ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮದುವೆ ಬೆನ್ನಲ್ಲೇ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಪ್ರಣಮ್‌ ದೇವರಾಜ್: ‘ಶ್ರೀರಸ್ತು’ ಚಿತ್ರದ ‘ಈ ಪರಿ ಸೌಂದರ್ಯವಾ’ ಮೆಲೋಡಿ ಹಾಡು ರಿಲೀಸ್‌

‘ಶ್ರೀರಸ್ತು’ ಚಿತ್ರದ ರೋಮ್ಯಾಂಟಿಕ್ ಗೀತೆ ‘ಈ ಪರಿ ಸೌಂದರ್ಯವಾ’ ಬಿಡುಗಡೆಯಾಗಿದೆ. ಇತ್ತೀಚೆಗಷ್ಟೇ ಹಸೆಮಣೆ ಏರಿದ್ದ ಪ್ರಣಮ್ ದೇವರಾಜ್ ಈ ಹಾಡಿನ ಮೂಲಕ ಸದ್ದು ಮಾಡಿದ್ದಾರೆ. ಈ ಚಿತ್ರದಲ್ಲಿ ಸಂಜನಾ ಆನಂದ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಹಾಡನ್ನು ಕಪಿಲ್ ಕಪಿಲನ್ ಹಾಡಿದ್ದಾರೆ.

ಮದುವೆ ಸಂಭ್ರಮದಲ್ಲೇ ಹೊಸ ಸಿನಿಮಾದ ಸಾಂಗ್ ರಿಲೀಸ್ ಮಾಡಿದ ಪ್ರಣಮ್ ದೇವರಾಜ್

-

Avinash GR
Avinash GR Nov 8, 2026 4:04 PM

ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಸ್ಯಾಂಡಲ್‌ವುಡ್‌ ನಟ ಪ್ರಣಮ್ ದೇವರಾಜ್, ಇದೀಗ ತಮ್ಮ ಸಿನಿಮಾ ಕಡೆಯಿಂದ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದಾರೆ. ಪ್ರಣಮ್ ದೇವರಾಜ್ ಹಾಗೂ ಸಂಜನಾ ಆನಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಶ್ರೀರಸ್ತು’ ಚಿತ್ರದ ಮೊದಲ ಲಿರಿಕಲ್ ಹಾಡು ‘ಈ ಪರಿ ಸೌಂದರ್ಯವಾ..’ ಇತ್ತೀಚೆಗೆ ರಿಲೀಸ್‌ ಆಗಿದೆ.

ಹರಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಪೆಂಡ್ಲಿಮಡಗು ಹರಿ ಕೃಷ್ಣ ಗೌಡ್ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶಂಕರ್ ರೆಡ್ಡಿ ಸಿದ್ದರೆಡ್ಡಿ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈಗಾಗಲೇ ಬಿಡುಗಡೆಯಾಗಿದ್ದ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು. ಇದೀಗ ಬಿಡುಗಡೆಯಾಗಿರುವ ಈ ರೊಮ್ಯಾಂಟಿಕ್ ಮೆಲೋಡಿ ಗೀತೆಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ಪಡೆದುಕೊಂಡು ಟ್ರೆಂಡಿಂಗ್‌ನಲ್ಲಿದೆ.

ಸಂಗೀತ ನಿರ್ದೇಶಕ ಶೇಖರ್ ಚಂದ್ರ ಅವರ ರಾಗಸಂಯೋಜನೆಯಲ್ಲಿ ಮೂಡಿಬಂದಿರುವ ಈ ಗೀತೆಗೆ ಪ್ರತಿಭಾವಂತ ಗೀತರಚನೆಕಾರ ವರದರಾಜ್ ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿದ್ದಾರೆ. ಗಾಯಕ ಕಪಿಲ್ ಕಪಿಲನ್ ಅವರ ಮಧುರ ಕಂಠದಲ್ಲಿ ಈ ಹಾಡು ಅದ್ಭುತವಾಗಿ ಮೂಡಿಬಂದಿದ್ದು, ಸಂಗೀತಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹಾಡಿನ ದೃಶ್ಯಗಳಲ್ಲಿ ಪ್ರಣಮ್ ದೇವರಾಜ್ ಹಾಗೂ ಸಂಜನಾ ಆನಂದ್ ಅವರ ಆಕರ್ಷಕ ಕೆಮಿಸ್ಟ್ರಿ, ಮುದ್ದಾದ ಅಭಿನಯ ಮತ್ತು ಜೀತು ಮಾಸ್ಟರ್ ಅವರ ನೃತ್ಯ ಸಂಯೋಜನೆಗೆ ತಕ್ಕಂತೆ ಜೋಡಿಯ ನೃತ್ಯ ಹೆಜ್ಜೆಗಳು ಹಾಡಿನ ಮೆರುಗನ್ನು ಮತ್ತಷ್ಟು ಹೆಚ್ಚಿಸಿವೆ.

ಬೆಳ್ಳಿತೆರೆಯ ಮೇಲೆ ಪ್ರೇಕ್ಷಕರಿಗೆ ಕಣ್ಣಿಗೆ ಹಬ್ಬ

ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಶಂಕರ್ ರೆಡ್ಡಿ ಸಿದ್ದರೆಡ್ಡಿ, "ಕಥೆಯ ಓಟಕ್ಕೆ ಈ ಹಾಡು ಅತ್ಯಂತ ಪ್ರಮುಖ ತಿರುವು ನೀಡಲಿದ್ದು, ಸಂಗೀತ ನಿರ್ದೇಶಕ ಶೇಖರ್ ಚಂದ್ರ ಅವರು ಅದ್ಭುತವಾಗಿ ರಾಗ ಸಂಯೋಜಿಸಿದ್ದಾರೆ. ಹರಿ ಕ್ರಿಯೇಷನ್ಸ್ ಸಂಸ್ಥೆಯು ಯಾವುದೇ ಕೊರತೆಯಿಲ್ಲದೆ ಭವ್ಯವಾಗಿ ನಿರ್ಮಿಸುತ್ತಿರುವ ಈ ಸಿನಿಮಾ, ಬೆಳ್ಳಿತೆರೆಯ ಮೇಲೆ ಪ್ರೇಕ್ಷಕರಿಗೆ ಕಣ್ಣಿಗೆ ಹಬ್ಬದಂತಹ ದೃಶ್ಯ ವೈಭವದ ಅನುಭವ ನೀಡಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

Photos: ಎಂಗೇಜ್‌ ಆದ ನಟ ದೇವರಾಜ್‌ ಪುತ್ರ ಪ್ರಣಾಮ್‌; ನಮಿತಾ ಜೊತೆ ಅದ್ದೂರಿಯಾಗಿ ನಡೆದ ನಿಶ್ಚಿತಾರ್ಥ ಸಮಾರಂಭ

ಕನ್ನಡ - ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣ

ನಿರ್ಮಾಪಕ ಪೆಂಡ್ಲಿಮಡಗು ಹರಿ ಕೃಷ್ಣ ಗೌಡ್ ಮಾತನಾಡಿ, "ತಮ್ಮ ಸಂಸ್ಥೆಯ ಮೂಲಕ ಸದಭಿರುಚಿಯ, ಕುಟುಂಬ ಸಮೇತ ವೀಕ್ಷಿಸಬಹುದಾದ ಕೌಟುಂಬಿಕ ಮನರಂಜನಾ ಚಿತ್ರವನ್ನು ಪ್ರೇಕ್ಷಕರ ಮುಂದಿಡಲು ಹೆಮ್ಮೆ ಎನಿಸುತ್ತಿದೆ. ಹಾಡಿಗೆ ಸಿಗುತ್ತಿರುವ ಅಭೂತಪೂರ್ವ ಪ್ರತಿಕ್ರಿಯೆ ಚಿತ್ರತಂಡದ ಉತ್ಸಾಹವನ್ನು ಹೆಚ್ಚಿಸಿದ್ದು, ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಚಿತ್ರವನ್ನು ಸಿದ್ಧಪಡಿಸಲಾಗುತ್ತಿದೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ದಿನಾಂಕವನ್ನು ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಲಾಗುವುದು" ಎಂದು ಮಾಹಿತಿ ನೀಡಿದರು.

ಅತಿಥಿ ಪಾತ್ರದಲ್ಲಿ ಪ್ರಜ್ವಲ್

ಚಿತ್ರದಲ್ಲಿ ಪ್ರಣಮ್ ದೇವರಾಜ್ ಮತ್ತು ಸಂಜನಾ ಆನಂದ್ ಜೊತೆಗೆ ಅನುಭವಿ ಕಲಾವಿದರಾದ ಸುಮನ್, ಆಮಣಿ, ಚೈತ್ರ, ಪ್ರಸಾದ್ ಬೆಹರಾ ಹಾಗೂ ಶಿವ ರವಿತೇಜ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ವಿಶೇಷವಾಗಿ ಸ್ಯಾಂಡಲ್‌ವುಡ್‌ನ ‘ಡೈನಾಮಿಕ್ ಸ್ಟಾರ್’ ಪ್ರಜ್ವಲ್ ದೇವರಾಜ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಬಗೆಗಿನ ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಿದೆ.