ಮುಂಬೈ: ಬಾಲಿವುಡ್ ನಟ ಆಮೀರ್ ಖಾನ್ (Aamir Khan) ವಿಭಿನ್ನ ನಟನೆಯ ಮೂಲಕವೇ ಅಭಿಮಾನಿಗಳ ಮನಗೆದ್ದು ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ʼಪಿಕೆʼ, ʼತಾರೆ ಜಮೀನ್ ಪರ್ʼನಂತಹ ಬ್ಲಾಕ್ ಬ್ಲಸ್ಟರ್ ಹಿಟ್ ನೀಡಿದ್ದ ಇವರು ಸದ್ಯ ʼಸಿತಾರೆ ಜಮೀನ್ ಪರ್ʼ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಮೂರು ವರ್ಷಗಳ ಬಳಿಕ ಮತ್ತೆ ಆಮೀರ್ ಖಾನ್ ನಟನೆಯ ಈ ಸಿನಿಮಾ ಬಿಡುಗಡೆ ಸಜ್ಜಾಗಿದೆ. ಈ ನಡುವೆ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ನಿರ್ದೇಶನದ ಸಿನಿಮಾದಲ್ಲಿ ಆಮೀರ್ ಖಾನ್ ನಟಿಸಲಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ. ʼಸಿತಾರೆ ಜಮೀನ್ ಪರ್ʼ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದ ಅಭಿಮಾನಿಗಳಿಗೆ ಈ ವಿಚಾರವು ಡಬಲ್ ಧಮಾಕ ಎನಿಸಿದೆ.
2022ರಲ್ಲಿ ತೆರೆಕಂಡ ಬಾಲಿವುಡ್ ನಟ ಆಮೀರ್ ಖಾನ್ ಅಭಿನಯದ ʼಲಾಲ್ ಸಿಂಗ್ ಚಡ್ಡಾʼ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಂದುಕೊಂಡ ಮಟ್ಟಕ್ಕೆ ಯಶಸ್ಸು ಕಂಡಿಲ್ಲ. ಹೀಗಾಗಿ ಸತತ ಮೂರು ವರ್ಷಗಳ ಕಾಲ ಬೇರೆ ಯಾವ ಚಿತ್ರವನ್ನು ಒಪ್ಪದೆ ಅವರು ಅಷ್ಟು ಸಮಯವನ್ನು ʼಸಿತಾರೆ ಜಮೀನ್ ಪರ್ʼ ಸಿನಿಮಾಕ್ಕೆ ನೀಡಿದ್ದಾರೆ. ʼಸಿತಾರೆ ಜಮೀನ್ ಪರ್ʼ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿ ನಿರೀಕ್ಷೆ ಹುಟ್ಟಿಸುತ್ತಿದ್ದ ಬೆನ್ನಲ್ಲೆ ನಿರ್ದೇಶಕ ಲೋಕೇಶ್ ಕನಗರಾಜ್ ನಿರ್ದೇಶನದ ಸಿನಿಮಾದಲ್ಲಿ ನಟಿಸುವ ಬಗ್ಗೆ ಸ್ವತಃ ಆಮೀರ್ ಖಾನ್ ಸ್ಪಷ್ಟನೆ ನೀಡಿದ್ದಾರೆ.
ಕಾಲಿವುಡ್‌ನ ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ಸದ್ಯ ನಟ ರಜನಿಕಾಂತ್ ಅಭಿನಯದ ʼಕೂಲಿʼ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಅದರ ಶೂಟಿಂಗ್ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ರಿಲೀಸ್ ಆಗುತ್ತಿದ್ದಂತೆ 'ಖೈದಿ 2', 'ವಿಕ್ರಂ 2' ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಅದಾದ ಬಳಿಕ ಬಾಲಿವುಡ್ ನಟ ಆಮೀರ್ ಖಾನ್ ಜತೆಯೂ ಸಿನಿಮಾ ಮಾಡಲಿದ್ದಾರೆ. ಲೋಕೇಶ್ ಕನಗರಾಜ್ ಅವರ ಆ್ಯಕ್ಷನ್ ಸ್ವೀಕೆನ್ಸ್ ಸಿನಿಮಾವೊಂದರಲ್ಲಿ ನಟಿಸುವುದಾಗಿ ಸ್ವತಃ ಆಮೀರ್ ಖಾನ್ ಸಂದರ್ಶನ ಒಂದರಲ್ಲಿ ಸ್ಪಷ್ಟನೆ ಪಡಿಸಿದ್ದಾರೆ. ಲೋಕೇಶ್ ಹೊಸ ಸಿನಿಮಾಕ್ಕೆ ನಾನು ಸಹಿ ಹಾಕಿದ್ದೇನೆ. ಈಗಲೇ ಎಲ್ಲ ಮಾಹಿತಿ ತಿಳಿಸಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನದಲ್ಲಿ ತಿಳಿಸುವೆ, ಈ ಚಿತ್ರವು 2026ರ ದ್ವಿತೀಯಾರ್ಧದಲ್ಲಿ ಪ್ರಾರಂಭವಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನು ಓದಿ: Ramayana Movie: ಬಿಗ್ ಬಜೆಟ್ ʼರಾಮಾಯಣʼ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸುವ ಕಲಾವಿದರಿವರು
ನಟ ಆಮೀರ್ ಖಾನ್ ನಟಿಸಿ, ನಿರ್ಮಾಣ ಮಾಡಿದ್ದ ʼದಂಗಲ್ʼ ಸಿನಿಮಾ ಸೂಪರ್ ಹಿಟ್ ಲಿಸ್ಟ್‌ಗೆ ಸೇರಿತ್ತು. ʼದಂಗಲ್ʼ ಬಳಿಕ ʼಸೀಕ್ರೆಟ್ ಸೂಪರ್ ಸ್ಟಾರ್ʼ ಚಿತ್ರದ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವ ಜತೆಗೆ ಅತಿಥಿ ಪಾತ್ರ ನಿರ್ವಹಿಸಿದ್ದರು. ಈ ಸಿನಿಮಾ ಕೂಡ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿತ್ತು. ಬಳಿಕ 'ಥಗ್ಸ್ ಆಫ್ ಹಿಂದೂಸ್ತಾನ್' ಸಿನಿಮಾದಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದರು. ಆದರೆ ಈ ಸಿನಿಮಾ ಅದ್ಧೂರಿಯಾಗಿ ನಿರ್ಮಾಣವಾಗಿದ್ದರೂ ಹೀನಾಯವಾಗಿ ಸೋಲು ಕಂಡಿತ್ತು. ಬಳಿಕ ಕೆಲ ಸಮಯ ಯಾವುದೇ ಸಿನಿಮಾ ಮಾಡದೆ 'ಲಾಲ್ ಸಿಂಗ್ ಚಡ್ಡಾ'ದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅದು ಕೂಡ ಯಶಸ್ಸು ನೀಡಲಿಲ್ಲ. ಸದ್ಯ ಅವರು ʼಸಿತಾರೆ ಜಮೀನ್ ಪರ್ʼ ರಿಲೀಸಿಂಗ್ ಕಾರ್ಯದಲ್ಲಿ ಬ್ಯುಸಿ ಇದ್ದಾರೆ. ಇದರ ಜತೆಗೆ ರಜನಿಕಾಂತ್ ನಟನೆಯ ʼಕೂಲಿʼ ಚಿತ್ರದಲ್ಲಿ ಕೂಡ ಅತಿಥಿ ಪಾತ್ರದಲ್ಲಿ ಮಿಂಚಲಿದ್ದಾರೆ.