Yagati Raghu Naadig Column: ಸಮಯಾಸಮಯ ಉಂಟೇ ಚಿತ್ರವತ್ಸಲ ನಿನಗೆ...?!
ತಾವು ನಿರ್ದೇಶಿಸ ಹೊರಟಿರುವ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ, ಅದಕ್ಕೊಪ್ಪುವ ಪಾತ್ರಧಾರಿಗಳು ಮತ್ತು ತಾಂತ್ರಿಕ ವರ್ಗ, ಮಾಧುರ್ಯಭರಿತ ಗೀತೆಗಳು, ಚಿತ್ರೀಕರಣ ದ ವೇಳೆ ಯಾವುದೇ ತೊಡಕಾಗ ದಂತೆ ಕೈಹಿಡಿ ಯುವ ರಂಗಸಜ್ಜಿಕೆಗಳು ಮತ್ತು ಪರಿಕರಗಳು ಇವೆಲ್ಲವನ್ನೂ ಸಮರ್ಥವಾಗಿ ಸಜ್ಜುಗೊಳಿಸಿ ಕೊಂಡೇ ಚಿತ್ರೀಕರಣಕ್ಕೆ ಮುಂದಾಗುತ್ತಿದ್ದುದು ಪುಟ್ಟಣ್ಣ ನವರ ವೈಶಿಷ್ಟ್ಯ
![ಸಮಯಾಸಮಯ ಉಂಟೇ ಚಿತ್ರವತ್ಸಲ ನಿನಗೆ...?!](https://cdn-vishwavani-prod.hindverse.com/media/original_images/Yagati_Raghu_Naadig_Column_090225.jpg)
ಅಂಕಣಕಾರ ಯಗಟಿ ರಘು ನಾಡಿಗ್
![Profile](https://vishwavani.news/static/img/user.png)
ರಸದೌತಣ
ಯಗಟಿ ರಘು ನಾಡಿಗ್
naadigru@gmail.com
ಮನಮಿಡಿಯುವ ಕಥೆ, ಕಣ್ಮನ ತಣಿಸುವ ದೃಶ್ಯಗಳು, ಕಿವಿಗಿಂಪಾದ ಹಾಡುಗಳು, ಅರ್ಥಪೂರ್ಣ ಸಂಭಾಷಣೆ ಇಂಥ ಸಾಕಷ್ಟು ಸಾಂಬಾರ ಪದಾರ್ಥಗಳಿಂದ ಹದವಾಗಿ ತಯಾರಾದ ಚಲನಚಿತ್ರ ವೆಂಬ ರುಚಿಕಟ್ಟಾದ ಭಕ್ಷ್ಯವನ್ನು ಬೆಳ್ಳಿತೆರೆಯ ಬಾಳೆಲೆಯ ಮೇಲೆ ದಿವಿನಾಗಿ ಬಡಿಸಬೇಕು. ಅದನ್ನು ಮನದುಂಬಿ ಚಪ್ಪರಿಸುವ ಪ್ರೇಕ್ಷಕ ಪ್ರಭುವಿನ ಶಿಳ್ಳೆ-ಚಪ್ಪಾಳೆಗಳು ಚಿತ್ರಮಂದಿರದಲ್ಲಿ ಅನುರಣಿಸ ಬೇಕು. ಆಗಲೇ, ಅದಕ್ಕೆ ಜೀವ ಕೊಟ್ಟವರ ಜೀವವೂ ತಂಪಾಗೋದು...
ಬಣ್ಣದ ಲೋಕದಲ್ಲಿ ಹಾಸು ಹೊಕ್ಕಾ ಗಿರುವ ಈ ಅಲಿಖಿತ ನಿಯಮವನ್ನು ಸಂವಿಧಾನದಂತೆ ಗೌರವಿಸಿ, ವ್ರತದಂತೆ ಪಾಲಿಸಿ, ಶಿರದಲ್ಲಿ ಧರಿಸಿದವರಲ್ಲಿ ಎದ್ದುಕಾಣುವ ಹೆಸರು ನಿರ್ದೇಶಕ ಪುಟ್ಟಣ್ಣ ಕಣಗಾಲರದು. ತಾವು ನಿರ್ದೇಶಿಸ ಹೊರಟಿರುವ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ, ಅದಕ್ಕೊಪ್ಪುವ ಪಾತ್ರಧಾರಿಗಳು ಮತ್ತು ತಾಂತ್ರಿಕ ವರ್ಗ, ಮಾಧುರ್ಯಭರಿತ ಗೀತೆಗಳು, ಚಿತ್ರೀಕರಣ ದ ವೇಳೆ ಯಾವುದೇ ತೊಡಕಾಗ ದಂತೆ ಕೈಹಿಡಿ ಯುವ ರಂಗಸಜ್ಜಿಕೆಗಳು ಮತ್ತು ಪರಿಕರಗಳು ಇವೆಲ್ಲ ವನ್ನೂ ಸಮರ್ಥವಾಗಿ ಸಜ್ಜು ಗೊಳಿಸಿಕೊಂಡೇ ಚಿತ್ರೀಕರಣಕ್ಕೆ ಮುಂದಾಗುತ್ತಿದ್ದುದು ಪುಟ್ಟಣ್ಣ ನವರ ವೈಶಿಷ್ಟ್ಯ.
ಇದನ್ನೂ ಓದಿ: Yagati Raghu Nadig Column: ಸುದ್ದಿಗಿಷ್ಟು ಒಗ್ಗರಣೆ
ಈ ಪೈಕಿ ಯಾವುದೇ ಒಂದರ ಕೊರತೆಯಾದರೂ, “ಶಾಲೆಗೆ ಹೋಗಲು ನಾ ಒಲ್ಲೆ" ಎಂದು ರಚ್ಚೆ ಹಿಡಿಯುವ ಪುಟ್ಟಮಗುವಿನಂತೆ ಹಠ ಹಿಡಿಯುತ್ತಿದ್ದ ಚಿತ್ರಕರ್ಮಿ-ಚಿತ್ರಪ್ರೇಮಿ-ಚಿತ್ರವತ್ಸಲ ಅವರು! ಪುಟ್ಟಣ್ಣ ನವರಿಂದ ಚಿತ್ರ ಮಾಡಿಸಲು ಮುಂದಾಗುತ್ತಿದ್ದ ನಿರ್ಮಾಪಕರಿಗೂ ಇದು ಗೊತ್ತಿದ್ದ ಸಂಗತಿಯೇ ಆಗಿದ್ದರಿಂದ, ಅವರು ಕೇಳಿದ್ದನ್ನೆಲ್ಲ ಚಾಚೂ ತಪ್ಪದೆ ಒದಗಿಸುವೆಡೆಗೆ ಇನ್ನಿಲ್ಲದ ಗಮನ ನೀಡುತ್ತಿದ್ದರು ಎನ್ನಿ.
ಇಷ್ಟಾಗಿಯೂ, ಚಿತ್ರೀಕರಣದ ವೇಳೆ ಕೆಲವೊಮ್ಮೆ ಎಡವಟ್ಟುಗಳಾಗಿ ಬಿಡುತ್ತಿದ್ದವು. ನಿಗದಿತ ತಾಂತ್ರಿ ಕ ಪರಿಕರವೊಂದು ಕೈಕೊಟ್ಟಾಗ ಅಥವಾ ಕಲಾವಿದರೊಬ್ಬರು ಸಮಯಕ್ಕೆ ಸರಿಯಾಗಿ ಸೆಟ್‌ಗೆ ಬಾರ ದಿದ್ದಾಗ, ಅಪ್ಪಟ ವೀರಭದ್ರನೇ ಆಗಿಬಿಡುತ್ತಿದ್ದರು ಪುಟ್ಟಣ್ಣ. ಇಂಥ ಸಂದರ್ಭದಲ್ಲಿ ಕೆಲಸ ಮುಂದೆ ಸಾಗುವಂತಾಗುವಲ್ಲಿ ಅವರ ಕೈಹಿಡಿಯುತ್ತಿದ್ದುದು ಕಸುಬಿನಲ್ಲಿ ಅವರಿಗಿದ್ದ ಅಪಾರ ಜ್ಞಾನ ಮತ್ತು ಸಮಯಸ್ಪೂರ್ತಿ.
ಅಂಥದೊಂದು ಸಂದರ್ಭವಿದು. ಬೆಂಗಳೂರಿನ ಹೊರವಲಯದ ಸಾವನದುರ್ಗದಲ್ಲಿ ಆ ಚಿತ್ರದ ಹೊರಾಂಗಣ ಚಿತ್ರೀಕರಣಕ್ಕೆ ಯೋಜಿಸಲಾಗಿತ್ತು. ಅಂತೆಯೇ ಚಿತ್ರತಂಡವು ಅಲ್ಲಿಗೆ ತೆರಳಿ ಸಿದ್ಧತೆ ಗಳನ್ನು ಮಾಡಿಕೊಳ್ಳಲಾರಂಭಿಸಿತು. ಮೇಕಪ್ ಮಾಡಿಕೊಂಡ ಜೂನಿಯರ್ ಕಲಾವಿದರು ತಂತ ಮ್ಮ ಭಾಗದ ಮಾತನ್ನೋ ಹಾವಭಾವವನ್ನೋ ಮರುಮನನ ಮಾಡಿಕೊಂಡು ದೃಶ್ಯಕ್ಕೆ ಅಣಿ ಯಾಗುತ್ತಿದ್ದರು.
ಕ್ಯಾಮರಾ ಕೋನವನ್ನು ಸಂಯೋಜಿಸುವಲ್ಲಿ ಛಾಯಾಗ್ರಾಹಕರು ತಮ್ಮ ತಂಡದೊಡನೆ ವ್ಯಸ್ತ ರಾಗಿದ್ದರು. ಇಷ್ಟೆಲ್ಲಾ ಚಟುವಟಿಕೆಗಳು ಭರದಿಂದ ಸಾಗುತ್ತಿದ್ದರೂ ಪುಟ್ಟಣ್ಣ ಮಾತ್ರ ಕೆಂಡ ಗಣ್ಣೇ ಶ್ವರನಾಗಿದ್ದರು. ಕಾರಣ, ಅಂದಿನ ದೃಶ್ಯದಲ್ಲಿ ಕಾಣಿಸಿಕೊಳ್ಳಬೇಕಿದ್ದ ಮುಖ್ಯ ಪಾತ್ರಧಾರಿಯೇ ಚಿತ್ರೀ ಕರಣ ತಾಣಕ್ಕೆ ಬಂದಿರಲಿಲ್ಲ!
ಕರೆ ಮಾಡಿ ಬೇಗ ಬರುವಂತೆ ತಿಳಿಸೋಣವೆಂದರೆ ಅದು ಈಗಿನಂತೆ ಲ್ಯಾಂಡ್‌ಲೈನ್ ಫೋನು-ಮೊಬೈಲುಗಳ ಜಮಾನ ಕೂಡ ಆಗಿರಲಿಲ್ಲ. ಹಾಗಂತ, ಅವರಿಗಾಗಿ ದಿನವೆಲ್ಲಾ ಕಾಯುತ್ತಾ ಕೂರು ವಂತೆಯೂ ಇರಲಿಲ್ಲ. ಕಾರಣ, ಹೊರಾಂಗಣ ಚಿತ್ರೀಕರಣವಾದ್ದರಿಂದ ಸೂರ್ಯನ ಸಹಜ ಬೆಳಕಿ ನಲ್ಲೇ ದೃಶ್ಯವನ್ನು ಅಂದು ಚಿತ್ರೀಕರಿಸಲೇಬೇಕಿತ್ತು. ಸಮಯ ಬೇರೆ ಓಡುತ್ತಿತ್ತು. ಹೀಗಾಗಿ ಪುಟ್ಟಣ್ಣ ಕಣಗಾಲರು ಇನ್ನಿಲ್ಲದಂತೆ ಪೇಚಾಡುತ್ತಿದ್ದರು.
ಅಂದಿನ ಚಿತ್ರೀಕರಣವನ್ನು ವೀಕ್ಷಿಸಲು ಪುಟ್ಟಣ್ಣನವರ ಸೋದರ ಕಣಗಾಲ್ ಪ್ರಭಾಕರ ಶಾಸ್ತ್ರಿ ಯವರೂ ಅಲ್ಲಿಗೆ ಬಂದಿದ್ದರು. ಸೋದರರಿಬ್ಬರ ಸ್ವಭಾವದಲ್ಲಿ ಅಜಗಜಾಂತರ. ಪುಟ್ಟಣ್ಣ ಕೊಂಚ ‘ಟೆನ್ಷನ್ ಪಾರ್ಟಿ’ ಆದರೆ, ಪ್ರಭಾಕರ ಶಾಸ್ತ್ರಿಗಳು ‘ಬಿಡುಬೀಸು ಮಾತಿನ’ ನಿರಾಳಜೀವಿ, ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ.
ಹೊತ್ತು ಏರತೊಡಗಿದಂತೆ ಪುಟ್ಟಣ್ಣನವರ ಕೋಪವೂ ಏರುತ್ತಿದ್ದುದನ್ನು ಕಂಡ ಶಾಸ್ತ್ರಿಗಳು ತಾವು ಮೆಲ್ಲುತ್ತಿದ್ದ ತಾಂಬೂಲವನ್ನು ಎಡ ದವಡೆಗೆ ವರ್ಗಾಯಿಸಿ, “ಆಗಿದ್ದು ಆಗಿಹೋಯ್ತು ಕಣೋ ಪುಟ್ಟಾ... ಬಿಟ್ಟುಬಿಡೋ.. ಸಿನಿಮಾ ಸೆಟ್ಟಿನಲ್ಲಿ ಹೀಗೆಲ್ಲಾ ರೌದ್ರಾವತಾರ ತಾಳಬೇಡವೋ. ನೋಡಿ ಲ್ಲಿ, ನಿನ್ನ ಅವತಾರ ಕಂಡು ಎಲ್ಲರೂ ಗಾಬರಿಯಾಗಿದ್ದಾರೆ. ಸ್ವಲ್ಪ ಸಮಾಧಾನ ತಂದ್ಕೊಳ್ಳಯ್ಯಾ..." ಎಂದು ತಮ್ಮ ಸ್ವಭಾವ ಸಹಜ ದನಿಯಲ್ಲಿ ಹೇಳಿ ಪುಟ್ಟಣ್ಣನವರ ಬೆನ್ನು ಚಪ್ಪರಿಸಿದರು.
ಅಣ್ಣನ ಅಷ್ಟೂ ಮಾತನ್ನೂ ಅದರ ಏರಿಳಿತವನ್ನೂ ಗಮನವಿಟ್ಟು ಕೇಳಿಸಿಕೊಳ್ಳುತ್ತಿದ್ದುದರ ಜತೆಗೆ ಅಣ್ಣನ ಮುಖಭಾವದ ಮೇಲೂ ಕಣ್ಣು ನೆಟ್ಟಿದ್ದ ಪುಟ್ಟಣ್ಣನವರಲ್ಲಿ ಸಮಯಸ್ಪೂರ್ತಿ ಜಾಗೃತ ಗೊಂಡಿತು. ಕಾರ್ಮೋಡದಂತೆ ಕವಿದಿದ್ದ ಆತಂಕವು ಹಿಂಜಿದ ಹತ್ತಿಯಂತೆ ಹಾರಿಹೋಯಿತು. ಅಲ್ಲಿಯವರೆಗೂ ಧುಮುಗುಡುತ್ತಿದ್ದ ಪುಟ್ಟಣ್ಣನವರ ಮುಖದಲ್ಲಿ ಮಂದಹಾಸ ಜಿನುಗಿತು.
ತಕ್ಷಣವೇ, “ಎಲ್ಲಯ್ಯಾ ಆ ಮೇಕಪ್‌ಮನ್? ಬಾರಯ್ಯಾ ಇಲ್ಲಿ, ಪ್ರಭಣ್ಣನ ಮುಖಕ್ಕೆ ಬಣ್ಣ ಹಚ್ಚು. ಬೇಗ ಬೇಗ, ಸಮಯವಿಲ್ಲ" ಎಂದು ತ್ವರೆ ಮಾಡತೊಡಗಿದರು. ಈ ಅನಿರೀಕ್ಷಿತ ಬೆಳವಣಿಗೆಯಿಂದ ಕಕ್ಕಾಬಿಕ್ಕಿಯಾಗಿದ್ದ ಪ್ರಭಾಕರ ಶಾಸ್ತ್ರಿಗಳು, “ಲೇಯ್ ಪುಟ್ಟಾ, ಏನೋ ನಿಂದು ಹುಡುಗಾಟ? ನಂಗ್ಯಾ ಕೋ ಮೇಕಪ್ಪು?" ಎಂದಿದ್ದಕ್ಕೆ ಪುಟ್ಟಣ್ಣನವರು, “ಲೋ ಅಣ್ಣಾ, ಇವತ್ತು ಚಿತ್ರೀಕರಿಸಬೇಕಿದ್ದ ದೃಶ್ಯ ದ ಮುಖ್ಯಪಾತ್ರಧಾರಿಯೇ ಕೈಕೊಟ್ಟನಲ್ಲಾ ಎಂದು ತಲ್ಲಣಗೊಂಡಿದ್ದೆ.
ಆದರೆ, ದೃಶ್ಯದಲ್ಲಿ ಆತ ಅಭಿವ್ಯಕ್ತಿಸಬೇಕಿದ್ದ ಭಾವವನ್ನೆಲ್ಲಾ ನೀನು ನನಗೆ ಹೇಳಿದ ಸಮಾಧಾನದ ಮಾತಲ್ಲೇ ಹೊಮ್ಮಿಸಿ ಬಿಟ್ಟೆಯಲ್ಲೋ?! ಪ್ರಭಣ್ಣಾ, ಹಚ್ಕೊಳ್ಳೋ ಬಣ್ಣಾನಾ... ಅವನಿಗಿಂತ ಉತ್ತಮ ವಾಗಿ ಅಭಿನಯಿಸಬಲ್ಲ ಒಬ್ಬ ಕಲಾವಿದನನ್ನ ಹೆಕ್ಕಿ, ಕಲಾಶಾರದೆಯ ಮಡಿಲಿಗೆ ಹಾಕಿದ್ದೀನಿ ಅನ್ನೋ ಹೆಮ್ಮೆ ಮತ್ತು ಸಂತೃಪ್ತಿ ಈ ಪುಟ್ಟಣ್ಣನಿಗೆ ದಕ್ಕೋ ಹಾಗೆ ಮನದುಂಬಿ ಅಭಿನಯಿಸೋ...." ಎಂದು ಹೇಳಿ ಗದ್ಗದಿತರಾದರು.
ಆ ಚಿತ್ರವೇ ಕಲ್ಪನಾ ದ್ವಿಪಾತ್ರದಲ್ಲಿ ಅಭಿನಯಿಸಿದ ‘ಕಪ್ಪು-ಬಿಳುಪು’. ಅಂದು ಸಾವನದುರ್ಗದಲ್ಲಿ ಚಿತ್ರೀಕರಣವಾಗಬೇಕಿದ್ದುದು, “ಇಂದಿನ ಹಿಂದೂ ದೇಶದ ನವಯುವಕರೇ, ನವಯುವತಿಯರೇ; ಯಾವುದು ಕಪ್ಪು, ಯಾವುದು ಬಿಳುಪು, ಯಾವುದು ಸತ್ಯ, ಯಾವುದು ಮಿಥ್ಯ..." ಎಂಬ ಬೋಧಪ್ರದ ಗೀತೆ!
ಅಲ್ಲಿಯವರೆಗೂ ಕಥೆ-ಚಿತ್ರಕಥೆ-ಸಂಭಾಷಣೆ-ಹಾಡು ಇತ್ಯಾದಿಗಳನ್ನು ಬರೆದುಕೊಟ್ಟು ಚಲನಚಿತ್ರ ಗಳಿಗೆ ರಂಗು ತುಂಬಿದ್ದ ಕಣಗಾಲ್ ಪ್ರಭಾಕರ ಶಾಸ್ತ್ರಿಗಳು ಅಂದು ತಮ್ಮನ ಆಗ್ರಹಕ್ಕೆ ಮನಸೋತು ಮುಖಕ್ಕೆ ರಂಗು ಮೆತ್ತಿಕೊಳ್ಳಬೇಕಾಯಿತು! ತುಂಡು ಪಂಚೆ, ಹೆಗಲ ಮೇಲೊಂದು ಕಂಬಳಿ, ಕೊರ ಳಲ್ಲಿ ಮಣಿಮಾಲೆ, ಕೈಯಲ್ಲೊಂದು ಕೋಲು ಹಿಡಿದಿರುವ, ಮೇಲ್ನೋಟಕ್ಕೆ ಹುಚ್ಚನಂತೆ ಕಾಣುವ ವ್ಯಕ್ತಿಯ ಗೆಟಪ್ ಅದು. ಪಿಕ್‌ನಿಕ್‌ಗೆಂದು ಬಂದ ಯುವಕ-ಯುವತಿಯರ ತಂಡಕ್ಕೆ ಬುದ್ಧಿವಾದ ಹೇಳಲು ಮುಂದಾಗುವ ಈ ಪಾತ್ರವನ್ನು ಅವರೆಲ್ಲರೂ ‘ಹುಚ್ಚ’ ಎಂಬಂತೆ ನಡೆಸಿಕೊಂಡು ಗೇಲಿ ಮಾಡುತ್ತಾರೆಯೇ ವಿನಾ, ಅವನೊಳಗಿನ ‘ಅವಧೂತ’ನನ್ನು ಗುರುತಿಸುವುದಿಲ್ಲ.
ಈ ಹಾಡಿನ ಒಂದು ಭಾಗದಲ್ಲಂತೂ ದುರಹಂಕಾರಿ ಆಧುನಿಕ ಯುವತಿಯ ಪಾತ್ರಧಾರಿ ಕಲ್ಪನಾ, ಈ ವ್ಯಕ್ತಿಯ ಅವಧೂತತ್ವವನ್ನು ಗುರುತಿಸದೆ ಕಾಲಿನಿಂದ ಚಪ್ಪಲಿ ಬಿಚ್ಚಿ ತೋರಿಸುತ್ತಾರೆ. ಆಗ ಅವರೆಡೆಗೆ ಸಾಗುವ ಈ ಬುದ್ಧಿಮಾತಿನ ಆಸಾಮಿ, ಚಪ್ಪಲಿ ಹಿಡಿದಿದ್ದ ಆಕೆಯ ಕೈಯನ್ನು ಸ್ವತಃ ನಿಧಾನವಾಗಿ ಕೆಳಗಿಳಿಸಿ ‘ಇದು ಸಲ್ಲ’ ಎಂದು ಕಣ್ಣಲ್ಲೇ ಮಾತನಾಡುತ್ತಾರೆ.
ಈ ಹಾಡಿನ ಅಷ್ಟೂ ಭಾಗದಲ್ಲಿ ಕಣಗಾಲ್ ಪ್ರಭಾಕರ ಶಾಸಿಯವರು ನೀಡಿರುವ ಅಭಿನಯ ‘ಮೈ ಝುಂ’ ಎನ್ನಿಸುವಂತಿದೆ ಎಂದರೆ ಅತಿಶಯೋಕ್ತಿಯಲ್ಲ. ಮುಖಕ್ಕೆ ಬಣ್ಣ ಹಚ್ಚಿಕೊಂಡಿದ್ದು ಅದೇ ಮೊದಲ ಬಾರಿಗೆ ಆಗಿದ್ದರೂ, ಅವರು ಪಾತ್ರದಲ್ಲಿ ಲೀನವಾಗಿರುವ ಬಗೆ, ಚಿಮ್ಮಿಸಿರುವ ದೇಹಭಾಷೆ, ಸಾಹಿತ್ಯದಲ್ಲಿನ ಆಶಯವನ್ನು ಹೊಮ್ಮಿಸುವಾಗ ಮುಖದ ಗೆರೆಗಳಿಗೆ ಒತ್ತುನೀಡಿರುವ ಪರಿ ಚಿತ್ರರಸಿ ಕರ ಮನಗೆಲ್ಲುತ್ತವೆ. ಒಂದು ಹಂತದಲ್ಲಂತೂ, ಈ ಹಾಡನ್ನು ಹಾಡಿರುವುದು ಗಾಯಕ ಪಿ.ಬಿ. ಶ್ರೀನಿವಾಸ್ ಅವರಲ್ಲ, ಸ್ವತಃ ಕಣಗಾಲ್ ಪ್ರಭಾಕರ ಶಾಸ್ತ್ರಿಗಳೇ ಎಂದು ನೋಡುಗರು ಅಂದು ಕೊಳ್ಳುವಷ್ಟರ ಮಟ್ಟಿಗೆ ಹಾಡಿನ ‘ಶಾರೀರ’ಕ್ಕೆ ತಮ್ಮ ‘ಶರೀರ’ವನ್ನು ಅವರು ಒಗ್ಗಿಸಿದ್ದಾರೆ, ಪಾತ್ರ ದಲ್ಲಿ ಬೆರೆತುಹೋಗಿದ್ದಾರೆ.
ಶಾಸ್ತ್ರಿಗಳ ನಟನಾ ವೈಭವದ ನಡುನಡುವೆ ಆದಿಗುರು ಶ್ರೀ ಶಂಕರಾಚಾರ್ಯರು, ಸ್ವಾಮಿ ವಿವೇಕಾ ನಂದರು, ಸುಭಾಷ್ ಚಂದ್ರ ಬೋಸರ ಛಾಯಾರೂಪಗಳು ಕಾಣಿಸಿಕೊಂಡು ತಂತಮ್ಮ ಸುಪ್ರಸಿದ್ಧ ಉದ್ಘೋಷಗಳನ್ನು ಮೊಳಗಿಸಿ, ಯುವಪೀಳಿಗೆಯು ಸಾಗಬೇಕಿರುವ ಹಾದಿಗೆ ಸ್ಪಷ್ಟತೆಯನ್ನು ತೋರುತ್ತವೆ.
‘ಕಪ್ಪು-ಬಿಳುಪು’ ಚಿತ್ರ ತೆರೆ ಕಂಡಿದ್ದು 1969ರಲ್ಲಿ. ಆದರೆ, ಮೇಲೆ ಉಲ್ಲೇಖಿಸಿರುವ ಹಾಡಿನ ಆಶಯ, ಅದರಲ್ಲಿನ ಶಾಸ್ತ್ರಿಗಳ ಅಭಿನಯ ಇಂದಿಗೂ ಸಲ್ಲುವಷ್ಟರ ಮಟ್ಟಿಗೆ ಹಸಿರಾಗಿವೆ. ಅಂದು ಸದರಿ ಹಾಡಿನ ಚಿತ್ರೀಕರಣದಲ್ಲಿ ವಾಸ್ತವವಾಗಿ ಕಾಣಿಸಿಕೊಳ್ಳಬೇಕಿದ್ದ ಕಲಾವಿದ ಬರಲಿಲ್ಲ ಎಂಬ ಕಾರಣಕ್ಕೆ ಪುಟ್ಟಣ್ಣನವರು ಚಿತ್ರೀಕರಣವನ್ನು ಮುಂದೂಡಿ ಮತ್ತೊಂದು ದಿನದಂದು ಚಿತ್ರೀಕರಿಸಿ ದ್ದಿದ್ದರೆ, ಇಂಥದೇ ಭಾವತೀವ್ರತೆಯ ಫಲಿತಾಂಶ ದಕ್ಕುತ್ತಿತ್ತೇ? ಈ ಪ್ರಶ್ನೆಗೆ ಉತ್ತರಿಸಲಾಗದು.
ಆದರೆ, ‘ಸರಿಯಾದ ಸಮಯಕ್ಕೆ ಸರಿಯಾದ ತೀರ್ಮಾನ’ ಎಂಬ ಮಾತಿಗೆ ದ್ಯೋತಕವಾಗಿ ಪುಟ್ಟಣ್ಣ ನವರು ಮೆರೆದ ಸಮಯಸೂರ್ತಿಯು “ಇಂದಿನ ಹಿಂದೂ ದೇಶದ" ಗೀತೆಯ ದೃಶ್ಯಾನುಭೂತಿಯನ್ನು ಸವಿಯುವ ವಿಷಯದಲ್ಲಿ ನೋಡುಗರಿಗೆ ಭರ್ಜರಿ ರಸದೌತಣವನ್ನೇ ನೀಡಿತು, ಒಂದು ಸಕಾರಾತ್ಮಕ ಟ್ರೆಂಡ್ ಅನ್ನೇ ಸೃಷ್ಟಿಸಿತು ಎಂಬುದಂತೂ ನಿಜ.
ವೈಯಕ್ತಿಕ ಅಥವಾ ವೃತ್ತಿ ಬದುಕಿನಲ್ಲಿ ಏನೋ ಕೊರತೆಯಾದಾಗ ಅದನ್ನೇ ನೆನೆದು ಗೋಳಿಡುತ್ತ ಕೂರುವ ಬದಲು, ಆ ಕೊರತೆಯನ್ನೇ ಒಂದು ಅವಕಾಶವಾಗಿ ಮಾರ್ಪಡಿಸಿಕೊಳ್ಳುವ ಛಲಕ್ಕೂ, ಸಾಮರ್ಥ್ಯದ ಅಭಿವ್ಯಕ್ತಿಯ ಅಸ್ತ್ರ ಮಾಡಿಕೊಳ್ಳುವ ಕೌಶಲಕ್ಕೂ ಈ ಸನ್ನಿವೇಶ ಸಾಕ್ಷಿಯಾಗಬಲ್ಲದು.
ಪುಟ್ಟಣ್ಣನವರು ಇಂಥ ‘ಸಮಯ ಸ್ಪೂರ್ತಿ’ಯನ್ನು ಸಾಕಷ್ಟು ಸಂದರ್ಭದಲ್ಲಿ ಮೆರೆದದ್ದಿದೆ. ಸದ್ಯಕ್ಕೆ ‘ಬೆಳ್ಳಿಮೋಡ’ ಚಿತ್ರದ ಅಂಥ ಸನ್ನಿವೇಶವೊಂದನ್ನು ಅವಲೋಕಿಸೋಣ. ಕಲ್ಯಾಣ್ ಕುಮಾರ್ ಮತ್ತು ಕಲ್ಪನಾ ಈ ಚಿತ್ರದ ಪ್ರಮುಖ ಪಾತ್ರಧಾರಿಗಳು. ವಿದೇಶದಿಂದ ಆಗಮಿಸಿದ ಕಥಾನಾಯಕ ಪಾತ್ರಧಾರಿ ಕಲ್ಯಾಣ್ ಅವರನ್ನು ಭೇಟಿಯಾಗಿ ಮಾತಾಡಲು ಕಲ್ಪನಾ ಅವರು ಬೆಟ್ಟದ ತುದಿಗೆ ತೆರಳುವ ಸನ್ನಿವೇಶವದು. ಪಾತ್ರಧಾರಿಗಳು ದೃಶ್ಯದ ಸಂಭಾಷಣೆಯನ್ನು ಉರುಹೊಡೆದಿದ್ದು ಆಯ್ತು, ಕ್ಯಾಮರಾ ಕೋನವನ್ನು ಫೈಸಲ್ ಮಾಡಿದ್ದೂ ಆಯ್ತು.
ಆದರೂ ಪುಟ್ಟಣ್ಣನವರಿಗೆ ಸಮಾಧಾನವಾಗುತ್ತಿಲ್ಲ. ‘ಒಬ್ಬ ಪ್ರೇಕ್ಷಕನಾಗಿ ಈ ದೃಶ್ಯದ ವೀಕ್ಷಣೆಯಲ್ಲಿ ಸಿಗಬೇಕಾದ ಮಜಾ ಸಿಗುತ್ತಿಲ್ವಲ್ಲಾ’ ಅಂತ ಒಬ್ಬರೇ ಕೈ ಕೈ ಹಿಸುಕಿಕೊಳ್ಳುತ್ತಿದ್ದರು. ನೋಡುವಷ್ಟು ಹೊತ್ತು ನೋಡಿ ಅವರೆಡೆಗೆ ಸಾಗಿದರು ಛಾಯಾಗ್ರಾಹಕ ಆರ್.ಎನ್. ಕೃಷ್ಣಪ್ರಸಾದ್ (ಇವರು ಖ್ಯಾತ ನಟ-ನಿರ್ದೇಶಕ ಆರ್.ನಾಗೇಂದ್ರ ರಾಯರ ಮಗ ಹಾಗೂ ಖ್ಯಾತ ಗೀತಸಾಹಿತಿ ಆರ್.ಎನ್. ಜಯ ಗೋಪಾಲ್‌ರ ಸೋದರ). “ಏನಾಯ್ತು? ಏನ್ ನಿಮ್ ಕಥೆ?" ಅಂತ ಕೃಷ್ಣಪ್ರಸಾದ್ ಪ್ರಶ್ನಿಸುತ್ತಿದ್ದರೆ, ಪುಟ್ಟಣ್ಣನವರು ಉತ್ತರಿಸುವ ಬದಲು ಕೃಷ್ಣಪ್ರಸಾದರ ತಲೆಯ ಕಡೆಗೇ ನೋಡುತ್ತಿದ್ದರು.
ಕೆಲ ಕ್ಷಣದ ನಂತರ ಕೃಷ್ಣಪ್ರಸಾದರ ತಲೆಗೆ ಕೈಹಾಕಿ ಅವರು ಧರಿಸಿದ್ದ ‘ಕ್ಯಾಪ್’ ಅನ್ನು ಎಗರಿಸಿ ಬಿಟ್ಟರು... ನಂತರ ತಾವು ಧರಿಸಿದ್ದ ಬಿಳಿ ಬಣ್ಣದ ಕೋಟ್ ಅನ್ನು ಬಿಚ್ಚಿಬಿಟ್ಟರು... ಎರಡನ್ನೂ ಹಿಡಿ ದುಕೊಂಡು ಎಳೇಮಗುವಿನ ಹಾಗೆ ನಟ ಕಲ್ಯಾಣ್ ಕುಮಾರ್‌ರತ್ತ ಓಡಿದರು. ಚಿತ್ರತಂಡ ಅವಾಕ್ಕಾಗಿ ನೋಡುತ್ತಲೇ ಇತ್ತು. ಆ ಕೋಟು ಮತ್ತು ಕ್ಯಾಪ್ ಅನ್ನು ತೊಡಿಸುತ್ತಿದ್ದಂತೆ, ಕಲ್ಯಾಣ್‌ರ ಮುಖದಲ್ಲಿ ‘ಫಾರಿನ್ ರಿಟರ್ನ್ಡ್’ ಆಸಾಮಿಯ ಕಳೆ!
ಪುಟ್ಟಣ್ಣನವರ ಸಮಯಸೂರ್ತಿಯಿಂದಾಗಿ ಸ್ಥಳದಲ್ಲೇ ‘ಫಾರಿನ್ ಮಾಲು’ ಸೃಷ್ಟಿಯಾಗಿತ್ತು!! ಈ ಕಾರಣಕ್ಕೇ ಅಲ್ಲವೇ ಪುಟ್ಟಣ್ಣನವರು ನಮಗಿಷ್ಟವಾಗೋದು.