Waqf Bill: ಲೋಕಸಭೆ ಬಳಿಕ ರಾಜ್ಯಸಭೆಯಲ್ಲೂ ವಕ್ಫ್ ವಿಧೇಯಕ ಅಂಗೀಕಾರ
ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ವಿಧೇಯಕದ ಪರವಾಗಿ 138 ಮತಗಳು ಮತ್ತು ವಿರುದ್ಧವಾಗಿ 95 ಮತಗಳು ಚಲಾವಣೆಯಾದವು.ಇದರಿಂದ ಉಭಯ ಸದನಗಳಲ್ಲೂ ವಿಧೇಯಕ ಅಂಗೀಕಾರವಾದಂತಾಗಿದ್ದು, ಕಾನೂನಾಗಲು ಕೇವಲ ಒಂದು ಹೆಜ್ಜೆ ಬಾಕಿ ಇದೆ. ರಾಷ್ಟ್ರಪತಿಗಳ ಅಂಕಿತದೊಂದಿಗೆ ಅದು ಕಾಯಿದೆಯಾಗಲಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ: ರಾಜ್ಯಸಭೆಯಲ್ಲಿಯೂ (Rajya Sabha) ವಕ್ಫ್ ತಿದ್ದುಪಡಿ ವಿಧೇಯಕಕ್ಕೆ (Waqf Amendment Bill) ಅನುಮೋದನೆ ಪಡೆಯುವಲ್ಲಿ ಎನ್ಡಿಎ ಸರ್ಕಾರ (NDA Govt) ಯಶಸ್ವಿಯಾಗಿದೆ. ಗುರುವಾರ ತಡರಾತ್ರಿ ವಕ್ಫ್ ತಿದ್ದುಪಡಿ ವಿಧೇಯಕವನ್ನು (Waqf Bill) ರಾಜ್ಯಸಭೆಯಲ್ಲಿ ಮತಕ್ಕೆ ಹಾಕಲಾಯಿತು. ವಿಧೇಯಕದ ಪರವಾಗಿ 138 ಮತಗಳು ಮತ್ತು ವಿರುದ್ಧವಾಗಿ 95 ಮತಗಳು ಚಲಾವಣೆಯಾದವು.ಇದರಿಂದ ಉಭಯ ಸದನಗಳಲ್ಲೂ ವಿಧೇಯಕ ಅಂಗೀಕಾರವಾದಂತಾಗಿದ್ದು, ಕಾನೂನಾಗಲು ಕೇವಲ ಒಂದು ಹೆಜ್ಜೆ ಬಾಕಿ ಇದೆ. ಈ ಮಸೂದೆಯನ್ನು ರಾಷ್ಟ್ರಪತಿಗಳಿಗೆ ಕಳುಹಿಸಿ ಅವರು ಸಹಿ ಹಾಕಿದ ತಕ್ಷಣ ಕಾನೂನಿನ ರೂಪವನ್ನು ಪಡೆಯುತ್ತದೆ.
ರಾಜ್ಯಸಭೆಗೂ ಮುನ್ನ, ಸರ್ಕಾರವು ಬುಧವಾರ ಲೋಕಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿತ್ತು. ಅಲ್ಲಿ, ಸುಮಾರು 12 ಗಂಟೆಗಳ ಚರ್ಚೆಯ ನಂತರ, ಸರ್ಕಾರವು ಅದನ್ನು ಅಂಗೀಕರಿಸುವಲ್ಲಿ ಯಶಸ್ವಿಯಾಗಿತ್ತು. ಲೋಕಸಭೆಯಲ್ಲಿ ಈ ಮಸೂದೆಯ ಪರವಾಗಿ 288 ಮತಗಳು ಮತ್ತು ವಿರುದ್ಧವಾಗಿ 232 ಮತಗಳು ಚಲಾವಣೆಯಾಗಿದ್ದವು.
ರಾಜ್ಯಸಭೆಯಲ್ಲಿ ಚರ್ಚೆಯ ಸಮಯದಲ್ಲಿ, ವಿರೋಧ ಪಕ್ಷಗಳು ಮಸೂದೆಯನ್ನು ಬಲವಾಗಿ ವಿರೋಧಿಸಿದವು. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಮಸೂದೆಯನ್ನು ಅಸಾಂವಿಧಾನಿಕ ಎಂದು ಕರೆದರು. ವಕ್ಫ್ ಮಸೂದೆಯಲ್ಲಿ ಹಲವು ನ್ಯೂನತೆಗಳು ಮತ್ತು ದೋಷಗಳಿವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಮುಸ್ಲಿಂ ಸಮುದಾಯಕ್ಕೆ ಕಿರುಕುಳ ನೀಡಲು ಸರ್ಕಾರ ಈ ಮಸೂದೆಯನ್ನು ತಂದಿದೆ. ವಕ್ಫ್ ಮಂಡಳಿಗೆ ಸಂಬಂಧಿಸಿದಂತೆ ಈಗಾಗಲೇ ಕಾನೂನು ಇದ್ದು, ಅದನ್ನು ಬದಲಾಯಿಸಬಹುದು. ಹೊಸ ಮಸೂದೆಯ ಅಗತ್ಯವಿಲ್ಲ. ಮಸೂದೆಯನ್ನು ಹಿಂಪಡೆಯಬೇಕು ಎಂದು ಖರ್ಗೆ ಆಗ್ರಹಿಸಿದರು.
ವಿರೋಧ ಪಕ್ಷದ ಆರೋಪಗಳಿಗೆ ಬಿಜೆಪಿ ಬಲವಾದ ತಿರುಗೇಟು ನೀಡಿತು. ವಿಪಕ್ಷಗಳ ವಿರೋಧಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಸುಧಾಂಶು ತ್ರಿವೇದಿ, ಸರ್ಕಾರ ಈ ಮಸೂದೆ ವಿಚಾರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದೆ ಮತ್ತು ಮುಸ್ಲಿಂ ಸಮುದಾಯದ ಕಲ್ಯಾಣಕ್ಕಾಗಿ ಇದನ್ನು ಮಂಡಿಸಲಾಗಿದೆ ಎಂದು ಹೇಳಿದರು. ದೇಶದಲ್ಲಿ ಸುನ್ನಿ ಮತ್ತು ಶಿಯಾ ವಕ್ಫ್ ಮಂಡಳಿಗಳು ಏಕೆ ಪ್ರತ್ಯೇಕವಾಗಿವೆ ಮತ್ತು ತಾಜ್ ಮಹಲ್ ಮೇಲೆ ವಕ್ಫ್ ಹಕ್ಕು ಸಾಧಿಸುವುದು ಏಕೆ ಎಂದು ಅವರು ಪ್ರಶ್ನಿಸಿದರು.
ನಾವು ಯಾವಾಗಲೂ ಮುಸ್ಲಿಂ ಸಮುದಾಯದ ಕಲ್ಯಾಣದ ಬಗ್ಗೆ ಮಾತನಾಡುತ್ತೇವೆ ಎಂದು ಬಿಜೆಪಿ ಸಂಸದರು ಹೇಳಿದರು. ಸರ್ಕಾರ ಬಡ ಮುಸ್ಲಿಮರ ಪರವಾಗಿ ನಿರ್ಧಾರ ತೆಗೆದುಕೊಂಡಿದೆ, ಆದರೆ ಮೂಲಭೂತವಾದಿಗಳು ಮತ್ತು ಮತ ಬ್ಯಾಂಕ್ ಗುತ್ತಿಗೆದಾರರು ತಮ್ಮ ಸ್ವಾರ್ಥಕ್ಕಾಗಿ ಅದನ್ನು ವಿರೋಧಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಇದನ್ನೂ ಓದಿ: Waqf Amendment Bill: ವಕ್ಫ್ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಬಹುಮತದಿಂದ ಅಂಗೀಕಾರ