ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻನಾನು 20ನೇ ವಯಸ್ಸಿನಿಂದಲೇ ಟ್ಯಾಕ್ಸ್‌ ಕಟ್ಟುತ್ತಿದ್ದೇನೆʼ; ಐಟಿ ದಾಳಿ ಕುರಿತ ವದಂತಿಗೆ ನಟಿ ರಕುಲ್ ಪ್ರೀತ್ ಸಿಂಗ್ ಖಡಕ್ ಸ್ಪಷ್ಟನೆ!

Rakul Preet Singh: ನಟಿ ರಕುಲ್‌ ಪ್ರೀತ್‌ ಸಿಂಗ್‌ ಅವರು ಆದಾಯ ತೆರಿಗೆ ಇಲಾಖೆ ದಾಳಿ ಕುರಿತ ಊಹಾಪೋಹಗಳಿಗೆ ಖಡಕ್ ಉತ್ತರ ನೀಡಿದ್ದಾರೆ. 20ನೇ ವಯಸ್ಸಿನಿಂದಲೇ ಟ್ಯಾಕ್ಸ್‌ ಪಾವತಿಸುತ್ತಿರುವುದಾಗಿ ಹೇಳಿರುವ ಅವರು, ವಿದೇಶಿ ಅಕ್ರಮ ವಹಿವಾಟು ಹಾಗೂ ಬೇನಾಮಿ ಆಸ್ತಿ ಹೊಂದಿರುವ ಆರೋಪಗಳನ್ನು ತಳ್ಳಿಹಾಕಿದ್ದಾರೆ.

ಐಟಿ ದಾಳಿ ವದಂತಿ; ಖಡಕ್ ಸ್ಪಷ್ಟನೆ ನೀಡಿದ ನಟಿ ರಕುಲ್ ಪ್ರೀತ್ ಸಿಂಗ್

-

Avinash GR
Avinash GR Oct 5, 2026 1:17 PM

ಬಾಲಿವುಡ್‌ನ ಖ್ಯಾತ ನಿರ್ಮಾಪಕ ಹಾಗೂ ನಟಿ ರಕುಲ್ ಪ್ರೀತ್ ಸಿಂಗ್ ಅವರ ಮಾವ ವಶು ಭಗ್ನಾನಿ ಮತ್ತು ಮುಂಬೈನ ಪನೋರಮಾ ಸ್ಟುಡಿಯೋಸ್‌ಗೆ ಸಂಬಂಧಿಸಿದ ಹಲವು ಸ್ಥಳಗಳ ಮೇಲೆ ಐಟ ದಾಳಿ ನಡೆಸಿದ ಬೆನ್ನಲ್ಲೇ, ನಟಿ ರಕುಲ್ ಪ್ರೀತ್ ಸಿಂಗ್ ಸಾರ್ವಜನಿಕ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ಐಟಿ ಅಧಿಕಾರಿಗಳು ನಡೆಸಿದ ಈ ದಾಳಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನನ್ನ 20ನೇ ವಯಸ್ಸಿನಿಂದಲೇ ತೆರಿಗೆ ಪಾವತಿಸುತ್ತಿದ್ದೇನೆ

ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘ ಹೇಳಿಕೆ ಹಂಚಿಕೊಂಡಿರುವ ಅವರು, "ಈ ವಿಚಾರದಲ್ಲಿ ಹಬ್ಬಿರುವ ಎಲ್ಲಾ ಗೊಂದಲಗಳಿಗೆ ನಾನು ಪೂರ್ಣವಿರಾಮ ಇಡಲು ಬಯಸುತ್ತೇನೆ. ಆದಾಯ ತೆರಿಗೆ ಇಲಾಖೆಯ ಈ ತನಿಖೆಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಸೇನಾ ಕುಟುಂಬದ ಹಿನ್ನೆಲೆಯಿಂದ ಬಂದವಳು. ಚಿತ್ರರಂಗದಲ್ಲಿ ನನಗೆ ಯಾರೊಬ್ಬರೂ ಗಾಡ್‌ಫಾದರ್ ಇರಲಿಲ್ಲ. ಸಂಪೂರ್ಣ ಕಠಿಣ ಪರಿಶ್ರಮದಿಂದಲೇ ನಾನು ಈ ಹಂತಕ್ಕೆ ತಲುಪಿದ್ದೇನೆ. ಒಬ್ಬ ಜವಾಬ್ದಾರಿಯುತ ಹಾಗೂ ಕಾನೂನು ಪಾಲಿಸುವ ಪ್ರಜೆಯಾಗಿ, ನನ್ನ 20ನೇ ವಯಸ್ಸಿನಿಂದಲೇ ಪ್ರಾಮಾಣಿಕವಾಗಿ ತೆರಿಗೆ ಪಾವತಿಸುತ್ತಾ ಬಂದಿದ್ದೇನೆ" ಎಂದು ತಿಳಿಸಿದ್ದಾರೆ.

ಮುಂದುವರಿದು ಅಕ್ರಮ ಹಣ ವರ್ಗಾವಣೆ ಆರೋಪಗಳನ್ನು ನಿರಾಕರಿಸಿದ ರಕುಲ್, "ವೈಯಕ್ತಿಕವಾಗಿಯಾಗಲಿ ಅಥವಾ ಯಾವುದೇ ನಿರ್ಮಾಣ ಸಂಸ್ಥೆಯ ಪರವಾಗಿಯಾಗಲಿ, ನಾನು ಯಾವುದೇ ಅಕ್ರಮ ವಿದೇಶಿ ಹಣ ವರ್ಗಾವಣೆಯಲ್ಲಿ ಭಾಗಿಯಾಗಿಲ್ಲ. ದೇಶದಲ್ಲಾಗಲಿ ಅಥವಾ ವಿದೇಶದಲ್ಲಾಗಲಿ ಯಾರ ಪರವಾಗಿಯೂ ಯಾವುದೇ ಬೇನಾಮಿ ಆಸ್ತಿಯನ್ನು ಹೊಂದಿಲ್ಲ. ಅಷ್ಟೇ ಅಲ್ಲದೆ, ನನಗ್ಯಾರೂ ಎಂದಿಗೂ ಯಾವುದೇ ಆಸ್ತಿಯನ್ನು ಉಡುಗೊರೆಯಾಗಿ ನೀಡಿಲ್ಲ ಮತ್ತು ಅಂತಹ ದುಬಾರಿ ಉಡುಗೊರೆಗಳನ್ನು ನಾನು ಸ್ವೀಕರಿಸುವುದೂ ಇಲ್ಲ" ಎಂದು ಖಡಕ್ ಹೇಳಿದ್ದಾರೆ.

ಮಾಧ್ಯಮಗಳ ಮೇಲೂ ಗರಂ

ಇದೇ ವೇಳೆ ಆಧಾರರಹಿತ ಸುದ್ದಿ ಬಿತ್ತರಿಸುತ್ತಿರುವ ಮಾಧ್ಯಮಗಳ ವಿರುದ್ಧ ಆಕ್ರೋಶ ಹೊರಹಾಕಿದ ರಕುಲ್‌, "ಸುಳ್ಳು, ದುರುದ್ದೇಶಪೂರಿತ ಹಾಗೂ ಊಹಾಪೋಹದ ವರದಿಗಳನ್ನು ಪ್ರಕಟಿಸಿದ ಮಾಧ್ಯಮಗಳು ತಕ್ಷಣವೇ ಅವುಗಳನ್ನು ಹಿಂಪಡೆದು ನೈಜ ಸತ್ಯವನ್ನು ಸ್ಪಷ್ಟಪಡಿಸಬೇಕು. ಮಾಧ್ಯಮ ಸಂಸ್ಥೆಗಳಿಗೆ ಅವರದ್ದೇ ಆದ ಕಮರ್ಷಿಯಲ್ ಒತ್ತಡಗಳಿರುತ್ತವೆ ಎಂಬುದು ನನಗೆ ಗೊತ್ತಿದೆ. ಆದರೆ ಅದು ಒಬ್ಬ ವ್ಯಕ್ತಿಯ ಘನತೆ ಮತ್ತು ಜೀವನೋಪಾಯಕ್ಕೆ ಧಕ್ಕೆ ತರುವಂತಿರಬಾರದು" ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ರಕುಲ್‌ ಹಂಚಿಕೊಂಡ ಟ್ವೀಟ್‌



ಐಟಿ ಇಲಾಖೆಯು ಸೆಪ್ಟೆಂಬರ್ 28 ರಂದು ಮುಂಬೈನ ಸುಮಾರು 12 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಸಿನಿಮಾ ಯೋಜನೆಗಳಿಗೆ ಹಣಕಾಸು ಒದಗಿಸುವ ನೆಪದಲ್ಲಿ ವಿದೇಶಕ್ಕೆ ಹಣ ರವಾನಿಸಲಾಗುತ್ತಿದೆ ಎಂಬ ಶಂಕೆಯಡಿ ಕಾಗದಪತ್ರಗಳು ಹಾಗೂ ವಿದೇಶಿ ವಹಿವಾಟುಗಳ ದಾಖಲೆಗಳನ್ನು ಅಧಿಕಾರಿಗಳು ತೀವ್ರ ತಪಾಸಣೆಗೆ ಒಳಪಡಿಸಿದ್ದಾರೆ. ಈ ಬೆಳವಣಿಗೆಗಳ ನಡುವೆ, ಸತತ ಎರಡು ದಿನಗಳ ಶೋಧದ ಬಳಿಕ ನಿರ್ಮಾಪಕ ವಶು ಭಗ್ನಾನಿ ಅವರು ಲಂಡನ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ರಕುಲ್ ಪ್ರೀತ್ ಸಿಂಗ್ ಅವರು ನಿರ್ಮಾಪಕ ವಾಶು ಭಗ್ನಾನಿ‌ ಪುತ್ರ ಜಾಕಿ ಭಗ್ನಾನಿ‌ ಅವರನ್ನು 2024ರಲ್ಲಿ ಮದುವೆ ಆಗಿದ್ದಾರೆ.

ಇತ್ತೀಚೆಗಷ್ಟೇ ‘ಪತಿ ಪತ್ನಿ ಔರ್ ವೋ 2’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ರಕುಲ್ ಪ್ರೀತ್ ಸಿಂಗ್, ಸದ್ಯ ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಮುಖ್ಯಭೂಮಿಕೆಯಲ್ಲಿರುವ ಬಹುನಿರೀಕ್ಷಿತ 'ರಾಮಾಯಣ' ಚಿತ್ರದಲ್ಲಿ ಶೂರ್ಪನಖಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.