ಬಾಲಿವುಡ್ ನಟ ಹೃತಿಕ್ ರೋಷನ್ ಅವರು ಕಳೆದ ವರ್ಷ ವಾರ್ 2 ಸಿನಿಮಾದಲ್ಲಿ ಎನ್‌ಟಿಆರ್ ಜೊತೆಗೆ ನಟಿಸಿದ್ದರು. ಆನಂತರ ಅವರು ಬೇರಾವ ಸಿನಿಮಾಗಳನ್ನು ಮಾಡುತ್ತಿದ್ದಾರೆ ಎಂಬ ಬಗ್ಗೆ ಅಪ್ಡೇಟ್ ಸಿಕ್ಕಿಲ್ಲ. ಅಭಿಮಾನಿಗಳು ಕೂಡ ಹೃತಿಕ್ ರೋಷನ್ ಕಡೆಯಿಂದ ಏನಾದರೂ ಹೆಚ್ಚಿನ ಮಾಹಿತಿ ಸಿಗಬಹುದು ಎಂದು ಕಾದಿದ್ದಾರೆ. ಇದೀಗ ಅವರ ಮುಂದಿನ ಸಿನಿಮಾಗಳ ಬಗ್ಗೆ ಕೆಲವೊಂದು ಅಪ್ಡೇಟ್‌ಗಳು ಸಿಕ್ಕಿವೆ. ಅದೇನು? ಮುಂದೆ ಓದಿ.
ತೆಲುಗು ನಿರ್ದೇಶಕನ ಜೊತೆ ಹೃತಿಕ್ ಸಿನಿಮಾ
ಈಗಾಗಲೇ ತೆಲುಗಿನಲ್ಲಿ ವಾಲ್ತೇರು ವೀರಯ್ಯ, ಡಾಕು ಮಹಾರಾಜ್, ಜೈ ಲವ ಕುಶ ರೀತಿಯ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಬಾಬಿ ಕೊಲ್ಲಿ ಇದೀಗ ಹೊಸ ಸಿನಿಮಾವೊಂದನ್ನು ಹೃತಿಕ್ ರೋಷನ್ ಜೊತೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಹೃತಿಕ್ ಕೂಡ ತಮ್ಮ ಮುಂದಿನ ಚಿತ್ರಕ್ಕಾಗಿ ಸೂಕ್ತ ನಿರ್ದೇಶಕನ ಹುಡುಕಾಟದಲ್ಲಿದ್ದಾರಂತೆ. ಅವರ ಬಹುನಿರೀಕ್ಷಿತ 'ಕ್ರಿಶ್ 4' ಸಿನಿಮಾ ಕೆಲ ಕಾರಣಗಳಿಂದಾಗಿ ಸದ್ಯಕ್ಕೆ ಶುರುವಾಗುತ್ತಿಲ್ಲವಂತೆ. ಹಾಗಾಗಿ, ಸದ್ಯ ತೆಲುಗು ನಿರ್ದೇಶಕ ಬಾಬಿ ಅವರು ಹೃತಿಕ್ ರೋಷನ್ ಅವರಿಗೆ ಒಂದು ಕಥೆಯನ್ನು ವಿವರಿಸಿದ್ದು, ಅದು ಹೃತಿಕ್ ಅವರಿಗೆ ಬಹಳ ಇಷ್ಟವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಸಿನಿಮಾ ಶೀಘ್ರದಲ್ಲೇ ಆರಂಭವಾಗುವ ಸಾಧ್ಯತೆಯಿದೆ. ಈ ವಿಚಾರವನ್ನು ಸ್ವತಃ ಸ್ಕ್ರಿಪ್ಟ್ ರೈಟರ್ ಕೋನಾ ವೆಂಕಟ್ ಅವರು ಹಂಚಿಕೊಂಡಿದ್ದಾರೆ. "ನಾನು ಮತ್ತು ಬಾಬಿ ಸೇರಿ ಹೃತಿಕ್ ರೋಷನ್ ಅವರಿಗೆ ಒಂದು ಸ್ಕ್ರಿಪ್ಟ್ ವಿವರಿಸಿದ್ದೇವೆ, ಅದು ಅವರಿಗೆ ತುಂಬಾ ಇಷ್ಟವಾಗಿದೆ. ಸುಮಾರು ಎರಡು ಗಂಟೆಗಳ ಕಾಲ ಚರ್ಚೆ ಮಾಡಿದ್ದೇವೆ. ಬಾಬಿ ಕೊಲ್ಲಿ ಕೂಡ ಪ್ರಸ್ತುತ ಆ ಕೆಲಸದಲ್ಲಿ ತೊಡಗಿದ್ದಾರೆ" ಎಂದು ಹೇಳಿದ್ದಾರೆ.
ಚಿರು ಜೊತೆ ಬಾಬಿ ಸಿನಿಮಾ
ಸದ್ಯ ಮೆಗಾಸ್ಟಾರ್ ಚಿರಂಜೀವಿ ಅವರ ಚಿತ್ರದಲ್ಲಿ ನಿರ್ದೇಶಕ ಬಾಬಿ ಕೊಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಚಿತ್ರೀಕರಣವು ಏಪ್ರಿಲ್‌ನಲ್ಲಿ ಪ್ರಾರಂಭವಾಗಲಿದೆ. ಕೆವಿಎನ್ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಸಂಕ್ರಾಂತಿ 2027 ರಂದು ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. ಈ ಚಿತ್ರದಲ್ಲಿ ಪ್ರಿಯಾಮಣಿ ನಾಯಕಿಯಾಗಿ ನಟಿಸಲಿದ್ದು, ಸಂಗೀತ ನಿರ್ದೇಶನಕ್ಕಾಗಿ ಎ. ಆರ್. ರೆಹಮಾನ್ ಅವರೊಂದಿಗೆ ಮಾತುಕತೆ ನಡೆಯುತ್ತಿದೆ.
ಹೊಂಬಾಳೆ ಜೊತೆ ಯಾವಾಗ ಸಿನಿಮಾ?
ಈ ಮಧ್ಯೆ ಕನ್ನಡದ ಹೊಂಬಾಳೆ ಫಿಲ್ಮ್ಸ್‌ಗೆ ಹೃತಿಕ್ ರೋಷನ್ ಅವರ ಕಾಲ್ ಶೀಟ್ ಸಿಕ್ಕಿದೆ. ಬಹಳ ಹಿಂದೆಯೇ ಈ ವಿಚಾರ ಬಹಿರಂಗವಾಗಿತ್ತು. ಆದರೆ ಇದುವರೆಗೂ ಆ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಆಗಲಿ, ಹೃತಿಕ್ ರೋಷನ್ ಅವರಾಗಲಿ ಏನೊಂದು ಮಾಹಿತಿ ನೀಡಿಲ್ಲ. ಆದಷ್ಟು ಬೇಗ ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಹೃತಿಕ್ ಸಿನಿಮಾ ಸೆಟ್ಟೇರಲಿ ಎಂದು ಫ್ಯಾನ್ಸ್ ಕೂಡ ಕಾದಿದ್ದಾರೆ.