ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻನಮ್ಮಪ್ಪನಿಗೆ ಅಮ್ಮ‌ ಊದುಬತ್ತಿ ಮಾರಿ ಕೊಡಿಸಿದ ಬುಲೆಟ್‌ ಇದುʼ; ತಂದೆಯ ಬೈಕನ್ನೇರಿ ಸಂಭ್ರಮಿಸಿದ ಜಗ್ಗೇಶ್‌

ನವರಸ ನಾಯಕ ಜಗ್ಗೇಶ್ ಅವರು 1956ರಲ್ಲಿ ತಮ್ಮ ತಾಯಿ ಊದುಬತ್ತಿ ಮಾರಿ ತಂದೆಗೆ ಕೊಡಿಸಿದ್ದ 70 ವರ್ಷ ಹಳೆಯ 'ಬುಲೆಟ್' ಬೈಕ್‌ನೊಂದಿಗೆ ಭಾವನಾತ್ಮಕ ನೆನಪುಗಳನ್ನು ಹಂಚಿಕೊಂಡಿದ್ದಾರೆ. ನಾಲ್ಕು ತಲೆಮಾರುಗಳನ್ನು ಹೊತ್ತ ಈ ಬೈಕ್ ತಮ್ಮ ಬದುಕಿನ ಭಾಗ್ಯದೇವತೆ ಎಂದಿದ್ದಾರೆ ಜಗ್ಗೇಶ್.

ʻನನ್ನ ಬದುಕಿನ ಭಾಗ್ಯದೇವತೆ ಈ ಬುಲೆಟ್ʼ; ನಟ ಜಗ್ಗೇಶ್ ಹೀಗೆ ಹೇಳಿದ್ದೇಕೆ?

-

Avinash GR
Avinash GR Aug 10, 2026 12:39 PM

ನವರಸ ನಾಯಕ ಜಗ್ಗೇಶ್‌ ಅವರು ತಮ್ಮ ತಂದೆಯ ಕಾಲದ 70 ವರ್ಷ ಹಳೆಯ 'ಬುಲೆಟ್' ಬೈಕ್ ಅನ್ನು ಇಂದಿಗೂ ಜತನದಿಂದ ಕಾಪಾಡಿಕೊಂಡು ಬಂದಿದ್ದು, ಆ ಬೈಕ್‌ನೊಂದಿಗಿನ ತಮ್ಮ ಭಾವನಾತ್ಮಕ ಅನುಬಂಧವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. "ನಾಲ್ಕು ತಲೆಮಾರುಗಳನ್ನು ಹೊತ್ತ ನನ್ನ ಬದುಕಿನ ಭಾಗ್ಯದೇವತೆ ಈ ಬುಲೆಟ್" ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.

ಬುಲೆಟ್ ಶಬ್ದಕ್ಕೆ ತಾತ ಬಾಗಿಲಲ್ಲಿ ನಿಲ್ಲುತ್ತಿದ್ದ

"ನನ್ನ ಕನಸಿನ ಬಂಡಿ.. ಅಮ್ಮ, ʻನನ್ನಗಂಡ ಬೈಕಲ್ಲಿ ಓಡಾಡಲಿʼ ಎಂದು 1956ರಲ್ಲಿ ಊದುಬತ್ತಿ ಮಾರಿ, ತರಕಾರಿ ಮಾರಿ ಹಣ ಸೇರಿಸಿ 1,800 ರೂ. ಕೊಟ್ಟು ಅಪ್ಪನಿಗೆ ಕೊಡಿಸಿದ ಬುಲೆಟ್ ಇದು. ಬಾಲ್ಯದಲ್ಲಿ ನಾನು ಇದರ ಮುಂದೆ ಕೂತು ಅಪ್ಪ-ಅಮ್ಮನ ಜೊತೆ ಮಾಯಸಂದ್ರಕ್ಕೆ ಹೋಗುತ್ತಿದ್ದೆ. ಬುಲೆಟ್ ಶಬ್ದಕ್ಕೆ ತಾತ ಬಾಗಿಲಲ್ಲಿ ಬರಮಾಡಿಕೊಳ್ಳಲು ಪ್ರೀತಿಯಿಂದ ನಿಲ್ಲುತ್ತಿದ್ದ" ಎಂದು ನೆನಪು ಮಾಡಿಕೊಂಡಿದ್ದಾರೆ ಜಗ್ಗೇಶ್‌.

Actor Jaggesh: ಕೆಟ್ಟ ಅಭ್ಯಾಸ ಬಿಟ್ಟುಬಿಡಿ! ಶ್ರೀಕೃಷ್ಣನ ಸಂದೇಶ ಹಂಚಿಕೊಂಡ ಜಗ್ಗೇಶ್‌

ನಾಡೆಲ್ಲಾ ಮೆಚ್ಚುವಂತ ಹಮ್ಮೀರ

"ನಾನು ಕಾಲೇಜಿಗೆ ಬಂದಾಗ ಅಪ್ಪನ ಬಳಿ ಕಾಡಿಬೇಡಿ ನಾನು ಪಡೆದೆ.. ಪೆಟ್ರೋಲ್ ಗೆ ಕಾಸಿಲ್ಲದೆ ಡೌನ್ ಬಂದಾಗ ನ್ಯೂಟ್ರಲ್, ಅಪ್ ಬಂದಾಗ ಗೇರಲ್ಲಿ ಜೀವನ. ಪರಿಮಳ, ನನ್ನ ಗೆಳತಿ ಆದಾಗ ಅವಳ ಬಳಿಯೇ 7 ರೂ. ಪಡೆದು ಪೆಟ್ರೋಲ್ ಹಾಕಿಸಿ ಅವಳ ಹಿಂದೆ ಕೂರಿಸಿಕೊಂಡು, ʻಒಂದಲ್ಲ ಒಂದು ದಿವಸ ಆಗುತೀನಿ, ನಾನು ನಾಡೆಲ್ಲಾ ಮೆಚ್ಚುವಂತ ಹಮ್ಮೀರʼ ಎಂದು ರೌಂಡ್ ಹಾಕಿಸಿ ಬರುತ್ತಿದ್ದೆ.." ಎಂದು ಹಳೆಯ ದಿನಗಳ ಬಗ್ಗೆ ಮಾತನಾಡಿದ್ದಾರೆ ಜಗ್ಗೇಶ್.

Actor Jaggesh: ಮೊಮ್ಮಗನ ಜೊತೆ ಸಂತೋಷದ ಕ್ಷಣ ಹಂಚಿಕೊಂಡ ಜಗ್ಗೇಶ್‌! ತಾತನನ್ನು ನೆನದು ಭಾವುಕ

ನನ್ನ ಬದುಕಿನ ಭಾಗ್ಯದೇವತೆ

"ಮುಂದೆ ಅವಳನ್ನೆ ಮದುವೆಯಾಗಿ‌, ಮಗ ಗುರುರಾಜನನ್ನು ಮುಂದೆ ಕೂರಿಸಿ, ಅಪ್ಪನ ಹಾದಿ ತುಳಿದು ಸ್ವತಂತ್ರವಾಗಿ ಬೆಳೆದೆ.. ಈಗ ಮೊಮ್ಮಗ ಅರ್ಜುನ ಈ ಬೈಕ್‌ಗೆ ನನ್ನ ಆತ್ಮೀಯ ಸಹಪಾಟಿ. ಅಲ್ಲಿಗೆ ನಾಲ್ಕು ತಲೆಮಾರು ಹೊತ್ತ ನನ್ನ ಬದುಕಿನ ಭಾಗ್ಯದೇವತೆ ಈ ಬುಲೆಟ್..." ಎಂದು ಕೊಂಡಾಡಿದ್ದಾರೆ ಜಗ್ಗೇಶ್‌.

ಸಿಕ್ಕ ಬದುಕಿನಲ್ಲಿ ತೃಪ್ತರಾಗಿ, ಸಂತೋಷವಾಗಿರಿ

"ಬದುಕು ತುಂಬಾ ಚಿಕ್ಕದು. ಮೊನ್ನೆ ತಾತ, ನಿನ್ನೆ ಅಪ್ಪ, ಇಂದು ನಾವು, ನಾಳೆ ಮಕ್ಕಳು, ನಾಡಿದ್ದು ಮೊಮ್ಮಕ್ಕಳು... ಕೊನೆಗೆ ಗೋಡೆಯ ಮೇಲೊಂದು ಚಿತ್ರಪಟ ಅಷ್ಟೇ. ಹೀಗಿರುವಾಗ 'ನಾನು, ನಂದು' ಎಂಬ ಅಹಂ ಏಕಿರಬೇಕು? ಕಾಲವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ; ಇಂದು ಸಿಕ್ಕ ಬದುಕಿನಲ್ಲಿ ತೃಪ್ತರಾಗಿ, ಸಂತೋಷವಾಗಿರಿ" ಎಂದು ಜಗ್ಗೇಶ್ ತಮ್ಮ ಸುಂದರ ಸಾಲುಗಳ ಮೂಲಕ ಬದುಕಿನ ಸತ್ಯವನ್ನು ಹಂಚಿಕೊಂಡಿದ್ದಾರೆ.