ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಶುಭಾ ಪೂಂಜಾ ಮತ್ತು ಅವರ ಪತಿ, ಉದ್ಯಮಿ ಸುಮಂತ್ ಮಹಾಬಲ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದ್ದು, ಇಬ್ಬರೂ ವಿಚ್ಛೇದನ (Divorce) ಪಡೆಯಲು ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ ಎಂಬ ವರದಿಗಳು ಚಿತ್ರರಂಗದಲ್ಲಿ ಭಾರಿ ಸಂಚಲನ ಮೂಡಿಸಿವೆ. ಈ ಡಿವೋರ್ಸ್ ವದಂತಿ ಬೆನ್ನಲ್ಲೇ ನಟಿ ಶುಭಾ ಪೂಂಜಾ ಅವರು ಮೊದಲ ಬಾರಿಗೆ ಸಾಮಾಜಿಕ ಜಾಲತಾಣದ ಮೂಲಕ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಸ್ವಲ್ಪ ಸಮಯಾವಕಾಶ ಕೊಡಿ
ಮಾಧ್ಯಮ ಮಿತ್ರರು ಹಾಗೂ ಅಭಿಮಾನಿಗಳನ್ನು ಉದ್ದೇಶಿಸಿ ಭಾವುಕ ಪತ್ರ ಬರೆದಿರುವ ಶುಭಾ ಪೂಂಜಾ, "ನನ್ನೆಲ್ಲಾ ಆತ್ಮೀಯ ಮಾಧ್ಯಮ ಮಿತ್ರರಿಗೆ ನಮಸ್ಕಾರಗಳು. ನಾನು ಚಿತ್ರರಂಗಕ್ಕೆ ಕಾಲಿಟ್ಟ ದಿನದಿಂದ ಇಂದಿನವರೆಗೂ ನನ್ನನ್ನು ಬೆಂಬಲಿಸುತ್ತಾ, ಪ್ರೋತ್ಸಾಹಿಸುತ್ತಾ ಬಂದಿದ್ದೀರಿ. ಇದೀಗ ನಾನು ಕೇಳಿಕೊಳ್ಳುವುದು ಇಷ್ಟೇ... ಸಮಯ ಬಂದಾಗ ನನ್ನ ವೈಯಕ್ತಿಕ ಜೀವನದಲ್ಲಿ ನಡೆಯುತ್ತಿರುವ ವಿಷಯದ ಬಗ್ಗೆ ನಾನೇ ನಿಮಗೆ ಖುದ್ದಾಗಿ ತಿಳಿಸುತ್ತೇನೆ. ಅಲ್ಲಿಯವರೆಗೂ ನನಗೂ ಹಾಗೂ ಸುಮಂತ್ ಅವರಿಗೂ ಸ್ವಲ್ಪ ಸಮಯಾವಕಾಶ ಕೊಡಿ ಅಂತ ಮನವಿ ಮಾಡುತ್ತೇನೆ" ಎಂದು ಕೇಳಿಕೊಂಡಿದ್ದಾರೆ.
Shubha Poonja: ನಟಿ ಶುಭಾ ಪೂಂಜಾ ದಾಂಪತ್ಯದಲ್ಲಿ ಬಿರುಕು? ವಿಚ್ಛೇದನಕ್ಕೆ ಮೊರೆ ಹೋದ್ರಾ ದಂಪತಿ?
ಇದು ನನ್ನದೊಂದು ಸಣ್ಣ ವಿನಂತಿ
"ನನ್ನ ವೃತ್ತಿಜೀವನದುದ್ದಕ್ಕೂ ನೀವು ಅಪಾರ ಪ್ರೀತಿಯನ್ನು ತೋರಿಸಿದ್ದೀರಿ, ಅದಕ್ಕಾಗಿ ನಾನು ಯಾವಾಗಲೂ ಕೃತಜ್ಞಳಾಗಿರುತ್ತೇನೆ. ನಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಸುಮಂತ್, ನಮ್ಮ ಕುಟುಂಬಗಳು ಮತ್ತು ನನಗೆ ಸ್ವಲ್ಪ ಗೌಪ್ಯತೆಯನ್ನು (Privacy) ನೀಡುವಂತೆ ನಾನು ದಯೆಯಿಂದ ಕೇಳಿಕೊಳ್ಳುತ್ತೇನೆ. ಈ ಕಠಿಣ ಸಮಯದಲ್ಲಿ ನಿಮ್ಮ ತಿಳುವಳಿಕೆ ಮತ್ತು ಗೌರವವು ನಮಗೆ ಬಹಳ ಮುಖ್ಯವಾಗಿರುತ್ತದೆ. ಇದು ನನ್ನದೊಂದು ಸಣ್ಣ ವಿನಂತಿ" ಎಂದು ಶುಭಾ ಪೂಂಜಾ ಬರೆದುಕೊಂಡಿದ್ದಾರೆ.
Shubha Poonja: ಸ್ಯಾಂಡಲ್‌ವುಡ್ ನಟಿ ಶುಭಾ ಪೂಂಜಾಗೆ ಮಾತೃ ವಿಯೋಗ; ಅನಾರೋಗ್ಯದಿಂದ ನಿಧನ
2022ರಲ್ಲಿ ನಡೆದಿತ್ತು ಮದುವೆ
ದೀರ್ಘಕಾಲದ ಸ್ನೇಹಿತರಾಗಿದ್ದ ಶುಭಾ ಪೂಂಜಾ ಮತ್ತು ಸುಮಂತ್ ಕೆಲ ವರ್ಷಗಳ ಕಾಲ ಪರಸ್ಪರ ಪ್ರೀತಿಸಿ, 2022ರ ಜನವರಿ 5ರಂದು ಅಧಿಕೃತವಾಗಿ ವಿವಾಹವಾಗಿದ್ದರು. ಮದುವೆಯಾದ ನಂತರ ಈ ಜೋಡಿಯು ಜೀ ಕನ್ನಡ ವಾಹಿನಿಯ ‘ಜೋಡಿ ನಂ.1 ಸೀಸನ್ 1’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳಾಗಿ ಭಾಗವಹಿಸಿ ವೀಕ್ಷಕರ ಮನ ಗೆದ್ದಿದ್ದರು. ಇದಲ್ಲದೆ ಶುಭಾ ಪೂಂಜಾ ಅವರು ‘ಬಿಗ್ ಬಾಸ್ ಕನ್ನಡ’ ಸೇರಿದಂತೆ ಹಲವು ಶೋಗಳಲ್ಲಿ ಕಾಣಿಸಿಕೊಂಡು ಜನಪ್ರಿಯತೆ ಗಳಿಸಿದ್ದರು.
ಸದ್ಯ ಹರಿದಾಡುತ್ತಿರುವ ವರದಿಗಳ ಪ್ರಕಾರ, ಇಬ್ಬರ ಕೌಟುಂಬಿಕ ನ್ಯಾಯಾಲಯದ ವಿಚ್ಛೇದನ ಅರ್ಜಿಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ವಿಚಾರಣೆ ನಿಗದಿಯಾಗಲಿದ್ದು, ದಂಪತಿಗಳಿಬ್ಬರೂ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಖುದ್ದಾಗಿ ಸ್ಪಷ್ಟನೆ ನೀಡುವವರೆಗೂ ಯಾವುದೇ ಊಹಾಪೋಹಗಳನ್ನು ಹರಡದಂತೆ ಶುಭಾ ಮನವಿ ಮಾಡಿದ್ದಾರೆ.