ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Union Budget 2025: 8 ಬಜೆಟ್, 8 ಸೀರೆಗಳು, 8 ಮೈಲುಗಲ್ಲುಗಳು – ದಾಖಲೆ ಬರೆದ ನಿರ್ಮಲಾ ಸೀತಾರಾಮನ್

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರು ಸತತ ಎಂಟು ಬಜೆಟ್ ಗಳನ್ನು ಮಂಡಿಸುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ. ಈ ಸಂದರ್ಭದಲ್ಲಿ ಎಂಟು ಬಜೆಟ್ ಮಂಡನೆ ಸಂದರ್ಭದಲ್ಲಿ ಸಚಿವರು ಉಟ್ಟಿದ್ದ ಸೀರೆಗಳ ಮಾಹಿತಿ ಇಲ್ಲಿದೆ..

8 ಬಜೆಟ್, 8 ಸೀರೆಗಳು, 8 ಮೈಲಿಗಲ್ಲು- ಇದು ವಿತ್ತ ಸಚಿವೆಯ ದಾಖಲೆ

Profile Sushmitha Jain Feb 1, 2025 6:50 PM

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಸತತ ಎಂಟು ಬಜೆಟ್ ಗಳನ್ನು ಮಂಡಿಸುವ ಮೂಲಕ ಹೊಸ ಇತಿಹಾಸವನ್ನೇ ನಿರ್ಮಿಸಿದ್ದಾರೆ. ಭಾರತದ ರಾಜತಾಂತ್ರಿಕ ಇತಿಹಾಸದಲ್ಲೇ ಸತತ ಅತೀ ಹೆಚ್ಚು ಬಜೆಟ್ ಮಂಡಿಸಿದ ಹಣಕಾಸು ಸಚಿವರೆಂಬ ಹೆಗ್ಗಳಿಕೆಗೆ ಸಚಿವೆ ನಿರ್ಮಲಾ ಪಾತ್ರರಾಗಿದ್ದಾರೆ.

ಈ ಹಿಂದೆ ಈ ದಾಖಲೆ ಮೊರಾರ್ಜಿ ದೇಸಾಯಿ ಅವರ ಹೆಸರಿನಲ್ಲಿತ್ತು. ಆದರೆ ಅವರು ಸತತವಾಗಿ ಬಜೆಟ್ ಮಂಡಿಸಿರಲಿಲ್ಲ. ತಮ್ಮ ಬಜೆಟ್ ಭಾಷಣದಲ್ಲಿ ಮಾತನಾಡುತ್ತಾ, ‘ಮಧ್ಯಮ ವರ್ಗದವರ ವೆಚ್ಚದ ಶಕ್ತಿಯನ್ನು ಹೆಚ್ಚಿಸುವ ಉದ್ದೇಶವನ್ನು ಈ ಬಜೆಟ್ ಹೊಂದಿದೆ’ ಎಂದು ಅವರು ಹೇಳಿದರು.

ಎಂಟು ಬಜೆಟ್ ಎಂಟು ವೈವಿಧ್ಯಮಯ ಸೀರೆಗಳು!

2025ರ ಬಜೆಟ್:

ತನ್ನ ಐತಿಹಾಸಿಕ ಎಂಟನೇ ಬಜೆಟ್ ಮಂಡನೆಗೆ ಆಗಮಿಸಿದ ಸಚಿವೆ ನಿರ್ಮಲಾ ಅವರು ಮಧುಬನಿ ಸೀರೆಯಲ್ಲಿ ಕಂಗೊಳಿಸಿದರು. ಇದನ್ನು ಅವರಿಗೆ ಪದ್ಮಶ್ರೀ ಪುರಸ್ಕೃತೆ ದುಲಾರಿ ದೇವಿ 2021ರಲ್ಲಿ ಗಿಫ್ಟ್ ಆಗಿ ನೀಡಿದ್ದರು. ಮತ್ತು ಈ ಸೀರೆಯನ್ನು 2025-26ರ ಬಜೆಟ್ ಮಂಡಿಸುವ ಸಂದರ್ಭದಲ್ಲಿ ಉಡುವಂತೆ ದುಲಾರಿ ಅವರು ಸಚಿವರನ್ನು ಕೇಳಿಕೊಂಡಿದ್ದರು. ಕ್ರೀಂ ಬಣ್ಣದ ಈ ಸೀರೆಯಲ್ಲಿ ಚಿನ್ನದ ಬಾರ್ಡರ್ ಇದ್ದು, ಇದಕ್ಕೆ ಮ್ಯಾಚ್ ಆಗುವಂತೆ ಅವರು ಕೆಂಪು ಕುಪ್ಪಸವನ್ನು ತೊಟ್ಟಿದ್ದರು.

ಮಧುಬನಿ ಸೀರೆಯಲ್ಲಿ ಸಚಿವೆ ನಿರ್ಮಲಾ.

2024ರ ಬಜೆಟ್:

2024ರ ಬಜೆಟ್ ಮಂಡನೆ ಸಂದರ್ಭದಲ್ಲಿ ಸಚಿವೆ ನಿರ್ಮಲಾ ಅವರು ಮಂಗಳಗಿರಿ ಸೀರೆಯನ್ನು ಉಟ್ಟಿದ್ದರು. ಇದರಲ್ಲಿ ಬ್ರೈಟ್ ಮೆಜೆಂಟಾ ಬಾರ್ಡರ್ ಇತ್ತು. ಈ ಸೀರೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯದ್ದಾಗಿದ್ದು, ಈ ಸೀರೆ ತನ್ನ ಸರಳ, ಆಕರ್ಷಕ ನೋಟಕ್ಕೆ ಮತ್ತು ಕ್ಲೀನ್ ಬಾರ್ಡರ್ ಹಾಗೂ ಪ್ಲೈನ್ ಡಿಸೈನ್ ಗೆ ಹೆಸರುವಾಸಿಯಾಗಿದೆ.

2024ರ ಕೇಂದ್ರ ಬಜೆಟ್ ನಲ್ಲಿ ಮೊಬೈಲ್ ಫೋನ್, ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕ ಇಳಿಕೆ ಹಾಗೂ ಮೂರು ಕ್ಯಾನ್ಸರ್ ಔಷಧಿಗಳಿಗೆ ರಿಯಾಯಿತಿಯಂತಹ ಪ್ರಮುಖ ಘೋಷಣೆಗಳನ್ನು ಮಾಡಲಾಗಿತ್ತು. ಇಥಿಯಂನಂತಹ 25 ಪ್ರಮುಖ ಖನಿಜಗಳ ಮೇಲಿನ ಕಸ್ಟಮ್ಸ್ ಡ್ಯೂಟಿ ರಿಯಾಯಿತಿ ನೀಡಲಾಗಿತ್ತು.

ಮಂಗಳಗಿರಿ ಸೀರೆ ಸೀರೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್

2024ರ ಮಧ್ಯಂತರ ಬಜೆಟ್:

ಸಚಿವೆ ಸೀತಾರಾಮನ್ ಅವರು 2024ರ ಫೆ.01ರಂದು ಮಧ್ಯಂತರ ಬಜೆಟ್ ಮಂಡಿಸಿದ್ದರು. ಈ ಸಂದರ್ಭದಲ್ಲಿ ಅವರು ನೀಲಿ ಬಣ್ಣದ ಕೈಮಗ್ಗದ ಟಸ್ಸರ್ ಸಿಲ್ಕ್ ಸೀರೆಯನ್ನು ಉಟ್ಟಿದ್ದರು. ಇದರಲ್ಲಿ ಕಾಂತಾ ಕರಕುಶಲವಿತ್ತು.

ನೀಲಿ ಬಣ್ಣದ ಕೈಮಗ್ಗದ ಟಸ್ಸರ್ ಸಿಲ್ಕ್ ಸೀರೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್

2023ರ ಬಜೆಟ್:

2023ರ ಬಜೆಟ್ ಮಂಡನೆ ಸಂದರ್ಭದಲ್ಲಿ ಸೀತಾರಾಮನ್ ಅವರು ಗಾಢ ಕೆಂಪು ಬಣ್ಣದ ರೇಷ್ಮೆ ಸೀರೆಯನ್ನುಟ್ಟು ಗಮನ ಸೆಳೆದಿದ್ದರು. ಇದರಲ್ಲಿ ಕಪ್ಪು ಹಾಗೂ ಗೋಲ್ಡ್ ಟೆಂಪಲ್ ಬಾರ್ಡರ್ ಇತ್ತು. ಮತ್ತು ಈ ಬಾರ್ಡರ್ ನಲ್ಲಿ ರಥ, ನವಿಲು ಹಾಗೂ ಕಮಲಗಳ ಚಿತ್ತಾರವಿದ್ದು, ಇದು ಸಂಪ್ರದಾಯ, ಸಾಮರ್ಥ್ಯ ಹಾಗೂ ಸ್ಥಿರತೆಯನ್ನು ಪ್ರತಿಬಿಂಬಿಸುತ್ತಿತ್ತು.

ಗಾಢ ಕೆಂಪು ಬಣ್ಣದ ರೇಷ್ಮೆ ಸೀರೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್.

2022ರ ಬಜೆಟ್:

2022ರಲ್ಲಿ ಬಜೆಟ್ ಮಂಡಿಸುವ ಸಂದರ್ಭದಲ್ಲಿ ಸಚಿವೆ ನಿರ್ಮಲಾ ಅವರು ಕಂದು ಬೊಮ್ಕಿ ಸೀರೆಯನ್ನುಟ್ಟು ಗಮನ ಸೆಳೆದಿದ್ದರು. ಇದನ್ನು ಒಡಿಶಾದಲ್ಲಿ ತಯಾರಿಸಲಾಗಿತ್ತು. ಇದರಲ್ಲಿ ಸಿಲ್ವರ್ ಜರಿ ಹಾಗೂ ಆಕರ್ಷಕ ಬಾರ್ಡರ್ ಇತ್ತು. ಪ್ರಕೃತಿ ಮತ್ತು ಪುರಾಣಗಳಿಂದ ಸ್ಪೂರ್ತಿ ಪಡೆದು ವಿನ್ಯಾಸಗೊಳ್ಳುವ ಸೀರೆಗಳಿಗೆ ಬೊಮ್ ಕಾಯ್ ಸೀರೆಗಳು ಹೆಸರುವಾಸಿಯಾಗಿವೆ.

2022ರ ಬಜೆಟ್ ನಲ್ಲಿ ಆರ್ಥಿ ಬೆಳವಣಿಗೆ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಒತ್ತು ನೀಡಲಾಗಿತ್ತು ಹಾಗೂ ಆದಾಯ ತೆರಿಗೆ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿರಲಿಲ್ಲ. ಆ ಆರ್ಥಿಕ ವರ್ಷದಲ್ಲಿ 1.4 ಲಕ್ಷ ಕೋಟಿ ಜಿ.ಎಸ್.ಟಿ. ಸಂಗ್ರಹ ದಾಖಲೆ ಬರೆದಿತ್ತು.

ಇದನ್ನೂ ಓದಿ: Nirmala Sitharaman:ಬಜೆಟ್‌ ಮಂಡನೆ ಆಗ್ತಿದ್ದಂತೆ ನಿರ್ಮಲಾ ಸೀತಾರಾಮನ್ ಫೊಟೋಗೆ ಪೂಜೆ ಮಾಡಿದ ಉದ್ಯಮಿ!!

ಕಂದು ಬೊಮ್ಕಿ ಸೀರೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್

2021ರ ಬಜೆಟ್:

ಈ ಬಜೆಟ್ ಮಂಡನೆ ಸಂದರ್ಭದಲ್ಲಿ ಸಚಿವೆ ನಿರ್ಮಲಾ ಅವರು ತೆಲಂಗಾಣ ರಾಜ್ಯದ ಪೊಚಂಪಳ್ಳಿ ಇಕಟ್ ಸೀರೆಯನ್ನುಟ್ಟು ಗಮನ ಸೆಳೆದಿದ್ದರು. ಈ ಸೀರೆ ಕೆಂಪು, ಕ್ರೀಂ ಹಾಗೂ ಹಸರು ಬಣ್ಣದ ಮಿಶ್ರಣವಾಗಿತ್ತು.

ಕೋವಿಡ್ 19 ಲಸಿಕೆಗೆ 35 ಸಾವಿರ ಕೋಟಿ ರೂಪಾಯಿಗಳ ಅನುದಾನ ಸಹಿತ ಸಚಿವೆ ನಿರ್ಮಲಾ ಅವರು ಒಟ್ಟು 2 ಲಕ್ಷ ಕೋಟಿ ರೂಪಾಯಿಗಳನ್ನು ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡುವುದಾಗಿ ಘೋಷಿಸಿದ್ದರು. ಇದರೊಂದಿಗೆ, 1.10 ಲಕ್ಷ ರೂಪಾಯಿಗಳನ್ನು ರೈಲ್ವೇ ವಲಯಕ್ಕೆ ಮೀಸಲಿರಿಸಿದ್ದರು ಹಾಗೂ ಪ್ರಸಕ್ತ ಆರ್ಥಿಕ ವರ್ಷದಲ್ಲಿ 11 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿಯನ್ನು ನಿಗದಿಪಡಿಸಿದ್ದರು.

ತೆಲಂಗಾಣ ರಾಜ್ಯದ ಪೊಚಂಪಳ್ಳಿ ಇಕಟ್ ಸೀರೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್

2020ರ ಬಜೆಟ್:

ಈ ಬಜೆಟ್ ಮಂಡನೆ ಸಂದರ್ಭದಲ್ಲಿ ಸಚಿವೆ ನಿರ್ಮಲಾ ಅವರು, ಹಳದಿ ರೇಷ್ಮೆ ಸೀರೆಯನ್ನು ಉಟ್ಟಿದ್ದರು. ಇದಕ್ಕೆ ನೀಲಿ ಬಾರ್ಡರ್ ಇತ್ತು. ಪ್ರತೀ ಬಣ್ಣವೂ ವಿಶೇಷ ಅರ್ಥವನ್ನು ಒಳಗೊಂಡಿತ್ತು. ಹಳದಿ ಬೆಳವಣಿಗೆ, ಆಶಾವಾದ ಮತ್ತು ಹೊಸತನದ ಪ್ರಾರಂಭದ ಪ್ರತಿರೂಪವಾಗಿದ್ದರೆ, ನೀಲಿ ಸ್ಥಿರತೆ ಹಾಗೂ ಶಾಂತಿಯನ್ನು ಪ್ರತಿನಿಧಿಸುತ್ತಿತ್ತು. ಸವಾಲಿನ ಸಂದರ್ಭದಲ್ಲಿ ಬೆಳವಣಿಗೆ ಮತ್ತು ಸಶಕ್ತೀಕರಣದೆಡೆಗೆ ಸರಕಾರದ ಬದ್ಧತೆಯನ್ನು ಈ ಸೀರೆ ಪ್ರತಿಬಿಂಬಿಸುವಂತಿತ್ತು.

2020-21ರ ಬಜೆಟ್ ಜನರ ಆದಾಯದಲ್ಲಿ ಏರಿಕೆ ಮತ್ತು ಅವರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿತ್ತು. ಈ ಬಜೆಟ್ ನಲ್ಲಿ ಆರೋಗ್ಯ ಕ್ಷೇತ್ರಕ್ಕೆ 69 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಡುವ ಪ್ರಸ್ತಾವನೆ ಇತ್ತು. ಸ್ವಚ್ಛ ಭಾರತ ಯೊಜನೆಗೆ 12 ಸಾವಿರದ 300 ಕೋಟಿ ರೂಪಾಯಿ ಮತ್ತು ಮನೆ ಮನೆಗೆ ಗಂಗೆ ಯೋಜನೆಗೆ 3.6 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಡುವ ಪ್ರಸ್ತಾವನೆ ಈ ಬಜೆಟ್ ನಲ್ಲಿತ್ತು.

ಹಳದಿ ರೇಷ್ಮೆ ಸೀರೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್

2019ರ ಬಜೆಟ್:

2019ರಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ್ದರು. ಈ ಸಂದರ್ಭದಲ್ಲಿ ಅವರು ಪಿಂಕ್ ಮಂಗಳಗಿರಿ ಸೀರೆಯನ್ನು ಉಟ್ಟುಕೊಂಡಿದ್ದರು. ಇದಕ್ಕೆ ಗೋಲ್ಡ್ ಬಾರ್ಡರ್ ಇತ್ತು. ಸೀತಾರಾಮನ್ ಅವರು ವಸಾಹತುಶಾಹಿಯ ಪ್ರತಿರೂಪವಾಗಿದ್ದ ಬಜೆಟ್ ಪೇಪರ್ ಗಳನ್ನು ತರುವ ಪದ್ಧತಿಯನ್ನು ಕೈಬಿಟ್ಟು ‘ಬಹಿ ಖಾತಾ’ವನ್ನು ಪ್ರಥಮವಾಗಿ ಬಳಸಿದ್ದರು.

ಆರ್ಥಿಕ ಬೆಳವಣಿಗೆ ಕುಂಠಿತವಾಗಿದ್ದ ಸವಾಲಿನ ನಡುವೆ ಸಚಿವೆ ನಿರ್ಮಲಾ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ್ದರು. ಹೆಚ್ಚಿನ ಆದಾಯದಾರರಿಗೆ ತೆರಿಗೆ ಸರ್ ಚಾರ್ಜ್ ವಿಧಿಸುವ ಮತ್ತು ಕಾರ್ಪೊರೇಟ್ ತೆರಿಗೆ ವಿಸ್ತರಣೆಯಂತಹ ಪ್ರಮುಖ ಪ್ರಸ್ತಾವನೆಗಳು ಈ ಬಜೆಟ್ ನಲ್ಲಿತ್ತು. ಈ ಬಜೆಟ್ ನಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ, ಗೃಹ ನಿರ್ಮಾಣಕ್ಕೆ ಮತ್ತು ಮೂಲಭೂತ ಸೌಕರ್ಯಗಳ ಅಭವೃದ್ದಿಗೆ ವಿಶೇಷ ಆದ್ಯತೆ ನೀಡಲಾಗಿತ್ತು. ಇದರಲ್ಲಿ ಮುಂದಿನ ಐದು ವರ್ಷಗಳ ಅವಧಿಗೆ 100 ಲಕ್ಷ ಕೋಟಿ ಹೂಡಿಕೆ ಯೋಜನೆಯನ್ನು ಪ್ರಸ್ತಾಪಿಸಲಾಗಿತ್ತು.

ಪಿಂಕ್ ಮಂಗಳಗಿರಿ ಸೀರೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್