ಮೆಚ್ಚಿದ ಹುಡುಗಿ ರಶ್ಮಿಕಾ ಜೊತೆ ಮದುವೆ ಆಯ್ತು, ಈಗ ಸಿನಿಮಾಗಳ ಮೇಲೆ ವಿಜಯ್ ದೇವರಕೊಂಡ ಫೋಕಸ್! ಇಲ್ಲಿದೆ ಹೊಸ ಚಿತ್ರಗಳ ಅಪ್ಡೇಟ್!
Vijay Deverakonda: ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆಯ ಸಂಭ್ರಮ ಮುಗಿಸಿ ಈಗ ತಮ್ಮ ಸಿನಿಮಾಗಳತ್ತ ಸಂಪೂರ್ಣವಾಗಿ ಗಮನ ಹರಿಸುತ್ತಿದ್ದಾರೆ. ಫೆಬ್ರವರಿ 26 ರಂದು ಉದಯಪುರದಲ್ಲಿ ಮದುವೆಯಾದ ಈ ಜೋಡಿ ಸದ್ಯ ಸಣ್ಣ ಬ್ರೇಕ್‌ನಲ್ಲಿದೆ. ವಿಜಯ್ ದೇವರಕೊಂಡ ಅವರು ಮಾರ್ಚ್ 12 ರಿಂದ 'ರಣಬಾಲಿ' ಚಿತ್ರದ ಶೂಟಿಂಗ್ ಆರಂಭಿಸಲಿದ್ದು, ಸೆಪ್ಟೆಂಬರ್‌ನಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.
-
ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ನಟಿ ರಶ್ಮಿಕಾ ಮಂದಣ್ಣ ಅವರನ್ನು ನಟ ವಿಜಯ್ ದೇವರಕೊಂಡ ಅವರು ಫೆ.26ರಂದು ಉದಯಪುರದಲ್ಲಿ ಮದುವೆಯಾಗಿದ್ದಾರೆ. ಮಾ.4ರವರೆಗೆ ಅವರ ಮದುವೆ ಸಂಭ್ರಮಗಳು ನಡೆದಿವೆ. ಸದ್ಯ ಏಳೆಂಟು ದಿನ ಕೆಲಸಗಳಿಂದ ಬ್ರೇಕ್ ಪಡೆಯಲಿರುವ ಈ ಜೋಡಿ, ಪುನಃ ತಮ್ಮ ಸಿನಿಮಾಗಳ ಕಡೆಗೆ ಗಮನ ನೀಡಲಿದೆ. ಅದರಲ್ಲೂ ವಿಜಯ್ ದೇವರಕೊಂಡ ಅವರು ಮುಂದಿನ ಒಂದು ವರ್ಷ ಏನೆಲ್ಲಾ ಕೆಲಸ ಮಾಡಬೇಕು ಎಂದು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಮಾ.12ರಿಂದಲೇ ಶೂಟಿಂಗ್ ಆರಂಭ
ವಿಜಯ್ ದೇವರಕೊಂಡ ಅವರು ಮಾ.12ರಿಂದ ಬಹುನಿರೀಕ್ಷಿತ ರಣಬಾಲಿ ಚಿತ್ರದ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ರಾಹುಲ್ ಸಾಂಕೃತ್ಯಾಯನ್ ನಿರ್ದೇಶನದ ಈ ಪ್ಯಾನ್ ಇಂಡಿಯಾ ಸಿನಿಮಾವನ್ನು ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಸೆಪ್ಟೆಂಬರ್ 11 ರಂದು ಈ ಚಿತ್ರವನ್ನು ಗ್ರ್ಯಾಂಡ್ ಆಗಿ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಹಾಗಾಗಿ ಚಿತ್ರದ ಕೆಲಸಗಳನ್ನು ಬೇಗಬೇಗನೇ ಮಾಡಬೇಕಿದೆ. ಆದ್ದರಿಂದ ಜಾಸ್ತಿ ಬ್ರೇಕ್ ಪಡೆದುಕೊಳ್ಳದೇ ಕೆಲಸ ಮಾಡುತ್ತಿದ್ದಾರೆ ವಿಜಯ್ ದೇವರಕೊಂಡ.
'ರೌಡಿ ಜನಾರ್ದನ್' ಶೂಟಿಂಗ್ ಆರಂಭ
ಇದರ ಜೊತೆಗೆ ದಿಲ್ ರಾಜು ನಿರ್ಮಾಣದ, ರವಿಕಿರಣ್ ಕೋಲಾ ನಿರ್ದೇಶನದ 'ರೌಡಿ ಜನಾರ್ದನ್' ಚಿತ್ರದ ಚಿತ್ರೀಕರಣವನ್ನೂ ಕೂಡ ವಿಜಯ್ ದೇವರಕೊಂಡ ಪ್ರಾರಂಭಿಸಲಿದ್ದಾರೆ. ಈ ವರ್ಷವೇ 'ರೌಡಿ ಜನಾರ್ದನ್' ಚಿತ್ರದ ಚಿತ್ರೀಕರಣವನ್ನೂ ಸಹ ಪೂರ್ಣಗೊಳಿಸುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ ವಿಜಯ್ ದೇವರಕೊಂಡ. ಈ ಎರಡು ಸಿನಿಮಾಗಳ ಜೊತೆಗೆ ಮತ್ತೆ ಎರಡು ಹೊಸ ಸಿನಿಮಾಗಳನ್ನು ವಿಜಯ್ ದೇವರಕೊಂಡ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ವಿಕ್ರಮ್ ಕುಮಾರ್ ಅವರು ವಿಜಯ್ ದೇವರಕೊಂಡ ಸಿನಿಮಾ
ಮನಂ, 24 ಸಿನಿಮಾಗಳ ಖ್ಯಾತಿಯ ವಿಕ್ರಮ್ ಕುಮಾರ್ ಅವರು ವಿಜಯ್ ದೇವರಕೊಂಡಗೆ ನಿರ್ದೇಶನ ಮಾಡಲಿದ್ದು, ಆ ಸಿನಿಮಾಕ್ಕೆ ಯು ವಿ ಕ್ರಿಯೇಷನ್ಸ್ ಬಂಡವಾಳ ಹೂಡಲಿದೆ. ಅಸಲಿಗೆ ಈ ಆಫರ್ ಮೊದಲು ನಿತಿನ್‌ಗೆ ಹೋಗಿತ್ತು. ಆನಂತರದ ಬೆಳವಣಿಗೆಗಳಲ್ಲಿ ಇದೀಗ ವಿಜಯ್‌ಗೆ ಈ ಸಿನಿಮಾ ಸಿಕ್ಕಿದೆ.
ಇನ್ನು, ನಟ ನಾನಿಗೆ ಹಾರ್ ನಾನ್ನ ಎಂಬ ಬ್ಯೂಟಿಫುಲ್ ಸಿನಿಮಾ ಮಾಡಿದ್ದ ನಿರ್ದೇಶಕ ಶೌರ್ಯುವ್ ಕೂಡ ವಿಜಯ್‌ಗೆ ಒಂದು ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಇದನ್ನು ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡುವ ಸಾಧ್ಯತೆ ಇದೆ. ಅಸಲಿಗೆ, ನಾನಿ ಅವರ ಜತೆ ಮತ್ತೊಂದು ಸಿನಿಮಾವನ್ನು ಶೌರ್ಯುವ್ ಮಾಡಬೇಕಿತ್ತು. ಆದರೆ, ಅದು ವಿಳಂಬವಾದ ಕಾರಣ ಹೊಸ ಸ್ಕ್ರಿಪ್ಟ್‌ನೊಂದಿಗೆ ವಿಜಯ್ ದೇವರಕೊಂಡ ಅವರ ಜೊತೆ ಕೈಜೋಡಿಸಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಈ ನಾಲ್ಕೂ ಸಿನಿಮಾಗಳನ್ನು ಮುಗಿಸಿ, ತೆರೆಗೆ ತರುವುದಕ್ಕೆ ವಿಜಯ್ ದೇವರಕೊಂಡ ಪ್ಲಾನ್ ಮಾಡಿದ್ದಾರಂತೆ.