Viral News: ಆರ್ಡರ್ ಮಾಡಿದ್ದು ಬೆಲ್ಲದ ಚಹಾ – ಬಂದಿದ್ದು ಬೆಲ್ಲವಿಲ್ಲದ ಚಹಾ ; ಝೊಮ್ಯಾಟೊ ಕಸ್ಟಮರ್ ಸಪೋರ್ಟ್ ಹೀಗಿತ್ತು..!
Viral News: ಮಹಾನಗರಗಳಲ್ಲಿ ಇದೀಗ ಜನರ ಹಸಿವನ್ನು ತಣಿಸುತ್ತಿರುವ ಫುಡ್ ಡೆಲಿವರಿ ಕಂಪೆನಿಗಳಲ್ಲಿ ಝೊಮ್ಯಾಟೊ ಕೂಡಾ ಒಂದು. ಇಲ್ಲಿ ಕೆಲವೊಮ್ಮೆ ಫುಡ್ ಡೆಲಿವರಿಯಲ್ಲಿ ಎಡವಟ್ಟಾದಾಗ ಏನಾಗುತ್ತದೆ ಎಂಬುದಕ್ಕೆ ಸಂಬಂಧಿಸಿದ ಸುದ್ದಿಯೊಂದು ಇಲ್ಲಿದೆ..
ಬೆಂಗಳೂರು, ಜನವರಿ 18,2025: ಬೆಂಗಳೂರು (Bengaluru) ಮೂಲದ ಯೂ-ಟ್ಯೂಬರ್ (YouTuber) ಇಶಾನ್ ಶರ್ಮಾ ಇತ್ತೀಚೆಗೆ ಝೊಮ್ಯಾಟೋದೊಂದಿಗಿನ (Zomato) ತನ್ನ ಅನುಭವವೊಂದನ್ನು ‘ಎಕ್ಸ್’ನಲ್ಲಿ (X) ಹಂಚಿಕೊಂಡಿದ್ದು, ಇದೀಗ ಸಿಕ್ಕಾಪಟ್ಟೆ ವೈರಲ್ (Viral News) ಆಗಿದೆ. ತಾನು ಆರ್ಡರ್ ಮಾಡಿದ್ದ ಚಹಾವನ್ನು ಬೆಲ್ಲ ರಹಿತವಾಗಿ ಡೆಲಿವರಿ ಪಡೆದುಕೊಂಡ ಸಂದರ್ಭದಲ್ಲಿ ತನಗಾದ ಅನುಭವವನ್ನು ಶರ್ಮಾ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಶರ್ಮಾ ಅವರು ಝೊಮ್ಯಾಟೊ ಕಸ್ಟಮರ್ ಸೆಂಟರ್‌ಗೆ (Customer Center) ದೂರು ಸಲ್ಲಿಸಿದಾಗ ಅಲ್ಲಿ ತನಗೆ ಸಿಕ್ಕ ಪ್ರತಿಕ್ರಿಯೆ ಬಗ್ಗೆ ಶರ್ಮಾ ಹೇಳಿಕೊಂಡಿದ್ದಾರೆ. ಯೂಟ್ಯೂಬರ್ ಶರ್ಮಾ ಬೆಲ್ಲದ ಚಹಾ ಆರ್ಡರ್ ಮಾಡಿದ್ದಾರೆ. ಆದ್ರೆ ತಪ್ಪಿ ಅವರಿಗೆ ಬೆಲ್ಲ ರಹಿತ ಚಹಾ ಡೆಲಿವರಿ ಆಗಿದೆ.
ಝೊಮ್ಯಾಟೊ ಕಸ್ಟಮರ್ ಕೇರ್ ಸಪೋರ್ಟ್ ಎಕ್ಸಿಕ್ಯೂಟಿವ್ ಜೊತೆ ತಾನು ಮಾಡಿದ ಚಾಟ್ ನ ಸ್ಕ್ರೀನ್ ಶಾಟ್ ಹಂಚಿಕೊಂಡಿರುವ ಶರ್ಮಾ, ಆ ಎಕ್ಸಿಕ್ಯೂಟಿವ್ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವಲ್ಲಿ ಪಟ್ಟ ಶ್ರಮದ ಬಗ್ಗೆ ಖುಷಿಯಾಗಿದ್ದಾರೆ. ‘ಝೊಮ್ಯಾಟೊದ ಕ್ಯೂಟ್ ಚಾಟ್ ಸಪೋರ್ಟ್’ ಎಂಬ ತಲೆಬರಹದಲ್ಲಿ ಅವರು ಈ ಘಟನೆಯನ್ನು ತನ್ನ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Zomato got pookie chat support😭 pic.twitter.com/TlDQyTBRDS
— Ishan Sharma (@Ishansharma7390) January 15, 2025
‘ಸರ್. ದಯವಿಟ್ಟು ನೀವು ಈ ಚಹಾ ಸೇವಿಸಬೇಕೆಂದು ನಾನು ವಿನಂತಿಸುತ್ತಿದ್ದೆನೆ…! ಬೆಲ್ಲದ ಶುಲ್ಕವನ್ನು ಹಿಂತಿರುಗಿಸಲು ನಾನು ವ್ಯವಸ್ಥೆ ಮಾಡುತ್ತೇನೆ’ ಎಂದು ಝೊಮ್ಯಾಟೊ ಕಸ್ಟಮರ್ ಸಪೋರ್ಟ್ ಏಜೆಂಟ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಭಾಚಣೆಯುದ್ದಕ್ಕೂ, ಎಕ್ಸಿಕ್ಯೂಟಿವ್ ತನ್ನ ವೃತ್ತಿಪರ ಧ್ವನಿಯನ್ನು ಕಾಪಾಡಿಕೊಂಡಿದ್ದಾರೆ. ಆದರೆ, ಒಂದು ಸಂದರ್ಭದಲ್ಲಿ, ಬೆಲ್ಲ ಇಲ್ಲದ ಈ ಚಹಾವನ್ನು ನಾನು ಸೇವಿಸಲು ಸಾಧ್ಯವಿಲ್ಲವೆಂದು ಯೂಟ್ಯೂಬರ್ ಹೇಳಿದ ಸಂದರ್ಭದಲ್ಲಿ, ಎಕ್ಸಿಕ್ಯೂಟಿವ್ ರೆಸ್ಪಾನ್ಸ್ ಹೀಗಿತ್ತು, ‘ಬೆಳ್ಳಂಬೆಳಿಗ್ಗೆ ಚಹಾ ಇಲ್ಲದಿದ್ದರೆ ಹೇಗಾಗುತ್ತದೆ ಎಂಬುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ, ಇದು ನಮಗೆ ಏನನ್ನೋ ಕಳೆದುಕೊಂಡ ಭಾವನೆಯನ್ನು ನೀಡುತ್ತದೆ’ ಎಂದು ಆ ಎಕ್ಸಿಕ್ಯೂಟಿವ್ ಪ್ರತಿಕ್ರಿಯೆ ನೀಡಿದ್ದಾರೆ. ‘ಪ್ಲೀಸ್ ಸರ್..! ಇವತ್ತು ಮಾತ್ರ, ನೀವು ಚಹಾ ಕುಡಿಯಬೇಕೆಂದು ನಾನು ವಿನಂತಿ ಮಾಡುತ್ತಿದ್ದೇನೆ! ನೀವು ಹೀಗಿರುವುದು ನನಗೆ ಇಷ್ಟವಿಲ್ಲ’ ಎಂದು ಝೊಮ್ಯಾಟೊ ಸಪೋರ್ಟ್ ಎಕ್ಸಿಕ್ಯೂಟಿವ್ ಹೇಳಿದ್ದಾರೆ.
ಯೂಟ್ಯೂಬರ್ ಮತ್ತು ಝೊಮ್ಯಾಟೊ ಚಾಟ್ ಎಕ್ಸಿಕ್ಯೂಟಿವ್ ನಡುವೆ ನಡೆದಿರುವ ಈ ಸಂಭಾಷಣೆ ಇದೀಗ ನೆಟ್ಟಿಗರ ಹೃದಯ ಗೆದ್ದಿದೆ. ಈ ಪೋಸ್ಟ್ ಈಗಾಗಲೇ 4 ಸಾವಿರಕ್ಕಿಂತಲೂ ಅಧಿಕ ವಿಕ್ಷಣೆಯನ್ನು ಪಡೆದುಕೊಂಡಿದೆ ಮತ್ತು ಹಲವರು ಇದನ್ನು ಲೈಕ್ ಮಾಡಿ ಕಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಮೊಸಳೆಯ ಬಾಯಿಯನ್ನೇ ಕಚ್ಚಿ ಸಾವಿನಿಂದ ಪಾರಾದ ಜೀಬ್ರಾ: ಶಾಕಿಂಗ್ ವಿಡಿಯೊ ವೈರಲ್
‘ನೀವು ಸಿಂಗಲ್ ಎಂದು ಅವರಿಗೆ ತಿಳಿದಿದೆ, ಹಾಗಾಗಿ ನಿಮಗೆ ಸ್ವಲ್ಪ ಹೆಚ್ಚೇ ಪ್ರೀತಿಯ ಸಪೋರ್ಟ್ ನೀಡುತ್ತಿದ್ದಾರೆ’ ಎಂದು ಒಬ್ಬರು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. ‘ಝೊಮ್ಯಾಟೊ ಯಾವಾಗಲೂ ಕ್ಯೂಟ್ ಆಗಿಯೇ ಇರುತ್ತದೆ’ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಹೀಗೆ ಈ ಪೋಸ್ಟ್ ಗೆ ನೆಟ್ಟಿಗರು ಹಲವು ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.