ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗುಡಿಬಂಡೆ ಜನರ ದಶಕಗಳ ಕನಸು ನನಸಾಗುವುದು ಎಂದು? ಪ್ರತ್ಯೇಕ ಕ್ಷೇತ್ರದ ಹೋರಾಟಕ್ಕೆ ಬೇಕಿದೆ ಹೊಸ ಚೈತನ್ಯ!

ಕ್ರಿ.ಶ 1645ರ ಸುಮಾರಿಗೆ ಹಾವಳಿ ಬೈರೇಗೌಡರ ಶೌರ್ಯಕ್ಕೆ ಸಾಕ್ಷಿಯಾಗಿದ್ದ ಗುಡಿಬಂಡೆ ನಾಡು, ಇಂದು ತನ್ನ ಅಸ್ತಿತ್ವಕ್ಕಾಗಿ ಮೌನವಾಗಿ ಹೋರಾಡುತ್ತಿದೆ. ಅಮಾನಿಬೈರಸಾಗರ ಕೆರೆ ಮತ್ತು ಸುಂದರವಾದ ಬೆಟ್ಟಗುಡ್ಡಗಳ ಒಡಲಲ್ಲಿರುವ ಈ ತಾಲ್ಲೂಕು, ಸ್ವಾತಂತ್ರ್ಯಾ ನಂತರದ ದಶಕ ಗಳಲ್ಲಿ ಅಭಿವೃದ್ಧಿಯ ಮರೀಚಿಕೆಯನ್ನು ಬೆನ್ನಟ್ಟುತ್ತಲೇ ಸಾಗಿದೆ.

ಗುಡಿಬಂಡೆ ಜನರ ದಶಕಗಳ ಕನಸು ನನಸಾಗುವುದು ಎಂದು?

-

Profile
Ashok Nayak Apr 3, 2026 11:20 PM

ಮುನಿರಾಜು ಎಂ ಅರಿಕೆರೆ

ಗುಡಿಬಂಡೆ: ತಾಲೂಕು ಮಾನ್ಯತೆ ಹೊಂದಿರುವ ಗುಡಿಬಂಡೆಯನ್ನು ಬಾಗೇಪಲ್ಲಿಯಿಂದ ಬೇರ್ಪಡಿಸಿ ವಿಧಾನಸಭಾ ಕ್ಷೇತ್ರವಾಗಿಸಲು ದಶಕಗಳಿಂದ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಭಾಗದ ಜನಪ್ರತಿನಿಧಿಗಳು ಕೂಡ ಇವರ ಕೂಗಿಗೆ ದನಿಗೂಡಿಸಿ ನ್ಯಾಯಯುತ ಬೇಡಿಕೆ ಈಡೇರಿಸಲು ಮುಂದಾಗಬೇಕು ಎಂಬುದು ಪ್ರಜ್ಞಾವಂತ ನಾಗರಿಕರ ಆಗ್ರಹ. ಈಗಲಾದರೂ ಆ ಕನಸು ಈಡೇರುವುದೇ ಎಂಬುದನ್ನು ಕಾದು ನೋಡಬೇಕಿದೆ.

ಹೌದು. 1962ರಿಂದಲೂ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಭಾಗವಾಗಿರುವ ಗುಡಿಬಂಡೆ, ಇಂದಿಗೂ ತನ್ನದೇ ಆದ ಪ್ರತ್ಯೇಕ ವಿಧಾನಸಭಾ ಕ್ಷೇತ್ರದ ಮಾನ್ಯತೆ ಪಡೆಯಲು ವಿಫಲ ವಾಗಿರುವುದು ವಿಚಿತ್ರವಾದರೂ ಸತ್ಯವಾಗಿದೆ.

ಕ್ರಿ.ಶ 1645ರ ಸುಮಾರಿಗೆ ಹಾವಳಿ ಬೈರೇಗೌಡರ ಶೌರ್ಯಕ್ಕೆ ಸಾಕ್ಷಿಯಾಗಿದ್ದ ಗುಡಿಬಂಡೆ ನಾಡು, ಇಂದು ತನ್ನ ಅಸ್ತಿತ್ವಕ್ಕಾಗಿ ಮೌನವಾಗಿ ಹೋರಾಡುತ್ತಿದೆ. ಅಮಾನಿಬೈರಸಾಗರ ಕೆರೆ ಮತ್ತು ಸುಂದರವಾದ ಬೆಟ್ಟಗುಡ್ಡಗಳ ಒಡಲಲ್ಲಿರುವ ಈ ತಾಲ್ಲೂಕು, ಸ್ವಾತಂತ್ರ್ಯಾನಂತರದ ದಶಕಗಳಲ್ಲಿ ಅಭಿವೃದ್ಧಿಯ ಮರೀಚಿಕೆಯನ್ನು ಬೆನ್ನಟ್ಟುತ್ತಲೇ ಸಾಗಿದೆ. 

ಇದನ್ನೂ ಓದಿ: Gudibande News: ಮಹಾವೀರರ ಆದರ್ಶಗಳು, ಅಹಿಂಸಾ ಮಾರ್ಗ ಪಾಲಿಸೋಣ: ಗುಂಪು ಮರದ ಆನಂದ್

ಕ್ಷೇತ್ರ ಪುನರ್ ವಿಂಗಡಣೆಯ ರಾಜಕೀಯ ಲೆಕ್ಕಾಚಾರಗಳು ಮತ್ತು ಸ್ಥಳೀಯ ನಾಯಕರ ಇಚ್ಛಾಶಕ್ತಿಯ ಕೊರತೆಯಿಂದಾಗಿ ಈ ಭಾಗಕ್ಕೆ ಸಿಗಬೇಕಾದ ಅನುದಾನಗಳು ಸಮರ್ಪಕವಾಗಿ ತಲುಪುತ್ತಿಲ್ಲ. ಸಾಮಾನ್ಯವಾಗಿ ಸರ್ಕಾರಗಳು ಅನುದಾನವನ್ನು ಕ್ಷೇತ್ರವಾರು ಹಂಚಿಕೆ ಮಾಡುತ್ತವೆಯೇ ಹೊರತು ತಾಲ್ಲೂಕುವಾರು ಅಲ್ಲ. ಇದರಿಂದಾಗಿ, ದೊಡ್ಡಣ್ಣನಂತಿರುವ ಬಾಗೇಪಲ್ಲಿಗೆ ಸಿಕ್ಕಷ್ಟು ಪಾಲು ಗುಡಿಬಂಡೆಗೆ ಸಿಗುತ್ತಿಲ್ಲ. ಇದರಿಂದಾಗಿ ಇಲ್ಲಿನ ಅನೇಕ ಇಲಾಖೆಗಳು ನಿಷ್ಕ್ರಿಯಗೊಂಡಿದ್ದು, ಜನರ ಸಮಸ್ಯೆಗಳನ್ನು ಆಲಿಸುವವರೇ ಇಲ್ಲದಂತಾ ಗಿದೆ. ದಶಕಗಳಿಂದ ನಡೆಯುತ್ತಿರುವ ಈ ಮಲತಾಯಿ ಧೋರಣೆಯು ತಾಲ್ಲೂಕಿನ ಪ್ರಗತಿಗೆ ದೊಡ್ಡ ಹಿನ್ನಡೆಯಾಗಿದೆ. ಭೌಗೋಳಿಕವಾಗಿ ನೋಡುವುದಾದರೆ, ಗುಡಿಬಂಡೆಯ ಸುತ್ತ ಮುತ್ತಲ ಗ್ರಾಮಗಳ ಸ್ಥಿತಿ ಅತ್ಯಂತ ವಿಚಿತ್ರವಾಗಿದೆ. 

ಗೌರಿಬಿದನೂರು ತಾಲ್ಲೂಕಿನ ನಗರಗೆರೆ ಹೋಬಳಿ ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಡಿಕಲ್ಲು ಹೋಬಳಿಯ ಜನರು ತಮ್ಮ ದೈನಂದಿನ ವ್ಯಾಪಾರ, ನ್ಯಾಯಾಲಯ ಮತ್ತು ಪೊಲೀಸ್ ಠಾಣೆಯ ಕೆಲಸಗಳಿಗಾಗಿ ಕೇವಲ 3 ರಿಂದ 10 ಕಿಲೋಮೀಟರ್ ದೂರದಲ್ಲಿರುವ ಗುಡಿಬಂಡೆಯನ್ನೇ ಅವಲಂಬಿಸಿದ್ದಾರೆ. ಆದರೆ, ಕಂದಾಯ ಇಲಾಖೆಯ ಕೆಲಸಗಳಿಗಾಗಿ ಅವರು 30 ರಿಂದ 40 ಕಿಲೋಮೀಟರ್ ದೂರದ ತಮ್ಮ ಮೂಲ ತಾಲ್ಲೂಕು ಕೇಂದ್ರಗಳಿಗೆ ಅಲೆಯಬೇಕಿದೆ. ಈ ಹೋಬಳಿಗಳನ್ನು ಗುಡಿಬಂಡೆಗೆ ಸೇರಿಸಿದರೆ ಜನರಿಗೆ ಅನುಕೂಲ ವಾಗುವುದಲ್ಲದೆ, ಪ್ರತ್ಯೇಕ ವಿಧಾನಸಭಾ ಕ್ಷೇತ್ರಕ್ಕೆ ಬೇಕಾದ ತಾಂತ್ರಿಕ ಅರ್ಹತೆಯೂ ಈ ತಾಲ್ಲೂಕಿಗೆ ಲಭಿಸುತ್ತದೆ.

ಹತ್ತು ವರ್ಷಗಳ ಹಿಂದೆ ಪ್ರತ್ಯೇಕ ಕ್ಷೇತ್ರದ ಬೇಡಿಕೆಗಾಗಿ ನಡೆದ ಸಹಿ ಸಂಗ್ರಹ ಮತ್ತು ಹೋರಾಟಗಳು ಜನರ ಮನದಲ್ಲಿ ಆಸೆಯ ಕಿಡಿ ಮೂಡಿಸಿದ್ದವು. ಆದರೆ, ರಾಜಕೀಯ ಪಕ್ಷಗಳ ಬೆಂಬಲ ಸಿಗದ ಕಾರಣ ಆ ಕಿಚ್ಚು ಕ್ರಮೇಣ ತಣ್ಣಗಾಯಿತು. ಇಂದು 70 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಈ ತಾಲ್ಲೂಕಿನ ಅಭಿವೃದ್ಧಿ ಸಾಧ್ಯವಾಗುವುದು ಕೇವಲ ರಾಜಕೀಯ ಮುಖಂಡರು ಪಕ್ಷಬೇಧ ಮರೆತು ಒಂದಾದಾಗ ಮಾತ್ರ. ಹಾವಳಿ ಬೈರೇಗೌಡರ ನಾಡು ಮತ್ತೆ ವೈಭವ ಪಡೆಯಬೇಕಾದರೆ, ಗುಡಿಬಂಡೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಗು ವುದು ಅನಿವಾರ್ಯವಾಗಿದೆ. ಅಂದಾಗ ಮಾತ್ರ ಇಲ್ಲಿನ ಜನರ ದಶಕಗಳ ಕನಸು ನನಸಾಗಲು ಸಾಧ್ಯ.

image

ಗುಡಿಬಂಡೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಗಬೇಕಾದರೇ, ಇಲ್ಲಿನ ಪ್ರತಿಯೊಬ್ಬರೂ ಜಾತಿ, ಮತ, ಪಕ್ಷಬೇದ ಮರೆತು ಉಗ್ರ ಹೋರಾಟಕ್ಕೆ ಮುಂದಾಗಬೇಕಿದೆ. ಇಲ್ಲವಾದಲ್ಲಿ ನಮ್ಮ ಅಸ್ತಿತ್ವಕ್ಕೆ ಧಕ್ಕೆ ಬರಬಹುದು.

ಬಿ.ಅಮೀರ್ ಜಾನ್, 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು
image

ನಮ್ಮ ಗುಡಿಬಂಡೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಗಬೇಕಾದರೇ, ನಾವೂ ಕೂಡ ತೆಲಂಗಾಣ ಮಾದರಿಯಲ್ಲಿ ಹೋರಾಟ ಮಾಡಬೇಕಿದೆ. ಅದಕ್ಕೆ ಪಕ್ಷಾತೀತ ಹೋರಾಟ ಬೇಕಿದೆ. ಶೀಘ್ರದಲ್ಲೇ ಹೋರಾಟ ರೂಪಿಸಲಾಗುವುದು.

ಶ್ರೀನಿವಾಸ್, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ.