ಹಿಂದೂ ಹಬ್ಬದಲ್ಲಿ ಭಾಗಿಯಾಗಿದ್ದಕ್ಕೆ ʻಕಾಫೀರ್ʼ ಎಂದು ಟೀಕೆ! ಗಳಗಳನೆ ಅತ್ತ ತೆಲುಗು ನಟಿ ಫಾರಿಯಾ ಅಬ್ದುಲ್ಲಾ
ತೆಲುಗು ಚಿತ್ರರಂಗದ ಖ್ಯಾತ ನಟಿ ಫಾರಿಯಾ ಅಬ್ದುಲ್ಲಾ ತೆಲಂಗಾಣದ ಸಾಂಪ್ರದಾಯಿಕ ‘ಬೋನಾಲು’ ಉತ್ಸವದಲ್ಲಿ ಕಳಶ ಹೊತ್ತು ನೃತ್ಯ ಮಾಡಿದ್ದಕ್ಕೆ ಕೆಲ ಮುಸ್ಲಿಮರಿಂದ ‘ಕಾಫಿರ್’ ಎಂದು ತೀವ್ರ ನಿಂದನೆಗೆ ಗುರಿಯಾಗಿದ್ದಾರೆ. ಈ ಧಾರ್ಮಿಕ ದ್ವೇಷದ ವಿರುದ್ಧ ಕಣ್ಣೀರಿಡುತ್ತಲೇ ವಿಡಿಯೋ ಮೂಲಕ ಪ್ರತಿಕ್ರಿಯಿಸಿದ್ದಾರೆ ನಟಿ ಫಾರಿಯಾ.
-
ತೆಲುಗು ಚಿತ್ರರಂಗದ ಖ್ಯಾತ ನಟಿ ಹಾಗೂ ನೃತ್ಯಗಾರ್ತಿ ಫಾರಿಯಾ ಅಬ್ದುಲ್ಲಾ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್ ಹಾಗೂ ತೀವ್ರ ನಿಂದನೆಗೆ ಗುರಿಯಾಗಿದ್ದಾರೆ. ಈ ಹಿಂದೆ ತಮ್ಮ ಗ್ಲಾಮರಸ್ ಉಡುಪು ಹಾಗೂ ನೃತ್ಯದ ವಿಡಿಯೋಗಳಿಗಾಗಿ ಹಲವು ಬಾರಿ ಟೀಕೆ ಎದುರಿಸಿದ್ದ ಫಾರಿಯಾ, ಇದೀಗ ತೆಲಂಗಾಣದ ಜನಪ್ರಿಯ ಹಿಂದೂ ಹಬ್ಬವಾದ ‘ಬೋನಾಲು’ ಉತ್ಸವದಲ್ಲಿ ಭಾಗವಹಿಸಿದ್ದಕ್ಕಾಗಿ ಸೋಷಿಯಲ್ ಮೀಡಿಯಾದಲ್ಲಿ ಕಟು ಟೀಕೆಗಳನ್ನು ಎದುರಿಸುವಂತಾಗಿದೆ.
ಹಬ್ಬದ ವೇಳೆ ಕಳಶ ಹೊತ್ತು ಸಾಗಿದ್ದಲ್ಲದೆ, ಪೋತರಾಜುಗಳೊಂದಿಗೆ ಹೆಜ್ಜೆ ಹಾಕಿದ್ದ ಅವರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಕೆಲ ಮುಸ್ಲಿಮರು ಅವರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ ನಿಂದಿಸಿದ್ದರು.
ಕಣ್ಣೀರಿಡುತ್ತಲೇ ನೋವು ಹಂಚಿಕೊಂಡ ನಟಿ
ತಮ್ಮ ವಿರುದ್ಧ ಹರಿದುಬಂದ ಅತಿಯಾದ ದ್ವೇಷದ ಮಾತುಗಳಿಂದ ತೀವ್ರವಾಗಿ ನೊಂದಿರುವ ನಟಿ, ವಿಡಿಯೋ ಮೂಲಕ ಕಣ್ಣೀರಿಡುತ್ತಲೇ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. "ನಮ್ಮ ತಂದೆ ಮತಾಂತರಗೊಂಡ ಮುಸ್ಲಿಂ. ಅದರ ಅರ್ಥ ನಿಮಗೆ ತಿಳಿಯುತ್ತದೆಯೇ? ಅವರಿಗೆ ಆ ಧರ್ಮ ಇಷ್ಟವಾಗಿದ್ದ ಕಾರಣದಿಂದಲೇ ಅವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು" ಎಂದು ಫಾರಿಯಾ ಹೇಳಿದ್ದಾರೆ.
"ಯಾರಾದರೂ ಒಂದು ಧರ್ಮವನ್ನು ಎಷ್ಟು ಪ್ರೀತಿಸುತ್ತಾರೆ ಎಂದರೆ, ಅದನ್ನು ಸ್ವತಃ ಸ್ವೀಕರಿಸುವಷ್ಟರ ಮಟ್ಟಿಗೆ! ಅಂಥ ನನ್ನ ತಂದೆ, ನನ್ನನ್ನು ಆ ಧರ್ಮದ ಎಲ್ಲಾ ಒಳ್ಳೆಯ ವಿಷಯಗಳನ್ನು ತೋರಿಸಿ ಬೆಳೆಸಿದಾಗ, ನನ್ನ ಪಾಲನೆ-ಪೋಷಣೆ ಹೇಗಿರಬಹುದು? ನಾನು ಯಾವಾಗಲೂ ಇಸ್ಲಾಂನಲ್ಲಿ ಒಳ್ಳೆಯದನ್ನೇ ಕಂಡಿದ್ದೇನೆ. ಏನೇ ಇರಲಿ, ನನ್ನನ್ನು ಯಾರು ದ್ವೇಷಿಸುತ್ತಿದ್ದಾರೋ, ಯಾರು ನಾನು ತಪ್ಪು ದಾರಿಯಲ್ಲಿದ್ದೇನೆ ಅಥವಾ ಕಾಫಿರ್ ಎಂದೆಲ್ಲಾ ಅಂದುಕೊಳ್ಳುತ್ತಾರೋ, ನೀವು ಏನೇ ಹೇಳಲು ಬಯಸಿದರೂ ನಾನು ನಿಮಗೆ ಒಳ್ಳೆಯದನ್ನೇ ಬಯಸುತ್ತೇನೆ" ಎಂದು ಫಾರಿಯಾ ಹೇಳಿದ್ದಾರೆ.
ನಿಜವಾಗಿಯೂ ಬಹಳಷ್ಟನ್ನು ಕಳೆದುಕೊಳ್ಳುತ್ತಿದ್ದೀರಿ
"ನಾನು ಮರಗಳಲ್ಲಿ, ಕಲ್ಲುಬಂಡೆಗಳಲ್ಲಿ, ಚಿಟ್ಟೆಗಳಲ್ಲಿ, ಪ್ರತಿಯೊಂದರಲ್ಲೂ ಜೀವವನ್ನು ಕಾಣುತ್ತೇನೆ. ಇದು ನಿಮಗೆ ವಿಸ್ಮಯ ಮೂಡಿಸದಿದ್ದರೆ, ಇದು ನಿಮ್ಮನ್ನು ದೇವರಿಂದ ದೂರ ಮಾಡುವ ಬದಲು ದೇವರ ಮೇಲೆ ಇನ್ನಷ್ಟು ನಂಬಿಕೆ ಇಡುವಂತೆ ಮಾಡದಿದ್ದರೆ, ಕ್ಷಮಿಸಿ ನನ್ನ ಗೆಳೆಯರೇ, ನೀವು ಜೀವನದ ಸೌಂದರ್ಯವನ್ನು ಕಳೆದುಕೊಳ್ಳುತ್ತಿದ್ದೀರಿ. ಅಷ್ಟೇ ವಿಷಯ. ನೀವು ಪ್ರತಿಯೊಂದರಲ್ಲೂ ಅಥವಾ ನೀವು ಭೇಟಿಯಾಗುವ ಪ್ರತಿಯೊಬ್ಬ ವ್ಯಕ್ತಿಯಲ್ಲೂ ವಿಸ್ಮಯ ಅಥವಾ ದೇವರನ್ನು ಕಾಣಲು ಬಯಸದಿದ್ದರೆ, ನೀವು ನಿಜವಾಗಿಯೂ ಬಹಳಷ್ಟನ್ನು ಕಳೆದುಕೊಳ್ಳುತ್ತಿದ್ದೀರಿ" ಎಂದು ಕಿವಿಮಾತು ಹೇಳಿದ್ದಾರೆ ಫಾರಿಯಾ.
ನಾನು ಒಗ್ಗಟ್ಟಿಗಾಗಿ ಪ್ರಾರ್ಥಿಸುತ್ತೇನೆ
"ನಾನು ಪ್ರೀತಿಗಾಗಿ, ನಾನು ಒಗ್ಗಟ್ಟಿಗಾಗಿ, ನಾನು ಶಾಂತಿಗಾಗಿ ಪ್ರಾರ್ಥಿಸುತ್ತೇನೆ, ಅದನ್ನೇ ಮುಂದುವರಿಸುತ್ತೇನೆ. ಏಕೆಂದರೆ ಅದೇ ನನ್ನ ಬಂಡಾಯ, ಅದೇ ನನ್ನ ಕ್ರಾಂತಿ. ನನ್ನ ಪ್ರೀತಿಯ ವಿಚಾರದಲ್ಲಿ ನಾನು ಎಂದಿಗೂ ದೃಢವಾಗಿರುತ್ತೇನೆ. ಈಗ ನನ್ನನ್ನು ದ್ವೇಷಿಸುತ್ತಿರುವ ನಿಮ್ಮೆಲ್ಲರಿಗೂ ನಾನು ಪ್ರೀತಿಯನ್ನೇ ಕಳುಹಿಸುತ್ತೇನೆ. ಏಕೆಂದರೆ ನನ್ನ ಹೃದಯ ಎಷ್ಟು ಸತ್ಯವಾಗಿದೆ ಎಂಬುದು ನನಗೆ ತಿಳಿದಿದೆ. ನಾನು ಆ ಪ್ರೀತಿಯನ್ನು, ಆಶೀರ್ವಾದಗಳನ್ನು ಅನುಭವಿಸಿದ್ದೇನೆ. ಕೃತಜ್ಞತಾ ಭಾವವು ಮನುಷ್ಯನಿಗೆ ಎಷ್ಟು ಒಳ್ಳೆಯದನ್ನು ಮಾಡಬಲ್ಲದು ಎಂಬುದನ್ನು ನಾನು ಅರಿತಿದ್ದೇನೆ" ಎಂದು ಫಾರಿಯಾ ತಿಳಿಸಿದ್ದಾರೆ.
ಅಲ್ಲಾಹ್ ಎಂಬ ಪದದ ಅರ್ಥವೇನು
"ನಾನು ಚಿಕ್ಕವಳಿದ್ದಾಗ ನನ್ನ ಅಮ್ಮನಿಗೆ ಕೇಳಿದ್ದೆ, ʻಅಲ್ಲಾಹ್ ಎಂಬ ಪದದ ಅರ್ಥವೇನು?ʼ ಎಂದು. ಅದಕ್ಕವರು, ʻಅದರರ್ಥ ಬೆಳಕು, ಏಕಕಾಲದಲ್ಲಿ ಎಲ್ಲೆಡೆಯೂ ಎಲ್ಲವೂ ಆಗಿರುವುದುʼ ಎಂದು ಹೇಳಿದ್ದರು. ಎಲ್ಲೆಡೆಯೂ ಎಲ್ಲವೂ ಆಗಿರುವುದರಲ್ಲಿ ಯಾವುದನ್ನಾದರೂ ಹೊರಗಿಡಲು ಹೇಗೆ ತಾನೆ ಸಾಧ್ಯ" ಎಂದು ಪ್ರಶ್ನೆ ಮಾಡಿದ್ದಾರೆ ಫಾರಿಯಾ.