ಆರ್‌ಸಿಬಿ ನಾಯಕನಾಗುವಂತೆ ಕೊಹ್ಲಿ ಪರ ಹಲವರ ಬ್ಯಾಟಿಂಗ್
ಕೊಹ್ಲಿ ನಾಯಕತ್ವದಲ್ಲಿ ಒಟ್ಟು 140 ಪಂದ್ಯಗಳನ್ನು ಆಡಿದ್ದ ಆರ್‌ಸಿಬಿ 66 ಪಂದ್ಯಗಳನ್ನು ಜಯಿಸಿದೆ. 70 ಪಂದ್ಯಗಳಲ್ಲಿ ಸೋಲು ಕಂಡಿದೆ. ಐಪಿಎಲ್ ಇತಿಹಾಸದಲ್ಲಿ ವಿನ್ನಿಂಗ್ಸ್ ಸರಾಸರಿಯಲ್ಲಿ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್‌ಗೆ ದಿನಗಣನೆ ಶುರುವಾಗಿದ್ದು, ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ನಾಯಕ ಯಾರು ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಕೆಲವು ಮೂಲಗಳ ಪ್ರಕಾರ ವಿರಾಟ್ ಕೊಹ್ಲಿ ಮತ್ತೆ ನಾಯಕನಾಗಲಿದ್ದಾರೆ ಎನ್ನಲಾಗಿದೆ.
ವಿರಾಟ್ ಕೊಹ್ಲಿ ಈ ಹಿಂದೆ 9 ವರ್ಷಗಳ(2013 ರಿಂದ 2021) ಕಾಲ ಆರ್‌ಸಿಬಿ ತಂಡವನ್ನು ಮುನ್ನಡೆಸಿದ್ದರು. ಒಂದು ಬಾರಿ ತಂಡವನ್ನು ಫೈನಲ್(2016)ಗೆ ಏರಿಸಿದ್ದರು. ಭಾರತ ತಂಡ ಮೂರೂ ಮಾದರಿಯ ನಾಯಕತ್ವದ ಜತೆಗೆ ಐಪಿಎಲ್‌ನಲ್ಲಿಯೂ ನಾಯಕನಾಗಿ ಕಾರ್ಯದೊತ್ತಡ ನಿಭಾಯಿಸಲು ಕಷ್ಟ ಎನ್ನುವ ಕಾರಣಕ್ಕೆ ಕೊಹ್ಲಿ ಐಪಿಎಲ್ ನಾಯಕತ್ವ ತ್ಯಜಿಸಿದ್ದರು.
ಆರ್‌ಸಿಬಿ ನಾಯಕತ್ವದ ರೇಸ್‌ನಲ್ಲಿ ರಜತ್ ಪಾಟೀದಾರ್, ವೇಗಿ ಭುವನೇಶ್ವರ್ ಕುಮಾರ್, ಇಂಗ್ಲೆಂಡ್‌ನ ಫಿಲ್ ಸಾಲ್ಟ್ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಫ್ರಾಂಚೈಸಿ ಕೊಹ್ಲಿಯೇ ನಾಯಕನಾದರೆ ಉತ್ತಮ ಎನ್ನುವ ತೀರ್ಮಾನದಲ್ಲಿದೆ.
ಇದನ್ನೂ ಓದಿ IPL 2025: ವಿರಾಟ್ ಕೊಹ್ಲಿ ಆರ್‌ಸಿಬಿಗೆ ನಾಯಕ? ಬೆಂಗಳೂರು ಫ್ರಾಂಚೈಸಿ ಸಿಒಒ ಹೇಳಿದ್ದಿದು!
'ತಂಡದ ನಾಯಕತ್ವ ವಿಚಾರದಲ್ಲಿ ನಮಗೆ ಬಹಳ ಆಯ್ಕೆಗಳಿವೆ. ನಾಯಕರಾಗಲು ನಮ್ಮಲ್ಲಿ 4-5 ಮಂದಿಯಿದ್ದಾರೆ. ಶೀಘ್ರದಲ್ಲೇ ನಾವು ಈ ಬಗ್ಗೆ ನಿರ್ಧಾರಕ್ಕೆ ಬರಲಿದ್ದೇವೆ' ಎಂದು ಆರ್‌ಸಿಬಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಜೇಶ್ ಮೆನನ್ ಹೇಳಿದ್ದಾರೆ.
ಕೊಹ್ಲಿ ನಾಯಕತ್ವದಲ್ಲಿ ಒಟ್ಟು 140 ಪಂದ್ಯಗಳನ್ನು ಆಡಿದ್ದ ಆರ್‌ಸಿಬಿ 66 ಪಂದ್ಯಗಳನ್ನು ಜಯಿಸಿದೆ. 70 ಪಂದ್ಯಗಳಲ್ಲಿ ಸೋಲು ಕಂಡಿದೆ. ಐಪಿಎಲ್ ಇತಿಹಾಸದಲ್ಲಿ ವಿನ್ನಿಂಗ್ಸ್ ಸರಾಸರಿಯಲ್ಲಿ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರ ನಾಯಕತ್ವದ ಸರಾಸರಿ ಗೆಲುವು ಶೇ. 46.15 ರಷ್ಟಿದೆ. ದಾಖಲೆ ಧೋನಿ ಹೆಸರಿನಲ್ಲಿದೆ. ಧೋನಿ ನಾಯಕತ್ವದ ಗೆಲುವಿನ ಸರಾಸರಿ 60.38 ರಷ್ಟಿದೆ.