Viral Video: ಪ್ರಜ್ಞೆ ತಪ್ಪಿದ ಮರಿಯನ್ನು ಬಾಯಲ್ಲೇ ಹೊತ್ತುಕೊಂಡು ಕ್ಲಿನಿಕ್‍ಗೆ ಬಂದ ತಾಯಿ ಶ್ವಾನ; ಅದ್ಭುತ ವಿಡಿಯೊ ನೋಡಿ
Viral Video: ನಾಯಿಯೊಂದು ಪ್ರಜ್ಞೆ ತಪ್ಪಿದ ತನ್ನ ಮರಿಯನ್ನು ಬಾಯಲ್ಲೇ ಹೊತ್ತುಕೊಂಡು ಹತ್ತಿರದ ಪಶು ಚಿಕಿತ್ಸಾಲಯಕ್ಕೆ ಕರೆದುಕೊಂಡು ಬಂದಿದೆ. ಜ. 13ರಂದು ಈ ಘಟನೆ ನಡೆದಿದೆ. ಈ ದೃಶ್ಯವನ್ನು ಕಂಡು ವೈದ್ಯರೇ ದಂಗಾಗಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
Source : Free press jounal
ಅಂಕಾರಾ, ಜ. 17, 2025: ಮನುಷ್ಯರು ತಮ್ಮ ಮಕ್ಕಳಿಗೆ ಹುಷಾರಿಲ್ಲವಾದರೆ ಅವರನ್ನು ಕೈಯಲ್ಲಿ ಎತ್ತುಕೊಂಡು ಆಸ್ಪತ್ರೆಗೆ ಹೋಗುವುದನ್ನು ನಾವೆಲ್ಲರೂ ಸಾಮಾನ್ಯವಾಗಿ ನೋಡಿರುತ್ತೇವೆ. ಆದರೆ ಇಲ್ಲಿ ನಾಯಿಯೊಂದು ತನ್ನ ಪ್ರಜ್ಞೆ ತಪ್ಪಿದ ಮರಿಯನ್ನು ಬಾಯಲ್ಲೇ ಹೊತ್ತುಕೊಂಡು ಹತ್ತಿರದ ಪಶು ಚಿಕಿತ್ಸಾಲಯಕ್ಕೆ ಕರೆದುಕೊಂಡು ಬಂದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Vi ral Video) ಆಗಿದ್ದು, ಇದನ್ನು ಕಂಡು ವೈದ್ಯರು ಮತ್ತು ನೆಟ್ಟಿಗರು ದಿಗ್ಭ್ರಮೆಗೊಂಡಿದ್ದಾರೆ.
ವೈರಲ್ ವಿಡಿಯೊದಲ್ಲಿ ನಾಯಿಯೊಂದು ತನ್ನ ಪುಟ್ಟ ಮರಿಯನ್ನು ಬಾಯಿಯಲ್ಲಿ ಹೊತ್ತುಕೊಂಡು ನೇರವಾಗಿ ಆರೋಗ್ಯ ಕೇಂದ್ರಕ್ಕೆ ಬಂದಿತ್ತು. ಜನವರಿ 13ರಂದು ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಮಾನವ ಸಹಾಯಕ್ಕಾಗಿ ಕಾಯುವ ಬದಲು, ತಾಯಿ ನಾಯಿ ತನ್ನ ಮಗುವನ್ನು ಬಾಯಿಯಲ್ಲಿ ಹಿಡಿದುಕೊಂಡು ಸಹಾಯಕ್ಕಾಗಿ ಕ್ಲಿನಿಕ್‌ನ ಬಾಗಿಲಿಗೆ ಬಂದಿದೆ.
ಅಲ್ಲದೆ ಅಲ್ಲಿ ತನ್ನ ಮರಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಿದೆ.
A mother dog amazed veterinarians by carrying her unconscious, hypothermic puppy to their clinic, a moment that went viral in Turkey. pic.twitter.com/gllzjyE6N4
— DW News (@dwnews) January 16, 2025
ಅದೃಷ್ಟವಶಾತ್ ತಾಯಿಯ ಪ್ರಯತ್ನಗಳು ವ್ಯರ್ಥವಾಗಲಿಲ್ಲ. ನಾಯಿಮರಿ ಬದುಕುಳಿದಿದೆ. ನಾಯಿ ಸರಿಯಾದ ಸಮಯಕ್ಕೆ ಮರಿಯನ್ನು ಕರೆದುಕೊಂಡು ಬಂದ ಕಾರಣ ಪಶುವೈದ್ಯರು ಅದನ್ನು ಬದುಕಿಸಲು ಸಾಧ್ಯವಾಯಿತು. ನಾಯಿ ಮರಿಯನ್ನು ಆಸ್ಪತ್ರೆಗೆ ಕರೆತರುವಾಗ ಅದು ಪ್ರಜ್ಞಾಹೀನ ಸ್ಥಿತಿಯಲ್ಲಿತ್ತು ಎನ್ನಲಾಗಿದೆ. ವರದಿಗಳ ಪ್ರಕಾರ, ಆ ನಾಯಿ ಆರು ಮರಿಗಳಿಗೆ ಜನ್ಮ ನೀಡಿತ್ತು, ಅದರಲ್ಲಿ ಎರಡು ಮರಿಗಳಿಗೆ ಹೆಚ್ಚಿನ ಆರೈಕೆಗಾಗಿ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಈ ಸುದ್ದಿಯನ್ನೂ ಓದಿ:Viral Video: ಛಾವಣಿ ಮೇಲೆ 3 ನಾಯಿಗಳನ್ನು ಕೂರಿಸಿ ಕಾರು ಚಲಾಯಿಸಿದ ಭೂಪ; ಕೇಳಿದ್ದಕ್ಕೆ ಹೀಗಾ ಮಾಡೋದು?!
ನಾಯಿ ತನ್ನ ಮರಿಯನ್ನು ಹೊತ್ತುಕೊಂಡು ಕ್ಲಿನಿಕ್‍ನ ಬಾಗಿಲ ಬಳಿ ನಿಂತಿದ್ದಾಗ ಆರೋಗ್ಯ ಕೇಂದ್ರದ ಸಿಬ್ಬಂದಿ ಅದನ್ನು ಗಮನಿಸಿ ತಕ್ಷಣ ಬಾಗಿಲನ್ನು ತೆರೆದಿದ್ದಾರೆ. ನಾಯಿಮರಿಯ ದೇಹ ತಣ್ಣಗಾಗಿದ್ದನ್ನು ನೋಡಿ ಸಿಬ್ಬಂದಿ ಹಾಗೂ ವೈದ್ಯರು ಅದು ಸತ್ತಿರಬಹುದು ಎಂದುಕೊಂಡಿದ್ದರು. ಆದರೆ ಅದರ ಹೃದಯವನ್ನು ಪರೀಕ್ಷಿಸಿದಾಗ, ಅದು ಇನ್ನೂ ಬಡಿದುಕೊಳ್ಳುತ್ತಿದೆ ಎಂದು ಅವರು ತಿಳಿದುಕೊಂಡರು. ಹಾಗಾಗಿ ಅವರು ತಕ್ಷಣ ಅದಕ್ಕೆ ಚಿಕಿತ್ಸೆ ನೀಡಿದ್ದಾರೆ. ಹೀಗಾಗಿ ನಾಯಿ ಮರಿಯ ಜೀವ ಉಳಿದಿದೆ ಮತ್ತು ತಾಯಿ ನಾಯಿಯ ಪ್ರಯತ್ನಕ್ಕೆ ಪ್ರತಿಫಲ ಸಿಕ್ಕಿದೆ ಎನ್ನಲಾಗಿದೆ.