Tahawwur Rana: ಮುಂಬೈ ಅಟ್ಯಾಕ್‌ನ ಆರೋಪಿ ತಹವ್ವುರ್ ರಾಣಾ ಹಸ್ತಾಂತರಕ್ಕೆ ಅಮೆರಿಕ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್!
ಮುಂಬೈ ದಾಳಿಯ ಭಯೋತ್ಪಾದಕ, ಅಪರಾಧಿ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕದ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿದೆ. ಪಾಕಿಸ್ತಾನಿ ಮೂಲದ ಕೆನಡಾ ಪ್ರಜೆ ತಹವ್ವುರ್ ರಾಣಾನನ್ನು ಹಸ್ತಾಂತರಿಸುವಂತೆ ಭಾರತ ಒತ್ತಾಯಿಸುತ್ತಿತ್ತು. 2008ರ ಮುಂಬೈ ದಾಳಿಯ ಪ್ರಕರಣದಲ್ಲಿ ತಹವ್ವುರ್ ರಾಣಾ ನೇರಾ ಭಾಗಿಯಾಗಿದ್ದನು. ಭಾರತಕ್ಕೆ ಹಸ್ತಾಂತರಿಸುವ ವಿರುದ್ಧ ಆತ ಕಾನೂನು ಹೋರಾಟ ನಡೆಸಿದ್ದನು.
ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್(Donald Trump) ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಮಹತ್ವದ ಬೆಳವಣಿಗೆಗಳಾಗುತ್ತಿವೆ. ಟ್ರಂಪ್ ಪ್ರಮುಖ ನಿರ್ಣಯಗಳನ್ನು ಘೋಷಿಸುತ್ತಿದ್ದಾರೆ. ಇದೀಗ 2008ರ ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ನೇರ ಭಾಗಿಯಾಗಿ, ದೋಷಿ ಎಂದು ಸಾಬೀತಾಗಿರುವ ತಹವ್ವುರ್ ಹುಸೇನ್ ರಾಣಾನನ್ನು(Tahawwur Rana) ಭಾರತಕ್ಕೆ ಹಸ್ತಾಂತರಿಸಲು ಅಮೆರಿಕದ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ. ಪಾಕಿಸ್ತಾನಿ-ಕೆನಡಾದ ಉದ್ಯಮಿ ತಹವ್ವುರ್ ರಾಣಾನನ್ನು ಹಸ್ತಾಂತರ ಮಾಡಬೇಕು ಎಂದು ಭಾರತ ಹಲವು ವರ್ಷಗಳಿಂದ ಬೇಡಿಕೆ ಇಟ್ಟಿತ್ತು.
ಅಮೆರಿಕ ಸುಪ್ರೀಂಕೋರ್ಟ್ ತಹವ್ವುರ್ ಹುಸೇನ್ ರಾಣಾರನ್ನು ಭಾರತಕ್ಕೆ ಹಸ್ತಾಂತರ ಮಾಡುವ ಪ್ರಕ್ರಿಯೆಗಳಿಗೆ ಒಪ್ಪಿಗೆ ನೀಡಿದೆ ಎಂದು ವರದಿಯಾಗಿದೆ. ರಾಣಾನನ್ನು ಭಾರತಕ್ಕೆ ಕರೆ ತಂದರೆ ಮುಂಬೈ ದಾಳಿಯ ಕುರಿತು ಇನ್ನಷ್ಟು ವಿಷಯಗಳು ಬಹಿರಂಗವಾಗಲಿದೆ. ಹಲವು ವರ್ಷಗಳಿಂದ ಭಾರತ ತಹವ್ವುರ್ ಹುಸೇನ್ ರಾಣಾನನ್ನು ಅಮೆರಿಕದಿಂದ ಭಾರತಕ್ಕೆ ಗಡಿಪಾರು ಮಾಡಬೇಕು ಎಂದು ಒತ್ತಾಯಿಸುತ್ತಿತ್ತು. ಪಾಕಿಸ್ತಾನಿ ಮೂಲದ ರಾಣಾನನ್ನು ಗಡಿಪಾರು ಮಾಡಲು ಈಗ ಅಮೆರಿಕ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿದೆ.
26/11 Mumbai Terrorist Attack
— Kedar (@shintre_kedar) January 25, 2025
🇺🇸 US Supreme Court has cleared extradition of 2008 Mumbai terror attack accused Pakistani Tahawwur Rana to India 🇮🇳#MumbaiAttack pic.twitter.com/VVPhab3z9Y
2024ರಲ್ಲೇ ಹಸ್ತಾಂತರ?
2024ರಲ್ಲಿಯೇ ಭಾರತಕ್ಕೆ ತಹವ್ವುರ್ ಹುಸೇನ್ ರಾಣಾನನ್ನು ಹಸ್ತಾಂತರ ಮಾಡಲಾಗುತ್ತದೆ ಎಂಬ ಮಾಹಿತಿ ಇತ್ತು. ಆದರೆ ಈ ಪ್ರಕ್ರಿಯೆಗಳನ್ನು ಕೈಗೊಳ್ಳಲು ಅಮೆರಿಕ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿರಲಿಲ್ಲ. ಡಿಸೆಂಬರ್‌ನಲ್ಲಿ ಭಾರತಕ್ಕೆ ತಹವ್ವುರ್ ಹುಸೇನ್ ರಾಣಾನನ್ನು ಕರೆತರಲಾಗುತ್ತದೆ ಎಂದು ಮುಂಬೈನ ಜೈಲಿನಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿತ್ತು. ಸೆಪ್ಟೆಂಬರ್‌ನಲ್ಲಿ ಗಡಿಪಾರು ಮಾಡದಂತೆ ಕೋರಿ ತಹವ್ವುರ್ ಹುಸೇನ್ ರಾಣಾ ಸಲ್ಲಿಕೆ ಮಾಡಿದ್ದ ಮನವಿಯನ್ನು ಕೋರ್ಟ್ ವಜಾಗೊಳಿಸಿತ್ತು. ಹಸ್ತಾಂತರ ಒಪ್ಪಂದದ ಅಡಿಯಲ್ಲಿ ಭಾರತಕ್ಕೆ ಹಸ್ತಾಂತರ ಮಾಡಲು ಅವಕಾಶವಿದೆ ಎಂದು ಹೇಳಿತ್ತು.
ತಹವ್ವುರ್ ಹುಸೇನ್ ರಾಣಾ ವಿರುದ್ಧ ಅಮೆರಿಕದಲ್ಲಿಯೂ ಹಲವು ಪ್ರಕರಣಗಳ ವಿಚಾರಣೆ ನಡೆದಿದೆ. 2008ರ ಮುಂಬೈ ಭಯೋತ್ಪಾದಕ ದಾಳಿಯ ಕುರಿತು ತನಿಖೆ ಕೈಗೊಂಡಿದ್ದ ಎನ್‌ಐಎ ತಹವ್ವುರ್ ಹುಸೇನ್ ರಾಣಾ ಸೇರಿದಂತೆ ಇತರ 9 ಮಂದಿ ದಾಳಿಗೆ ಯೋಜನೆ ರೂಪಿಸಿದ ಆರೋಪ ಮಾಡಿತ್ತು. ಇದು ಕೋರ್ಟ್‌ನಲ್ಲಿಯೂ ಸಾಬೀತಾಗಿತ್ತು.
ಈ ಸುದ್ದಿಯನ್ನೂ ಓದಿ;Junaid Ahmed Bhat: ಗಂದೇರ್ಬಾಲ್‌ನ ದಾಳಿಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕ ಜುನೈದ್ ಅಹ್ಮದ್‌ನನ್ನು ಹೊಡೆದುರುಳಿಸಿದ ಸೇನೆ
ಮುಂಬೈ ದಾಳಿಯ ಸಂಚು ಆರೋಪದ ಮೇಲೆ ಅಮೆರಿಕದಲ್ಲಿ ತಹವ್ವುರ್ ಹುಸೇನ್ ರಾಣಾನನ್ನು ಬಂಧಿಸಲಾಗಿತ್ತು. ಎನ್‌ಐಎ ತಹವ್ವುರ್ ಹುಸೇನ್ ರಾಣಾ ವಿರುದ್ಧ ಅಂತರಾಷ್ಟ್ರೀಯ ಬಂಧನದ ವಾರೆಂಟ್ ಅನ್ನು ಹೊರಡಿಸಿತ್ತು. ಮಾಹಿತಿಗಳ ಪ್ರಕಾರ ರಾಣಾ ತನ್ನ ಪಾಕಿಸ್ತಾನದ ಬಾಲ್ಯ ಸ್ನೇಹಿತ ಅಮೆರಿಕನ್ ಡೇವಿಡ್ ಕೋಲ್‌ಮನ್ ಹೆಡ್ಲಿ ಜೊತೆ ಸೇರಿಕೊಂಡು ಈ ಕೃತ್ಯದ ಯೋಜನೆ ರೂಪಿಸಿದ್ದಾನೆ ಎಂದು ಆರೋಪಿಸಲಾಗಿದೆ.