Yagati Raghu Nadig Column: ಸುದ್ದಿಗಿಷ್ಟು ಒಗ್ಗರಣೆ
ನನ್ನನ್ನು ಜೆಡಿಎಸ್‌ನಿಂದ ಉಚ್ಚಾಟನೆ ಮಾಡುವ ತಾಕತ್ತು ನಾಯಕರಿಗೆ ಇಲ್ಲ: ಜೆಡಿಎಸ್ ಪಕ್ಷದ ಶಾಸಕ ಜಿ.ಟಿ.ದೇವೇಗೌಡ ಆತ್ಮವಿಶ್ವಾಸದ ಹೇಳಿಕೆ
![Yagati Raghu Nadig Column: ಸುದ್ದಿಗಿಟ್ಟು ಒಗ್ಗರಣೆ](https://cdn-vishwavani-prod.hindverse.com/media/original_images/GTDevegowda.jpg)
ಜೆಡಿಎಸ್ ಪಕ್ಷದ ಶಾಸಕ ಜಿ.ಟಿ.ದೇವೇಗೌಡ
![Profile](https://vishwavani.news/static/img/user.png)
ಯಗಟಿ ರಘು ನಾಡಿಗ್
ನನ್ನನ್ನು ಜೆಡಿಎಸ್‌ನಿಂದ ಉಚ್ಚಾಟನೆ ಮಾಡುವ ತಾಕತ್ತು ನಾಯಕರಿಗೆ ಇಲ್ಲ: ಜೆಡಿಎಸ್ ಪಕ್ಷದ ಶಾಸಕ ಜಿ.ಟಿ.ದೇವೇಗೌಡ ಆತ್ಮವಿಶ್ವಾಸದ ಹೇಳಿಕೆ
- JDS Alumniಗಳಲ್ಲಿ ಒಬ್ಬರಾಗಿರುವ ‘ಜನಾಬ್’ ಸಿ.ಎಂ.ಇಬ್ರಾಹಿಂ ಸಾಹೇಬ್ರು ಈ ಮಾತನ್ನು ಕೇಳಿ ಬಿದ್ದುಬಿದ್ದು ನಕ್ಕರಂತೆ!!
ವನರಕ್ಷಕನಿಂದಲೇ ಅಕ್ರಮ. ಆನೆ ದಂತ ಸಾಗಿಸುತ್ತಿದ್ದ ಫಾರೆಸ್ಟ್ ವಾಚರ್ ಹಾಗೂ ಆತನ ಸಂಬಂಧಿಯ ಬಂಧನ: ಸುದ್ದಿ
- ‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಎಂಬ ಗಾದೆಮಾತಿಗೆ, ‘ಮಾಲಿಯೇ ಆನೆದಂತವ ಕೊಯ್ದಂತೆ’ ಎಂಬ ಸಾಲನ್ನೂ ಸೇರಿಸಬಹುದು!
ಹಿಂದಿನ ಶಿಂಧೆ ಸರಕಾರದ ಕೆಲ ನಿರ್ಧಾರಗಳ ರದ್ದು, ಫಡ್ನವಿಸ್ ನಡೆಗೆ ಶಿವಸೇನೆ ಕೆಂಡ. ಮಹಾ ರಾಷ್ಟ್ರದ ಮಹಾಯುತಿ ಮೈತ್ರಿ ಸರಕಾರದಲ್ಲಿ ಬಿಕ್ಕಟ್ಟು: ಸುದ್ದಿ
- ಬಿಕ್ಕಟ್ಟು ಹೀಗೇ ಮುಂದುವರಿದು, ‘ಮಹಾಯುತಿ’ ಎಂಬುದು ‘ಮಹಾಹುತಿ’ ಆಗಿಬಿಡಲಿ ಎಂಬು ದಾಗಿ ರಾಜಕೀಯ ಎದುರಾಳಿಗಳು ಚಾತಕಪಕ್ಷಿಯಂತೆ ಕಾಯುತ್ತಿದ್ದಾರಂತೆ!
‘ಇ-ಖಾತಾ’ ಗೊಂದಲಕ್ಕೆ ‘ಎ-ಖಾತಾ’ ಮತ್ತು ‘ಬಿ-ಖಾತಾ’ ಮಾದರಿ ಜಾರಿಗೆ ಚಿಂತನೆ: ಸುದ್ದಿ
- “ಅಚ್ಛಾ ಹೈ! ಲೇಕಿನ್, ‘ಎ ಖಾತಾ ಹೈ’, ‘ವೊ ಖಾತಾ ಹೈ’ ಬೋಲ್ ಕೆ ಬಹುತ್ ಶಿಕಾಯತ್ ಹೈ ನಾ? ಉಸ್ ಕಾ ಕ್ಯಾ?" ಎಂದು ಹತಾಶರೊಬ್ಬರು ಶಿವಾಜಿನಗರದಲ್ಲಿ ಸಿಂಬಳ ಸೀಟಿದರಂತೆ!
ಪ್ರಾಣಿ ರಕ್ಷಣಾ ಕೇಂದ್ರ ಸ್ಥಾಪನೆಗೆ ಬಿಬಿಎಂಪಿ ಚಿಂತನೆ: ಸುದ್ದಿ
- ಈ ಸುದ್ದಿ ಓದುತ್ತಿದ್ದಂತೆ, “ಹಾಗೆಯೇ, ‘ಪತ್ನೀಪೀಡಿತ ಪುರುಷ-ಪ್ರಾಣಿ’ಗಳ ರಕ್ಷಣೆಗೂ ಒಂದು ಕೇಂದ್ರ ಸ್ಥಾಪಿಸಿ ಪುಣ್ಯ ಕಟ್ಟಿಕೊಳ್ಳಿ" ಎಂಬ ಅಹವಾಲುಗಳು ಬಿಬಿಎಂಪಿಗೆ ದಂಡಿಯಾಗಿ ಬಂದಿವೆ ಯಂತೆ!
ಜನಾರ್ದನ ರೆಡ್ಡಿ ವಿರುದ್ಧ ಶ್ರೀರಾಮುಲು ಆಕ್ರೋಶ, ಪಕ್ಷ ಬಿಡುವ ಬೆದರಿಕೆ: ಸುದ್ದಿ
- ಮೊದಲೇ ಬಿಜೆಪಿಯ ಸ್ಥಿತಿ ‘ಮನೆಯೊಂದು ಮೂರು ಬಾಗಿಲು’ ಆಗಿತ್ತು, ಈಗ ಇನ್ನೆರಡು ‘ಬಾಗಿಲು’ ಗಳು ಗಾಳಿಗೆ ಹೊಡ್ಕೋತಾ ಇವೆ!!
ಕೋರ್ ಕಮಿಟಿ ಸಭೆ ಬಳಿಕ ಬಿಜೆಪಿ ನಿಗಿನಿಗಿ: ಸುದ್ದಿ
- ಅಯ್ಯೋ ರಾಮನೇ! ಸಭೆ ಬಳಿಕವೂ ತಂಪಾಗಿರೋಕ್ಕೆ ಅದೇನು ರಾಮನವಮಿ ಪಾನಕ ವಿತರಣೆ ಯ ಸಂದರ್ಭವಾ?!
ರಾಜ್ಯ ಸರಕಾರವು ಬಸ್ ದರ, ಸ್ಟ್ಯಾಂಪ್ ಡ್ಯೂಟಿ, ತೆರಿಗೆ, ಹಾಲಿನ ದರ, ಮೆಟ್ರೋ ದರ ಹೀಗೆ ಎಲ್ಲದರಲ್ಲೂ ಹೆಚ್ಚಳ ಮಾಡಿ ಸಾರ್ವಜನಿಕರ ಮೇಲೆ ಬೆಲೆ ಏರಿಕೆಯ ‘ಬರೆ’ ಹಾಕಿದೆ: ವಿಪಕ್ಷ ನಾಯಕ ಆರ್.ಅಶೋಕ್ ಆರೋಪ
- ಸರ್, ಹೀಗೆ ‘ಬರೆ’ ಹಾಕಿಸಿಕೊಂಡವರ ಪೈಕಿ ಒಬ್ಬರು ‘ಸೀತಾ’ ಚಿತ್ರದ “ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ, ಅದರ ಮಧುರ ಸ್ಮೃತಿಯ ನಾನು ಹೇಗೆ ತಾನೆ ಮರೆಯಲಿ?" ಎಂಬ ಹಾಡಿನ ಧಾಟಿಯಲ್ಲೇ “ಕೊರೆದೆ ನೀನು ದರದ ಬರೆಯ ನನ್ನ ಬೆನ್ನ ಬುಡದಲಿ, ಅದರ ತಾಪದುರಿಯ ನಾನು ಹೇಗೆ ತಾನೆ ಸಹಿಸಲಿ?" ಎಂಬ ಹಾಡನ್ನು ಕೇಶವಕೃಪಾ ಕಟ್ಟಡದ ಮುಂದೆ ತೋಡಿ ರಾಗದಲ್ಲಿ ತೋಡಿಕೊಂಡರಂತೆ!!