Vivek Ramaswamy : ಟ್ರಂಪ್ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ‘DOGE’ ಗೆ ವಿವೇಕ್ ರಾಮಸ್ವಾಮಿ ರಾಜೀನಾಮೆ! ಕಾರಣವೇನು ಗೊತ್ತಾ ?
ಸೋಮವಾರ ಡೊನಾಲ್ಡ್ ಟ್ರಂಪ್ ಅವರು ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಟ್ರಂಪ್ ಸರ್ಕಾರದ ಸರ್ಕಾರಿ ದಕ್ಷತೆ ಇಲಾಖೆಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದ ಭಾರತೀಯ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ ಅವರು ರಾಜಿನಾಮೆಯನ್ನು ಘೋಷಿಸಿದ್ದಾರೆ. ಈ ಬಗ್ಗೆ ಶ್ವೇತಭವನ ಅಧಿಕೃತ ಹೇಳಿಕೆಯನ್ನು ನೀಡಿದೆ.
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಅಚ್ಚರಿ ಬೆಳವಣಿಗೆ ಎಂಬಂತೆ ಕಾರ್ಯದಕ್ಷತಾ ಇಲಾಖೆ(DOGE) ಮುಖ್ಯಸ್ಥ ಉಸ್ತುವಾರಿಯಾಗಿ ಸ್ಥಾನಕ್ಕೆ ಭಾರತೀಯ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ (Vivek Ramaswamy) ರಾಜೀನಾಮೆ ಸಲ್ಲಿಸಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲುವು ಸಾಧಿಸುತ್ತಿದ್ದಂತೆ ಎಲೋನ್ ಮಸ್ಕ್ ಮತ್ತು ವಿವೇಕ್ ರಾಮಸ್ವಾಮಿ ಅವರನ್ನು DOGE ಉಸ್ತುವಾರಿಗಳನ್ನಾಗಿ ನೇಮಿಸಿದ್ದರು. ಆದರೆ ಕೇವಲ ಎರಡು ತಿಂಗಳ ನಂತರ ವಿವೇಕ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಅಮೆರಿಕದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಅಧಿಕಾರ ವಹಿಸಕೊಂಡ ಕೆಲವೇ ಹೊತ್ತಿನಲ್ಲಿ ಭಾರತೀಯ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ ಟ್ರಂಪ್ ಸಂಪುಟವನ್ನು ತೊರೆದಿದ್ದಾರೆ. ರಾಮಸ್ವಾಮಿ ಅವರು ಇನ್ನು ಮುಂದೆ ಸರ್ಕಾರಿ ದಕ್ಷತೆ ಇಲಾಖೆಯ (ಡಿಒಜಿಇ) ಭಾಗವಾಗಿರುವುದಿಲ್ಲ ಎಂದು ತಿಳಿದು ಬಂದಿದೆ. ಸದ್ಯ ನೇಮಕಗೊಂಡಿರುವ ಎಲೋನ್ ಮಸ್ಕ್ ಅವರು ಇನ್ನು ಮುಂದೆ ಸರ್ಕಾರದ ದಕ್ಷತೆಯ ಇಲಾಖೆಯ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಈ ಬಗ್ಗೆ ಸೋಮವಾರ ಶ್ವೇತಭವನದಿಂದ ಅಧಿಕೃತ ಪ್ರಕಟನೆ ಹೊರಬಿದ್ದಿದೆ.
2024 ರಲ್ಲಿ ನಡೆದಿದ್ದ ಅಮೆರಿಕ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದಿಂದ ಸ್ಪರ್ಧಿಸಲು ಸಜ್ಜಾಗಿದ್ದ ರಾಮಸ್ವಾಮಿ ಅವರು ಇದೀಗ ಓಹಿಯೋದ ಗವರ್ನರ್ ಹುದ್ದೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. DOGE ಅನ್ನು ರಚಿಸಲು ನಮಗೆ ಸಹಾಯ ಮಾಡುವಲ್ಲಿ ವಿವೇಕ್ ರಾಮಸ್ವಾಮಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ" ಎಂದು ಆಯೋಗದ ವಕ್ತಾರ ಅನ್ನಾ ಕೆಲ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಳೆದ 2 ತಿಂಗಳುಗಳಲ್ಲಿ ಅವರು ನೀಡಿದ ಕೊಡುಗೆಗಳಿಗಾಗಿ ನಾವು ಅವರಿಗೆ ಅಪಾರ ಕೃತಜ್ಞತೆ ಸಲ್ಲಿಸುತ್ತೇವೆ ಮತ್ತು ಅಮೆರಿಕವನ್ನು ಮತ್ತೊಮ್ಮೆ ಶ್ರೇಷ್ಠಗೊಳಿಸುವಲ್ಲಿ ಅವರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಎಂದು ನಿರೀಕ್ಷಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಭಾರತೀಯ ಮೂಲದ ರಾಮಸ್ವಾಮಿ, ಹಾರ್ವರ್ಡ್ ವಿಶ್ವವಿದ್ಯಾಲಯ ಮತ್ತು ನಂತರ ಯೇಲ್ ಕಾನೂನು ಶಾಲೆಯಿಂದ ಪದವಿ ಪಡೆಯುವಾಗ ಹೆಡ್ಜ್ ಫಂಡ್ಗಳು ಮತ್ತು ಔಷಧೀಯ ಸಂಶೋಧನೆಯ ಜಂಕ್ಷನ್ನಲ್ಲಿ ನೂರಾರು ಮಿಲಿಯನ್ ಡಾಲರ್ಗಳನ್ನು ಗಳಿಸಿದರು. ಹಾರ್ವರ್ಡ್ ವಿಶ್ವವಿದ್ಯಾಲಯ ಮತ್ತು ಯೇಲ್ ಲಾ ಸ್ಕೂಲ್‌ನಿಂದ ಪದವಿಯನ್ನು ಪಡೆದು ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು.
ಈ ಸುದ್ದಿಯನ್ನೂ ಓದಿ : ಅಮೇರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಡೊನಾಲ್ಡ್ ಟ್ರಂಪ್!
ವಿವೇಕ್ ರಾಮಸ್ವಾಮಿ ವಿದ್ಯಾರ್ಥಿ ಕಾಲದಲ್ಲಿ ಉದಾರವಾದಿ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. 2004ರಲ್ಲಿ ಲಿಬರ್ಟೇರಿಯನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಗೆ ವೋಟ್ ಹಾಕಿದ್ದಾಗಿ ಅವರು ಹೇಳಿಕೊಂಡಿದ್ದಾರೆ. 2016ರಿಂದೀಚೆ ಅವರು ರಿಪಬ್ಲಿಕನ್ ಪಕ್ಷದ ಪರ ರಾಜಕೀಯ ನಿಲುವು ಹೊಂದಿರುವುದು ಕಂಡು ಬಂದಿದೆ. 2020 ಹಾಗೂ 2024 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ಗೆ ಬೆಂಬಲ ನೀಡಿದ್ದರು.