ಎಲ್ರಿಗಿಂತ ಮುಂಚೆ ಗಿಲ್ಲಿ ನಟನ ಬಗ್ಗೆ ಭವಿಷ್ಯ ನುಡಿದಿದ್ದ ಜಗ್ಗೇಶ್; ಗೆದ್ದ ಪಳಾರ್‌ಗೆ ಸನ್ಮಾನಿಸಿದ ʻನವರಸ ನಾಯಕʼ
ಬಿಗ್ ಬಾಸ್ ವಿಜೇತ ಗಿಲ್ಲಿ ನಟನ ಕುರಿತು ನವರಸ ನಾಯಕ ಜಗ್ಗೇಶ್ ಅವರು ವರ್ಷಗಳ ಹಿಂದೆಯೇ ನುಡಿದಿದ್ದ ಭವಿಷ್ಯ ಈಗ ನಿಜವಾಗಿದೆ. "ನೀನು ಮುಂದೆ ಬಾಡಿಗಾರ್ಡ್‌ಗಳ ಮಧ್ಯೆ ಓಡಾಡುವಷ್ಟು ಬೆಳೆಯುತ್ತೀಯಾ" ಎಂದು ಜಗ್ಗೇಶ್ ಅಂದು ಹೇಳಿದ್ದರು. ಈಗ ಬಿಗ್ ಬಾಸ್ ಗೆದ್ದು ಬಂದ ಗಿಲ್ಲಿಯನ್ನು ಜಗ್ಗೇಶ್ ಮನೆಗೆ ಕರೆಸಿ ಪೇಟ ತೊಡಿಸಿ ಸನ್ಮಾನಿಸಿದ್ದಾರೆ.
-
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ವಿಜೇತರಾಗಿರುವ ಗಿಲ್ಲಿ ನಟ ಅವರು ಸದ್ಯ ಎಲ್ಲಿಲ್ಲದ ಬೇಡಿಕೆಯನ್ನು ಹೊಂದಿದ್ದಾರೆ. ಆರು ತಿಂಗಳ ಹಿಂದೆ ರಿಯಾಲಿಟಿ ಶೋಗಳಲ್ಲಿ ಕಾಮಿಡಿ ಮಾಡಿಕೊಂಡು ಮಿಂಚುತ್ತಿದ್ದ ಗಿಲ್ಲಿ ನಟ, ಈಗ ದೊಡ್ಡ ಸೆಲೆಬ್ರಿಟಿ ಎಂದರೆ ತಪ್ಪಾಗಲಿಕ್ಕಿಲ್ಲ. ಅಂದಹಾಗೆ, ಗಿಲ್ಲಿ ಇಷ್ಟೊಂದು ದೊಡ್ಡಮಟ್ಟಕ್ಕೆ ಬೆಳೆಯುತ್ತಾನೆ ಎಂದು ನಟ ಜಗ್ಗೇಶ್ ಅವರು ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದರು.
ಇದೀಗ ಬಿಗ್ ಬಾಸ್ ವಿನ್ನರ್ ಆಗಿರುವ ಗಿಲ್ಲಿ ನಟ ಅವರನ್ನು ಜಗ್ಗೇಶ್ ಸನ್ಮಾನಿಸಿದ್ದಾರೆ. ಗಿಲ್ಲಿ ನಟನನ್ನು ಮನೆಗೆ ಕರೆಸಿಕೊಂಡು, ಹಾರ ಹಾಕಿ, ಪೇಟ ತೊಡಿಸಿ, ಸನ್ಮಾನಿಸಿ ಶುಭ ಹಾರೈಸಿದ್ದಾರೆ ಜಗ್ಗೇಶ್. ಮೊದಲಿನಿಂದಲೂ ಗ್ರಾಮೀಣ ಭಾಗದ ಪ್ರತಿಭೆಗಳೆಂದರೆ, ಜಗ್ಗೇಶ್ ಅವರಿಗೆ ತುಂಬಾ ಪ್ರೀತಿ. ಅದನ್ನು ಮತ್ತೊಮ್ಮೆ ತೋರಿಸಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ವೇದಿಕೆ ಮೇಲೆ ಹೊಗಳಿದ್ದ ಜಗ್ಗಣ್ಣ
ಕಾಮಿಡಿ ರಿಯಾಲಿಟಿ ಶೋವೊಂದರ ವೇದಿಕೆ ಮೇಲೆಯೇ ಗಿಲ್ಲಿ ನಟನ ಭವಿಷ್ಯವನ್ನು ಜಗ್ಗೇಶ್ ನುಡಿದಿದ್ದರು. "ಮುಂದೊಂದು ದಿನ ನೀನು ನಾಲ್ಕು ಜನ ಬಾಡಿಗಾರ್ಡ್‌ಗಳನ್ನು ಇಟ್ಟುಕೊಂಡು, ನಿನಗೆ ಕೊಡೆ ಹಿಡಿಯಲು ಒಬ್ಬ ವ್ಯಕ್ತಿಯನ್ನು ಇಟ್ಟುಕೊಂಡು ಓಡಾಡುವ ಮಟ್ಟಕ್ಕೆ ಬೆಳೆಯುತ್ತೀಯಾ" ಎಂದು ಜಗ್ಗೇಶ್ ಭವಿಷ್ಯ ಹೇಳಿದ್ದರು.
ಗಿಲ್ಲಿ ನಟನಿಗೆ ಸಿಕ್ಕಿದೆ ಭದ್ರತೆ
ಗಿಲ್ಲಿ ನಟ ಅವರು ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಅವರಿಗೆ ಸಿಕ್ಕ ಜನಪ್ರಿಯತೆ ಮತ್ತು ಅಭಿಮಾನಿಗಳ ಸಂಖ್ಯೆ ಎಷ್ಟಿತ್ತೆಂದರೆ, ಜಗ್ಗೇಶ್ ಹೇಳಿದಂತೆಯೇ ಅವರು ಪೊಲೀಸ್ ರಕ್ಷಣೆ ಮತ್ತು ಬಾಡಿಗಾರ್ಡ್‌ಗಳ ನಡುವೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಈಗಲೂ ಗಿಲ್ಲಿ ನಟ ಯಾವುದಾದರೂ ಇವೆಂಟ್‌ಗೆ ಬಂದರೆ, ಭದ್ರತೆಗಾಗಿ ಪೊಲೀಸ್ ಬಂದೋಬಸ್ತ್ ನೀಡಲಾಗುತ್ತದೆ. ಅಷ್ಟರಮಟ್ಟಿಗೆ ಜನರ ಪ್ರೀತಿಯನ್ನು ಗಿಲ್ಲಿ ನಟ ಸಂಪಾದಿಸಿದ್ದಾರೆ.
ಅಂದಹಾಗೆ, ಬಿಗ್ ಬಾಸ್‌ನಿಂದ ಹೊರಬಂದ ಬಳಿಕ ಶಿವರಾಜ್‌ಕುಮಾರ್, ಸುದೀಪ್ ಅವರನ್ನು ಗಿಲ್ಲಿ ನಟ ಭೇಟಿಯಾಗಿದ್ದರು. ಬಳಿಕ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಜಿ. ಪರಮೇಶ್ವರ್, ಎಂಟಿಬಿ ನಾಗರಾಜ್ ಸೇರಿದಂತೆ ಅನೇಕ ರಾಜಕೀಯ ಮುಖಂಡರನ್ನು ಭೇಟಿ ಮಾಡಿದ್ದಾರೆ.