ʻಮೊದಲು ಅಸಮಾಧಾನ, ಆಮೇಲೆ ಹೊಗಳಿಕೆʼ; ʻಧುರಂಧರ್ʼ ಬಗ್ಗೆ ಹೃತಿಕ್ ರೋಷನ್ ಗೊಂದಲ ಮಾಡಿಕೊಂಡ್ರಾ? ಕೆಲವೇ ಗಂಟೆಗಳಲ್ಲಿ ನಿಲುವು ಬದಲಾಗಿದ್ದೇಕೆ?
Hrithik Roshan On Dhurandhar: ರಣವೀರ್ ಸಿಂಗ್, ಅಕ್ಷಯ್ ಖನ್ನಾ ಅಭಿನಯದ 'ಧುರಂಧರ್' ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, ನಟ ಹೃತಿಕ್ ರೋಷನ್ ಈ ಸಿನಿಮಾ ನೋಡಿ ಹಾಕಿದ ಪೋಸ್ಟ್‌ಗಳು ಗೊಂದಲ ಸೃಷ್ಟಿಸಿವೆ. ಮೊದಲ ಪೋಸ್ಟ್‌ನಲ್ಲಿ, ಅವರು "ಈ ಚಿತ್ರದ ರಾಜಕೀಯವನ್ನು ನಾನು ಒಪ್ಪದೇ ಇರಬಹುದು" ಎಂದು ಬರೆದಿದ್ದರು. ನಂತರ ಮತ್ತೊಂದು ಪೋಸ್ಟ್ ಹಂಚಿಕೊಂಡ ಹೃತಿಕ್ ರೋಷನ್, ಚಿತ್ರತಂಡವನ್ನು ಮುಕ್ತವಾಗಿ ಹೊಗಳಿದ್ದರು.
-
ಚಿತ್ರವು ದಿನ ಕಳೆದಂತೆ ಪ್ರೇಕ್ಷಕರ ಪ್ರೀತಿಯನ್ನು ಪಡೆದುಕೊಳ್ಳುತ್ತಿದೆ. ಈ ನಡುವೆ ಬಾಲಿವುಡ್ ಮಂದಿ ಕೂಡ ಧುರಂದರ್‌ಗೆ ಭಾರಿ ಪ್ರೀತಿಯನ್ನು ತೋರುತ್ತಿದ್ದಾರೆ. ಸದ್ಯ ಈ ಚಿತ್ರವನ್ನು ನೋಡಿರುವ ನಟ ಹೃತಿಕ್ ರೋಷನ್ ಯಾಕೋ ಗೊಂದಲಕ್ಕೆ ಬಿದ್ದಂತೆ ಕಾಣುತ್ತಿದ್ದಾರೆ. ಅದಕ್ಕೆ ಕಾರಣ, ಅವರ ಪೋಸ್ಟ್‌ಗಳು.
ಹೃತಿಕ್ ರೋಷನ್ ಹೇಳಿದ್ದೇನು?
ಬುಧವಾರ (ಡಿ.10) ಸಿನಿಮಾ ವೀಕ್ಷಣೆ ಮಾಡಿದ್ದ ಹೃತಿಕ್ ರೋಷನ್ ಅವರು ಒಂದು ಪೋಸ್ಟ್ ಹಾಕಿದ್ದರು. "ನನಗೆ ಈ ಸಿನಿಮಾ ತುಂಬಾ ಇಷ್ಟವಾಯ್ತು, ಸಿನಿಮಾಕ್ಕಾಗಿ ಎಂಥ ಸಾಹಸವನ್ನಾದರೂ ಮಾಡುವ, ಕಥೆಯನ್ನು ಅಂದುಕೊಂಡಂತೆ ಹೇಳಲು ಪ್ರಯತ್ನಿಸುವ ವ್ಯಕ್ತಿಗಳೆಂದರೆ ನನಗೆ ಬಹಳ ಪ್ರೀತಿ. ‘ಧುರಂಧರ್’ ಚಿತ್ರದಲ್ಲಿ ಹಾಗೆಯೇ ಆಗಿದೆ. ಅಂಥದ್ದೊಂದು ಅದ್ಭುತ ಸಾಹಸಕ್ಕೆ ಧುರಂಧರ್ ಒಂದು ಉದಾಹರಣೆ. ಕಥೆ ಹೇಳಿರುವ ರೀತಿ ತುಂಬಾ ಇಷ್ಟವಾಯಿತು" ಎಂದು ಬರೆದುಕೊಂಡಿದ್ದಾರೆ.
ಮುಂದುವರಿದಂತೆ ಹೃತಿಕ್ ರೋಷನ್, "ಈ ಚಿತ್ರದ ರಾಜಕೀಯವನ್ನು ನಾನು ಒಪ್ಪದೇ ಇರಬಹುದು ಮತ್ತು ನಾವು ಸಿನಿಮಾಕರ್ಮಿಗಳಾಗಿ ವಿಶ್ವದ ನಾಗರಿಕರಾಗಿ ಹೊರಬೇಕಾದ ಜವಾಬ್ದಾರಿಗಳ ಬಗ್ಗೆ ಚರ್ಚಿಸಬಹುದು. ಆದಾಗ್ಯೂ, ನಾನು ಒಬ್ಬ ಸಿನಿಮಾ ವಿದ್ಯಾರ್ಥಿಯಾಗಿ ಇದನ್ನು ಹೇಗೆ ಪ್ರೀತಿಸಿದೆ ಮತ್ತು ಕಲಿತಿದ್ದೇನೆ ಎಂಬುದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಇದೊಂದು ಅದ್ಭುತ ಸಿನಿಮಾ" ಎಂದು ಹೇಳಿದ್ದರು.
ಕೂಡಲೇ ಹೃತಿಕ್ ಹೇಳಿದ್ದ, "ಈ ಚಿತ್ರದ ರಾಜಕೀಯವನ್ನು ನಾನು ಒಪ್ಪದೇ ಇರಬಹುದು" ಎಂಬ ಸಾಲು ವಿವಾದಕ್ಕೆ ಕಾರಣವಾಗಿದೆ. ಒಂದಷ್ಟು ಮಂದಿ ಧುರಂಧರ್ ಪ್ರೊಪೊಗಾಂಡ ಸಿನಿಮಾ ಎಂದು ಕರೆದಿದ್ದಾರೆ. ಅದನ್ನೇ ಹೃತಿಕ್ ಕೂಡ ಹೇಳುತ್ತಿದ್ದಾರಾ ಎಂಬ ಚರ್ಚೆ ಶುರುವಾಗಿದೆ. ಯಾವಾಗ ಈ ಚರ್ಚೆ ವಿವಾದದ ಸ್ವರೂಪ ಪಡೆದುಕೊಂಡಿತೋ, ನಿನ್ನೆ ಹಾಕಿದ ಪೋಸ್ಟ್‌ಗೆ ಕಂಟಿನ್ಯೂ ಆಗಿ ಇಂದು ಹೊಸ ಪೋಸ್ಟ್ ಹಂಚಿಕೊಂಡಿದ್ದಾರೆ ಹೃತಿಕ್.
ಹೃತಿಕ್ ರೋಷನ್ ಪೋಸ್ಟ್
Still can't get DHURANDHAR out of my mind. @AdityaDharFilms you are an incredible maker man. @RanveerOfficial the silent to the fierce what a journey and so damn consistent. #akshayekhanna has always been my fav and this film is proof why. @ActorMadhavan bloody mad grace,…
— Hrithik Roshan (@iHrithik) December 11, 2025
ಪಾರ್ಟ್ 2ಕ್ಕಾಗಿ ಕಾಯುತ್ತಿರುವೆ
"ಇನ್ನೂ 'ಧುರಂಧರ್' ನನ್ನ ಮನಸ್ಸಿನಿಂದ ಹೋಗುತ್ತಿಲ್ಲ. ಆದಿತ್ಯ ಧರ್ ನೀವು ಒಬ್ಬ ಅದ್ಭುತ ಫಿಲ್ಮ್ ಮೇಕರ್. ರಣವೀರ್ ಸಿಂಗ್ ಮೌನದಿಂದ ಉಗ್ರತನದವರೆಗೆ ನಿಮ್ಮ ಪಯಣ ಎಷ್ಟು ಸ್ಥಿರವಾಗಿದೆ! ಅಕ್ಷಯ್ ಖನ್ನಾ ಯಾವಾಗಲೂ ನನ್ನ ನೆಚ್ಚಿನ ನಟ ಮತ್ತು ಈ ಚಿತ್ರವು ಅದಕ್ಕೆ ಸಾಕ್ಷಿ. ಮಾಧವನ್ ನಿಜಕ್ಕೂ ಅದ್ಭುತವಾದ ಗಾಂಭೀರ್ಯ, ಶಕ್ತಿ ಮತ್ತು ಘನತೆ! ಆದರೆ ರಾಕೇಶ್ ಬೇಡಿ ನೀವು ಮಾಡಿದ್ದು ಅಸಾಮಾನ್ಯ .. ಎಂತಹ ನಟನೆ, ಅದ್ಭುತ! ಎಲ್ಲರಿಗೂ, ವಿಶೇಷವಾಗಿ ಮೇಕಪ್ ವಿಭಾಗಕ್ಕೆ ದೊಡ್ಡದಾದ ಅಭಿನಂದನೆಗಳು! ಭಾಗ 2ಕ್ಕಾಗಿ ನನಗಿನ್ನೂ ಕಾಯಲು ಸಾಧ್ಯವಿಲ್ಲ" ಎಂದು ಹೃತಿಕ್ ಹೇಳಿದ್ದಾರೆ.
ಅರೇ, ಒಂದು ಸಿನಿಮಾದ ಕೊಂಚ ಅಪಸ್ವರ ವ್ಯಕ್ತಪಡಿಸಿ, ಆನಂತರ ನಕರಾತ್ಮಕ ಪ್ರತಿಕ್ರಿಯೆ ಸಿಕ್ಕಿದ್ದಕ್ಕೆ ಬದಲಾದರೆ? 15 ಗಂಟೆಗಳ ನಂತರ ಹೊಗಳಿ ಮತ್ತೊಂದು ಪೋಸ್ಟ್ ಹಾಕಿದ್ದೇಕೆ ಎಂಬ ಚರ್ಚೆ ಶುರುವಾಗಿದೆ.