ರಾಜ್ಯಸಭಾ ಸದಸ್ಯ, ʻನವರಸ ನಾಯಕʼ ಜಗ್ಗೇಶ್ ಅವರು ಸಾಮಾನ್ಯವಾಗಿ ತಮ್ಮ ಬದುಕಿನ ಕೆಲವು ಅಪರೂಪದ ಕ್ಷಣಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದರಲ್ಲೂ ಆಧ್ಯಾತ್ಮಿಕ ವಿಚಾರಗಳ ಬಗ್ಗೆಯೂ ಹಲವು ಬಾರಿ ಹೇಳಿಕೊಂಡಿದ್ದಾರೆ. ಒಮ್ಮೆ ಮಾಡಲು ದುಡ್ಡಿಲ್ಲದೇ ಕಷ್ಟಪಟ್ಟ ಪ್ರಸಂಗವನ್ನು ಜಗ್ಗೇಶ್ ಅವರು ಹೇಳಿಕೊಂಡಿದ್ದಾರೆ. ಅಂದು ಅವರಿಗೆ ಸಹಾಯ ಮಾಡಿದ್ದು ʻಕ್ರೇಜಿ ಸ್ಟಾರ್ʼ ರವಿಚಂದ್ರನ್.
ಜಗ್ಗೇಶ್ ಅವರು ಹೇಳಿದ್ದೇನು?
"ನನ್ನ ನೆಮ್ಮದಿಗೆ ಕಾರಣ ನನ್ನ ಮನೆಯ ದೇವರಕೋಣೆ. ನಾನು 1986ರಲ್ಲಿ ಮೊದಲ ಮನೆ ಮಾಡಿದಾಗ ದೇವರ ಮನೆ ಇರಲಿಲ್ಲ. ಬಾಲ್ಯದಿಂದ ಅಮ್ಮನಿಂದ ಕಲಿತ ದೇವರ ಪೂಜೆ ಮುಂದುವರಿಸಲು ಮಲ್ಲೇಶ್ವರ 8ನೇ ಕ್ರಾಸ್ ನಲ್ಲಿ 40 ರೂ. ಕೊಟ್ಟು ಗಣಪ ಹಾಗೂ ರಾಯರ ಮಣ್ಣಿನ ವಿಗ್ರಹ ಕೊಂಡು, ಅಡುಗೆ ಮನೆಯ ಮೂಲೆಯಲ್ಲಿ ಮಣೆಯ ಮೇಲೆ ಅವುಗಳನ್ನು ಸ್ಥಾಪಿಸಿ, ನನ್ನ ಪೂಜೆ ಆರಂಭಿಸಿ ಇಂದಿಗೆ 40 ವರ್ಷವಾಯಿತು"
28 ವರ್ಷಗಳಿಂದ ಜಗ್ಗೇಶ್ ಕಾರು ಚಾಲಕನಾಗಿದ್ದ ಪದ್ಮನಾಭ ನಿಧನ; ʻನಶ್ವರ ಈ ಜಗತ್ತು..ʼ ಎಂದು ಕಂಬನಿಮಿಡಿದ ʻನವರಸ ನಾಯಕʼ
ನಾನು ನನ್ನ ಕಾಲ ಮೇಲೆ ನಿಲ್ಲಲು ಬೇಡಿದ್ದೆ
"ಈ ವಿಗ್ರಹಗಳ ಮುಂದೆ ಅದೆಷ್ಟು ಕಣ್ಣೀರು ಹರಿಸಿ, ನಾನು ನನ್ನ ಕಾಲ ಮೇಲೆ ನಿಲ್ಲಲು ಬೇಡಿದ್ದೆ. ನನಗಾಗುತ್ತಿದ್ದ ಅದೆಷ್ಟು ಅವಮಾನಗಳನ್ನು ಈ ವಿಗ್ರಹಗಳಗೆ ಅರ್ಪಿಸುತ್ತಿದ್ದೆ. ನನಗೆ ದೇವರ ಮೇಲಿನ ನಂಬಿಕೆ ಅದೆಷ್ಟು ಗಾಢವಾಗಿತ್ತೆಂದರೆ, ನಾನು ಮಾಡಿದ ಉಪವಾಸ, ವ್ರತಗಳು, ಪೂಜೆ, ಏಕಾಂತಸೇವೆ ಈಗ ನೆನೆದರೂ ರೋಮಾಂಚನವಾಗುತ್ತದೆ"
ಎಲ್ರಿಗಿಂತ ಮುಂಚೆ ಗಿಲ್ಲಿ ನಟನ ಬಗ್ಗೆ ಭವಿಷ್ಯ ನುಡಿದಿದ್ದ ಜಗ್ಗೇಶ್; ಗೆದ್ದ ಪಳಾರ್‌ಗೆ ಸನ್ಮಾನಿಸಿದ ʻನವರಸ ನಾಯಕʼ
"40 ವರ್ಷದಿಂದ ಈ ಗಣಪನಿಗೆ ಗಣೇಶ ವ್ರತ ತಪ್ಪದೇ ಇಂದಿಗೂ ಮಾಡುವೆ. ಅದರಲ್ಲಿ ವಿಶೇಷ ವರ್ಷ ಎಂದರೆ 1987ರ ಚತುರ್ಥಿಯ ದಿನ. ಸಂಜೆ 'ರಣಧೀರ' ಚಿತ್ರೀಕರಣ ಮುಗಿದಮೇಲೆ ಬಂದು ಪೂಜೆ ಮಾಡುವ ಎಂದು ಹೋದೆ, ನೋಡಿದರೆ ಕ್ರೈಮ್ಯಾಕ್ಸ್ ಚಿತ್ರೀಕರಣ ರಾತ್ರಿ 2 ಗಂಟೆಯಾದರೂ ಮುಗಿಯುತ್ತಿಲ್ಲ! ಏನು ಮಾಡುವುದು ದೇವರೇ ಎಂದು ಮನಸ್ಸಿನಲ್ಲೇ ಕೊರಗುತ್ತಿದ್ದೆ. ಬೆಳಗಿನಜಾವ 2.40ಕ್ಕೆ ಶೂಟಿಂಗೇನೋ ಮುಗಿಯಿತು, ಆದರೆ ಕೈಯಲ್ಲಿ ಬಿಡಿಗಾಸಿಲ್ಲ! ಧೈರ್ಯಮಾಡಿ ರವಿಚಂದ್ರನ್ ಅವರಿಗೆ 'ಸಾರ್...' ಎಂದೆ. ಅದಾಗಲೇ ದಣಿದಿದ್ದ ಅವರು 'ಏನೋ..?' ಎಂದರು"
ನಮ್ಮ ರವಿಚಂದ್ರನ್ ಹೃದಯವಂತ
'ಸಾರ್.. ಪೂಜೆಗೆ ಕಾಸಿಲ್ಲಾ.. 200 ರೂ. ಕೊಡಿ' ಎಂದೆ. ಆಗ ರವಿ ಸಾರ್, ಅವರ ಮ್ಯಾನೇಜರ್ ಬಾಬು ಕರೆದು 'ಬಾಬು, ಇವನಿಗೆ 500 ರೂ. ಕೊಡು' ಎಂದರು. ನನ್ನ ಸಂತೋಷ ಹೇಳತೀರದು (ನಮ್ಮ ರವಿಚಂದ್ರನ್ ಹೃದಯವಂತ, ಹಾಗಾಗಿ ಇಂದು ನಾನು ಎಷ್ಟೇ ಬೆಳೆದಿದ್ದರೂ, ಅವರ ಮೇಲೆ ವಿಶೇಷ ಗೌರವ. ಇದೇ ಕಾರಣಕ್ಕೆ ನಾನು ನನ್ನ ʻಭಂಡ ನನ್ನ ಗಂಡʼ ಚಿತ್ರದ ಹಾಡಿನಲ್ಲಿ "ಹತ್ತಿದ್ದ ಏಣಿನಾ ಒದಿಬ್ಯಾಡ.." ಎಂದು ಸಾಲು ಬರೆಸಿದ್ದು. I always love you sir)"
"ಅಂದು ಅಲ್ಲಿಂದ ಬೈಕ್ ಹತ್ತಿ ಮಲ್ಲೇಶ್ವರ ಮಾರುಕಟ್ಟೆಗೆ ಬಂದು, ಹೂವು ಹಣ್ಣು ಖರೀದಿಸಿ, ಬೆಳಗಿನ ಜಾವ 5 ಗಂಟೆಗೆ ಪೂಜೆ ಮಾಡಿ ಮುಗಿಸಿ ಮಲಗಿದೆ. ತಮಿಳು ಕವಿ ಭಾರತೀಯಾರ್ ಒಂದು ಸಾಲು ಹೇಳಿದ್ದಾರೆ. ʻನಂಬಿದವನಿಗೆ ಕೆಡುಕಿಲ್ಲಾ, ಗೆದ್ದೆ ಗೆಲ್ಲುತ್ತಾನೆ. ಅದಕ್ಕೆ ನಾಲ್ಕು ಬಾರಿ ತೀರ್ಪುʼ ಎಂದು. ಇಂದಿಗೂ ನನ್ನ ಭಕ್ತಿ ಕುಂದಿಲ್ಲಾ. ಮುಂದುವರಿದು ಯಾವುದೇ ಆಲಯವಾಗಲಿ ಕಸಗುಡಿಸಿ ಸೇವೆ ಮಾಡುವೆ. ಕಾರಣ, ನನ್ನಲ್ಲಿ ಅಹಂಕಾರ ಹತ್ತಿರ ಸುಳಿಯಬಾರದು ಹಾಗು ಈ ಸೇವೆ ಮಾಡಿದವರಿಗೆ ರಾಹು ಶನಿ ಗ್ರಹ ದೋಷ ತಾಗದು ಎಂದು ನನ್ನ ಯೌವ್ವನದಲ್ಲಿ ಒಬ್ಬ ಆಧ್ಯಾತ್ಮಿಕ ಗುರು ಹೇಳಿಕೊಟ್ಟ ಶ್ರೇಷ್ಠ ಪಾಠ"
ಜಗ್ಗೇಶ್ ಹಂಚಿಕೊಂಡ ಪೋಸ್ಟ್ ಇದು
ಕೆಲವರು ಅಣಕಮಾಡಿ ವಿಕೃತ ಆನಂದ ಪಟ್ಟರು
"ಪಾಪ ಇಂದಿನ ಮಕ್ಕಳಿಗೆ ಇದರ ಅರಿವಿಲ್ಲಾ. ನನ್ನ ಇತ್ತೀಚಿನ ರಾಯರ ಮಠ ಗುಡಿಸುವ ಚಿತ್ರವನ್ನು ಕದ್ದು ಸೆರೆಹಿಡಿದು ಜಾಲತಾಣಕ್ಕೆ ಹಾಕಿದ್ದಾರೆ. ಕೋಟಿ ಜನ ಸಂತೋಷಪಟ್ಟರೆ, ಕೆಲವರು ಅಣಕಮಾಡಿ ವಿಕೃತ ಆನಂದ ಪಟ್ಟರು, ವಿಪರ್ಯಾಸ ನಮ್ಮ ಹಿಂದೂ ಧರ್ಮದ ಕೆಲವರ ನಡೆ. ಒಂದಂತೂ ಸತ್ಯ, ದೇವರಸೇವೆ ಯಾವುದೇ ರೂಪವಾಗಲಿ ಮನುಷ್ಯರು ಮಾಡಲೇಬೇಕು, ಕಾರಣ ಯಾವುದೋ ಒಂದು ಸಂದರ್ಭದಲ್ಲಿ ನಮ್ಮ ಕಷ್ಟಕ್ಕೆ ಮನುಷ್ಯ ರೂಪದಲ್ಲಿ ದೇವರು ಬಂದು ನಮ್ಮನ್ನ ಕಾಪಾಡುತ್ತಾನೆ. ದೈವಂ ಮಾನುಷ ರೂಪೇಣ" ಎಂದು ನಟ ಜಗ್ಗೇಶ್ ಅವರು ಬರೆದುಕೊಂಡಿದ್ದಾರೆ.