ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ರಣಜಿ ಟ್ರೋಫಿ ಆಡಬೇಕೆಂದ ಯುವರಾಜ್ ಸಿಂಗ್!
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರು ರಣಜಿ ಟ್ರೋಫಿ ಟೂರ್ನಿಯ ಇನ್ನುಳಿದ ಪಂದ್ಯಗಳಲ್ಲಿ ಆಯಾ ತಂಡಗಳ ಪರ ಆಡಬೇಕೆಂದು ಟೀಮ್ ಇಂಡಿಯಾ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಆಗ್ರಹಿಸಿದ್ದಾರೆ.
ನವದೆಹಲಿ: ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರು ದೇಶಿ ಕ್ರಿಕೆಟ್ ಆಡಬೇಕೆಂದು ಟೀಮ್ ಇಂಡಿಯಾ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಸಲಹೆ ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಇತ್ತೀಚೆಗೆ ಅಂತ್ಯವಾಗಿದ್ದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ್ದರು. ರೋಹಿತ್ ಶರ್ಮಾ ಐದು ಇನಿಂಗ್ಸ್‌ಗಳಿಂದ ಕೇವಲ 31 ರನ್‌ಗಳಿಸಿದ್ದರೆ, ವಿರಾಟ್ ಕೊಹ್ಲಿ ಪರ್ತ್ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಹೊರತಾಗಿಯೂ 9 ಇನಿಂಗ್ಸ್‌ಗಳಿಂದ 190 ರನ್‌ಗಳನ್ನು ಕಲೆ ಹಾಕಿದ್ದರು.
2024-25ರ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಇನ್ನುಳಿದ ಪಂದ್ಯಗಳಿಗೆ ದಿಲ್ಲಿ ತಂಡದ ಸಂಭಾವ್ಯ ತಂಡದಲ್ಲಿ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ ಹಾಗೂ ರೋಹಿತ್ ಶರ್ಮಾ ಮುಂಬೈ ರಣಜಿ ತಂಡದ ಜೊತೆ ಅಭ್ಯಾಸ ನಡೆಸುತ್ತಿದ್ದಾರೆ. ಆದರೆ, ರಣಜಿ ಟ್ರೋಫಿಯ ಇನ್ನುಳಿದ ಪಂದ್ಯಗಳನ್ನು ಆಡುವ ಬಗ್ಗೆ ಇನ್ನೂ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಸ್ಪಷ್ಟಪಡಿಸಿಲ್ಲ.
IND vs AUS: ʻಸ್ಕಾಟ್ ಬೋಲೆಂಡ್ ಆಡಿಲ್ಲವಾಗಿದ್ರೆ ಭಾರತ ಟೆಸ್ಟ್ ಸರಣಿ ಗೆಲ್ಲುತ್ತಿತ್ತುʼ-ಅಶ್ವಿನ್!
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರು ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡಬೇಕೆಂದು ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಯುವರಾಜ್ ಸಿಂಗ್, "ದೇಶಿ ಕ್ರಿಕೆಟ್ ಆಡುವುದು ತುಂಬಾ ಮುಖ್ಯವಾಗಿದೆ. ಗಾಯಕ್ಕೆ ಒಳಗಾಗಿಲ್ಲವಾದರೆ ಅಥವಾ ಸಮಯವಿದ್ದರೆ ಪ್ರತಿಯೊಬ್ಬರೂ ಕೂಡ ದೇಶಿ ಕ್ರಿಕೆಟ್ ಆಡಬೇಕು," ಎಂದು ತಿಳಿಸಿದ್ದಾರೆ.
ಎರಡು ಟೆಸ್ಟ್ ಸರಣಿಯನ್ನು ಸೋತಿರುವ ಭಾರತ
ಇತ್ತೀಚೆಗೆ ಭಾರತ ತಂಡ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 0-3 ಅಂತರದಲ್ಲಿ ಟೆಸ್ಟ್ ಸರಣಿಯಲ್ಲಿ ವೈಟ್‌ವಾಷ್ ಆಘಾತ ಅನುಭವಿಸಿತ್ತು. ನಂತರ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಭಾರತ ತಂಡ 1-3 ಅಂತರದಲ್ಲಿ ಸೋಲು ಅನುಭವಿಸಿತ್ತು. ಆ ಮೂಲಕ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಟೀಮ್ ಇಂಡಿಯಾ ವಿಫಲವಾಗಿತ್ತು.
yo-yo fitness Test: ಮತ್ತೆ ಯೋ-ಯೋ ಟೆಸ್ಟ್ ಜಾರಿಗೆ ಮುಂದಾದ ಬಿಸಿಸಿಐ!
ನೂತನ ನಿಯಮಕ್ಕೆ ಮುಂದಾದ ಬಿಸಿಸಿಐ
ಭಾರತ ತಂಡ ಇತ್ತೀಚಿನ ಟೆಸ್ಟ್ ಸರಣಿಗಳಲ್ಲಿ ಸೋಲು ಅನುಭವಿಸಿದ ಕಾರಣ ಆಟಗಾರರ ಕುಟುಂಬ ಸಂಬಂಧ ಬಿಸಿಸಿಐ ನೂತನ ಮಾರ್ಗಸೂಚಿಗಳನ್ನು ರಚಿಸಲು ಮುಂದಾಗಿದೆ. ಅಂದರೆ, ಭಾರತ ತಂಡದ ವಿದೇಶಿ ಪ್ರವಾಸಿ 45 ದಿನಗಳಿದ್ದರೆ, ಆರಂಭಿಕ ಎರಡು ವಾರಗಳ ಅವಧಿಯಲ್ಲಿ ಮಾತ್ರ ಆಟಗಾರರು ತಮ್ಮ-ತಮ್ಮ ಕುಟುಂಬದ ಜೊತೆ ಇರಬಹುದು. ಒಂದು ವೇಳೆ ಕಡಿಮೆ ಅವಧಿಯ ಪ್ರವಾಸವಾಗಿದ್ದರೆ ಕೇವಲ 7 ದಿನಗಳ ಕಾಲ ಮಾತ್ರ ಆಟಗಾರರು ತಮ್ಮ ಪತ್ನಿ ಸೇರಿದಂತೆ ಕುಟುಂಬದ ಸದಸ್ಯರ ಜೊತೆ ಇರಬಹುದು. ಅಲ್ಲದೆ ಆಟಗಾರರು ಕೇವಲ ತಂಡದ ಬಸ್‌ನಲ್ಲಿ ಮಾತ್ರ ಪ್ರಯಾಣಿಸಬೇಕಾಗುತ್ತದೆ.