ಸೂಪರ್‌ಸ್ಟಾರ್ ರಜನಿಕಾಂತ್ ಅವರ ಬಹುನಿರೀಕ್ಷಿತ ʻಜೈಲರ್ 2ʼ ಚಿತ್ರದಲ್ಲಿ ಒಂದು ಅತಿಥಿ ಪಾತ್ರಕ್ಕಾಗಿ ನಟ ಶಾರುಖ್ ಖಾನ್ ಅವರು ಬಣ್ಣ ಹಚ್ಚಲಿದ್ದಾರೆ ಎಂಬ ಮಾಹಿತಿ ಕೇಳಿಬಂದಿತ್ತು. ಆದರೆ ಕೊನೆ ಕ್ಷಣದಲ್ಲಿ ಬದಲಾವಣೆಯಲ್ಲಿ ಶಾರುಖ್ ಖಾನ್ ಅವರು ಆ ಪಾತ್ರವನ್ನು ಮಾಡದೇ ಹಿಂದೆ ಸರಿದರು. ಇದೀಗ ಆ ಪಾತ್ರವನ್ನು ಬಾಲಿವುಡ್‌ನ ಮತ್ತೊಬ್ಬ ಸ್ಟಾರ್ ನಟ ಹೃತಿಕ್ ರೋಷನ್ ನಿಭಾಯಿಸಲಿದ್ದಾರೆ ಎನ್ನಲಾಗಿದೆ. 1986ರಲ್ಲಿ ʻಭಗವಾನ್ ದಾದಾʼ ಚಿತ್ರದಲ್ಲಿ ಹೃತಿಕ್ ಮತ್ತು ರಜನಿಕಾಂತ್ ಒಟ್ಟಿಗೆ ನಟಿಸಿದ್ದರು. ಇದೀಗ ಬರೋಬ್ಬರಿ 40 ವರ್ಷಗಳ ಬಳಿಕ ರಜನಿ-ಹೃತಿಕ್ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಕೊನೆಗೂ ಒಪ್ಪಿಗೆ ಕೊಟ್ಟ ಹೃತಿಕ್
ಕಳೆದ ಕೆಲವು ವಾರಗಳಿಂದ ಈ ಅತಿಥಿ ಪಾತ್ರದ ಕುರಿತಂತೆ ಸುದೀರ್ಘ ಚರ್ಚೆ ನಡೆದಿದ್ದವು. ಅಂತಿಮವಾಗಿ ಹೃತಿಕ್ ಜೈಲರ್ 2ರಲ್ಲಿ ನಟಿಸಲು ಒಪ್ಪಿಗೆ ನೀಡಿದ್ದು, ಜೂನ್ 22 ಮತ್ತು ಜೂನ್ 23 ರಂದು ಚೆನ್ನೈನಲ್ಲಿ ತಮ್ಮ ಪಾತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಶೂಟಿಂಗ್ ಆರಂಭಕ್ಕೂ ಮುನ್ನ ಹೃತಿಕ್ ಅವರಿಗೆ ಹಲವು ಲುಕ್ ಟೆಸ್ಟ್‌ಗಳನ್ನು ಮಾಡಲಾಗುತ್ತಿದ್ದು, ಚಿತ್ರತಂಡ ಅವರಿಗಾಗಿ ಹಿಂದೆಂದೂ ನೋಡಿರದ ಸಂಪೂರ್ಣ ಹೊಸ ಅವತಾರವನ್ನು ವಿನ್ಯಾಸಗೊಳಿಸಲು ಸಜ್ಜಾಗಿದೆಯಂತೆ.
ಅವರ ಈ ಆಕ್ಷನ್ ಪಾತ್ರದ ದೃಶ್ಯಗಳನ್ನು ಅತ್ಯಂತ ಅದ್ಧೂರಿಯಾಗಿ ಚಿತ್ರೀಕರಿಸಲು ನಿರ್ಧರಿಸಲಾಗಿದ್ದು, ಇದು ಅಭಿಮಾನಿಗಳಿಗೆ ಭರ್ಜರಿ ರಸದೌತಣ ನೀಡಲಿದೆಯಂತೆ. ಮೂಲಗಳ ಪ್ರಕಾರ, ಚಿತ್ರದ ಅತ್ಯಂತ ಪ್ರಮುಖ ತಿರುವಿನಲ್ಲಿ ಬರುವ ಇವರ ಪಾತ್ರವು ರಜನಿಕಾಂತ್ ಅವರ ಪಾತ್ರಕ್ಕೆ ಸಹಾಯ ಮಾಡುವ ಮೂಲಕ ಕಥೆಯನ್ನು ಮುನ್ನಡೆಸುತ್ತದೆ. ‘ವಾರ್ 2’ ಚಿತ್ರದ ನಂತರ ಹೃತಿಕ್ ಒಪ್ಪಿಕೊಂಡಿರುವ ಮೊದಲ ಪ್ರಾಜೆಕ್ಟ್ ಇದಾಗಿದೆ.
ರಜನಿಕಾಂತ್ ಜೊತೆ ನಟಿಸುವಾಸೆ ಹೊಂದಿದ್ದ ಹೃತಿಕ್
ರಜನಿಕಾಂತ್ ಅವರ 1986 ರ ಆಕ್ಷನ್ ಡ್ರಾಮಾ ʻಭಗವಾನ್ ದಾದಾʼ ಚಿತ್ರದಲ್ಲಿ ಬಾಲನಟನಾಗಿ ಹೃತಿಕ್ ರೋಷನ್ ತಮ್ಮ ನಟನಾ ವೃತ್ತಿಜೀವನವನ್ನು ಆರಂಭಿಸಿದ್ದರು. ಆ ಚಿತ್ರದಲ್ಲಿ ಅವರು ರಜನಿಕಾಂತ್ ಅವರ ಸಾಕುಮಗನ ಪಾತ್ರವನ್ನು ಹೃತಿಕ್ ನಿರ್ವಹಿಸಿದ್ದರು. ಹೃತಿಕ್ ತಮ್ಮ ವೃತ್ತಿಬದುಕಿನ ಆರಂಭದ ದಿನಗಳನ್ನ ಹಂಚಿಕೊಳ್ಳುವಾಗೆಲ್ಲಾ ರಜನಿಕಾಂತ್ ಅವರ ಮೇಲಿರುವ ಅಪಾರ ಗೌರವವನ್ನು ಹಲವು ಬಾರಿ ಸ್ಮರಿಸಿಕೊಂಡಿದ್ದರು. ರಜನಿಕಾಂತ್ ಅವರೊಂದಿಗೆ ಮತ್ತೊಮ್ಮೆ ಕೆಲಸ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಕೊನೆಗೂ ‘ಜೈಲರ್ 2’ ಮೂಲಕ, ನಾಲ್ಕು ದಶಕಗಳ ನಂತರ ಇವರಿಬ್ಬರು ಮತ್ತೆ ಒಟ್ಟಿಗೆ ನಟಿಸುತ್ತಿದ್ದಾರೆ.
‘ಜೈಲರ್ 2’ ಚಿತ್ರದಲ್ಲೂ ಭಾರತೀಯ ಚಿತ್ರರಂಗದ ಘಟಾನುಘಟಿ ನಟರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೋಹನ್‌ಲಾಲ್, ಕರುನಾಡ ಚಕ್ರವರ್ತಿ ಶಿವ ರಾಜ್‌ಕುಮಾರ್, ವಿಜಯ್ ಸೇತುಪತಿ ಮತ್ತು ಮಿಥುನ್ ಚಕ್ರವರ್ತಿ ಅವರಂತಹ ದಿಗ್ಗಜರ ಕಲಾವಿದರ ಅತಿಥಿ ಪಾತ್ರಗಳ ಪಟ್ಟಿಗೆ ಈಗ ಹೃತಿಕ್ ರೋಷನ್ ಅವರ ದೊಡ್ಡ ಹೆಸರು ಸೇರ್ಪಡೆಯಾಗಿದೆ.
ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಮತ್ತು ಸನ್ ಪಿಕ್ಚರ್ಸ್ ನಿರ್ಮಾಣದ ಈ ಹೈ-ಬಜೆಟ್ ಚಿತ್ರದಲ್ಲಿ ಎಸ್.ಜೆ. ಸೂರ್ಯ, ರಮ್ಯಾ ಕೃಷ್ಣನ್, ವಿದ್ಯಾ ಬಾಲನ್ ಮತ್ತು ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರವು 2026 ರ ಸೆಪ್ಟೆಂಬರ್‌ನಲ್ಲಿ ವಿಶ್ವಾದ್ಯಂತ ತೆರೆಗೆ ಬರಲಿದೆ.