Murder Case: ಸರ್ಕಾರಿ ಕೆಲಸದ ಆಸೆಗೆ ಪತ್ನಿಯಿಂದಲೇ ಪತಿಯ ಕೊಲೆ: ಅತ್ತೆ ದೂರು
ಮೃತ ವ್ಯಕ್ತಿಗೆ ಜಾಂಡೀಸ್ ಇದೆ ಎಂದು ತಿಳಿಸಲಾಗಿತ್ತು. ಗಂಡನ ಸಾವಿನ ವಿಷಯವನ್ನು ಆತನ ಮನೆಯವರಿಗೂ ತಿಳಿಸದೇ ಪತ್ನಿ ನಾಗರತ್ನ ಅಂತ್ಯಕ್ರಿಯೆ ಮುಗಿಸಿದ್ದರು. ಈಗ ಮೃತನ ತಾಯಿ ಸರೋಜಮ್ಮ, ಸೊಸೆ ನಾಗರತ್ನ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ.
ಚಿತ್ರದುರ್ಗ: ಸರ್ಕಾರಿ ಕೆಲಸದ (Government job) ಆಸೆಗೆ ಸೊಸೆಯೇ ಗಂಡನನ್ನು ಕೊಲೆ (Murder Case) ಮಾಡಿದ್ದಾಳೆ ಎಂದು ಮೃತಪಟ್ಟವನ ತಾಯಿ ದೂರು ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ಹೂಳಿದ ಕಳೇಬರ ಮರಳಿ ತೆಗೆದು ಪೋಸ್ಟ್‌ಮಾರ್ಟಮ್‌ಗೆ ಕಳಿಸಲಾಗಿದೆ. ಈ ಘಟನೆ ಚಿತ್ರದುರ್ಗದ (Chitradurga news) ಹೊಳಲ್ಕೆರೆಯಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿಯ ಹೆಸರು ಸುರೇಶ್. ಚಿತ್ರದುರ್ಗದ ನೆಹರು ನಗರ ನಿವಾಸಿ. ಈತನ ತಂದೆ ಸರ್ಕಾರಿ ಕೆಲಸದಲ್ಲಿದ್ದರು. ತಂದೆ ಸಾವಿನ ಬಳಿಕ ಅನುಕಂಪದ ಆಧಾರದಲ್ಲಿ ಸುರೇಶ್ಗೆ ತಂದೆಯ ಕೆಲಸ ಒಲಿದು ಬಂದಿತ್ತು. ಮಗ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆಂದು ತಾಯಿ ಆಸೆಯಿಂದ ಗಂಡನ ಕೆಲಸವನ್ನು 2ನೇ ಮಗ ಸುರೇಶ್ಗೆ ಕೊಡಿಸಿದ್ದರು. ಆದರೆ, ಮೊಳಕಾಲ್ಮೂರು ತಾಲ್ಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ SDA ಆಗಿದ್ದ ಸುರೇಶ್ ಪತ್ನಿಯ ಕಿರುಕುಳ ತಾಳದೆ ತನ್ನ ತಾಯಿ, ಸಹೋದರರ ಜೊತೆ ಮಾತು ಬಿಟ್ಟಿದ್ದವನು, ಆಕ್ಟೋಬರ್ 8, 2024ರಂದು ಸಾವನ್ನಪ್ಪಿದ್ದಾನೆ.
ಸುರೇಶ್ಗೆ ಜಾಂಡೀಸ್ ಇದೆ ಎಂದು ತಿಳಿಸಲಾಗಿತ್ತು. ಗಂಡನ ಸಾವಿನ ವಿಷಯವನ್ನು ಆತನ ಮನೆಯವರಿಗೂ ತಿಳಿಸದೇ ಪತ್ನಿ ನಾಗರತ್ನ ಅಂತ್ಯಕ್ರಿಯೆ ಮುಗಿಸಿದ್ದರು. ಈಗ ಮೃತನ ತಾಯಿ ಸರೋಜಮ್ಮ, ಸೊಸೆ ನಾಗರತ್ನ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ನನ್ನ ಮಗನನ್ನು ಉಸಿರುಗಟ್ಟಿಸಿ ಕೊಂದಿದ್ದಾಳೆ. ಜಾಂಡೀಸ್ನಿಂದ ಸತ್ತ ಎಂದು ನಾಟಕವಾಡ್ತಿದ್ದಾಳೆ. ಅವನ ಕೆಲಸ ಇವಳಿಗೆ ಬರುತ್ತೆ ಎಂದು ಈ ಕೃತ್ಯವೆಸಗಿದ್ದಾಳೆ ಎಂದು ಪೊಲೀಸ್ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಅಂತ್ಯಕ್ರಿಯೆ ನಡೆದ 4 ತಿಂಗಳ ಬಳಿಕ ಪೊಲೀಸರು ಇದೀಗ ಹೊಳಲ್ಕೆರೆ ರಸ್ತೆಯ ರುದ್ರಭೂಮಿಯಲ್ಲಿ ಸುರೇಶ್ ಕಳೇಬರ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ, ತನಿಖೆ ಕೈಗೊಂಡಿದ್ದಾರೆ.
ಸುರೇಶನಿಗೆ ಹುಷಾರಿಲ್ಲ. ಹೀಗಾಗಿ ಆತನನ್ನು ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ನಮ್ಮನ್ನೆಲ್ಲ ವಂಚಿಸಿದ್ದಾರೆ. ಕೇವಲ ಸರ್ಕಾರಿ ಕೆಲಸದಾಸೆಗೆ ಅನ್ಯಾಯವಾಗಿ ಸುರೇಶನ ಜೀವ ತೆಗೆದಿದ್ದಾಳೆ. ಹೀಗಾಗಿ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು. ಆರೋಪಿಗೆ ತಕ್ಕ ಶಿಕ್ಷೆವಿಧಿಸಬೇಕೆಂದು ಮೃತ ಸುರೇಶನ ಅತ್ತಿಗೆ ಒತ್ತಾಯಿಸಿದ್ದಾರೆ. ಸದ್ಯ ಸಮಾಧಿಯಲ್ಲಿದ್ದ ಶವವನ್ನು ಹೊರತೆಗೆದು ಪೋಸ್ಟ್ ಮಾರ್ಟಮ್ ನಡೆಸಲಾಗಿದ್ದು, ವೈದ್ಯರ ರಿಪೋರ್ಟ್ ಬಳಿಕ ಪ್ರಕರಣದ ಸತ್ಯಾಸತ್ಯತೆ ಬಯಲಾಗಲಿದೆ.
ಇದನ್ನೂ ಓದಿ: Police Firing: ಬೆಂಗಳೂರಿನಲ್ಲಿ ಪೊಲೀಸ್ ಶೂಟೌಟ್, ಕೊಲೆ ಆರೋಪಿಯ ಕಾಲಿಗೆ ಗುಂಡು