ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Satish Shah: 'ಸಾರಾಭಾಯ್‌ ವರ್ಸಸ್‌ ಸಾರಾಭಾಯ್‌' ಧಾರಾವಾಹಿ ಖ್ಯಾತಿಯ ನಟ ಸತೀಶ್‌ ಶಾ ನಿಧನ

'ಸಾರಾಭಾಯ್‌ ವರ್ಸಸ್‌ ಸಾರಾಭಾಯ್‌' ಹಿಂದಿ ಧಾರಾವಾಹಿ ಖ್ಯಾತಿಯ ಹಿರಿಯ ನಟ ಸತೀಶ್‌ ಶಾ ಶನಿವಾರ ನಿಧನ ಹೊಂದಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಕಿಡ್ನಿ ಫೆಲ್ಯೂರ್‌ನಿಂದ ಅವರು ಮೃತಪಟ್ಟಿದ್ದಾರೆ. 1951ರಲ್ಲಿ ಮುಂಬೈಯಲ್ಲಿ ಜನಿಸಿದ ಸತೀಶ್‌ ಶಾ ಸಿನಿಮಾ ಹಾಗೂ ಕಿರುತೆರೆಯಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಕನ್ನಡ ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ.

ಬಾಲಿವುಡ್‌ ಹಿರಿಯ ನಟ ಸತೀಶ್‌ ಶಾ ಇನ್ನಿಲ್ಲ

ಸತೀಶ್‌ ಶಾ -

Ramesh B Ramesh B Oct 25, 2025 5:56 PM

ಮುಂಬೈ, ಅ. 25: 'ಸಾರಾಭಾಯ್‌ ವರ್ಸಸ್‌ ಸಾರಾಭಾಯ್‌' (Sarabhai Vs Sarabhai) ಹಿಂದಿ ಧಾರಾವಾಹಿ ಖ್ಯಾತಿಯ ಹಿರಿಯ ನಟ ಸತೀಶ್‌ ಶಾ (Actor Satish Shah) ಶನಿವಾರ ನಿಧನ ಹೊಂದಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಚಿತ್ರ ನಿರ್ಮಾಪಕ ಅಶೋಕ್‌ ಪಂಡಿತ್‌ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ʼʼಕಿಡ್ನಿ ಫೆಲ್ಯೂರ್‌ ಕಾರಣದಿಂದ ನಮ್ಮ ಸ್ನೇಹಿತ, ಉತ್ತಮ ನಟ ಸತೀಶ್‌ ಶಾ ಶನಿವಾರ ಅಪರಾಹ್ನ 2:30ಕ್ಕೆ ನಿಧನ ಹೊಂದಿದರು. ಮುಂಬೈಯ ಮನೆಯಲ್ಲಿದ್ದಾಗ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಕಾಪಾಡಲು ಸಾಧ್ಯವಾಗಲಿಲ್ಲ. ಅಂತ್ಯಕ್ರಿಯೆ ಇಂದೇ ನಡೆಯಲಿದೆ. ಸತೀಶ್‌ ಶಾ ನಿಧನದಿಂದ ಹಿರಿತೆರೆ-ಕಿರುತೆರೆಗೆ ತುಂಬಲಾರದ ನಷ್ಟ ಉಂಟಾಗಿದೆ. ಅವರೊಂದಿಗೆ ನಾನು ಹಲವು ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದ್ದೇನೆʼʼ ಎಂದು ತಿಳಿಸಿದ್ದಾರೆ.

1951ರಲ್ಲಿ ಮುಂಬೈಯಲ್ಲಿ ಗುಜರಾತ್‌ ಮೂಲದ ಕುಟುಂಬದಲ್ಲಿ ಜನಿಸಿದ ಸತೀಶ್‌ ಶಾ ಸಿನಿಮಾ ಹಾಗೂ ಕಿರುತೆರೆಯಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ವಿಶೇಷವಾಗಿ ಕಾಮಿಡಿ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ.

ಹಿರಿಯ ನಟ ಸತೀಶ್‌ ಶಾ ನಿಧನದ ಕುರಿತು ಶೆಫಾಲಿ ವೈದ್ಯ ಅವರ ಎಕ್ಸ್‌ ಪೋಸ್ಟ್‌:



ಈ ಸುದ್ದಿಯನ್ನೂ ಓದಿ: TT Jagannathan: ಪ್ರೆಶರ್ ಕುಕ್ಕರ್ ಮಾರುಕಟ್ಟೆಯ ಕ್ರಾಂತಿಕಾರ ಟಿ.ಟಿ. ಜಗನ್ನಾಥನ್ ನಿಧನ

ಕನ್ನಡದಲ್ಲಿಯೂ ನಟನೆ

ಸತೀಶ್‌ ಶಾ ಹಿಂದಿ, ಮರಾಠಿ ಜತೆಗೆ ಕನ್ನಡ ಚಿತ್ರದಲ್ಲಿಯೂ ನಟಿಸಿದ್ದಾರೆ. 1970ರಲ್ಲಿ ರಿಲೀಸ್‌ ಆದ ʼಭಗವಾನ್‌ ಪರಶುರಾಮ್‌ʼ ಬಾಲಿವುಡ್‌ ಚಿತ್ರದ ಮೂಲಕ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. 1983ರಲ್ಲಿ ತೆರೆಕಂಡ ʼಜಾನೇ ಭಿ ದೊ ಯಾರೊʼ ಸಿನಿಮಾದ ಮುನ್ಸಿಪಲ್‌ ಕಮಿಷನರ್‌ ಡಿʼಮೆಲ್ಲೊ ಪಾತ್ರ ಅವರಿಗೆ ಪಾರ ಜನಪ್ರಿಯತೆ ತಂದುಕೊಟ್ಟಿತು. ಸುಮಾರು 250ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ʼಹಮ್‌ ಸಾಥ್‌ ಸಾಥ್‌ ಹೆʼ (1999), ʼಕಲ್‌ ಹೊ ನಾ ಹೊʼ (2003), ʼಮುಜ್‌ಸೆ ಶಾದಿ ಕರೋಗಿʼ (2004), ʼಓಂ ಶಾಂತಿ ಓಂʼ (2007) ಸತೀಶ್‌ ಶಾ ನಟನೆಯ ಮುಖ್ಯ ಚಿತ್ರಗಳು. 1998ರಲ್ಲಿ ಬಿಡುಗಡೆಯಾದ ʼಶಾಂತಿ ಶಾಂತಿ ಶಾಂತಿʼ ಚಿತ್ರದ ಮೂಲಕ ಅವರು ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. 2014ರಲ್ಲಿ ರಿಲೀಸ್‌ ಆದ ಬಾಲಿವುಡ್‌ನ ʼಹಮ್‌ಶಕಲ್ಸ್‌ʼ ಸತೀಶ್‌ ನಟನೆಯ ಕೊನೆಯ ಚಿತ್ರ.

1984–1986ರಲ್ಲಿ ಪ್ರಸಾರವಾದ ʼಯೆ ಜೊ ಹೆ ಜಿಂದಗಿʼ ಧಾರಾವಾಹಿ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದ ಸತೀಶ್‌ ಶಾ ʼಸಾರಾಭಾಯಿ ವರ್ಸಸ್‌ ಸಾರಾಭಾಯಿʼ ಸೀರಿಯಲ್‌ನ ಇಂದ್ರವಧನ್‌ ಸಾರಾಭಾಯಿ ಪಾತ್ರ ಭಾರಿ ಜನಪ್ರಿಯವಾಗಿತ್ತು. ʼಕಾಮಿಡಿ ಸರ್ಕಸ್‌ʼ ರಿಯಾಲಿಟಿ ಶೋಗೆ ತೀರ್ಪುಗಾರರಾಗಿದ್ದರು. ಸದ್ಯ ಅವರ ನಿಧನಕ್ಕೆ ಕಲಾವಿದರು ಸಂತಾಪ ವ್ಯಕ್ತಪಡಿಸಿದ್ದಾರೆ.