ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಕೌಸ್ತುಭ’ ಚಿತ್ರದಲ್ಲಿ ಖಡಕ್ ಪೊಲೀಸ್ ಲುಕ್‌ನಲ್ಲಿ ಪ್ರಮೋದ್ ಶೆಟ್ಟಿ; ಈ ಪಾತ್ರಕ್ಕಾಗಿ 27 ಕೆ.ಜಿ ತೂಕ ಇಳಿಸಿಕೊಂಡ ನಟ!

ಪ್ರಮೋದ್ ಶೆಟ್ಟಿ ನಟನೆಯ ʻಕೌಸ್ತುಭ’ ಚಿತ್ರದ ಮೂಲಕ ಪೂರ್ಣಪ್ರಮಾಣದ ಕಮರ್ಷಿಯಲ್ ಹೀರೋ ಆಗಿ ಹೊರಹೊಮ್ಮುತ್ತಿದ್ದಾರೆ. 'ಚಾಣಕ್ಯ' ಎಂಬ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರಕ್ಕಾಗಿ ಅವರು ಬರೋಬ್ಬರಿ 27 ಕೆ.ಜಿ ತೂಕ ಇಳಿಸಿಕೊಂಡು ಗಮನಸೆಳೆದಿದ್ದಾರೆ. ಸಿದ್ದು ವಜ್ರಪ್ಪ ನಿರ್ದೇಶನದ ಈ ಪತ್ತೆದಾರಿ ಕಥಾಹಂದರದ ಚಿತ್ರವು ರಾಜಕೀಯ ಹಾಗೂ ಸಿನಿಮಾರಂಗದ ನಂಟನ್ನು ಅನಾವರಣಗೊಳಿಸಲಿದೆಯಂತೆ.

ʻಕೌಸ್ತುಭ’ ಚಿತ್ರಕ್ಕಾಗಿ 27 KG ತೂಕ ಇಳಿಸಿಕೊಂಡ ನಟ ಪ್ರಮೋದ್ ಶೆಟ್ಟಿ!

-

Avinash GR
Avinash GR Sep 1, 2026 1:41 PM

ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಪ್ರಮೋದ್ ಶೆಟ್ಟಿ ಅವರ ಜನ್ಮದಿನದ ಪ್ರಯುಕ್ತ, ಅವರು ನಾಯಕರಾಗಿ ನಟಿಸುತ್ತಿರುವ ಬಹುನಿರೀಕ್ಷಿತ ‘ಕೌಸ್ತುಭ’ ಚಿತ್ರತಂಡ ನಟನ ಖಡಕ್ ಪೊಲೀಸ್ ಲುಕ್ ಬಿಡುಗಡೆ ಮಾಡಿ ಶುಭ ಕೋರಿದೆ. ಪೋಷಕ, ಖಳನಾಯಕ ಹಾಗೂ ಪ್ರಮುಖ ಪಾತ್ರಗಳ ಮೂಲಕ ಮನೆಮಾತಾಗಿರುವ ಪ್ರಮೋದ್ ಶೆಟ್ಟಿ, ಈ ಚಿತ್ರದ ಮೂಲಕ ಪೂರ್ಣಪ್ರಮಾಣದ ಜನಪ್ರಿಯ ಕಮರ್ಷಿಯಲ್ ಹೀರೋ ಸಾಲಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ವಿಶ್ವಾಸವನ್ನು ಚಿತ್ರತಂಡ ವ್ಯಕ್ತಪಡಿಸಿದೆ.

ಪಾತ್ರಕ್ಕಾಗಿ ಬರೋಬ್ಬರಿ 27 ಕೆ.ಜಿ ತೂಕ ಇಳಿಕೆ

ಚಿತ್ರದಲ್ಲಿ ಪ್ರಮೋದ್ ಶೆಟ್ಟಿ 'ಚಾಣಕ್ಯ' ಎಂಬ ಗಂಭೀರ ಹಾಗೂ ಚುರುಕಿನ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಹಿಂದಿನ ‘ಲಾಫಿಂಗ್ ಬುದ್ಧ’ ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದ ಪ್ರಮೋದ್, ಚಾಣಕ್ಯ ಪಾತ್ರದ ಗಾಂಭೀರ್ಯತೆಗಾಗಿ ಬರೋಬ್ಬರಿ 27 ಕೆ.ಜಿ ತೂಕ ಇಳಿಸಿಕೊಂಡು ಗಮನಾರ್ಹ ಬದಲಾವಣೆ ಮಾಡಿಕೊಂಡಿದ್ದಾರೆ.

ನಾಯಕನಾಗಿ ಇದು ನನ್ನ ಮೊದಲ ಸಿನಿಮಾ

ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ಪ್ರಮೋದ್ ಶೆಟ್ಟಿ, "ಇದೊಂದು ಪತ್ತೆದಾರಿ ಕಥೆಯಾಧಾರಿತ ಚಿತ್ರ. ಪೊಲೀಸ್ ಪಾತ್ರದ ವಿನ್ಯಾಸ ಮತ್ತು ಕ್ಲೈಮ್ಯಾಕ್ಸ್ ದೃಶ್ಯಗಳು ಅತ್ಯಂತ ವಿಭಿನ್ನವಾಗಿ ಮೂಡಿಬರಲಿವೆ. ಚಿತ್ರದಲ್ಲಿ ನಾಲ್ಕು ಭರ್ಜರಿ ಸಾಹಸ ದೃಶ್ಯಗಳಿದ್ದು, ನಾಯಕನಾಗಿ ಇದು ನನ್ನ ಮೊದಲ ಪಕ್ಕಾ ಕಮರ್ಷಿಯಲ್ ಸಿನಿಮಾ ಎನ್ನಬಹುದು" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಇಲ್ಲಿದೆ ಸಿನಿಮಾದೊಳಗೆ ಸಿನಿಮಾ

‘ರಾವುತ’ ಎಂಬ ಪ್ರಯೋಗಾತ್ಮಕ ಚಿತ್ರದ ಮೂಲಕ ಗಮನ ಸೆಳೆದಿದ್ದ ಯುವ ನಿರ್ದೇಶಕ ಸಿದ್ದು ವಜ್ರಪ್ಪ ಅವರಿಗೆ ಇದು ಎರಡನೇ ಸಿನಿಮಾ. ಪ್ರಮೋದ್ ಶೆಟ್ಟಿ ಅವರನ್ನೇ ಗಮನದಲ್ಲಿಟ್ಟುಕೊಂಡು ಈ ಕಥೆ ಹೆಣೆದಿರುವ ಸಿದ್ದು, ರಾಜಕೀಯ ಮತ್ತು ಚಿತ್ರರಂಗದ ನಡುವಿನ ಸಂಬಂಧವನ್ನು ‘ಸಿನಿಮಾದೊಳಗೊಂದು ಸಿನಿಮಾ’ ಮಾದರಿಯಲ್ಲಿ ತೆರೆದಿಡಲಿದ್ದಾರೆ. ಸದ್ಯ ಚಿತ್ರದ ಶೇ. 60 ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಸಂಪೂರ್ಣ ಸಿದ್ಧತೆಗಳೊಂದಿಗೆ ಮುಂದಿನ ವರ್ಷ ಚಿತ್ರವನ್ನು ಅದ್ಧೂರಿಯಾಗಿ ತೆರೆಗೆ ತರಲು ಯೋಜಿಸಲಾಗಿದೆ.

ರೋಡ್ ಥ್ರಿಲ್ಲರ್‌ ಸಿನಿಮಾಕ್ಕಾಗಿ ಜೊತೆಯಾದ ಪ್ರಮೋದ್‌ ಶೆಟ್ಟಿ - ಶ್ರುತಿ ಹರಿಹರನ್‌; ಸಾಥ್‌ ನೀಡಿದ ʻಬಿಗ್‌ ಬಾಸ್‌ʼ ಮಂಜು

ರಿಯಲ್ ಸ್ಟಾರ್ ಉಪೇಂದ್ರ ಕಂಠಸಿರಿ?

ಚಿತ್ರಕ್ಕೆ ‘ವಿದ್ಯಾಪತಿ’ ಖ್ಯಾತಿಯ ಡಾಸ್ ಮೋಡ್ ಸಂಗೀತ ಸಂಯೋಜಿಸುತ್ತಿದ್ದಾರೆ. ಒಟ್ಟು ಮೂರು ಹಾಡುಗಳಿರುವ ಈ ಆಲ್ಬಂನಲ್ಲಿ, ನಾಯಕನ ಎಂಟ್ರಿಗಾಗಿ ವಿಶೇಷ ಗೀತೆಯೊಂದನ್ನು ಸಿದ್ಧಪಡಿಸಲಾಗಿದೆ. ಮತ್ತೊಂದು ಪ್ರಮುಖ ಹಾಡನ್ನು ರಿಯಲ್ ಸ್ಟಾರ್ ಉಪೇಂದ್ರ ಅವರು ಹಾಡಲಿದ್ದಾರೆ ಎನ್ನಲಾಗಿದೆ. ಹಾಡುಗಳಿಗೆ ಸ್ವತಃ ನಿರ್ದೇಶಕ ಸಿದ್ದು ವಜ್ರಪ್ಪ ಹಾಗೂ ಪ್ರಶಾಂತ್ ಬಾಗೂರು ಸಾಹಿತ್ಯ ರಚಿಸಿದ್ದಾರೆ.

ಅನುಭವಿ ಕಲಾವಿದರ ತಾರಾಗಣ

ಚಿತ್ರದಲ್ಲಿ ಹಿರಿಯ ನಿರ್ದೇಶಕ ಹಾಗೂ ನಟ ಟಿ.ಎಸ್. ನಾಗಾಭರಣ, ರವಿಶಂಕರ್ ಗೌಡ, ಕಿರುತೆರೆ ನಟಿ ವಿದ್ಯಾ, ಕಡ್ಡಿಪುಡಿ ಚಂದ್ರು, ಚೇತನ್‌ ದುರ್ಗ ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ರಾಮ ರಾಮ ರೇ’ ಖ್ಯಾತಿಯ ನಟರಾಜ್ ವಿಶೇಷ ಪಾತ್ರವೊಂದರಲ್ಲಿ ಬಣ್ಣಹಚ್ಚಿದ್ದಾರೆ. ತಾಂತ್ರಿಕ ವಿಭಾಗದಲ್ಲಿ ಅರವಿಂದ್ ರಾಜ್ ಅವರ ಸಂಕಲನ ಹಾಗೂ ದಿಲೀಪ್ ಎಂ. ರಾಜ್ ಅವರ ಸಾಹಸ ನಿರ್ದೇಶನವಿದೆ. ‘ಎವಿಕೆ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ರಾಜೇಶ್ ಧನಪಾಲ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.