ಜಿ ಸರಿಗಮಪದ ಜೂರಿಯಾಗಿರುವ ಗಾಯಕ ಮೋಹನ್ ಕೃಷ್ಣ (Mohan Krishna) ಅವರ ಪುತ್ರ ಹೃತಿಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೋಹನ್ ಕೃಷ್ಣ ಅವರ ಮೊದಲ ಪತ್ನಿಯ ಪುತ್ರ ಹೃತಿಕ್. ಹೃತಿಕ್ ರಾಜರಾಜೇಶ್ವರಿ (Rajrajeshwari Nagar) ನಗರದ ತಮ್ಮ ಮನೆಯಲ್ಲಿ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ (Case) ದಾಖಲಾಗಿದ್ದು ಮಹಜರು ನಡೆದಿದೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.
ಮಂಡ್ಯ ರಮೇಶ್ ಸಂತಾಪ
ಮಂಡ್ಯ ರಮೇಶ್ ತಂಡ ‘ನಟನ’ದ ಸದಸ್ಯನಾಗಿ ಉತ್ತಮ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದವರು ಹೃತಿಕ್. ಮಂಡ್ಯ ರಮೇಶ್ ಪೋಸ್ಟ್‌ನಲ್ಲಿ, ʻಮತ್ತೊಂದು ಯಾತನೆ! ನಟನದ ನಾಟಕಗಳನ್ನು ನೋಡಿದವರಿಗೆ ಈ ಹುಡುಗ ಪರಿಚಿತ. ಹೃತಿಕ್ (ಜಿ ಸರಿಗಮಪ ದ ಜೂರಿಯಾಗಿರುವ ಮೋಹನ್ ಅವರ ಏಕ ಮಾತ್ರ ಪುತ್ರ) ಮೊನ್ನೆ ಮೊನ್ನೆ ನಡೆದ 'ಸುಬ್ಬಣ್ಣ ಸ್ಮರಣೆ'ಯ ಎರಡೂ ನಾಟಕಗಳಲ್ಲಿ ಮುಖ್ಯ ಪಾತ್ರವಹಿಸಿ, ಅತ್ಯುತ್ತಮವಾಗಿ ಅಭಿನಯಿಸಿ ಪ್ರೇಕ್ಷಕರ ಅತಿ ಮೆಚ್ಚಿನ ನಟ ಆಗಿದ್ದ.
ಇದನ್ನೂ ಓದಿ; Kannada serial: ದಿಢೀರ್ ಅಂತ್ಯವಾಗ್ತಿದೆ ಈ ಸೀರಿಯಲ್! ಕಾರಣ ಇದು
ರಂಗಗೀತೆಗಳಲ್ಲಿ ಸೊಗಸಾಗಿ ಹಾಡಿದ. ಚೆಕ್ ಪೋಸ್ಟ್ ನಂಬರ್ 840 ಯ ರಾಜಕಾರಣಿ, ಚೋರ ಚರಣದಾಸದ ಕುಡುಕ ,ಅಂಧಯುಗದ ಸಂಜಯ, ಅಡುಗೆ ಮನೆಯಲ್ಲಿ ಹುಲಿಯ ಸಕ್ಸೆನಾ ಮತ್ತು ಶೆಟ್ಟಿ, ಬೆತ್ತಲೆ ಅರಸನ ರಾಜ ರಹಸ್ಯ ನಾಟಕದ ಕಾರಬಾರಿ.... ಅಸಂಖ್ಯ ನಾಟಕಗಳಲ್ಲಿ ಅನೇಕ ಪಾತ್ರಗಳನ್ನು ಮಾಡಿ ನಟನ ತಂಡದ ದೊಡ್ಡ ಶಕ್ತಿಯಾಗಿದ್ದ. ಗಾಯನ, ನೃತ್ಯ, ಪ್ರಾಣಿಗಳನ್ನು ಸಾಕುವುದು ಮತ್ತು ಮಾರಾಟ ಮಾಡುವುದು, ಅದರ ಬಗ್ಗೆ ಅತೀವ ಅಧ್ಯಯನ ಮಾಡಿ ಮಕ್ಕಳಿಗೆ ಪರಿಸರದ ಬಗ್ಗೆ ಎಚ್ಚರ ಮೂಡಿಸುವುದರ ಜೊತೆಗೆ ಸದಾ ನಗುತ್ತಾ ಹಸನ್ಮುಖನಾಗಿ ಗೆಳೆಯರ ಗುಂಪಿನಲ್ಲಿ ಚಂದವಾಗಿದ್ದ. ನಟನದ ಎಲ್ಲಾ ಚಟುವಟಿಕೆಗಳಲ್ಲಿ ತೊಡಗಿಕೊಂಡು ಪ್ರೀತಿ, ನಿಷ್ಠೆಗಳಿಂದ ಎಲ್ಲರ ಮನ ಗೆದ್ದಿದ್ದ.
ಧುತ್ತೆಂದು ಇವತ್ತು ಕಣ್ಮರೆಯಾಗಿ ಬಿಟ್ಟ. ಈ ವಾರದಲ್ಲಿ ನನ್ನ ಎರಡನೇ ಸ್ಮಶಾನ ಯಾತ್ರೆ.ಬೆಂಗಳೂರಿನ ಅವನ ಮನೆಯಲ್ಲಿ, ರಸ್ತೆಯಲ್ಲಿ, ಮಸಣದಲ್ಲಿ ಅವನ ಕುಟುಂಬದವರ, ರಂಗ ಸಹಪಾಠಿಗಳ, ಅವನ ಅಭಿಮಾನಿಗಳ, ಅಪಾರ ಬಂಧು ವರ್ಗದವರ ರೋಧನ ಮುಗಿಲು ಮುಟ್ಟಿತ್ತು!ಈ ಹುಡುಗ ಹ್ರೃತಿಕ್ ನ ಸಾವು. ಮತ್ತು ಬೆಂಕಿಯ ನಡುವೆ ಅವನು .
ಇದನ್ನೂ ಓದಿ: Ramayana trailer: ʼರಾಮಾಯಣʼ ಟ್ರೇಲರ್ ನೋಡಿ ಅಟ್ಲೀ ಫಿದಾ! ಯಶ್ ಬಗ್ಗೆ ಏನಂದ್ರು?
ಬೆಂದು ಹೋಗುವ ಚಿತ್ರ ನನ್ನಂತೆ ಅವನನ್ನು ಪ್ರೀತಿಸುವ ಎಲ್ಲರನ್ನೂ ಬಹುಕಾಲ ನೋವಿನಲ್ಲಿ ತಳ್ಳಿ ಮನಸ್ಸಿನ ತುಂಬಾ ಸಂಕಟ ತುಂಬಿಬಿಡುತ್ತಿದೆ.ಈ ಯವ್ವನಿಗರ ಸಾವು ನನ್ನನ್ನು ಕಾಡುತ್ತಲೆ ಇದೆ. ಅವನ ಪ್ರೀತಿಯ ತಂದೆಗೆ ಮತ್ತು ಕುಟುಂಬಕ್ಕೆ ನೋವನ್ನು ಕಳೆಯುವ ಶಕ್ತಿ ಸಿಗಲಿ.ನಟನದ ಎಲ್ಲರ ಪರವಾಗಿ ಈ ಮಗುವಿಗೆ ನಮನಗಳು ಎಂದು ಬರೆದುಕೊಂಡಿದ್ದಾರೆ.