Shilpa Shetty: ʻಆಧಾರವಿಲ್ಲದೇ ನನ್ನ ಹೆಸರನ್ನು ತಳುಕು ಹಾಕುವ ಪ್ರಯತ್ನʼ; 60 ಕೋಟಿ ರೂ. ವಂಚನೆ ಕೇಸ್ ಬಗ್ಗೆ ಮೌನಮುರಿದ ಶಿಲ್ಪಾ ಶೆಟ್ಟಿ
Shilpa Shetty: ನಟಿ ಶಿಲ್ಪಾ ಶೆಟ್ಟಿ ಅವರು ತಮ್ಮ ಮೇಲಿನ ವಂಚನೆ ಆರೋಪಗಳ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಉದ್ಯಮಿ ದೀಪಕ್ ಕೊಠಾರಿ ಅವರು ಮಾಡಿರುವ 60 ಕೋಟಿ ರೂ. ವಂಚನೆ ಆರೋಪಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ತಿಳಿಸಿದ್ದಾರೆ.
-
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಅವರ ಮುಂಬೈ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದರು. ಗುರುವಾರ (ಡಿಸೆಂಬರ್ 18) ಈ ಘಟನೆ ನಡೆದಿತ್ತು. ಅದಕ್ಕೂ ಮುನ್ನ ಬೆಂಗಳೂರಿನಲ್ಲಿರುವ ಶಿಲ್ಪಾ ಶೆಟ್ಟಿಗೆ ಮಾಲೀಕತ್ವದ ಬಾಸ್ಟಿಯನ್ ಗಾರ್ಡನ್ ಸಿಟಿ ಪಬ್ ಸೇರಿದಂತೆ ಇತರೆ ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಮುಂಬೈನ ಜುಹು ಪ್ರದೇಶದಲ್ಲಿರುವ ಅವರ ಮನೆ ಮಾತ್ರವಲ್ಲದೆ, ಶಿಲ್ಪಾಗೆ ಸಂಬಂಧಿಸಿದ ಇತರೆ ಸ್ಥಳಗಳಲ್ಲಿಯೂ ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದ್ದರು. ಇದೀಗ ದಾಳೀ ಬಗ್ಗೆ ಶಿಲ್ಪಾ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
ಶಿಲ್ಪಾ ಶೆಟ್ಟಿ ಅವರ ಕುಟುಂಬದ ಮೇಲೆ ಮೇಲೆ ಮುಂಬೈ ಮೂಲದ ಉದ್ಯಮಿ ದೀಪಕ್ ಕೊಠಾರಿ ಅವರು 60 ಕೋಟಿ ರೂಪಾಯಿ ವಂಚನೆ ಆರೋಪ ಮಾಡಿದ್ದರು. ಈ ದಂಪತಿಯಿಂದ ತಮಗೆ ವಂಚನೆ ಆಗಿದೆ ಎಂದು ದೀಪಕ್ ಕೊಠಾರಿ ದೂರು ನೀಡಿದ್ದರು. ಈ ದೂರು ದಾಖಲಾದ ಬೆನ್ನಲ್ಲೇ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಶಿಲ್ಪಾ ಶೆಟ್ಟಿ ಅವರು, "ಸುಮಾರು 9 ವರ್ಷಗಳ ವಿಳಂಬದ ನಂತರ, ನನ್ನ ಮೇಲೆ ಈ ಕ್ರಿಮಿನಲ್ ಕೇಸ್ ಅನ್ನು ಹೊರಿಸಲು ಮಾಡುತ್ತಿರುವ ಈ ಕುತಂತ್ರದ ಪ್ರಯತ್ನವು ಕಾನೂನುಬದ್ಧವಾಗಿ ನಿಲ್ಲುವಂಥದ್ದಲ್ಲ. ಇದು ಕಾನೂನಿನ ಸ್ಥಾಪಿತ ತತ್ವಗಳಿಗೆ ವಿರುದ್ಧವಾಗಿದೆ" ಎಂದಿದ್ದಾರೆ.
ಶಿಲ್ಪಾ ಶೆಟ್ಟಿಯ ಮುಂಬೈ ಮನೆ ಮೇಲೆ ಐಟಿ ರೇಡ್ ಸುದ್ದಿ ಸುಳ್ಳಾ? ವಕೀಲ ಹೇಳಿದ್ದೇನು?
ದೂರು ನೀಡಿದ್ದು ಯಾವಾಗ?
ಈ ಪ್ರಕರಣವು ಈಗ ಕಾರ್ಯನಿರ್ವಹಿಸದ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್ ಎಂಬ ಶಾಪಿಂಗ್ ಮತ್ತು ಆನ್‌ಲೈನ್ ವೇದಿಕೆಗೆ ಸಂಬಂಧಿಸಿದ್ದು, ಇದರಲ್ಲಿನ ಸಾಲ ಮತ್ತು ಹೂಡಿಕೆ ಒಪ್ಪಂದದಲ್ಲಿ ಕಂಪನಿಯ ನಿರ್ದೇಶಕರಾದ ಈ ದಂಪತಿಗಳು ಸುಮಾರು 60 ಕೋಟಿ ರೂಪಾಯಿಗಳನ್ನು ವಂಚಿಸಿದ್ದಾರೆ ಎಂದು ಕೊಠಾರಿ ಆಗಸ್ಟ್‌ನಲ್ಲಿ ಪೊಲೀಸ್ ನೀಡಿದ್ದರು.
ಸಂಭಾವನೆಯೂ ಸಿಕ್ಕಿಲ್ಲ
"ಈ ವಿಷಯಕ್ಕೆ ನನ್ನ ಹೆಸರನ್ನು ತಳುಕು ಹಾಕುವ ಆಧಾರರಹಿತ ಪ್ರಯತ್ನದಿಂದ ನನಗೆ ತೀವ್ರ ಬೇಸರವಾಗಿದೆ. ಆ ಕಂಪನಿಯೊಂದಿಗೆ ನನ್ನ ಸಂಬಂಧವು ಕೇವಲ 'ಕಾರ್ಯನಿರ್ವಾಹಕೇತರ' (Non-executive) ಸಾಮರ್ಥ್ಯಕ್ಕೆ ಸೀಮಿತವಾಗಿತ್ತು. ಅದರ ಕಾರ್ಯಾಚರಣೆ, ಹಣಕಾಸು, ನಿರ್ಧಾರ ತೆಗೆದುಕೊಳ್ಳುವಿಕೆ ಅಥವಾ ಯಾವುದೇ ಸಹಿ ಮಾಡುವ ಅಧಿಕಾರದಲ್ಲಿ ನನ್ನ ಪಾತ್ರವಿರಲಿಲ್ಲ. ವಾಸ್ತವವಾಗಿ, ಇತರ ಹಲವಾರು ಸಾರ್ವಜನಿಕ ವ್ಯಕ್ತಿಗಳಂತೆ ನಾನು ಕೂಡ ಆ ಹೋಮ್ ಶಾಪಿಂಗ್ ಚಾನೆಲ್‌ನ ಕೆಲವು ಉತ್ಪನ್ನಗಳನ್ನು ವೃತ್ತಿಪರ ನೆಲೆಯಲ್ಲಿ ಪ್ರಚಾರ ಮಾಡಿದ್ದೆ ಅಷ್ಟೆ. ಅದಕ್ಕಾಗಿ ನನಗೆ ಬರಬೇಕಾದ ಸಂಭಾವನೆಯೂ ಇನ್ನು ಬಾಕಿ ಉಳಿದಿದೆ" ಎಂದು ಅವರು ತಿಳಿಸಿದ್ದಾರೆ.
Shilpa Shetty: ನಿಯಮ ಉಲ್ಲಂಘನೆ ಆರೋಪ; ಶಿಲ್ಪಾ ಶೆಟ್ಟಿ ಒಡೆತನದ ಬೆಂಗಳೂರಿನ ಪಬ್ ಮೇಲೆ FIR ದಾಖಲು
ನನಗೆ ಬೇಸರ ಮೂಡಿಸಿದೆ
"ಈ ಕಾನೂನು ಪ್ರಕ್ರಿಯೆಗಳಲ್ಲಿ ತಮ್ಮ ಹೆಸರನ್ನು ಎಳೆದು ತರುತ್ತಿರುವುದು ಬೇಸರ ಮೂಡಿಸಿದೆ ಮತ್ತು ಇದು ಸಮರ್ಥನೀಯವಲ್ಲದ್ದು. ಇಂತಹ ಅನಗತ್ಯ ಆರೋಪಗಳಿಂದ ಸತ್ಯಾಂಶಗಳನ್ನು ತಪ್ಪಾಗಿ ಬಿಂಬಿಸುವುದಲ್ಲದೆ, ಸಾರ್ವಜನಿಕ ವಲಯದಲ್ಲಿ ಮಹಿಳೆಯ ಘನತೆ, ಸಮಗ್ರತೆ ಮತ್ತು ಗೌರವವನ್ನು ಅನ್ಯಾಯವಾಗಿ ತುಳಿಯುವಂತೆ ಮಾಡುತ್ತವೆ" ಎಂದು ಶಿಲ್ಪಾ ಶೆಟ್ಟಿ ಆತಂಕ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ದಾಳಿ ಹೇಗಿತ್ತು?
ಶಿಲ್ಪಾ ಶೆಟ್ಟಿ ಒಡೆತನದ ಬಾಸ್ಟಿಯನ್ ಗಾರ್ಡನ್ ಸಿಟಿ ಪಬ್ ಬೆಂಗಳೂರಿನ ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿದೆ. ಬೆಳಗ್ಗೆ 6 ಗಂಟೆ ಸುಮಾರಿಗೆ 5 ಕಾರಿನಲ್ಲಿ ಹತ್ತಕ್ಕೂ ಹೆಚ್ಚು ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಇದರ ನಡುವೆಯೂ ರೆಸ್ಟೋರೆಂಟ್ ಸಹಜವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಟ್ಟರು. ಆದರೆ ಆಡಳಿತ ವಿಭಾಗ ಮತ್ತು ಅಕೌಂಟ್ಸ್ ವಿಭಾಗದಲ್ಲಿ ಐಟಿ ಅಧಿಕಾರಿಗಳು ಜಾಲಾಡಿದ್ದರು. ಈವರೆಗೂ ಕಟ್ಟಿದ ತೆರಿಗೆ ಎಷ್ಟು ಎಂಬುದನ್ನು ಪರಿಶೀಲಿಸಿ, ತೆರಿಗೆ ಇಲಾಖೆಗೆ ನೀಡಿರುವ ದಾಖಲಾತಿಗಳಿಗೂ ಕೌಂಟರ್ನಲ್ಲಿ ಇದುವರೆಗೆ ಆಗಿರುವ ವ್ಯಾಪಾರಕ್ಕೂ ಹೋಲಿಕೆ ಇದೆಯಾ ಎಂಬುದನ್ನ ಚೆಕ್ ಮಾಡಿದರು. ಹೂಡಿಕೆ, ಲಾಭ ಮತ್ತು ತೆರಿಗೆ ಈ ಮೂರು ವಿಚಾರಗಳ ಬಗ್ಗೆಯೂ ಐಟಿ ಸುದೀರ್ಘ ತನಿಖೆ ನಡೆಸಿದ್ದರು.