Viral Video: ಛಾವಣಿ ಮೇಲೆ 3 ನಾಯಿಗಳನ್ನು ಕೂರಿಸಿ ಕಾರು ಚಲಾಯಿಸಿದ ಭೂಪ; ಕೇಳಿದ್ದಕ್ಕೆ ಹೀಗಾ ಮಾಡೋದು?!
ಬೆಂಗಳೂರಿನ ವ್ಯಕ್ತಿಯೊಬ್ಬ ತನ್ನ ಕಾರಿನ ಛಾವಣಿಯ ಮೇಲೆ ಮೂರು ನಾಯಿಗಳನ್ನು ಕೂರಿಸಿಕೊಂಡು ಹೋಗಿದ್ದ ಘಟನೆ ನಗರದ ಜನನಿಬಿಡ ಕಲ್ಯಾಣ್ ನಗರ ಪ್ರದೇಶದಲ್ಲಿ ನಡೆದಿದೆ. ಈ ಬಗ್ಗೆ ಸಹ ವಾಹನ ಚಾಲಕರೊಬ್ಬರು ಪ್ರಶ್ನಿಸಿದಾಗ, ಕಾರಿನ ಚಾಲಕ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
Vishwavani News
December 6, 2024
ಬೆಂಗಳೂರು: ಬೆಂಗಳೂರಿನ ವ್ಯಕ್ತಿಯೊಬ್ಬ ತನ್ನ ಕಾರಿನ ಛಾವಣಿಯ ಮೇಲೆ 3 ನಾಯಿಗಳನ್ನು ಕೂರಿಸಿಕೊಂಡು ಹೋದ ಘಟನೆ ನಗರದ ಜನನಿಬಿಡ ಕಲ್ಯಾಣ್ ನಗರ ಪ್ರದೇಶದಲ್ಲಿ ನಡೆದಿದೆ. ನಾಯಿಗಳು ಮತ್ತು ರಸ್ತೆ ಸುರಕ್ಷತೆಯ ದೃಷ್ಟಿಯಿಂದ ವಾಹನ ಚಾಲಕರೊಬ್ಬರು ಈ ಘಟನೆಯನ್ನು ಪ್ರಶ್ನಿಸಿದಾಗ, ಕಾರಿನ ಚಾಲಕ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಆ ಕಾರಿನ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಹರೀಶ್ ಎಂದು ಗುರುತಿಸಲಾಗಿದ್ದು, ನಕಲಿ "ಪ್ರೆಸ್" ಲೇಬಲ್‍ನೊಂದಿಗೆ ತನ್ನ ಕಾರನ್ನು ಓಡಿಸಿದ್ದಾನೆ ಎನ್ನಲಾಗಿದೆ. ಬಾಣಸವಾಡಿ ಪೊಲೀಸರು ಹರೀಶ್ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 351 (2) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಹೆಚ್ಚಿನ ತನಿಖೆಗಾಗಿ ಪೊಲೀಸರು ಆತನ ವಾಹನವನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
@BlrCityPolice @blrcitytraffic ಈ ನನ್ ಮಗನ್ನ ದಯವಿಟ್ಟು ಮಕಾಡೆ ಮಲಗ್ಸಿ 🙏🏻 https://t.co/1L1HHxceYZ— ದೀಕ್ಷಿತ್ ಹೊಸಹಳ್ಳಿ ಸುರೇಶ್ (@dixit_h_suresh) December 5, 2024
ವಿಶೇಷವೆಂದರೆ, 3 ನಾಯಿಗಳೊಂದಿಗೆ ಕಾರನ್ನು ಓಡಿಸುವಾಗ ಅವನ ತಲೆಯ ಮೇಲೆ ಕೂದಲಿರುವುದು ಕಂಡುಬಂದಿದೆ. ಆದರೆ ನಂತರ ಪೊಲೀಸರಿಗೆ ಸಿಕ್ಕಿಬಿದ್ದಾಗ, ತನ್ನ ಗುರುತನ್ನು ಮರೆಮಾಚಲು ಅಥವಾ ತಪ್ಪಿಸಿಕೊಳ್ಳಲು ಅವನು ತನ್ನ ತಲೆಯನ್ನು ಬೋಳಿಸಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ವಿಡಿಯೊದಲ್ಲಿ ಏನಿದೆ?
ವೈರಲ್ ವಿಡಿಯೊದಲ್ಲಿ ಸಹ ಪ್ರಯಾಣಿಕರೊಬ್ಬರು ತಮ್ಮ ವಾಹನವನ್ನು ಆ ಕಾರಿನ ಪಕ್ಕದಲ್ಲಿ ನಿಲ್ಲಿಸಿ ಕಾರಿನ ಛಾವಣಿಯ ಮೇಲೆ ಪ್ರಾಣಿಗಳನ್ನು ಇರಿಸಿ ಚಾಲನೆ ಮಾಡುವುದು ಅಪಾಯಕಾರಿ ಎಂದು ಹೇಳಿದ್ದಾರೆ. ಆದರೆ ಆತ ಅವರ ಮಾತನ್ನು ಕೇಳದೆ ಬದಲಾಗಿ ಸಾರ್ವಜನಿಕರ ಮುಂದೆ ಆ ವ್ಯಕ್ತಿಯನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಆನಂತರ ಆ ವ್ಯಕ್ತಿ ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‍ಲೋಡ್ ಮಾಡಿದ್ದಾರೆ.
ಈ ವೈರಲ್ ವಿಡಿಯೊಗೆ ಶೀರ್ಷಿಕೆಯಲ್ಲಿ, 3 ನಾಯಿಗಳನ್ನು ಛಾವಣಿ ಮೇಲೆ ಕೂರಿಸಿ ಕಾರನ್ನು ಸುಮಾರು 2 ಕಿ.ಮೀ. ಓಡಿಸಲಾಗಿದೆ ಎಂದು ವಿವರಿಸಲಾಗಿದೆ. ಡಿಸೆಂಬರ್ 3ರ ರಾತ್ರಿ ಈ ಘಟನೆ ನಡೆದಿದೆ. ನಾಯಿಗಳು ಬೀಳದಂತೆ ರಕ್ಷಿಸಲು ಯಾವುದೇ ಹಗ್ಗ ಅಥವಾ ಸರಪಳಿಯನ್ನು ಕಟ್ಟಲಾಗಿಲ್ಲ. ವಿಶೇಷವೆಂದರೆ, ಕಾರಿನಲ್ಲಿ ಗಟ್ಟಿಯಾಗಿ ಮ್ಯೂಸಿಕ ಅನ್ನು ಹಾಕಲಾಗಿದೆ. ಆತ "ಪ್ರೆಸ್" ಲೇಬಲ್ ಜತೆಗೆ ಅಂತಹ ಅಪಾಯಕಾರಿ ಕೆಲಸ ಮಾಡಿದ್ದಾನೆ ಎಂದು ಬರೆಯಲಾಗಿದೆ.
ಹಲವಾರು ಸೋಶಿಯಲ್ ಮೀಡಿಯಾ ಬಳಕೆದಾರರು ಈ ವಿಡಿಯೊವನ್ನು ತಮ್ಮ ಪ್ಲಾಟ್‍ಫಾರ್ಮ್‍ಗಳಲ್ಲಿ ಹಂಚಿಕೊಂಡಿದ್ದು, ಪೊಲೀಸರ ಗಮನ ಸೆಳೆದಿದ್ದಾರೆ. ಈ ಬಗ್ಗೆ ಪೊಲೀಸರು ಗಮನ ಹರಿಸಬೇಕು ಮತ್ತು ಕಾರಿನ ಮೇಲೆ ಮೂರು ಮುಗ್ಧ ಜೀವಗಳನ್ನು ಇರಿಸಿಕೊಂಡು ಕಾರು ಓಡಿಸಿದ್ದ ವ್ಯಕ್ತಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬೆಂಗಳೂರು ನಗರ ಪೊಲೀಸರು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಕಾರು ಪತ್ತೆಯಾಗಿದ್ದು, ಸ್ಥಳೀಯ ಪೊಲೀಸ್ ಠಾಣೆಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದು ಪೊಲೀಸ್ ತಂಡವು ತಮ್ಮ ಪೋಸ್ಟ್‌ನಲ್ಲಿ ಬರೆದಿದೆ.
ಇದನ್ನೂ ಓದಿ:ಮೋಡಿ ಮಾಡಿದ ಪವನ್ ಸಿಂಗ್ & ಕಾಜಲ್ ರಘ್ವಾನಿ ಜೋಡಿಯ ‘ಲಹಾಬ್ ಚುಮ್ಮಾ ಏಕ್ ಲಖ್ ಮೇ’ ಹಾಡು
ಇತ್ತೀಚಿನ ಮಾಹಿತಿ ಪ್ರಕಾರ, ಛಾವಣಿ ಮೇಲೆ ನಾಯಿಗಳನ್ನು ಕೂರಿಸಿ ಕಾರನ್ನು ಓಡಿಸಿದ್ದ ಮಾಲೀಕರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ. ಮಾಹಿತಿಯ ಪ್ರಕಾರ, ಆತನನ್ನು ಹೇರ್‌ಸ್ಟೈಲಿಶ್ ಹರೀಶ್ ಎಂದು ಗುರುತಿಸಲಾಗಿದ್ದು, ಬಿಎನ್ಎಸ್‌ನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಬಂಧಿಸಲಾಗಿದೆ.