Viral News:ನಿಶ್ಚಿತಾರ್ಥ ಕ್ಯಾನ್ಸಲ್ ಮಾಡಿದ್ದು ವರ; ಶಿಕ್ಷೆ ಅನುಭವಿಸಿದ್ದು ಮಾತ್ರ ಸಹೋದರ- ಏನಿದು ಕಹಾನಿ?
ಮದುವೆ ನಿಶ್ಚಿತಾರ್ಥ ಮಾಡಿಕೊಂಡ ವರ ನಂತರ ನಿಶ್ಚಿತಾರ್ಥ ರದ್ದುಗೊಳಿಸಿದ್ದಾನೆ. ಇದರಿಂದ ಕೋಪಗೊಂಡ ವಧುವಿನ ಕುಟುಂಬಸ್ಥರು ಪ್ರತಿಕಾರ ತೀರಿಸಿಕೊಳ್ಳಲು ವರನ ಸಹೋದರನ ಮೀಸೆ ಬೋಳಿಸಿ ಅವಮಾನ ಮಾಡಿದ ಸುದ್ದಿ ಈಗ ಸಿಕ್ಕಾಪಟ್ಟೆ ವೈರಲ್((Viral News) )ಆಗಿದೆ.
ಜೈಪುರ: ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದ್ದರು ಎಂಬ ಗಾದೆ ಮಾತಂತೆ ಮದುವೆ ನಿಶ್ಚಿತಾರ್ಥವನ್ನು ರದ್ದುಗೊಳಿಸಿದ ವರನನ್ನು ಬಿಟ್ಟು ವಧುವಿನ ಕುಟುಂಬಸ್ಥರೆಲ್ಲರೂ ಸೇರಿ ಆತನ ಸಹೋದರನ ಮೇಲೆ ಪ್ರತಿಕಾರ ತೀರಿಸಿಕೊಂಡ ಘಟನೆ ರಾಜಸ್ತಾನದ ಕರೌಲಿ ಜಿಲ್ಲೆಯಲ್ಲಿ ನಡೆದಿದೆ. ವಧುವಿನ ಕುಟುಂಬದವರು ಸೇರಿ ವರ ಸಹೋದರನ ಮೀಸೆಯನ್ನು ಬೋಳಿಸಿ ಸಾರ್ವಜನಿಕವಾಗಿ ಅವಮಾನಿಸಿದ್ದಾರೆ. ಈ ಘಟನೆಯು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.
ವರದಿ ಪ್ರಕಾರ, ವರನ ಸಹೋದರಿ ವಧುವಿನ ಬಗ್ಗೆ ಅಸಮ್ಮತಿ ವ್ಯಕ್ತಪಡಿಸಿದ ನಂತರ ವರನ ಕುಟುಂಬವು ನಿಶ್ಚಿತಾರ್ಥವನ್ನು ರದ್ದುಗೊಳಿಸಿದೆಯಂತೆ. ಇದು ಪರಿಸ್ಥಿತಿ ಉದ್ವಿಗ್ನತೆಗೆ ಕಾರಣವಾಗಿದೆ. ಈ ನಿರ್ಧಾರವು ವಧುವಿನ ಕುಟುಂಬವನ್ನು ಕೆರಳಿಸಿದೆ ಹಾಗೇ ಇದು ತೀವ್ರವಾದ ಘರ್ಷಣೆಗೆ ಕಾರಣವಾಯಿತು. ಇದಕ್ಕಾಗಿ ಪ್ರತೀಕಾರ ತೀರಿಸಿಕೊಳ್ಳಲು ಮುಂದಾದ ವಧುವಿನ ಕುಟುಂಬಸ್ಥರು ವರನ ಸಹೋದರನನ್ನು ಬಲವಂತವಾಗಿ ಹಿಡಿದು ಅವನ ಮೀಸೆಯನ್ನು ಬೋಳಿಸಿದ್ದಾರೆ. ಈ ಘಟನೆಯನ್ನು ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
ಈ ಘಟನೆಗೆ ಪ್ರತಿಕ್ರಿಯೆಯಾಗಿ, ವರನು ಮತ್ತೊಂದು ವಿಡಿಯೊವನ್ನು ಪೋಸ್ಟ್ ಮಾಡಿ, ನಿಶ್ಚಿತಾರ್ಥ ರದ್ದುಗೊಳಿಸಲು ಕಾರಣವೇನು ಎಂಬುದನ್ನು ಹಂಚಿಕೊಂಡಿದ್ದಾನೆ. ಪೋಟೊದಲ್ಲಿ ತೋರಿಸಿದ ವಧು ಮತ್ತು ಮಂಟಪದಲ್ಲಿದ್ದ ವಧುವಿನ ನಡುವಿನ ವ್ಯತ್ಯಾಸವನ್ನು ಕಂಡುಹಿಡಿದ ನಂತರ ಅವನ ಕುಟುಂಬವು ನಿಶ್ಚಿತಾರ್ಥವನ್ನು ರದ್ದುಗೊಳಿಸಿದೆ ಎಂದು ವರನು ವಿವರಿಸಿದ್ದಾನೆ. ತನ್ನ ಕುಟುಂಬವು ಈ "ಮೋಸವನ್ನು" ಕಂಡುಹಿಡಿದು ನಿಶ್ಚಿತಾರ್ಥವನ್ನು ಮುರಿದುಕೊಂಡಿದೆ ಎಂದು ವರ ಬಹಿರಂಗಪಡಿಸಿದ್ದಾನೆ.
ತನ್ನ ಕುಟುಂಬವು ಅನಗತ್ಯ ಒತ್ತಡ ಮತ್ತು ಸಾರ್ವಜನಿಕ ಅವಮಾನಕ್ಕೆ ಒಳಗಾಗಿದೆ ಎಂದು ವರನು ಹೇಳಿದ್ದಾನೆ. ನ್ಯಾಯ ಕೋರಿ ಮತ್ತು ಮತ್ತಷ್ಟು ಬೆದರಿಕೆಗಳಿಂದ ರಕ್ಷಣೆ ಕೋರಿ ಅವರು ಈಗ ಪೊಲೀಸರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ:Viral Video: ಹಗಲು ಹೊತ್ತಿನಲ್ಲೇ ಬೈಕ್ ಕದ್ದ ಖದೀಮ! ಸಿಸಿಟಿವಿಯಲ್ಲಿ ಸೆರೆಯಾದ ವಿಡಿಯೊ ವೈರಲ್
ಎರಡೂ ಪಕ್ಷಗಳಿಂದ ಇನ್ನೂ ಯಾವುದೇ ಔಪಚಾರಿಕ ದೂರುಗಳು ದಾಖಲಾಗಿಲ್ಲ ಎಂದು ನಾದೌತಿ ಪೊಲೀಸ್ ಠಾಣೆಯ ಉಸ್ತುವಾರಿ ಮಹೇಂದ್ರ ಕುಮಾರ್ ದೃಢಪಡಿಸಿದ್ದಾರೆ. ಆದರೆ ಈ ವಿಷಯದ ಬಗ್ಗೆ ತಿಳಿದುಬಂದ ಕೂಡಲೇ ಪೊಲೀಸರು ಪರಿಸ್ಥಿತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡಿದ್ದಾರೆ ಎನ್ನಲಾಗಿದೆ.