನಡೆದಿದೆ ಎಂದು ಆಧುನಿಕ ಇತಿಹಾಸ ಬಲ್ಲದು. ಜಾಗತಿಕ ಮಾಹಿತಿ ತಂತ್ರ ಜ್ಞಾನದ ಇಂದಿನ ಯುಗಮಾನದಲ್ಲಿ ಸರಕಾರ ಸುಳ್ಳು ಧಾರ್ಮಿಕ ಸಂಕಥನವನ್ನು ಹೇರುವುದು ಅಪಹಾಸ್ಯ.
ಇದೇ ಮಕ್ಕಳು ಮುಂದೆ ಸತ್ಯವನ್ನು ಅರಿತರೆ ಅವರ ಮನಸ್ಸಿನಲ್ಲಿ ದೇಶ, ಸರಕಾರ, ಶಿಕ್ಷಣ ವ್ಯವಸ್ಥೆ ಯಲ್ಲದೆ ತಾವು ಓದಿ ಗಳಿಸಿದ ವಿದ್ಯಾರ್ಹತೆ ಬಗ್ಗೆ ಕೂಡ ಆಪನಂಬಿಕೆ ಮೂಡಿ ಖಿನ್ನತೆಗೆ ಒಳಗಾಗು ವುದು ಸತ್ಯ. ಏಕೆಂದರೆ ಜಗತ್ತಿನಲ್ಲಿ ಗಟ್ಟಿಯಾಗಿ ನಿಲ್ಲಬಲ್ಲ ಶಿಕ್ಷಣ ವ್ಯವಸ್ಥೆ, ಮಾನವ ಸಂಪನ್ಮೂಲ ಅವಶ್ಯ.
***
ಇನ್ನು ಷಟ್‌ಸ್ಥಲ ವಚನಗಳ ಹೊರತಾಗಿ ಉಳಿದ ವಚನಗಳು ಅಂದಿನ ಸಾಂದರ್ಭಿಕ ಸಾಮಾಜಿಕ ಸಂವಾದದ ಮಾತುಗಳಷ್ಟೇ. ಅವುಗಳನ್ನು ಧಾರ್ಮಿಕ, ಆಧ್ಯಾತ್ಮಿಕ ಗ್ರಂಥಗಳೆನ್ನುವುದು ತಪ್ಪು. ಅಲ್ಲದೆ ವಚನಕಾರರ ಅಂಕಿತಗಳು ವಿಶೇಷವಾಗಿವೆ. ಅಕ್ಕಮಹಾದೇವಿಯ ಅಂಕಿತ ಚೆನ್ನಮಲ್ಲಿ ಕಾರ್ಜುನ (ಶ್ರೀಶೈಲ). ಉರಿಲಿಂಗಪೆದ್ದಿ ಮತ್ತು ತುರುಗಾಹಿ ರಾಮಣ್ಣರ ಅಂಕಿತ ವಿಶ್ವೇಶ್ವರ(ಕಾಶಿ). ತೋಂಟದ ಸಿದ್ಧಲಿಂಗ ಸ್ವಾಮಿಗಳ ಅಂಕಿತ ಸಿದ್ಧೇಶ್ವರ (ಉಜ್ಜಯಿನಿ).
ಅಕ್ಕ ಅಲ್ಲಮರ ಬಳ್ಳಿಗಾವಿ ದಕ್ಷಿಣ ಕೇದಾರ ಎಂದೇ ಖ್ಯಾತಿಯಾಗಿತ್ತು, ಮತ್ತಿಲ್ಲಿ ಕೇದಾರೇಶ್ವರ ದೇವ ಸ್ಥಾನವಿದ್ದು ಅದು ಕಾಳಾಮುಖ ಮಠವನ್ನೂ ಹೊಂದಿತ್ತು. ಇನ್ನು ಚೆನ್ನಬಸವ ಪುರಾಣದಲ್ಲಿ ಬಾಳೆ ಹೊನ್ನೂರು ಕುರಿತಾಗಿ ವೀರೇಶ ಎಂದಿರುವುದು ಬಾಳೆಹೊನ್ನೂರು ಪೀಠದ ವೀರ ಪರಂಪ ರೆಯ ಸಂಕೇತವೇ ಆಗಿದೆ. ಹೀಗೆ ಶರಣರೆಲ್ಲ ಪಂಚಪೀಠದ ಮೂಲಲಿಂಗಗಳನ್ನೇ ಆರಾಧಿಸಿದ್ದಾರೆ ಎನ್ನಬ ಹುದು. ಆದರೂ ಇದು ಭಿನ್ನಮತೀಯ ನವಲಿಂಗಿ ಸಂಶೋಧಕರಿಗೆ ಅರ್ಥವಾಗದು. ಅರ್ಥ ವಾದರೂ ಆಗದಂತೆ ನಟಿಸುತ್ತಾರೆ. ಹಾಗಾಗಿಯೇ ಇವರ ಸಂಗದಲ್ಲಿರುವ ಕೆಲವು ಜಾತಿಪೀಠಿಗಳು ನಾಟಕ ಆಡಿಸುವುದರಲ್ಲಿ ಅತ್ಯಂತ ಮಗ್ನರಾಗಿದ್ದಾರೆ ಎನಿಸುತ್ತದೆ.
(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)