ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‘ಶ್ರೀಕೃಷ್ಣ’ ಚಿತ್ರದ ‘ಉಧೋ ಉಧೋ ಯಲ್ಲವ್ವ’ ಸಾಂಗ್‌ ರಿಲೀಸ್;‌ ಹೊಸ ಸಾಹಸಕ್ಕೆ ಮುಂದಾದ ಶಂಕರ್‍ ರಾಜ ವರ್ಮಾ

Shreekrishna Kannada Movie: ನಿರ್ದೇಶಕ ಶಂಕರ್ ರಾಜ ವರ್ಮಾ ಅವರು ನಟ ಮತ್ತು ನಿರ್ಮಾಪಕರಾಗಿ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಅವರ ಶ್ರೀಕೃಷ್ಣ ಚಿತ್ರದ ಮೊದಲ ಹಾಡು ‘ಉಧೋ ಉಧೋ ಯಲ್ಲವ್ವ’ ಇತ್ತೀಚೆಗೆ ಬಿಡುಗಡೆಯಾಗಿದ್ದು, ಮೇ ತಿಂಗಳಲ್ಲಿ ಸಿನಿಮಾ ತೆರೆಕಾಣಲಿದೆ.

'ಶ್ರೀಕೃಷ್ಣ' ಚಿತ್ರದ 'ಉಧೋ ಉಧೋ ಯಲ್ಲವ್ವ' ಸಾಂಗ್ ರಿಲೀಸ್

-

Avinash GR
Avinash GR Mar 30, 2026 6:15 PM

ಸ್ಯಾಂಡಲ್‌ವುಡ್‌ನಲ್ಲಿ ಈ ಹಿಂದೆ ʻಬ್ರಹ್ಮರಾಕ್ಷಸ’ ಎಂಬ ಸಿನಿಮಾ ಮಾಡಿದ್ದ ಗಮನಸೆಳೆದಿದ್ದವರು ನಿರ್ದೇಶಕ ಶಂಕರ್‍ ರಾಜ ವರ್ಮಾ. ಇದೀಗ ಅವರು ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಈ ಬಾರಿ ನಟನೆ, ನಿರ್ದೇಶನ ಹಾಗೂ ನಿರ್ಮಾಪಕರಾಗಿ ಪ್ರೇಕ್ಷಕರನ್ನು ಎದುರುಗೊಳ್ಳಲಿದ್ದಾರೆ. ʻಶ್ರೀಕೃಷ್ಣʼ ಎಂಬ ಹೊಸ ಚಿತ್ರವನ್ನು ಸದ್ದಿಲ್ಲದ್ದೇ ಮಾಡಿ ಮುಗಿಸಿದ್ದಾರೆ. ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಚಿತ್ರವು ಮೇ ತಿಂಗಳಲ್ಲಿ ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮೊದಲು ʻಶ್ರೀಕೃಷ್ಣʼ ಸಿನಿಮಾದ ʻಉಧೋ ಉಧೋ ಯಲ್ಲವ್ವʼ ಎಂಬ ಮೊದಲ ಹಾಡನ್ನು ಬಿಡುಗಡೆ ಮಾಡಿದ್ದಾರೆ.

ಈ ಹಾಡಿಗೆ ಎಂ. ಎಸ್‍. ತ್ಯಾಗರಾಜ್‍ ಸಾಹಿತ್ಯ ಬರೆದು, ಸಂಗೀತ ಸಂಯೋಜಿಸಿದ್ದಾರೆ. ಜೊತೆಗೆ ಹಾಡಿಗೆ ಅವರೇ ಧ್ವನಿಯಾಗಿದ್ದಾರೆ. ಬೃಹಸ್ಪತಿ ಕ್ರಿಯೇಷನ್ಸ್ ಬ್ಯಾನರ್‍ ಅಡಿಯಲ್ಲಿ ಶಂಕರ್‍ ರಾಜ ವರ್ಮ ಮತ್ತು ಅಜಯ್‍ ಕುಮಾರ್ ಪಿ. ಎಂ. ಜಂಟಿಯಾಗಿ ಈ ಚಿತ್ರಕ್ಕೆ ಹಣ ಹಾಕಿದ್ದು, ಶಿವಲಿಂಗಯ್ಯ ಸಿ. ಎಂ., ಉಲ್ಲಾಸ್‍ ಕೆ. ಸಿ. ಎಸ್., ಚಾಣುಕ್ಯ ಆರ್‍., ‘ನೆನಪಿರಲಿ’ ಮೋಹನ್‍ ಮತ್ತು ಲತಾ ಮಂಜುನಾಥ್‍ ಅವರು ಸಹ ನಿರ್ಮಾಪಕರಾಗಿ ಈ ಸಿನಿಮಾಕ್ಕೆ ಕೆಲಸ ಮಾಡಿದ್ದಾರೆ.

Actor Yash: ಹೊಸಬರೇ ನಿರ್ಮಿಸಿದ ಕನ್ನಡದ ಈ ಚಿತ್ರಕ್ಕೆ ಶುಭ ಹಾರೈಸಿದ ಯಶ್‌!

ಶಂಕರ್‍ ರಾಜ ವರ್ಮಾ ಹೇಳಿದ್ದೇನು?

"ನಾನು ಒಬ್ಬ ಸಿನಿಮಾ ನಿರ್ದೇಶಕನಾಗುತ್ತೇನೆ, ನನ್ನದೇ ಆದ ಒಂದು ಸಂಸ್ಥೆ ಕಟ್ಟಿ ಎಂದು ಯಾವತ್ತೂ ಯೋಚಿಸಿರಲಿಲ್ಲ. ಆದರೆ ಇದಕ್ಕೆ ಕಾರಣರಾದವರು ನಮ್ಮ ತಂದೆ-ತಾಯಿ, ಕುಟುಂಬದವರು ಮತ್ತು ಸ್ನೇಹಿತರು. ಅವರೆಲ್ಲರ ಪ್ರೋತ್ಸಾಹ ಮತ್ತು ಬೆಂಬಲದಿಂದ ಈ ಚಿತ್ರ ಸಾಧ್ಯವಾಗಿದೆ. ನನ್ನ ಹಿಂದಿನ ʻಬ್ರಹ್ಮರಾಕ್ಷಸ’ ಸಿನಿಮಾ ಕಾರಣಾಂತರಗಳಿಂದ ಬಿಡುಗಡೆ ಆಗುವುದು ತಡವಾಯಿತು. ಆ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಚಿತ್ರತಂಡ ಇಟ್ಟುಕೊಂಡಿತ್ತು. ನಾವೆಲ್ಲಾ ಮುಂದೇನು ಎನ್ನುವಾಗ, ಶ್ರೀಕೃಷ್ಣ ಹೇಳಿದ ಒಂದು ಮಾತು ನೆನಪಯಿತು. ಯಾಕೆ ‘ಶ್ರೀಕೃಷ್ಣ’ ಎಂಬ ಶೀರ್ಷಿಕೆ ಇಟ್ಟುಕೊಂಡು ಸಿನಿಮಾ ಮಾಡಬಾರದು ಎಂದು ಯೋಚಿಸಿ, ಈ ಚಿತ್ರದ ಆರಂಭಿಸಿದೆವು. ‘ಬ್ರಹ್ಮರಾಕ್ಷಸ’ ಚಿತ್ರದಲ್ಲಿ ಕೆಲಸ ಮಾಡಿದ ಬಹುತೇಕರೇ ಇಲ್ಲೂ ಜೊತೆಯಾಗಿದ್ದಾರೆ. ಮಾರ್ಚ್ 30ರಂದು ಚಿತ್ರದ ಟ್ರೇಲರ್‍ ಬಿಡುಗಡೆ ಮಾಡುತ್ತಿದ್ದೇವೆ" ಎಂದು ಶಂಕರ್‍ ರಾಜ ವರ್ಮಾ ಹೇಳಿದರು.

ಬೆಂಗಳೂರಿನ ಕಪಾಲಿ ಟಾಕೀಸ್‌ ಜಾಗದಲ್ಲಿ ತಲೆ ಎತ್ತಿದ ಮಹೇಶ್‌ ಬಾಬು ಒಡೆತನದ AMB ಸಿನಿಮಾಸ್;‌ ಮೊದಲ ದಿನ ಯಾವ ಭಾಷೆಯ ಸಿನಿಮಾಗಳಿಗೆ ಜಾಸ್ತಿ ಶೋ?

"ಮೂರು ಅನಾಥರ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂಬುದನ್ನು ಈ ಚಿತ್ರ ಹೇಳುತ್ತದೆ. ಇಲ್ಲಿ ನಾಯಕಿ ಸಹ ಅನಾಥೆ. ಎಲ್ಲರೂ ಜೊತೆಯಾಗಿರುವಾಗ, ಅವರ ಜೀವನದಲ್ಲೊಂದು ಘಟನೆ ನಡೆಯುತ್ತದೆ. ಇದರಿಂದ ಅವರು ಜೈಲಿಗೂ ಹೋಗಬೇಕಾಗುತ್ತದೆ. ಜೈಲಿಂದ ತಪ್ಪಿಸಿಕೊಂಡು ಬಂದ ನಂತರ ಅವರು ಏನೆಲ್ಲಾ ಮಾಡುತ್ತಾರೆ ಎನ್ನುವುದೇ ಚಿತ್ರದ ಕಥೆ" ಎಂದು ಕಥೆಯ ಗುಟ್ಟನ್ನು ಬಿಟ್ಟುಕೊಡುತ್ತಾರೆ ನಿರ್ದೇಶಕರು.

ನಾಯಕಿಯಾದ ಹುಬ್ಬಳ್ಳಿ ಹುಡುಗಿ

ಈ ಚಿತ್ರದಲ್ಲಿ ನಾಯಕಿಯಾಗಿ ಹುಬ್ಬಳ್ಳಿ ಮೂಲದ ಚೈತ್ರಾ ತೋಟದ ಕಾಣಿಸಿಕೊಂಡಿದ್ದಾರೆ. ‘ನಾನಿಲ್ಲಿ ಅನಾಥೆಯಾಗಿ ಅಭಿನಯಿಸಿದ್ದೇನೆ. ಆಕೆ ಜೀವನದಲ್ಲಿ ಏನೆಲ್ಲಾ ಕಷ್ಟಪಡುತ್ತಾಳೆ, ಕಷ್ಟದಲ್ಲಿರುವಾಗ ನಾಯಕ ಬಂದು ಹೇಗೆ ಆಕೆಯ ಜೀವನವನ್ನು ರೂಪಿಸುತ್ತಾನೆ ಎಂದು ಬಹಳ ಚೆನ್ನಾಗಿ ತೋರಿಸಿದ್ದಾರೆ. ನಾನು ‘ಬ್ರಹ್ಮರಾಕ್ಷಸ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದೆ. ಇಲ್ಲಿ ನಾಯಕಿಯಾಗಿದ್ದೇನೆ. ನಿರ್ದೇಶಕ ಶಂಕರ್‍ ಎಲ್ಲೂ ರಾಜಿ ಮಾಡಿಕೊಳ್ಳದೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಎಲ್ಲರಿಗೂ ಈ ಚಿತ್ರ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ" ಎನ್ನುತ್ತಾರೆ ಚೈತ್ರಾ ತೋಟದ.

‘ಶ್ರೀಕೃಷ್ಣ’ ಚಿತ್ರದಲ್ಲಿ ಶಂಕರ್‍ ರಾಜ ವರ್ಮಾ, ಚೈತ್ರಾ ತೋಟದ್‍ ಜೊತೆಗೆ ಪ್ರದೀಪ್‍ ಪೂಜಾರಿ, ಭುವನ್‍ ಗೌಡ, ಸ್ನೇಹಾ, ಈಶ್ವರ್‍ ಶೆಟ್ಟಿ ಮುಂತಾದವರು ನಟಿಸಿದ್ದು ಛಾಯಾಗ್ರಹಣವನ್ನು ಅನಿರುದ್ಧ್ ಮಾಡಿದ್ದು, ಕೀರ್ತಿರಾಜು ಅವರ ಸಂಕಲನವಿದೆ.