Viral Video: ‘ಎಲ್ಲವೂ ಲೈಕ್ಸ್ ಮತ್ತು ವ್ಯೂವ್ಸ್’ಗಾಗಿ; ವಿಮಾನದಲ್ಲಿ ಇವರಿಬ್ಬರ ವರ್ತನೆಗೆ ಕಿಡಿಕಾರಿದ ನೆಟ್ಟಿಗರು
Viral Video: ಕೆಲವೊಮ್ಮೆ ಇನ್ನೊಬ್ಬರ ಗಮನ ಸೆಳೆಯುವ ಅವಸರದಲ್ಲಿ ಸಾರ್ವಜನಿಕ ಪ್ರಜ್ಞೆಯನ್ನು ಮರೆತಾಗ ಏನಾಗಬಹುದೆಂಬುದಕ್ಕೆ ಈ ಸುದ್ದಿ ಒಳ್ಳೆಯ ನಿದರ್ಶನ. ಸದ್ಯ ವೈರಲ್ ಆಗಿರುವ ಈ ವಿಡಿಯೊವನ್ನು ನೀವೂ ನೋಡಿ.
ಹೊಸದಿಲ್ಲಿ: ಪ್ರಯಾಣದ (Travelling) ಸಮಯದಲ್ಲಿ ನಮ್ಮಿಂದ ಸಹ ಪ್ರಯಾಣಿಕರಿಗೆ (Passengers) ತೊಂದರೆ ಆಗದಂತೆ ವರ್ತಿಸೋದು ನಮ್ಮ ನೈತಿಕ ಜವಾಬ್ದಾರಿ (Moral Duty) ಆಗಿರುತ್ತದೆ. ಇತ್ತೀಚೆಗೆ ಕರ್ನಾಟಕ ಸಾರಿಗೆ ಇಲಾಖೆ (KSRTC And BMTC) ಸಹ ಪ್ರಯಾಣದ ವೇಳೆ ಮೊಬೈಲ್ (Mobile)ನಲ್ಲಿ ಜೋರಾಗಿ ಹಾಡು ಕೇಳದಂತೆ ಸುತ್ತೋಲೆಯನ್ನ ಹೊರಡಿಸಿದೆ. ಎಲ್ಲ ಪ್ರಯಾಣಿಕರ ಹಿತದೃಷ್ಟಿಯಿಂದ ಸರ್ಕಾರ ಈ ಆದೇಶವನ್ನು ತಂದಿತ್ತು. ಸಾರ್ವಜನಿಕ ವಲಯದಲ್ಲಿಯೂ ಈ ಆದೇಶಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಪ್ರಯಾಣದ ಸಮಯದಲ್ಲಿ, ನಿಮ್ಮಿಂದ ಬೇರೆ ಯಾರಿಗೂ ಯಾವುದೇ ತೊಂದರೆ ಆಗುತ್ತಿಲ್ಲ ಎಂಬುದನ್ನ ನೆನಪಿನಲ್ಲಿಟ್ಟುಕೊಳ್ಳಬೇಕು. ಆದರೆ ಕೆಲವರು ಬೇರೆಯವರಿಗೆ ಅನಾನುಕೂಲತೆ ಆಗುತ್ತಿದ್ರೂ ತಮ್ಮ ಮೊಂಡುತನ ಪ್ರದರ್ಶನ ಮಾಡುತ್ತಿರುತ್ತಾರೆ. ಇದರಿಂದ ಇತರ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗ್ತಾರೆ (Viral Video).
ವಿಮಾನದಲ್ಲಿ ಪ್ರಯಾಣಿಸುವ ಕೆಲವರು, ವಿಮಾನದ ಸಿಬ್ಬಂದಿಗೆ, ಗಗನಸಖಿಗಳಿಗೆ ನೀಡುವ ಹಾವಳಿ ಅಷ್ಟಿಷ್ಟಲ್ಲ. ಕೆಲವರು ಸಮೀಪ ಕುಳಿತ ಸಹ ಪ್ರಯಾಣಿಕರನ್ನು ಸುಮ್ಮನೇ ಕೂರಲು ಬಿಡುವುದಿಲ್ಲ. ಸಹ ಪ್ರಯಾಣಿಕರಿಗೆ ವಿಮಾನ ಸಿಬ್ಬಂದಿಗೆ ಪ್ರಯಾಣಿಕರು ಕಿರುಕುಳ ನೀಡಿದ ಹಲವು ಪ್ರಕರಣಗಳು ಈಗಾಗಲೇ ನಡೆದಿವೆ. ಅದೇ ರೀತಿ ಈಗ ಇನ್ನೊಂದು ಪ್ರಕರಣ ಹೊಸದಾಗಿ ಬೆಳಕಿಗೆ ಬಂದಿದೆ.
ಇನ್ನು ಕೆಲವು ಸೋಶಿಯಲ್ ಮೀಡಿಯಾ (Social Media) ಇನ್ ಫ್ಲ್ಯುವೆನ್ಸರ್‌ಗಳು ಇಂಟರ್‌ನೆಟ್‌ನಲ್ಲಿ ಖ್ಯಾತಿ ಗಳಿಸಲು ಕೆಲವೊಮ್ಮೆ ಸಾರ್ವಜನಿಕ ಸ್ಥಳಗಳಲ್ಲಿ ಹದ್ದುಮೀರಿ ವರ್ತಿಸುವುದರಿಂದ ಇತರರಿಗೆ ಕಿರಿಕಿರಿಯಾಗುವ ಸಾಧ್ಯತೆಗಳಿರುತ್ತವೆ.
ಇಂತಹದ್ದೇ ಒಂದು ಘಟನೆಯ ವಿಡಿಯೊ ಇದೀಗ ವೈರಲ್ (Viral Video) ಆಗುತ್ತಿದ್ದು, ಈ ವಿಡಿಯೊದಲ್ಲಿ ದಿಲ್ಲಿ ಮೂಲದ ಇಬ್ಬರು ಸೋಶಿಯಲ್ ಮೀಡಿಯಾ ಇನ್ ಫ್ಲ್ಯುವೆನ್ಸರ್‌ಗಳು ವಿಮಾನದಲ್ಲಿ ತಮ್ಮ ಬ್ಲೂಟೂತ್ ಮೂಲಕ ಗಟ್ಟಿಯಾಗಿ ಮ್ಯೂಸಿಕ್ ಪ್ಲೇ ಮಾಡಿ ಇತರರಿಗೆ ಕಿರಿಕಿರಿಯುಂಟು ಮಾಡಿರುವ ದೃಶ್ಯ ಸೆರೆಯಾಗಿದೆ.
Hi, @JM_Scindia ,
— Muneeeem (@heavycomedi) January 17, 2025
These two influencers are from Delhi, their names are Aarush Bhola and Varun Yadav, they are creating nuisance in a running aeroplane for the sake of views on Instagram. pic.twitter.com/9IWysNd00C
ವರುಣ್ ಯಾದವ್ ಎಂಬಾತ ಈ ವಿಡಿಯೊವನ್ನು ಶೇರ್ ಮಾಡಿದ್ದು, ಆತನ ಬಳಿಯಲ್ಲಿ ಇದ್ದ ಇನ್ನೊಬ್ಬ ಯುವಕ ಅರುಷ್ ಭೋಲಾ ವಿಮಾನದೊಳಗೆ ಈ ಸೀನ್ ಕ್ರಿಯೇಟ್ ಮಾಡಿದ್ದಾನೆ. ಇವರಿಬ್ಬರೂ ತಮ್ಮ ಬ್ಲೂಟೂತ್ ಸ್ಪೀಕರ್‌ಗಳಲ್ಲಿ ಗಟ್ಟಿಯಾಗಿ ಮ್ಯೂಸಿಕ್ ಪ್ಲೇ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರಿಬ್ಬರ ಸಹಪ್ರಯಾಣಿಕರ ಪ್ರತಿಕ್ರಿಯೆ ಬಗ್ಗೆ ಯಾವುದೇ ರೀತಿಯಲ್ಲಿ ತಲೆಕೆಡಿಸಿಕೊಂಡಿಲ್ಲ.
ಇವರಿಬ್ಬರ ಈ ವರ್ತನೆ ಸಹಪ್ರಯಾಣಿಕರಲ್ಲಿ ಕೆಲವರಲ್ಲಿ ದಿಗಿಲಿಗೆ ಕಾರಣವಾಗಿದ್ದರೆ, ಇನ್ನು ಕೆಲವರಲ್ಲಿ ಸಿಟ್ಟು ತರಿಸಿದೆ. ಈ ವಿಡಿಯೊಗೆ ಯಾದವ್, ‘ಹವಾ ಮೆ ಭಿ ಬದ್ಮಾಶಿ’ (ಆಕಾಶದಲ್ಲೂ ಕಿಡಿಗೇಡಿತನ) ಎಂದು ಕ್ಯಾಪ್ಷನ್ ನೀಡಿದ್ದಾರೆ.
ಈ ಘಟನೆ ದಿಲ್ಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿರುವುದಾಗಿ ತಿಳಿದುಬಂದಿದ್ದು, ಈ ವಿಡಿಯೊ ಈಗಾಗಲೇ 7.1 ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ. ಇದನ್ನು ವಿಕ್ಷಿಸಿದವರೆಲ್ಲರೂ ಇವರಿಬ್ಬರ ವರ್ತನೆಯನ್ನು ಟೀಕಿಸಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಸಾಮಾನ್ಯ ಪ್ರಜ್ಞೆ ತೋರದ ಇವರಿಬ್ಬರ ವರ್ತನೆಗೆ ಬಹಳಷ್ಟು ನೆಟ್ಟಿಗರು ಗರಂ ಆಗಿದ್ದು, ಇವರ ಈ ವರ್ತನೆಯನ್ನು ಟೀಕಿಸಿ ಕಾಮೆಂಟ್ ಮಾಡಿದ್ದಾರೆ.