Ranjith H Ashwath Column: ಯತ್ನಾಳ್ ಉಚ್ಚಾಟನೆ ಆಯ್ತು, ಮುಂದೆ ?
ಕಟ್ಟರ್ ಹಿಂದುತ್ವವಾದಿ, ಪಂಚಮಸಾಲಿ ಸಮುದಾಯದ ಮುಂಚೂಣಿ ನಾಯಕ ಎನಿಸಿಕೊಂಡಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಏಕಾಏಕಿ ಪಕ್ಷದಿಂದ ಉಚ್ಚಾ ಟಿಸಿದ್ದು. ಈ ಉಚ್ಚಾಟನೆ ಯನ್ನು ಒಬ್ಬೊಬ್ಬರು ಒಂದೊಂದು ರೀತಿ ವ್ಯಾಖ್ಯಾನಿಸುತ್ತಿದ್ದಾರೆ. ಆದರೆ ಅಂತಿಮವಾಗಿ ಯತ್ನಾಳ್ ವಿರುದ್ಧ ಈ ರೀತಿಯ ಕಠಿಣ ಕ್ರಮ ಕೈಗೊಳ್ಳಲು ಅವರ ಮಾತಲ್ಲದೇ ಮತ್ತೇನೂ ಕಾರಣವಲ್ಲ ಎನ್ನುವುದು ಸ್ಪಷ್ಟ

ಮುಖ್ಯ ವರದಿಗಾರ ಹಾಗೂ ಅಂಕಣಕಾರ ರಂಜಿತ್ ಎಚ್.ಅಶ್ವತ್ಥ

ಅಶ್ವತ್ಥಕಟ್ಟೆ
ranjith.hoskere@gmail.com
ಮಾತು ಬೆಳ್ಳಿ, ಮೌನ ಬಂಗಾರ’ ಎನ್ನುವ ಮಾತಿದೆ. ರಾಜಕೀಯದಲ್ಲಿ ಮಾತೇ ಬಂಡವಾಳ. ಈ ಬಂಡವಾಳವನ್ನೇ ಬಳಸಿಕೊಂಡು ಅನೇಕರು ರಾಜಕೀಯದಲ್ಲಿ ಮೇಲೆ ಬಂದಿದ್ದಾರೆ. ಆದರೆ ಅದೇ ಮಾತಿನಿಂದ ಮೇಲೇಳಲಾರದಷ್ಟು ಪಾತಾಳಕ್ಕೂ ಕುಸಿದಿರುವ ಅನೇಕರು ನಮ್ಮ ಮುಂದಿದ್ದಾರೆ. ಮಾತು ಎಷ್ಟು ಮುಖ್ಯವೋ, ಎಲ್ಲಿ-ಯಾವಾಗ-ಎಷ್ಟು ಮಾತಾಡಬೇಕು ಎನ್ನುವುದು ಕೂಡ ಪ್ರಮು ಖವಾಗುತ್ತದೆ. ಆದರೆ ಕೆಲವರು ಈ ಸೂಕ್ಷ್ಮವನ್ನು ಅರಿಯದೇ ರಾಜಕೀಯ ಜೀವನದಲ್ಲಿ ‘ಸಮಸ್ಯೆ’ಗೆ ಈಡಾಗುತ್ತಾರೆ. ರಾಜಕೀಯದಲ್ಲಿ ಮಾತಿನಿಂದಾಗುವ ಸಮಸ್ಯೆಗಳ ಬಗ್ಗೆ ಈ ಹಿಂದೆ ಪ್ರಸ್ತಾಪಿಸ ಲಾಗಿತ್ತು. ಆದರೆ ಮತ್ತೊಮ್ಮೆ ಈ ವಿಷಯವನ್ನು ಪ್ರಸ್ತಾಪಿಸಲು ಕಾರಣ, ಕಳೆದ ವಾರ ರಾಜ್ಯ ಬಿಜೆಪಿ ಯಲ್ಲಿ ನಡೆದ ಪ್ರಮುಖ ಘಟನೆ.
ಅದೆಂದರೆ, ಕಟ್ಟರ್ ಹಿಂದುತ್ವವಾದಿ, ಪಂಚಮಸಾಲಿ ಸಮುದಾಯದ ಮುಂಚೂಣಿ ನಾಯಕ ಎನಿಸಿಕೊಂಡಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಏಕಾಏಕಿ ಪಕ್ಷದಿಂದ ಉಚ್ಚಾ ಟಿಸಿದ್ದು. ಈ ಉಚ್ಚಾಟನೆಯನ್ನು ಒಬ್ಬೊಬ್ಬರು ಒಂದೊಂದು ರೀತಿ ವ್ಯಾಖ್ಯಾನಿಸುತ್ತಿದ್ದಾರೆ. ಆದರೆ ಅಂತಿಮವಾಗಿ ಯತ್ನಾಳ್ ವಿರುದ್ಧ ಈ ರೀತಿಯ ಕಠಿಣ ಕ್ರಮ ಕೈಗೊಳ್ಳಲು ಅವರ ಮಾತಲ್ಲದೇ ಮತ್ತೇನೂ ಕಾರಣವಲ್ಲ ಎನ್ನುವುದು ಸ್ಪಷ್ಟ.
ಇದನ್ನೂ ಓದಿ: Ranjith H Ashwath Column: ಕೆಟ್ಟ ಪರಂಪರೆಗೆ ನಾಂದಿ ಹಾಡದಿರಲಿ ಸದನ
ಹಾಗೆ ನೋಡಿದರೆ, ಯತ್ನಾಳ್ ಅವರು ಎಂದಿಗೂ ಬಿಜೆಪಿ ರಾಷ್ಟ್ರೀಯ ನಾಯಕರ ಅಥವಾ ಪಕ್ಷದ ವಿರುದ್ಧ ಮಾತಾಡಿಲ್ಲ. ಆದರೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗಲೇ ಅವರ ವಿರುದ್ಧ ವಾಗ್ದಾಳಿ ನಡೆಸಿಕೊಂಡು ಬಂದರು. ವೈಯಕ್ತಿಕ ಟೀಕೆಯನ್ನೇ ಮುನ್ನೆಲೆಗೆ ತರುವ ಮೂಲಕ ಪ್ರತಿಪಕ್ಷಗಳಿಗೆ ಗ್ರಾಸ ಒದಗಿಸಿದ್ದರು.
ಅದಾದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಬಿ.ವೈ. ವಿಜಯೇಂದ್ರ ಅವರನ್ನು ಕೂರಿಸಿದ ಬಳಿಕ ನಿರಂತರವಾಗಿ ವಿಜಯೇಂದ್ರ ವಿರುದ್ಧ ಮಾತಾಡಿಕೊಂಡು ಬಂದರು. ವಿಜಯೇಂದ್ರರನ್ನು ಮುಂದು ವರಿಸಬೇಕೇ ಬೇಡವೇ ಎನ್ನುವ ತೀರ್ಮಾನ ಕೈಗೊಳ್ಳುವುದಕ್ಕೂ ಆಸ್ಪದ ಕೊಡದ ರೀತಿಯಲ್ಲಿ ಟೀಕಿ ಸುತ್ತಾ ಹೋಗಿದ್ದೇ ಯತ್ನಾಳ್‌ರಿಗೆ ಆದ ಬಹುದೊಡ್ಡ ಹಿನ್ನಡೆ.
ಆದರೆ ಕಳೆದೊಂದು ತಿಂಗಳ ಹಿಂದೆ ಯತ್ನಾಳ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಕೆಲ ನಾಯಕರು ಸಭೆ ಸೇರಿ, ಯತ್ನಾಳ್ ಅವರು ‘ಬಹಿರಂಗ ಹೇಳಿಕೆ ನೀಡದಂತೆ’ ತಿಳಿ ಹೇಳಿದ್ದರು. ಇದನ್ನು ಕೇಳಿಸಿಕೊಂಡು ಸುಮ್ಮನಿದ್ದ ಯತ್ನಾಳ್ ಕೆಲ ದಿನಗಳಿಂದ ಮತ್ತೇ ಅದೇ ಚಾಳಿಯನ್ನು ಮುಂದುವರಿಸಿದರು.
ಯತ್ನಾಳ್ ಬಣವು ವಕ್ಫ್, ಉದಯಗಿರಿ, ವಾಲ್ಮೀಕಿ ನಿಗಮದ ಅನುದಾನ ದುರ್ಬಳಕೆ ವಿಷಯದಲ್ಲಿ ರಾಜಕೀಯವಾಗಿ ಹಾಗೂ ಕಾನೂನಾತ್ಮಕವಾಗಿ ಹೋರಾಡಿತ್ತು. ಈ ನಡೆಯನ್ನು ವರಿಷ್ಠರು ಶ್ಲಾಘಿಸಿ ದ್ದರು. ಆದರೆ ಆ ಒಂದು ಕಾರಣಕ್ಕೆ ನಿತ್ಯ ಬೆಳಗ್ಗೆ ಪಕ್ಷದ ರಾಜ್ಯಾಧ್ಯಕ್ಷರನ್ನು ಟೀಕಿಸುತ್ತಾ ಹೋದರೆ ಯಾವ ವರಿಷ್ಠರೂ ಸುಮ್ಮನಿರುವುದಿಲ್ಲ. ಒಂದು ಹಂತದಲ್ಲಿ ಪಕ್ಷದ ವರಿಷ್ಠರಿಗೂ ‘ಕಿರಿಕಿರಿ’ ಶುರು ವಾಯಿತು.
ಇದರೊಂದಿಗೆ ವಿಜಯೇಂದ್ರ, ಯಡಿಯೂರಪ್ಪ ಅವರನ್ನು ಟೀಕಿಸುವ ಭರದಲ್ಲಿ ಬಿಜೆಪಿ ಅವಧಿ ಯಲ್ಲಿ ‘ಭ್ರಷ್ಟಾಚಾರ’ ನಡೆದಿದೆ ಎನ್ನುವ ಮೂಲಕ ಪಕ್ಷದ ವರ್ಚಸ್ಸಿಗೆ ಡ್ಯಾಮೇಜ್ ಮಾಡಿರುವುದು ವರಿಷ್ಠರ ಕೆಂಗಣ್ಣಿಗೆ ಕಾರಣವಾಯಿತು ಎಂದರೆ ತಪ್ಪಾಗುವುದಿಲ್ಲ.
ಇದೀಗ ಯತ್ನಾಳ್ ಉಚ್ಚಾಟನೆಯ ಪ್ರಹಸನ ಮುಗಿಯುತ್ತಿದ್ದಂತೆ, ರಾಜಕೀಯದಲ್ಲಿ ಹೊಸ ಚರ್ಚೆ ಗಳು ಶುರುವಾಗಿವೆ. ಅದೇನೆಂದರೆ, ಈಗಾಗಲೇ ಪಕ್ಷದಿಂದ ಹೊರಬಂದಿರುವ ಕುರುಬ ಸಮುದಾಯದ ಈಶ್ವರಪ್ಪ ಹಾಗೂ ಈಗ ಉಚ್ಚಾಟನೆಯಾಗಿರುವ ಪಂಚಮಸಾಲಿ ಸಮುದಾಯ ಬಸನಗೌಡ ಪಾಟೀಲ್ ಯತ್ನಾಳ್ ಇಬ್ಬರನ್ನೂ ಸೇರಿಸಿಕೊಂಡು ‘ರಾಯಣ್ಣ-ಚೆನ್ನಮ್ಮ ಬ್ರಿಗೇಡ್’ ಆರಂಭಿಸಿದರೆ ತಪ್ಪೇನಿದೆ? ಎನ್ನುವುದು. ರಾಜ್ಯದಲ್ಲಿರುವ ಕುರುಬ ಸಮುದಾಯದ ಮತಗಳು ಬಹುಪಾಲು ಕ್ಷೇತ್ರ ದಲ್ಲಿ ಕನಿಷ್ಠ 15ರಿಂದ 20 ಸಾವಿರ ಮತಗಳಂತೆ ಚದುರಿ ಹೋಗಿರುವುದರಿಂದ ಅವು 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ‘ನಿರ್ಣಾಯಕ’ ಪಾತ್ರ ವಹಿಸಲಿವೆ.
ಇದೇ ರೀತಿ ಉತ್ತರ ಕರ್ನಾಟಕ ಭಾಗದಲ್ಲಿ ಪಂಚಮಸಾಲಿ ಮತಗಳು ನಿರ್ಣಾಯಕವಾಗಿರುವು ದರಿಂದ ಈ ಇಬ್ಬರೂ ಒಂದಾದರೆ, ಬಿಜೆಪಿಗೆ ಬಹುದೊಡ್ಡ ಹೊಡೆತ ಕೊಡಬಹುದು ಎನ್ನುವುದು ಕೆಲವರ ಲೆಕ್ಕಾಚಾರವಾಗಿದೆ. ಆದರೆ ಈ ಹಿಂದೆ ಯಡಿಯೂರಪ್ಪ ಅವರಂಥ ನಾಯಕರೇ ಪಕ್ಷ ಬಿಟ್ಟು ಹೋದಾಗ ಅವರೊಂದಿಗೆ 10 ನಾಯಕರೂ ಹೋಗಲಿಲ್ಲ. ಹೀಗಿರುವಾಗ ಯತ್ನಾಳ್ ಬಿಜೆಪಿ ಯಿಂದ ದೂರಾದ ಮಾತ್ರಕ್ಕೆ ಇಡೀ ಸಮುದಾಯ ದೂರಾಗುವುದೇ ಎನ್ನುವ ತರ್ಕವೂ ಚಾಲ್ತಿಯ ಲ್ಲಿದೆ.
ಆದರೆ ಯಡಿಯೂರಪ್ಪ ಅವರ ಹಿಡಿತದಲ್ಲಿರುವ ರಾಜ್ಯ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ಪಡೆಯ ಲಾಗದೆ ‘ಉಚ್ಚಾಟನೆ’ಗೊಂಡಿರುವ ಯತ್ನಾಳ್-ಈಶ್ವರಪ್ಪ ಅವರಿಗೆ ‘ಗೆಲ್ಲುವ’ ಶಕ್ತಿ ಇಲ್ಲದಿದ್ದರೂ, ಬಿಜೆಪಿಯ ಅಭ್ಯರ್ಥಿಗಳನ್ನು ಸೋಲಿಸುವಷ್ಟು ಶಕ್ತಿ ಸೃಷ್ಟಿಯಾಗಬಹುದು. ಈ ಮೂಲಕ ಇಬ್ಬರ ಜಗಳದಲ್ಲಿ ಲಾಭಪಡೆಯುವ ಮೂರನೇ ವ್ಯಕ್ತಿ ಯಾರು ಎನ್ನುವುದೇ ಈಗಿರುವ ಯಕ್ಷ ಪ್ರಶ್ನೆ.
ಈ ಎಲ್ಲ ರಾಜಕೀಯ ಲೆಕ್ಕಾಚಾರಗಳ ನಡುವೆಯೂ, ‘ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಚಾಟನೆಯಿಂದ ಪಕ್ಷಕ್ಕೆ ಬಹುದೊಡ್ಡ ಡ್ಯಾಮೇಜ್’ ಎನ್ನುವ ಮಾತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅನೇಕರು ಹೇಳಿಕೊಳ್ಳುತ್ತಿದ್ದಾರೆ. ಹಿಂದುತ್ವದ ಮತಗಳೆಲ್ಲ ಒಡೆದುಹೋಗುತ್ತವೆ ಎನ್ನುವ ರೀತಿಯಲ್ಲಿ ಅನೇಕರು ಮಾತನಾಡುತ್ತಿದ್ದಾರೆ.
ಆದರೆ ಇದು ಸಾಧ್ಯವೇ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ ‘ಸಾಧ್ಯವಿಲ್ಲ’ ಎನ್ನುವುದು ಸ್ಪಷ್ಟ ವಾಗುತ್ತದೆ. ಯತ್ನಾಳ್ ಮಾತ್ರವಲ್ಲದೆ, ಯಾರೇ ಆದರೂ ಸಂಬಂಧಿಸಿದ ಪಕ್ಷದಲ್ಲಿರುವ ತನಕ ಒಂದು ‘ಬ್ರ್ಯಾಂಡ್’ ಹೊಂದಿರುತ್ತಾರೆ. ಆದರೆ ಒಂದು ಹಂತದಲ್ಲಿ ಆ ಬ್ರ್ಯಾಂಡ್‌ನಿಂದ ಹೊರಬಂದ ಬಳಿಕ ಅದೇ ‘ಮೌಲ್ಯ’ ಇರುತ್ತದೆ ಎನ್ನಲಾಗುವುದಿಲ್ಲ.
ಉದಾಹರಣೆಗೆ, ಕರ್ನಾಟಕದಲ್ಲಿ ಬಿಜೆಪಿಯ ಬಾವುಟ ಕಟ್ಟಲು ಜನರಿಲ್ಲದ ಸಮಯದಲ್ಲಿ, ಬಿಜೆಪಿ ಯನ್ನು ಕಟ್ಟಿ ಬೆಳೆಸಿದ, ಇಂದಿಗೂ ರಾಜ್ಯ ಬಿಜೆಪಿಯ ಮೇಲೆ ಹಿಡಿತ ಹೊಂದಿರುವ ಬಿ.ಎಸ್.ಯಡಿ ಯೂರಪ್ಪ ಅವರು ಬಿಜೆಪಿಯೊಂದಿಗೆ ಮುನಿಸಿಕೊಂಡು ಪ್ರತ್ಯೇಕ ಪಕ್ಷ ಕಟ್ಟುವುದಾಗಿ ಹೋದರು. ಬಿಜೆಪಿಗೆ ಸಮನಾಗಿ ಕೆಜೆಪಿ ಎನ್ನುವ ಪಕ್ಷವನ್ನು ಕಟ್ಟಿದರು. ಆದರೆ ಬಿಜೆಪಿಯಿಂದ ಅಂದು ಕೆಜೆಪಿಗೆ ಹೋದ ಪ್ರಮುಖ ನಾಯಕರ ಸಂಖ್ಯೆ 10 ದಾಟುವುದಿಲ್ಲ.
ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮುರುಗೇಶ್ ನಿರಾಣಿ, ಪ್ರಭಾಕರ್ ಕೋರೆ, ವಿ.ಸೋಮಣ್ಣ, ಉಮೇಶ್ ಕತ್ತಿ ಸೇರಿದಂತೆ ಆಪ್ತ ವಲಯದಲ್ಲಿದ್ದ ಬಹುತೇಕರು ಬಿಜೆಪಿಯಿಂದ ಕಾಲು ಹೊರಗಿಡಲಿಲ್ಲ. ಇನ್ನು ಕೆಲವರು ‘ನೈತಿಕ’ ಬೆಂಬಲ ನೀಡುವುದಾಗಿ ಘೋಷಿಸಿ ಬಿಜೆಪಿ ಹಾಗೂ ಯಡಿಯೂರಪ್ಪ ಇಬ್ಬರೊಂದಿಗೂ ಸಮಾನ ಅಂತರ ಹಾಗೂ ಆಪ್ತತೆಯನ್ನು ಕಾಯ್ದುಕೊಂಡರು.
2013ರ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿ ಸ್ಪರ್ಧಿಸಿದರೂ, ಗೆದ್ದಿದ್ದು ಮಾತ್ರ ಏಳು ಕ್ಷೇತ್ರದಲ್ಲಿ. ಬಿಜೆಪಿಯನ್ನು ಕೆಡವಿ, ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಬರುವುದಕ್ಕೆ ಕೆಜೆಪಿ ಸಹಾಯ ಮಾಡಿತ್ತೇ ಹೊರತು, ಯಡಿಯೂರಪ್ಪ ಅವರು ಅಂದುಕೊಂಡಷ್ಟು ಯಶಸ್ಸನ್ನು ಕಾಣಲಿಲ್ಲ. ಇನ್ನು ಕಳೆದ ಲೋಕಸಭಾ ಚುನಾವಣೆ ವೇಳೆ ಪುತ್ರನಿಗೆ ಟಿಕೆಟ್ ನೀಡಲಿಲ್ಲವೆಂದು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ.ಎಸ್.ಈಶ್ವರಪ್ಪ ಅವರಿಗೆ ಠೇವಣಿ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಯಿತು.
ಬಿಜೆಪಿಯಲ್ಲಿದ್ದಾಗ ‘ಮಾಸ್’ ಲೀಡರ್ ಎನಿಸಿಕೊಂಡವರು ಪ್ರತ್ಯೇಕ ಪಕ್ಷ ಅಥವಾ ಬಂಡಾಯವೆಂದು ಹೋದಾಗ ಈ ರೀತಿಯಾಗಿರುವುದನ್ನು ನೋಡಿದ್ದೇವೆ. ಈ ರೀತಿ ಪಕ್ಷವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಯಡಿಯೂರಪ್ಪ, ಈಶ್ವರಪ್ಪ ಅವರು ಪಕ್ಷದಿಂದ ಹೊರ ನಡೆದಾಗಲೇ, ಅವರೊಂದಿಗೆ ಬಹುತೇಕರು ಹೋಗಲಿಲ್ಲ. ಇನ್ನು ಇದೀಗ ಯತ್ನಾಳ್ ಅವರು ಈ ರೀತಿಯ ದುಸ್ಸಾ ಹಸಕ್ಕೆ ಕೈಹಾಕಿದರೆ ಅವರ ಕೈಯನ್ನು ಎಷ್ಟು ಮಂದಿ ಬಲಪಡಿಸುತ್ತಾರೆ ಎನ್ನುವುದು ಈಗಿರುವ ಕುತೂಹಲ.
ಇದಿಷ್ಟೇ ಅಲ್ಲದೇ, ಇಷ್ಟು ದಿನ ಯತ್ನಾಳ್ ಅವರ ಜತೆಗಿದ್ದ ‘ಬಿಜೆಪಿ’ ಎನ್ನುವ ಬ್ರ್ಯಾಂಡ್ ಸಹ ಈಗಿರುವುದಿಲ್ಲ. ಹೀಗಿರುವಾಗ ಅವರೀಗ ವಿಜಯೇಂದ್ರ ಅಥವಾ ಯಡಿಯೂರಪ್ಪ ವಿರುದ್ಧ ಮತ್ತದೇ ವಾಗ್ದಾಳಿ ನಡೆಸಿದರೆ ಕೇಳಿಸಿಕೊಳ್ಳುವ ‘ಕಿವಿ’ಗಳ ಸಂಖ್ಯೆಯೂ ಕುಗ್ಗಲಿದೆ ಎನ್ನುವುದು ವಾಸ್ತವ. ಈ ಕಾರಣಕ್ಕಾಗಿಯೇ ಯತ್ನಾಳ್ ಅವರ ಉಚ್ಚಾಟನೆಯನ್ನು ಮರುಪರಿಶೀಲಿಸುವಂತೆ ಅವರ ಆಪ್ತ ಹಾಗೂ ಅವರ ಬಣದೊಂದಿಗೆ ಗುರುತಿಸಿಕೊಂಡಿದ್ದ ಎಲ್ಲ ನಾಯಕರು ಮಾಡುತ್ತಿದ್ದಾರೆ.
ಆದರೆ, ಯತ್ನಾಳ್ ಉಚ್ಚಾಟನೆ ಕೇವಲ ಯತ್ನಾಳ್ ಬಣಕ್ಕೆ ಪಕ್ಷದ ವರಿಷ್ಠರು ನೀಡಿರುವ ‘ಎಚ್ಚರಿಕೆ’ ಯ ಸಂದೇಶವೆಂದು ವಿಜಯೇಂದ್ರ ವಿಶ್ಲೇಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಶಿಸ್ತಿನ ಪಕ್ಷ ಎನಿಸಿರುವ ಬಿಜೆಪಿಯಲ್ಲಿ ಯತ್ನಾಳ್ ರೀತಿ ನಿತ್ಯ ವಾಗ್ದಾಳಿ ನಡೆಸುವುದಕ್ಕೆ ಅವಕಾಶವಿಲ್ಲ. ಯತ್ನಾಳ್ ವಿರುದ್ಧ ಕೈಗೊಂಡಿರುವ ನಿರ್ಣಯ ತಡವಾಗಿದೆ. ಆದರೆ ಈ ರೀತಿ ಮುಂದೆ ಯಾರೇ ಪಕ್ಷದ ಆಂತರಿಕ ವಿಷಯ ಗಳನ್ನು ಬಹಿರಂಗವಾಗಿ ಚರ್ಚಿಸಿದರೆ, ಇದೇ ರೀತಿಯ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆಯನ್ನು ರವಾನಿಸಿದ್ದಾರೆ.
‘ಮಾತು ಮನೆ ಕೆಡಿಸಿತು’ ಎನ್ನುವ ಗಾದೆಮಾತಿಗೆ ಬಸನಗೌಡ ಪಾಟೀಲ್ ಯತ್ನಾಳ್ ಉತ್ತಮ ಉದಾ ಹರಣೆಯಾಗಿ ನಿಲ್ಲುತ್ತಾರೆ. ಹಾಗೆ ನೋಡಿದರೆ, ಕರ್ನಾಟಕ ಬಿಜೆಪಿಯಲ್ಲಿ ಮುಂಚೂಣಿ ನಾಯಕರಾಗ ಬೇಕಿದ್ದ ಯತ್ನಾಳ್‌ಗೆ ಸಣ್ಣ ವಯಸ್ಸಿಗೆ ಪಕ್ಷದಲ್ಲಿ ಏನೆಲ್ಲ ಸಿಗಬೇಕಿತ್ತೋ ಅದೆಲ್ಲ ಸಿಕ್ಕಿತ್ತು.
ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿಯೇ ಕೇಂದ್ರದ ರೈಲ್ವೇ ರಾಜ್ಯ ಸಚಿವರಾಗಿ, ಸಂಸದ ರಾಗಿ ಕಾರ್ಯನಿರ್ವಹಿಸಿದ್ದ ಯತ್ನಾಳ್‌ಗೆ ಜಾತಿ ಬಲ, ಸಂಘ-ಪರಿವಾರದ ಬಲವಷ್ಟೇ ಅಲ್ಲದೇ ಕೇಂದ್ರದ ಹಲವು ಬಿಜೆಪಿ ನಾಯಕರ ಬಲವೂ ಇತ್ತು. ಆದರೆ ಈ ಎಲ್ಲವನ್ನೂ ‘ಏಣಿ’ಯ ರೀತಿ ಬಳಸಿ ಕೊಳ್ಳದೇ ರಾಜಕೀಯ ವಿರೋಧಿಗಳ ವಿರುದ್ಧ ಹೋರಾಡಲು ಬಳಸಿಕೊಂಡಿದ್ದರಿಂದಲೇ ಉಚ್ಚಾಟನೆ ಯ ಶಿಕ್ಷೆಯನ್ನು 3 ಬಾರಿ ಅನುಭವಿಸಬೇಕಾಗಿದೆ.
ಬಿಜೆಪಿ ಪಕ್ಷಕ್ಕೆ ಬೇಕಿರುವ ಎಲ್ಲ ವ್ಯಕ್ತಿತ್ವವನ್ನು ಹೊಂದಿದ್ದ ಯತ್ನಾಳ್‌ಗೆ ಅವರ ಮಾತೇ ಮುಳ್ಳಾ ಯಿತು. ಮಾತನಾಡುವ ಜಾಗದಲ್ಲಿ ಮಾತನಾಡದೇ, ಅವಕಾಶ ಸಿಕ್ಕಾಗಲೆಲ್ಲ ಪಕ್ಷದ ನಾಯ ಕತ್ವದ ವಿರುದ್ಧ ಮಾತಾಡುವುದು, ಯಡಿಯೂರಪ್ಪ ಕುಟುಂಬದ ವಿಷಯವಲ್ಲದೇ ಬೇರಾವ ವಿಷಯವೂ ಗೊತ್ತಿಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಇಳಿದಿದ್ದು, ರಾಜ್ಯದ ಯಾವುದೇ ಸಮಸ್ಯೆ ಬಗ್ಗೆ ಮಾತನಾ ಡಲು ಮುಂದಾದರೂ ಕೊನೆಗೆ ಅದನ್ನು ಯಡಿಯೂರಪ್ಪ ಕುಟುಂಬದ ಜತೆಗೆ ‘ಲಿಂಕ್’ ಮಾಡುತ್ತಾ ಬಂದಿದ್ದೇ ಅವರು ಮಾಡಿಕೊಂಡ ಎಡವಟ್ಟು.
ಹೀಗಾಗಿ, ‘ಉಚ್ಚಾಟನೆ’ ಎನ್ನುವ ಬ್ರಹ್ಮಾಸವನ್ನು ವರಿಷ್ಠರಿಂದ ಮೂರನೇ ಬಾರಿಗೆ ಪ್ರಯೋಗ ಮಾಡಿಸಿಕೊಂಡಿದ್ದಾರೆ ಯತ್ನಾಳ್. ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಆರು ವರ್ಷ ಉಚ್ಚಾಟನೆ ಮಾಡಿರುವ ವರಿಷ್ಠರ ತೀರ್ಮಾನವನ್ನು ಪುನರ್‌ಪರಿಶೀಲಿಸಬೇಕು ಎಂದು ಒಂದು ಬಣ ಈಗಾಗಲೇ ವರಿಷ್ಠರ ಮೇಲೆ ಒತ್ತಡ ಹೇರುತ್ತಿದೆ. ಈ ಶಿಕ್ಷೆಯನ್ನು ಮರುಪರಿಶೀಲಿಸದಿದ್ದರೆ ಶಾಸಕ ಸ್ಥಾನಕ್ಕೆ ಅವರಿಗೆ ಯಾವುದೇ ಸಮಸ್ಯೆಯಾಗದಿದ್ದರೂ, ಬಿಜೆಪಿಯೊಂದಿಗಿನ ಒಡನಾಟಕ್ಕೆ ಬಹುತೇಕ ‘ಫುಲ್‌ಸ್ಟಾಪ್’ ಇಡಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ.
ಯತ್ನಾಳ್ ಅವರ ಮುಂದಿನ ನಡೆ ಯಾವ ರೀತಿಯಿರುತ್ತದೆ ಎನ್ನುವುದು ಅವರಿಗೆ ಬಿಟ್ಟಿದ್ದು. ಯತ್ನಾಳ್ ಉಚ್ಚಾಟನೆಯ ತೀರ್ಮಾನದಿಂದ ‘ಕಟ್ಟರ್ ಹಿಂದೂ’ ಮತಗಳು ಹಾಗೂ ಪಂಚಮಸಾಲಿ ಸಮುದಾಯದ ಮತಗಳು ಆಚೀಚೆ ಹೋಗುವುದೇ ಎನ್ನುವುದಕ್ಕೆ ಮುಂದೆ ಎದುರಾಗಲಿರುವ ಸ್ಥಳೀಯ ಸಂಸ್ಥೆ ಚುನಾವಣೆಗಳೇ ಉತ್ತರಿಸಬೇಕಿದೆ.