ಬೆಂಗಳೂರು: ಜೀವನವೆಂಬುದು ಎಂದಿಗೂ ಹೂವಿನ ಹಾಸಿಗೆಯಲ್ಲ. ಕಷ್ಟ-ಸುಖ, ನೋವು-ನಲಿವು, ಏಳಿಗೆ-ತೊಡರುಗಳೆಂಬುದು ಒಂದೇ ನಾಣ್ಯದ ಎರಡು ಮುಖಗಳಂತೆ ಎಂಬುದು ನಮಗೆಲ್ಲ ತಿಳಿದಿರುವ ವಿಚಾರ. ಹೀಗೆ ಅದೊಂದು ದಿನ ನಮ್ಮ ಜೀವನದಲ್ಲಿ ಎಲ್ಲವೂ ಸರಿ ಇಲ್ಲ, ನನ್ನ ಜೀವನ ಎಲ್ಲೋ ಒಂದು ಕಡೆ ಸಿಕ್ಕಿ ಹಾಕಿಕೊಂಡಂತಾಗಿದೆ ಎಂದು ನಿಮಗೆ ಅನ್ನಿಸತೊಡಗಿದಾಗ ಖಿನ್ನತೆಗೆ ಒಳಗಾಗುವುದು ಸಹಜವೇ. ಈ ಸಂದರ್ಭದಲ್ಲಿ ನಮಗೆ ಸರಿಯಾದ ಸ್ಪೂರ್ತಿದಾಯಕ ಮಾತುಗಳ ಅಗತ್ಯವಿರುತ್ತದೆ. ನಮ್ಮ ಪ್ರಾಚೀನ ಗ್ರಂಥಗಳಿಂದ ಮತ್ತು ನೀತಿ ಮಾತುಗಳಿಂದ ಇಂತಹ ಮೋಟಿವೇಷನ್ ಪಡೆದುಕೊಳ್ಳುವುದು ಸಾಧ್ಯ. ಅಂತಹ ಒಂದು ಸಾರ್ವಕಾಲಿಕ ಸ್ಫೂರ್ತಿಯ ಗ್ರಂಥಗಳಲ್ಲಿ ‘ಚಾಣಕ್ಯ ನೀತಿ’ (Chanakya Nithi) ಕೂಡ ಒಂದು.
ಇದು ಪ್ರಾಚೀನ ಭಾರತ ಕಂಡ ಶ್ರೇಷ್ಠ ತತ್ವಜ್ಞಾನಿ ಮತ್ತು ರಾಜ ನೀತಿಜ್ಞ ಚಾಣಕ್ಯ (Chanakya) ಬರೆದಿರುವ ಸೂತ್ರಗಳ ಸಂಗ್ರಹವಾಗಿದೆ. ಚಾಣಕ್ಯ ಆ ಕಾಲದಲ್ಲಿ ನೀಡಿರುವ ತಂತ್ರಗಾರಿಕೆ, ನಾಯಕತ್ವ ಮತ್ತು ಜೀವನ ನಿರ್ವಹಣಾ ವಿಧಾನದ ಸಲಹೆಗಳು ಇಂದಿಗೂ ಪ್ರಸ್ತುತ.
ಹಾಗಾದರೆ 5 ಶಕ್ತಿಶಾಲಿ ಚಾಣಕ್ಯ ನೀತಿ ಸೂತ್ರಗಳನ್ನು ನಾವಿಲ್ಲಿ ನೋಡೋಣ:
ನಿಮ್ಮ ಪರಿಸ್ಥಿತಿಯ ವಾಸ್ತವತೆಯ ಸ್ಪಷ್ಟತೆ ನಿಮಗಿರಲಿ
ನಿಮ್ಮ ಪರಿಸ್ಥಿತಿಯ ವಾಸ್ತವತೆಯನ್ನು ಒಪ್ಪಿಕೊಳ್ಳುವುದರ ಅಗತ್ಯವನ್ನು ಚಾಣಕ್ಯ ಒತ್ತಿ ಹೇಳುತ್ತಾರೆ. ಅದರ ಬಗ್ಗೆ ನಿರೀಕ್ಷೆ ಅಥವಾ ನಿರಾಕರಣೆಯನ್ನು ಮಾಡುವ ಬದಲು, ನೈಜ ಪರಿಸ್ಥಿತಿಯನ್ನು ಒಪ್ಪಿಕೊಳ್ಳಿ. ಯಾವುದೇ ಪೂರ್ವಗ್ರಹಗಳಿಲ್ಲದೆ ನಿಮ್ಮ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಒಂದು ಸ್ಪಷ್ಟವಾದ ಮತ್ತು ಪ್ರಾಮಾಣಿಕ ಒಳನೋಟವನ್ನು ಹೊಂದಿ. ಹೀಗೆ ಮಾಡಿದಾಗ ಮಾತ್ರವೇ ನೀವು ನಿಮಗೆ ಎದುರಾಗಿರುವ ಸಮಸ್ಯೆಯ ನೈಜತೆಯನ್ನು ಅರಿತುಕೊಂಡು, ಅದನ್ನು ಪರಿಹರಿಸಿಕೊಳ್ಳಲು ಸಾಧ್ಯ
ನಿರ್ಧಾರಾತ್ಮಕವಾಗಿ, ಬುದ್ಧಿವಂತಿಕೆಯಿಂದ ವ್ಯವಹರಿಸಿ
ಕೆಲಸದಲ್ಲಿ ವಿಳಂಬ ನೀತಿಯನ್ನು ಅನುಸರಿಸುವುದರೆ ನೀವು ಇನ್ನಷ್ಟು ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡ ಅನುಭವವನ್ನು ನೀಡುತ್ತದೆ. ಯೋಚನೆಯುಕ್ತವಾಗಿ ಮಾಡುವ ಕ್ರಿಯೆಯಿಂದ ಮುಕ್ತಿಕಾಣದ ಹಿಂಜರಿಕೆಯನ್ನು ಹೊಡೆದೋಡಿಸಲು ಸಾಧ್ಯವಿದೆ. ಎಚ್ಚರಿಕೆಯಿಂದ ಯೋಜನೆ ಮಾಡಿಕೊಳ್ಳಿ, ಒಮ್ಮೆ ನಿಮ್ಮ ಯೋಜನೆ ಕಾರ್ಯಗತವಾಗುತ್ತದೆ ಎಂಬುದು ನಿಮಗೆ ಖಚಿತವಾದಲ್ಲಿ, ಸಮಸ್ಯೆಯನ್ನು ಪರಿಹರಿಸಲು ಆತ್ಮವಿಶ್ವಾಸದಿಂದ ಮುನ್ನುಗ್ಗಿ.
ಈ ಸುದ್ದಿಯನ್ನು ಓದಿ: Vastu Tips: ವಾಸ್ತು ಪ್ರಕಾರ ತಿಜೋರಿ ಅಥವಾ ಬೀರುವನ್ನು ನಿಮ್ಮ ಮನೆಯ ಯಾವ ದಿಕ್ಕಿನಲ್ಲಿರಿಸಬೇಕು?
ತಾಳ್ಮೆ ಮತ್ತು ನಿಖರತೆಗಳು ನಿಮ್ಮ ಅಸ್ತ್ರವಾಗಿರಲಿ
ಯಾವುದೇ ಬದಲಾವಣೆಗಳು ರಾತ್ರೋರಾತ್ರಿ ಉಂಟಾಗುವುದಿಲ್ಲ. ಸ್ಥಿರ ಪ್ರಯತ್ನದೊಂದಿಗೆ ತಾಳ್ಮೆಯ ಮೌಲ್ಯವನ್ನು ಚಾಣಕ್ಯ ನಮಗೆ ತಿಳಿಸಿಕೊಡುತ್ತಾರೆ. ದಿಢೀರ್ ಜಯವನ್ನು ನಿರೀಕ್ಷಿಸಬೇಡಿ, ಬದಲಾಗಿ, ನಿಮ್ಮ ಗುರಿಯೆಡೆಗೆ ನಿರ್ಧಾರಾತ್ಮಕವಾಗಿ ಮುನ್ನಡೆಯಿರಿ ಎಂದು ಹೇಳಿದ್ದಾರೆ.
ನಿಮ್ಮ ಜತೆಗಾರರನ್ನು ಜಾಗರೂಕತೆಯಿಂದ ಆರಿಸಿಕೊಳ್ಳಿ
ನಿಮ್ಮ ಸುತ್ತಮುತ್ತ ಯಾರಿದ್ದಾರೆ ಎಂಬುದರ ಮೇಲೆ ನಿಮ್ಮ ಮನೋಭಾವ ಮತ್ತು ಅವಕಾಶ ಅವಲಂಬಿತವಾಗಿರುತ್ತದೆ. ನಕಾರಾತ್ಮಕೆ ತುಂಬುವತ ಮತ್ತು ಪ್ರೇರಣೆ ನೀಡದ ಜನರು ನಿಮ್ಮನ್ನು ಇನ್ನಷ್ಟು ಗುರಿಯಿಂದ ಹಿಂದಕ್ಕೆ ಎಳೆಯುತ್ತಾರೆ. ಹಾಗಾಗಿ ನಿಮ್ಮ ಸುತ್ತಲೂ ಧನಾತ್ಮಕ ಮನೋಭಾವದ, ಬುದ್ದಿವಂತ ಮತ್ತು ನಿಮ್ಮನ್ನು ಸದಾ ಬೆಂಬಲಿಸು ವ್ಯಕ್ತಿಗಳನ್ನು ಇರಿಸಿಕೊಂಡಲ್ಲಿ ನಿಮ್ಮ ಬೆಳವಣಿಗೆಗೆ ಇನ್ನಷ್ಟು ಉತ್ತೇಜನ ಸಿಗುತ್ತದೆ.
ಕಲಿಕೆ ನಿರಂತರವಾಗಿರಲಿ
ನೀವು ಯಾವುದೇ ವಿಚಾರದಲ್ಲಿ ಸಿಕ್ಕಿಹಾಕಿಕೊಂಡಾಗ, ಅದು ಕೌಶಲವನ್ನು ಕಲಿಯಲು ಹಾಗೂ ನಿಮ್ಮ ಜ್ಞಾನವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಸುವರ್ಣಾವಕಾಶವೆಂದು ಭಾವಿಸಿಕೊಳ್ಳಿ. ಜ್ಞಾನವನ್ನು ನಿಜವಾದ ಆಸ್ತಿ ಎಂದು ಚಾಣಕ್ಯ ಕರೆದಿದ್ದಾರೆ. ನಿಮ್ಮ ಹಿನ್ನಡೆಯನ್ನು ಒಂದು ಅವಕಾಶವೆಂದು ಭಾವಿಸಿಕೊಳ್ಳಿ. ಈ ಮೂಲಕ ಇನ್ನಷ್ಟು ಜ್ಞಾನವನ್ನು ಸಂಪಾದಿಸಿ ನಿಮ್ಮ ಭವಿಷ್ಯವನ್ನು ಉಜ್ಚಲಗೊಳಿಸಿಕೊಳ್ಳಲು ಸಾಧ್ಯ ಎಂದಿದ್ದಾರೆ ಅವರು.