ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranjith H Ashwath Column: ಮುದುಡಿದ ಕಮಲದ ಜೀವಕಳೆಯ ಗುಟ್ಟೇನು ?

ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಬಳಿಕ ಕುಮಾರಸ್ವಾಮಿ ಅವರಿಗೆ ಕೇಂದ್ರ ಸಚಿವ ಸ್ಥಾನ ಸಿಕ್ಕಿದೆಯಾದರೂ, ಜೆಡಿಎಸ್ ಪಕ್ಷವಾಗಿ ‘ಅಸ್ತಿತ್ವ’ ಕಂಡುಕೊಳ್ಳುವ ಕಸರತ್ತಿನಲ್ಲಿದೆ. ಆದರೆ ಇದೇ ಕಸರತ್ತಿನಲ್ಲಿರುವ ಬಿಜೆಪಿಯವರೂ, ಹೋರಾಟವನ್ನು ಏಕಾಂಗಿಯಾಗಿ ಮಾಡುವುದಕ್ಕೆ ಆಸಕ್ತಿ ತೋರಿದ್ದಾರೆ. ಹಾಗೆ ನೋಡಿದರೆ, ರಾಷ್ಟ್ರ ಮಟ್ಟದಲ್ಲಿ ಜೆಡಿಎಸ್‌ನ ಕುಮಾರಸ್ವಾಮಿ ಹಾಗೂ ಬಿಜೆಪಿ ವರಿಷ್ಠರಿಗೆ ಒಳ್ಳೆಯ ಕೆಮಿಸ್ಟ್ರಿ ಯಿದ್ದರೂ ರಾಜ್ಯ ನಾಯಕತ್ವದ ವಿಷಯದಲ್ಲಿ ಹೊಂದಾ ಣಿಕೆಯಾಗುತ್ತಿಲ್ಲ

ಮುದುಡಿದ ಕಮಲದ ಜೀವಕಳೆಯ ಗುಟ್ಟೇನು ?

ಸಂಘಟನೆಯಲ್ಲಿ ‘ನೆಲಕಚ್ಚಿ’ ಸಾಮಾಜಿಕ ಜಾಲತಾಣಕ್ಕೆ ಸೀಮಿತವಾಗಿದ್ದ ರಾಜ್ಯ ಬಿಜೆಪಿಯ ಲ್ಲೀಗ ಸರಣಿ ಹೋರಾಟಗಳಿಗೆ ನೀಲನಕ್ಷೆ ಸಜ್ಜಾಗಿದೆ. ‘ಹೇಳಿಕೆ’ಗಳಿಗೆ ಸೀಮಿತವಾಗಿದ್ದ ನಾಯಕರು ಇದೀಗ ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ. ಅದರಲ್ಲಿಯೂ ‘ಹೊಂದಾಣಿಕೆ ರಾಜಕೀಯ’ದ ಆರೋಪವನ್ನು ಹೊತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮುಂದಿನ 2 ತಿಂಗಳ ಕಾಲ ರಾಜ್ಯಾದ್ಯಂತ ಕಾಂಗ್ರೆಸ್ ಸರಕಾರದ ವಿರುದ್ಧ ಹೋರಾಟ ನಡೆಸುವ ಎಚ್ಚರಿಕೆಯೊಂದಿಗೆ ಜನಾಕ್ರೋಶ ಯಾತ್ರೆಗೆ ಚಾಲನೆ ನೀಡಿದ್ದಾರೆ. ಈ ಎಲ್ಲದರ ಫಲವಾಗಿ, ನಿಂತ ನೀರಿನಂತಾಗಿದ್ದ ರಾಜ್ಯ ಬಿಜೆಪಿ ಏಕಾಏಕಿ ಪುಟ್ಟಿದೇಳುವ ಪ್ರಯತ್ನಕ್ಕೆ ಕೈಹಾಕಿರುವುದು ಅನೇಕರಲ್ಲಿ ಅಚ್ಚರಿ ಮೂಡಿಸಿರುವುದು ಸುಳ್ಳಲ್ಲ.

ಹೌದು, ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಹಾಗೂ ವಿಧಾನಸಭಾ ಪ್ರತಿಪಕ್ಷ ನಾಯಕರಾಗಿ ಅಶೋಕ್ ನೇಮಕಗೊಂಡ ದಿನದಿಂದಲೂ, ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವ ಆರೋಪವಿತ್ತು. ಅದಕ್ಕೆ ಪೂರಕವಾಗಿ ರಾಜ್ಯ ಸರಕಾರದ ವಿರುದ್ಧ ಮುಗಿ ಬೀಳಲು ನೂರಾರು ದಾರಿಗಳಿದ್ದರೂ, ಅದ್ಯಾವುದನ್ನೂ ತಾರ್ಕಿಕ ಅಂತ್ಯದವರೆಗೆ ತೆಗೆದುಕೊಂಡು ಹೋಗದೇ, ನಾಮ್-ಕೆ-ವಾಸ್ತೆ ಹೋರಾಟ ನಡೆಸಿ ಸುಮ್ಮನಾದ ಅನೇಕ ಘಟನೆಗಳು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: Ranjith H Ashwath Column: ಯತ್ನಾಳ್ ಉಚ್ಚಾಟನೆ ಆಯ್ತು, ಮುಂದೆ ?

ಅದರಲ್ಲಿಯೂ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರರಿಂದ ಹತ್ತಾರು ನಿರೀಕ್ಷೆ ಯಿಟ್ಟುಕೊಂಡಿದ್ದವರಿಗೆ ಅವರ ನಡೆ ಬೇಸರ ತರಿಸಿತ್ತು. ಈ ಕಾರಣಕ್ಕಾಗಿಯೇ ವಿಜಯೇಂದ್ರ ರನ್ನು ವಿರೋಧಿಸುವ ಗುಂಪು ಮಾತ್ರವಲ್ಲದೆ, ಈ ಹಿಂದೆ ಯಡಿಯೂರಪ್ಪ ಅವರೊಂದಿಗೆ ಗುರುತಿಸಿಕೊಂಡಿದ್ದ, ತಟಸ್ಥರಾಗಿದ್ದ ನಾಯಕರೂ ವಿಜಯೇಂದ್ರ ಹಾಗೂ ಯಡಿಯೂರಪ್ಪ ಅವರ ನಡೆಗೆ ವಿರೋಧಿಸಿದ್ದರು.

ಇದರ ಭಾಗವಾಗಿಯೇ, ರಾಜ್ಯದ ಹಲವು ಭಾಗದಲ್ಲಿ ಪಕ್ಷದ ಕಾರ್ಯಕರ್ತರು ಪಕ್ಷದ ಕೆಲಸ ಕ್ಕಿಂತ ‘ತಮ್ಮ ಕೆಲಸ’ಗಳಲ್ಲಿ ತಲೀನರಾಗಿದ್ದರು. ಆದರೆ ಈ ಅಸಮಾಧಾನವನ್ನು ಬಳಸಿ ಕೊಳ್ಳುವ ಹಾಗೂ ಕಾರ್ಯಕರ್ತರ ಬೇಸರವನ್ನು ಇನ್ನಷ್ಟು ಹೆಚ್ಚಿಸುವ ರೀತಿಯಲ್ಲಿ ವಕ್ಫ್ ವಿವಾದ ಶುರುವಾದ ಸಮಯದಲ್ಲಿ ರಾಜ್ಯ ಬಿಜೆಪಿ ಘಟಕವಾಗಿ ‘ಪ್ರತಿರೋಧ’ ತೋರಲಿಲ್ಲ. ‌

ಬಿಜೆಪಿಗೂ ಮೊದಲೇ ಬಸನಗೌಡ ಪಾಟೀಲ್ ಯತ್ನಾಳ್ ಬಣವು ವಕ್ಫ್ ವಿರುದ್ಧದ ಹೋರಾಟ ಕೈಗೆತ್ತಿಕೊಂಡು ಪ್ರತ್ಯೇಕ ಸಮಾವೇಶ, ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸಿತ್ತು. ಈ ಎಲ್ಲ ಹೋರಾಟದ ವೇಳೆ ಯತ್ನಾಳ್ ಪಕ್ಷದಲ್ಲಾಗುತ್ತಿರುವ ಗೊಂದಲಕ್ಕಿಂತ ಹೆಚ್ಚಾಗಿ ವಿಜಯೇಂದ್ರ ವಿರುದ್ಧ ಮಾತನಾಡಿದ್ದು ಅವರಿಗೆ ಮುಳುವಾಯಿತು.

ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದು ಒಂದು ಭಾಗ. ಆದರೆ ಈ ನಡುವೆ ರಾಜ್ಯ ಬಿಜೆಪಿ ಘಟಕ ಕಳೆದೊಂದು ತಿಂಗಳಿಂದ ಏಕಾಏಕಿ ಸಕ್ರಿಯವಾಗಿರುವುದು ಏಕೆ ಎನ್ನುವುದು ಅನೇಕರ ಪ್ರಶ್ನೆಯಾಗಿದೆ. ಈ ಸಕ್ರಿಯತೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಪಕ್ಷದ ವರಿಷ್ಠರ ‘ಸಂದೇಶ’ ಕಾರಣ ಎನ್ನುವುದು ಸ್ಪಷ್ಟವಾಗುತ್ತದೆ. ಬಜೆಟ್ ಅಧಿವೇಶನದ ಸಮಯದಲ್ಲಿ ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ಪ್ರಕರಣವನ್ನು ಯತ್ನಾಳ್ ಪ್ರಸ್ತಾಪಿಸಿ, ಅದಕ್ಕೆ ರಾಜಣ್ಣ ಧ್ವನಿಗೂಡಿಸಿದ್ದರು. ಆ ವೇಳೆ ಪ್ರತಿಪಕ್ಷ ನಾಯಕ ಅಶೋಕ್ ಈ ವಿಷಯವನ್ನು ‘ತೇಲಿಸಲು’ ಪ್ರಯತ್ನಿಸಿದ್ದರು.

ಆದರೆ ಕಾರ್ಕಳ ಶಾಸಕ ಸುನೀಲ್‌ಕುಮಾರ್ ಈ ವಿಷಯದಲ್ಲಿಯೂ ‘ಹೊಂದಾಣಿಕೆ’ಯೇ ಎಂದು ಅಶೋಕ್ ವಿರುದ್ಧ ಬಹಿರಂಗವಾಗಿಯೇ ಟೀಕಿಸಿ, ಸದನದಿಂದ ಹೊರನಡೆದಿದ್ದರು. ಈ ಘಟನೆಯ ಬೆನ್ನಲ್ಲೇ ದೆಹಲಿಯಿಂದ ಸುನೀಲ್‌ಕುಮಾರ್ ಅವರಿಗೆ ಬಂದ ಕರೆಯು, ಹೋರಾಟವನ್ನು ಮುಂದುವರಿಸುವಂತೆ ಸೂಚನೆ ನೀಡಿದ್ದರ ಜತೆಗೆ ಹನಿಟ್ರ್ಯಾಪ್ ಪ್ರಕರಣ ದಲ್ಲಿ ‘ಅಗ್ರೆಸೀವ್’ ಆಗುವಂತೆ ಅಶೋಕ್ ಅವರಿಗೂ ಹೇಳಿತ್ತು.

ಈ ಸೂಚನೆಯ ಬಳಿಕ ಮರುದಿನ ಉಭಯ ಸದನದಲ್ಲಿ ಬಿಜೆಪಿಗರು ಹನಿಟ್ರ್ಯಾಪ್ ಪ್ರಕರಣ ವನ್ನು ಮುಂದಿಟ್ಟುಕೊಂಡು ಹೋರಾಡಿದ್ದು, ಈ ವೇಳೆ ಸಭಾಧ್ಯಕ್ಷ ಪೀಠಕ್ಕೆ ಏರಿದರು ಎನ್ನುವ ಕಾರಣಕ್ಕೆ ಬಿಜೆಪಿಯ 18 ಶಾಸಕರನ್ನು ಅಮಾನತುಗೊಳಿಸಿದ್ದು. ಈ ಅಮಾನತಿನ ಕೆಲವೇ ದಿನದಲ್ಲಿ ಯತ್ನಾಳ್ ಅವರನ್ನು ಪಕ್ಷದಿಂದ ಬಿಜೆಪಿ ವರಿಷ್ಠರು ಉಚ್ಚಾಟನೆ ಮಾಡಿದರು.

ಜತೆಜತೆಗೆ ವಿಜಯೇಂದ್ರ ಅವರಿಗೆ ಇದ್ದ ಬಹುದೊಡ್ಡ ‘ತಲೆಬಿಸಿ’ಯನ್ನು ಇಳಿಸಿ, ಪಕ್ಷದ ಸಂಘಟನೆಯನ್ನು ಇನ್ನಾದರೂ ಆರಂಭಿಸಿ ಎನ್ನುವ ಸ್ಪಷ್ಟ ಎಚ್ಚರಿಕೆ ನೀಡಿದರು. ಈ ಬೆನ್ನಲ್ಲೇ, ಶಾಸಕರ ಅಮಾನತು ವಿರೋಧಿಸಿ ಪ್ರತಿಭಟನೆ, ಅಹೋರಾತ್ರಿ ಧರಣಿ, ಮುಖ್ಯ ಮಂತ್ರಿ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಪ್ರಯತ್ನ ಚಾಲ್ತಿಗೆ ಬಂತು. ಇದೀಗ ನಾಲ್ಕು ಹಂತದಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆಯನ್ನು ಆರಂಭಿಸಿದೆ.

ಹಾಗೆ ನೋಡಿದರೆ, ರಾಜ್ಯ ಬಿಜೆಪಿ ಘಟಕದಲ್ಲಿ ಬದಲಾವಣೆ ಬಂದು ಒಂದೂವರೆ ವರ್ಷ ಕಳೆಯು ತ್ತಿದ್ದರೂ ಈಗ ಎಚ್ಚೆತ್ತುಕೊಳ್ಳಲು ಕಾರಣವೇನು ಎನ್ನುವುದು ಅನೇಕರ ಪ್ರಶ್ನೆ ಯಾಗಿದೆ. ಆದರೆ ಈ ಹಿಂದೆ ಯತ್ನಾಳ್ -ವಿಜಯೇಂದ್ರ ನಡುವಿನ ಕಿತ್ತಾಟದಲ್ಲಿ ಅನೇಕರು ಯಾರ ಪರ ನಿಲ್ಲಬೇಕು ಎನ್ನುವ ಗೊಂದಲದಲ್ಲಿದ್ದರು.

ಯತ್ನಾಳ್ ನಿತ್ಯ ವಾಗ್ದಾಳಿ ನಡೆಸಿಕೊಂಡು ಓಡಾಡುತ್ತಿದ್ದರೂ, ಪಕ್ಷದ ವರಿಷ್ಠರು ತಲೆಕೆಡಿಸಿ ಕೊಳ್ಳದಿದ್ದುದು ವಿಜಯೇಂದ್ರರ ಬೇಸರಕ್ಕೂ ಕಾರಣವಾಗಿತ್ತು. ಹೀಗಾಗಿಯೇ ಕಳೆದ ತಿಂಗಳು ಖಾಸಗಿ ಆಸ್ಪತ್ರೆಯೊಂದರ ಉದ್ಘಾಟನಾ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಆಗಮಿಸಿದಾಗ, ಯಡಿಯೂರಪ್ಪ ಅವರು ಪ್ರತ್ಯೇಕವಾಗಿ ಭೇಟಿಯಾಗಿ ಚರ್ಚಿಸಬೇಕು ಎನ್ನುವ ‘ಬೇಡಿಕೆ’ ಇಟ್ಟಿದ್ದರು. ಈ ಭೇಟಿಯ ವೇಳೆಗೆ ಯತ್ನಾಳ್ ವಿರುದ್ಧ ನೇರ ಆರೋಪ ಮಾಡಿದ್ದ ಯಡಿಯೂರಪ್ಪ ಅವರು, ರಾಜ್ಯಾಧ್ಯಕ್ಷರಾಗಿರುವ ತಮ್ಮ ಪುತ್ರ ವಿಜಯೇಂದ್ರ ವಿರುದ್ಧ ಮಾತನಾಡುತ್ತಿದ್ದಾರೆ.

ರಚನಾತ್ಮಕ ಟೀಕೆಯನ್ನು ಸ್ವಾಗತಿಸುತ್ತೇನೆ. ಆದರೆ ಬಸನಗೌಡ ಪಾಟೀಲ್ ಯತ್ನಾಳ್ ಟೀಕೆಗಿಂತ ಹೆಚ್ಚಾಗಿ ವೈಯಕ್ತಿಕ ತೇಜೋವಧೆಗೆ ಇಳಿದಿದ್ದಾರೆ. ಅವರ ಹೇಳಿಕೆಗಳಿಂದ ವೈಯಕ್ತಿಕ ವರ್ಚಸ್ಸಿಗಿಂತ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ. ಈ ರೀತಿ ನಿತ್ಯ ಹೇಳಿಕೆ ನೀಡಿದರೂ ಅವರ ವಿರುದ್ಧ ಕ್ರಮವಹಿಸಲು ನೀವು ಸಿದ್ಧರಿಲ್ಲ ಎನ್ನುವುದಾದರೆ, ನನ್ನನ್ನು, ನನ್ನ ಪುತ್ರನನ್ನು ಪಕ್ಷದ ಜವಾಬ್ದಾರಿಗಳಿಂದ ಮುಕ್ತಗೊಳಿಸಿ ಎನ್ನುವ ಮೂಲಕ ಪಕ್ಷದಿಂದ ಹೊರನಡೆಯುವ ಎಚ್ಚರಿಕೆ ನೀಡಿದ್ದರು.

ಈ ಮೂಲಕ ಪಕ್ಷದಲ್ಲಿ ‘ನಾವಿರಬೇಕು ಇಲ್ಲ ಯತ್ನಾಳ್ ಇರಬೇಕು’ ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಿದ್ದರು. ಯಡಿಯೂರಪ್ಪ ಅವರ ಈ ಎಚ್ಚರಿಕೆಯನ್ನು ಗಂಭೀರ ವಾಗಿ ಪರಿಗಣಿಸಿದ ಅಮಿತ್ ಶಾ ದೆಹಲಿಗೆ ತೆರಳುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಚರ್ಚಿಸಿ, ಯತ್ನಾಳ್ ಅವರನ್ನು ಹೊರಹಾಕುವ ತೀರ್ಮಾನಕ್ಕೆ ಬಂದರು.

ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟಿಸುವ ಮೂಲಕ ಮೇಲ್ನೋಟಕ್ಕೆ ವಿಜಯೇಂದ್ರ ಬಣಕ್ಕೆ ಮೇಲುಗೈಯಾಗಿದೆ ಎನ್ನುವ ವಾತಾವರಣ ಪಕ್ಷದಲ್ಲಿದ್ದರೂ, ಪಕ್ಷದ ವಿರುದ್ಧ ಅಥವಾ ಪಕ್ಷಕ್ಕೆ ಡ್ಯಾಮೇಜ್ ಆಗುವಂಥ ಹೇಳಿಕೆ ನೀಡುವ ಯಾರನ್ನೂ ಸಹಿಸುವುದಿಲ್ಲ ಎನ್ನುವ ಸಂದೇಶವನ್ನು ಪಕ್ಷದಲ್ಲಿರುವ ನಾಯಕರಿಗೆ ವರಿಷ್ಠರು ರವಾನಿಸಿದ್ದಾರೆ.

ಈ ಸೂಕ್ಷ್ಮತೆಯನ್ನು ಅರಿತ ವಿಜಯೇಂದ್ರ ಬಣದವರು, ಇದೀಗ ದರ ಏರಿಕೆ, ಮುಸ್ಲಿಂ ಮೀಸಲು ಹಾಗೂ ದಲಿತರ ಅನುದಾನ ಬೇರೆಡೆ ವರ್ಗಾವಣೆಯ ವಿಷಯವನ್ನು ಮುಂದಿಟ್ಟುಕೊಂಡು ಜನಾಕ್ರೋಶ ಯಾತ್ರೆ ಮಾಡಲು ಮುಂದಾಗಿದ್ದಾರೆ. ಸದ್ಯೋ ಭವಿಷ್ಯ ದಲ್ಲಿ ಯಾವುದೇ ಚುನಾವಣೆಗಳು ಇರದಿದ್ದರೂ, ರಾಜ್ಯಾದ್ಯಂತ ಪ್ರವಾಸ ಮಾಡುವ ಮೂಲಕ, ‘ನಿಷ್ಕ್ರಿಯ’ಗೊಂಡಿರುವ ಪಕ್ಷದ ಸಂಘಟನೆಯನ್ನು ಸಕ್ರಿಯಗೊಳಿಸುವ ಲೆಕ್ಕಾಚಾರ ರಾಜ್ಯ ಬಿಜೆಪಿಯಲ್ಲಿದೆ. ಆದರೆ ಈ ಎಲ್ಲದರ ನಡುವೆ ಮೈತ್ರಿಪಕ್ಷವಾಗಿರುವ ಜೆಡಿಎಸ್ ಅನ್ನು ಈ ಯಾವ ಹೋರಾಟದಲ್ಲಿಯೂ ಪರಿಗಣಿಸಿಲ್ಲ ಎನ್ನುವುದು ಜೆಡಿಎಸ್ ನಾಯಕರ ಅಸಮಾಧಾನವಾಗಿದೆ. ಕನಿಷ್ಠ ಪಕ್ಷ ಹಳೇ ಮೈಸೂರು ಭಾಗದಲ್ಲಿ ಹೋರಾಟ ಕೈಗೊಳ್ಳುವ ವೇಳೆಯಾದರೂ ನಮ್ಮನ್ನು ಸೇರಿಸಿಕೊಳ್ಳಬೇಕಿತ್ತು ಎನ್ನುವುದು ಜೆಡಿಎಸ್‌ನ ವಾದವಾಗಿದೆ.

ಏಕೆಂದರೆ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಬಳಿಕ ಕುಮಾರಸ್ವಾಮಿ ಅವರಿಗೆ ಕೇಂದ್ರ ಸಚಿವ ಸ್ಥಾನ ಸಿಕ್ಕಿದೆಯಾದರೂ, ಜೆಡಿಎಸ್ ಪಕ್ಷವಾಗಿ ‘ಅಸ್ತಿತ್ವ’ ಕಂಡುಕೊಳ್ಳುವ ಕಸರತ್ತಿನಲ್ಲಿದೆ. ಆದರೆ ಇದೇ ಕಸರತ್ತಿನಲ್ಲಿರುವ ಬಿಜೆಪಿಯವರೂ, ಹೋರಾಟವನ್ನು ಏಕಾಂಗಿಯಾಗಿ ಮಾಡುವುದಕ್ಕೆ ಆಸಕ್ತಿ ತೋರಿದ್ದಾರೆ. ಹಾಗೆ ನೋಡಿದರೆ, ರಾಷ್ಟ್ರ ಮಟ್ಟದಲ್ಲಿ ಜೆಡಿಎಸ್‌ನ ಕುಮಾರಸ್ವಾಮಿ ಹಾಗೂ ಬಿಜೆಪಿ ವರಿಷ್ಠರಿಗೆ ಒಳ್ಳೆಯ ಕೆಮಿಸ್ಟ್ರಿ ಯಿದ್ದರೂ ರಾಜ್ಯ ನಾಯಕತ್ವದ ವಿಷಯದಲ್ಲಿ ಹೊಂದಾಣಿಕೆಯಾಗುತ್ತಿಲ್ಲ. ಬಿಜೆಪಿ ಈ ಹಿಂದೆ ‘ಮುಡಾ’ ವಿರುದ್ಧ ನಡೆಸಿದ ಹೋರಾಟದಲ್ಲಿಯೂ ನಾಮ್-ಕೆ-ವಾಸ್ತೆ ‘ಮೈತ್ರಿ’ ಹೋರಾಟ ಮಾಡಿದ್ದರೂ, ಪೂರ್ಣ ಪ್ರಮಾಣದಲ್ಲಿ ಒಂದಾ ಗಿರಲಿಲ್ಲ.

ಅದಾದ ಬಳಿಕ ಗ್ರೇಟರ್ ಬೆಂಗಳೂರು ವಿಧೇಯಕದ ವಿಷಯದಲ್ಲಿ ಬಿಜೆಪಿ-ಜೆಡಿಎಸ್‌ನವರು ಭಿನ್ನರಾಗವನ್ನು ಹೊಂದಿದ್ದರು. ಬಳಿಕ ಮುಸ್ಲಿಮರಿಗೆ ಮೀಸಲು, ಬಿಜೆಪಿ ಶಾಸಕರ ಅಮಾನತು ವಿರುದ್ಧದ ಹೋರಾಟದಲ್ಲಿ ಬಿಜೆಪಿಗರು ಜೆಡಿಎಸ್ ನಾಯಕರನ್ನು ಆಹ್ವಾನಿಸ ಲಿಲ್ಲ.

ಜೆಡಿಎಸ್ ನಾಯಕರು ಈ ವಿಷಯಗಳಲ್ಲಿ ‘ಹೇಳಿಕೆ’ಗಳಿಗೆ ತಮ್ಮ ಹೋರಾಟವನ್ನು ಸೀಮಿತ ಗೊಳಿಸಿದರು. ಇದೀಗ ಬಿಜೆಪಿ ಆರಂಭಿಸಿರುವ ಜನಾಕ್ರೋಶ ಯಾತ್ರೆಯಲ್ಲಿ ಜೆಡಿಎಸ್ ನಾಯಕರು ಭಾಗವಹಿಸದಿದ್ದರೂ, ಮುಂದಿನ ದಿನದಲ್ಲಿ ಕುಮಾರಸ್ವಾಮಿ ಅವರು ಪ್ರತ್ಯೇಕ ಯಾತ್ರೆ ಕೈಗೊಳ್ಳಲಿದ್ದಾರೆ. ಈ ಮೂಲಕ ಬಿಜೆಪಿ-ಜೆಡಿಎಸ್‌ನವರು ತಮ್ಮ ಅಸ್ತಿತ್ವಕ್ಕಾಗಿ ಹೋರಾಟದಲ್ಲಿ ಭಿನ್ನರಾಗ ತೋರಿದ್ದಾರೆ ಎನ್ನುವುದು ಸ್ಪಷ್ಟ.

ಈ ಎಲ್ಲದರ ನಡುವೆ ಕಳೆದ ಎರಡು ವರ್ಷದಿಂದ ಕಾಣದ ಒಗ್ಗಟ್ಟು ಬಿಜೆಪಿಯಲ್ಲಿ ಈಗ ಕಾಣಿಸಲು ಶುರುವಾಗಿದೆ. ಯತ್ನಾಳ್ ಬಣದಲ್ಲಿ ಗುರುತಿಸಿಕೊಂಡಿರುವ ಕೆಲ ನಾಯಕರನ್ನು ಹೊರತುಪಡಿಸಿ ಮಿಕ್ಕವರು, ಯತ್ನಾಳ್ ಉಚ್ಚಾಟನೆಯ ಬಳಿಕ ವಿಜಯೇಂದ್ರ ಹಾಗೂ ಯಡಿಯೂರಪ್ಪ ಅವರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

ಅದರಲ್ಲಿಯೂ ಪಕ್ಷದ ‘ಶುದ್ಧೀಕರಣ’ವಾಗಬೇಕು ಎನ್ನುವ ಮಾತನ್ನು ನಿರಂತರವಾಗಿ ಹೇಳುತ್ತಿದ್ದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಸೇರಿದಂತೆ ಹಲವು ನಾಯಕರು ಇದೀಗ ಪುನಃ ಒಗ್ಗಟ್ಟಿನ ಮಂತ್ರ ಜಪಿಸಲು ಶುರುಮಾಡಿದ್ದಾರೆ. ಒಗ್ಗಟ್ಟಿನ ಮಂತ್ರ ಜಪಿಸುವ ಹಿಂದೆ ಪಕ್ಷದ ಹಿತಾಸಕ್ತಿ ಅಡಗಿದೆಯೋ ಅಥವಾ ಈಗಲೂ ರಾಜ್ಯದ ಮೇಲೆ ಹಿಡಿತ ಸಾಧಿಸಿರುವ ಯಡಿಯೂರಪ್ಪ ಅವರನ್ನು ಎದುರು ಹಾಕಿಕೊಂಡ ಯತ್ನಾಳ್‌ಗೆ ಆದ ಸ್ಥಿತಿ ನಮಗೆ ಬಾರದರಲಿ ಎನ್ನುವ ಕಾರಣಕ್ಕೆ ಒಂದಾಗಿದ್ದಾರೋ ಗೊತ್ತಿಲ್ಲ.

ಒಟ್ಟಲ್ಲಿ ನಿಂತ ನೀರಾಗಿದ್ದ ಬಿಜೆಪಿಗೆ ಈಗ ಜನಾಕ್ರೋಶ ಯಾತ್ರೆಯ ಮೂಲಕ ಹೊಸ ಹುರುಪು ಸಿಕ್ಕಿದೆ. ಈ ಹುರುಪು ಎಷ್ಟು ದಿನ? ಯಾವ ಮಟ್ಟಿಗೆ ಉಳಿಯಲಿದೆ? ಎನ್ನುವುದೇ ಈಗಿರುವ ಯಕ್ಷಪ್ರಶ್ನೆ!