Junaid Ahmed Bhat: ಗಂದೇರ್ಬಾಲ್‌ನ ದಾಳಿಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕ ಜುನೈದ್ ಅಹ್ಮದ್‌ನನ್ನು ಹೊಡೆದುರುಳಿಸಿದ ಸೇನೆ
Junaid Ahmed Bhat : ಪೊಲೀಸ್ ಎನ್‌ಕೌಂಟರ್ ನಿಂದ ಹತನಾದ ಲಷ್ಕರ್ ಭಯೋತ್ಪಾದಕ ಜುನೈದ್ ಅಹ್ಮದ್ ಭಟ್ ಈ ಹಿಂದೆ ನಡೆದಿದ್ದ ಗಂದೇರ್ಬಾಲ್ ಭೀಕರ ದಾಳಿಯಲ್ಲಿ ನೇರ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ.
Deekshith Nair
Dec 3, 2024 6:09 PM
ಶ್ರೀನಗರ: ಜುನೈದ್ ಅಹ್ಮದ್ ಭಟ್ (Junaid Ahmed Bhat) ಎಂಬ ಭಯೋತ್ಪಾದಕ ಈ ಹಿಂದೆ ಗಗಾಂಗೀರ್(Gagangir), ಗಂದೇರ್ಬಾಲ್(Ganderbal) ಪ್ರದೇಶಗಳಲ್ಲಿ ನಡೆದ ಭೀಕರ ದಾಳಿಯಲ್ಲಿ ನೇರ ಭಾಗಿಯಾಗಿದ್ದು, ಹಲವು ನಾಗರಿಕ ಹತ್ಯೆಗಳಿಗೆ ಕಾರಣನಾಗಿದ್ದಾನೆ. ಆತನನ್ನು ಇದೀಗ ಹೊಡೆದುರುಳಿಸಲಾಗಿದೆ ಎಂದು ಕಾಶ್ಮೀರ(Kashmir) ಪೊಲೀಸರು ತಿಳಿಸಿದ್ದಾರೆ.
ʼʼಜಮ್ಮು ಮತ್ತು ಕಾಶ್ಮೀರದ ದಚಿಗ್ರಾಮ್ ಪ್ರದೇಶದಲ್ಲಿ ಮಂಗಳವಾರ (ಡಿ. 3) ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ)ಗೆ ಸೇರಿದ ಈತನನ್ನು ಹತ್ಯೆ ಮಾಡಲಾಗಿದೆ. ಈತ ಗಗಾಂಗೀರ್, ಗಂದೇರ್ಬಾಲ್ ಮತ್ತು ಇತರ ಭಯೋತ್ಪಾದಕ ದಾಳಿಗಳಲ್ಲಿ ಹಾಗೂ ಭೀಕರ ನಾಗರಿಕ ಹತ್ಯೆಗಳಲ್ಲಿ ಅವನು ನೇರ ಭಾಗಿಯಾಗಿದ್ದಾನೆʼʼ ಎಂದು ಕಾಶ್ಮೀರ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸೋಮವಾರ ಸಂಜೆ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಜಂಟಿ ತಂಡವು ಈ ಪ್ರದೇಶದಲ್ಲಿ ಸ್ಥಳೀಯರಲ್ಲದ ಗುಂಪಿನ ಚಲನವಲನೆ ಸೂಚಿಸುವ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು. ಸುದೀರ್ಘ ಶೋಧ ಕಾರ್ಯಾಚರಣೆಯ ನಂತರ ದಾಚಿಗ್ರಾಮ್‌ನಲ್ಲಿ ಎನ್‌ಕೌಂಟರ್ ನಡೆದಿತ್ತು.
A-category LeT terrorist Junaid Ahmad Bhat from Kulgam killed in #OPDachigam. Involved in Gagangeer civilian killings and multiple terror attacks. #Kashmir #PakistanTerrorism#Dachigam#Encounter pic.twitter.com/TxTWN7DpRV— Zeenat Zeeshan Fazil (@zeenatfazil) December 3, 2024
ಶೋಧ ಕಾರ್ಯಾಚರಣೆ ಮುಂದುವರಿದಂತೆ ಇಬ್ಬರು ಭಯೋತ್ಪಾದಕರು ಈ ಪ್ರದೇಶದಲ್ಲಿ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. ಕಾಶ್ಮೀರ ಕಣಿವೆಯಲ್ಲಿನ ಭದ್ರತಾ ಸಂಬಂಧಿತ ಘಟನೆಗಳ ಸರಣಿಯ ನಡುವೆ ಇತ್ತೀಚೆಗೆ ನಡೆದ ಎನ್‌ಕೌಂಟರ್ ಇದಾಗಿದೆ.
ಅ. 20ರಂದು ಗಂದೇರ್ಬಾಲ್‌ನಲ್ಲಿ ಘನಘೋರ ಹತ್ಯೆ ನಡೆದಿದ್ದು, ದಾಳಿಯ ವೇಳೆ ವೈದ್ಯ ಮತ್ತು 6 ವಲಸೆ ಕಾರ್ಮಿಕರನ್ನು ಭಯೋತ್ಪಾದಕರು ಹತ್ಯೆ ಮಾಡಿದ್ದರು. ದಾಳಿಯಾದ ಕೆಲವೇ ದಿನಗಳಲ್ಲಿ ಲಷ್ಕರ್ ಭಯೋತ್ಪಾದಕ ಜುನೈದ್ ಅಹ್ಮದ್ ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡು ಬಂದಿದ್ದ.
ಸುರಂಗದಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ಇತರ ಸಿಬ್ಬಂದಿ ವಾಸಿಸುತ್ತಿದ್ದ ಶಿಬಿರಕ್ಕೆ ಜುನೈದ್ ಪ್ರವೇಶಿಸುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿ ತೋರಿಸಿದೆ. ಕುಲ್ಗಾಮ್ ನಿವಾಸಿಯಾದ ಜುನೈದ್ ಅಹ್ಮದ್ ಕಪ್ಪು ಬಟ್ಟೆಯನ್ನು ಧರಿಸಿ ಬೂದು ಬಣ್ಣದ ಶಾಲು ಹೊದ್ದು, ಕೈಯಲ್ಲಿ ರೈಫಲ್ ಹಿಡಿದುಕೊಂಡಿರುವುದನ್ನು ದೃಶ್ಯದಲ್ಲಿ ಕಾಣಬಹುದು.
ಭದ್ರತಾ ಪಡೆ ಎನ್‌ಕೌಂಟರ್‌ನಲ್ಲಿ ಉಗ್ರ ಹತ್ಯೆ
ಜಮ್ಮು ಮತ್ತು ಕಾಶ್ಮೀರದ (Jammu Kashmir) ದಾಚಿಗಂ ಅರಣ್ಯ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಉಗ್ರ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ತಿಳಿಸಿದ್ದಾರೆ. ಉಗ್ರರಿರುವ ಮಾಹಿತಿ ಮೇರೆಗೆ ಭಾರತೀಯ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಸೋಮವಾರ (ಡಿ. 1) ಎನ್‌ಕೌಂಟರ್ ಪ್ರಾರಂಭವಾಗಿದ್ದು, ಮಂಗಳವಾರ ಬೆಳಗ್ಗೆ ಓರ್ವ ಉಗ್ರ ಹತನಾಗಿದ್ದಾನೆ.
ದಾಚಿಗಂ ಅರಣ್ಯ ಪ್ರದೇಶಕ್ಕೂ ಮುನ್ನ ಶ್ರೀನಗರದ ಹರ್ವಾನ್ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಬಳಿಕ ಉಗ್ರರ ಅಡಗುತಾಣ ಸುತ್ತುವರಿದಾಗ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಎನ್‌ಕೌಂಟರ್ ಆರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದಕ್ಕೂ ಮುನ್ನ ನ. 23ರಂದು, ಬಾರಾಮುಲ್ಲಾ ಪೊಲೀಸರು ಹಾಗೂ ಭದ್ರತಾ ಪಡೆಗಳೊಂದಿಗೆ ನಡೆಸಿದ್ದ ಜಂಟಿ ಕಾರ್ಯಾಚರಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಕುಂಜರ್ ಪ್ರದೇಶದಲ್ಲಿ ಭಯೋತ್ಪಾದಕರ ಅಡಗುತಾಣವನ್ನು ಭೇದಿಸುವ ಮೂಲಕ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದರು.
ಈ ಸುದ್ದಿಯನ್ನೂ ಓದಿ: Naxalite Encounter: ಎನ್‌ಕೌಂಟರ್‌ನಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಹತ